ಅಬುದಾಬಿ: ದುಬೈ ಏರ್ ಶೋ ವೇಳೆ ಭಾರತದ ಹೆಚ್ ಎಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನ ದುರಂತಕ್ಕೀಡಾದ ಘಟನೆ ಭಾರಿಸುದ್ದಿಗೆ ಗ್ರಾಸವಾಗಿರುವಂತೆಯೇ ಅದೇ ಸಂದರ್ಭದಲ್ಲಿ ಪಾಕಿಸ್ತಾನದ ಪತ್ರಕರ್ತರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದುಬೈ ವರ್ಲ್ಡ್ ಸೆಂಟ್ರಲ್‌ನಲ್ಲಿರುವ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ ಭಾರತದ ಹೆಚ್ಎಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನ ಪತನವಾಗಿ ಅದರಲ್ಲಿದ್ದ ಪೈಲಟ್ ನಮಂಶ್ ಸ್ಯಾಲ್ ಸಾವನ್ನಪ್ಪಿದ್ದರು.
ಈ ದುರಂತ ಜಗತ್ತಿನಾದ್ಯಂತ ಆಘಾತಕ್ಕೆ ಕಾರಣವಾಗಿದ್ದರೆ ಅತ್ತ ಅಲ್ಲಿಯೇ ಇದ್ದ ಪಾಕಿಸ್ತಾನದ ಪತ್ರಕರ್ತರು ಮಾತ್ರ ನಗಾಡುತ್ತಾ ತಮ್ಮ ವಿಕೃತಿ ಮೆರೆದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅತ್ತ ತೇಜಸ್ ವಿಮಾನ ಪತನವಾಗುತ್ತಲೇ ಇತ್ತ ಇದನ್ನು ಪತ್ರಕರ್ತರ ಘಟಕದಲ್ಲಿ ಕುಳಿತು ವರದಿ ಮಾಡುತ್ತಿದ್ದ ಪಾಕಿಸ್ತಾನದ ಪತ್ರಕರ್ತರು ಅಪಹಾಸ್ಯ ಮಾಡಿದ್ದಾರೆ.
'ಬಾಪ್ ರೇ.. ಅಲ್ಲಾಹ್ ಕಿ ತರಫ್ ಸೇ ಗಿರ್ ಗಯಾ.. ಅಲ್ಲಾಹ್ ನಮ್ಮನ್ನು ಇದಕ್ಕಾಗಿಯೇ ಕಳುಹಿಸಿದ್ದಾನೆ.. ಎಂದು ಪಾಕ್ ಪತ್ರಕರ್ತ ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಮತ್ತೋರ್ವ ಸದ್ಯ ನಮ್ಮ ಮೇಲೆ ಬೀಳಲಿಲ್ಲ ಎಂದು ನಗಾಡಿದ್ದಾರೆ.
ವ್ಯಾಪಕ ಆಕ್ರೋಶ
ಇನ್ನು ಪಾಕ್ ಪತ್ರಕರ್ತನ ಈ ವಿಕೃತಿಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವು ಬಳಕೆದಾರರು ಭಾರತದಲ್ಲಿರುವ ಪಾಕಿಸ್ತಾನ ಪ್ರೇಮಿಗಳನ್ನು ಗುರಿಯಾಸಿಕೊಂಡು ಟ್ವೀಟ್ ದಾಳಿ ನಡೆಸುತ್ತಿದ್ದಾರೆ. 'ಪಾಕಿಸ್ತಾನಿ ಪತ್ರಕರ್ತನೊಬ್ಬ ಪೈಲಟ್ ಸಾವಿಗೆ ನಾಚಿಕೆಯಿಲ್ಲದೆ ನಗುತ್ತಿರುವ ವಿಡಿಯೋ ರೆಕಾರ್ಡ್ ಆಗಿದೆ. ಅದಕ್ಕಾಗಿಯೇ ನಾನು ಯಾವಾಗಲೂ ಹೇಳುತ್ತೇನೆ, ಪಾಕಿಸ್ತಾನ ಸೈನಿಕರು ಅಥವಾ ಪೈಲಟ್‌ಗಳು ಸತ್ತರೆ ಯಾವುದೇ ಸಹಾನುಭೂತಿ ತೋರಿಸುವ ಅಗತ್ಯವಿಲ್ಲ.' ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಭಾರತೀಯ ವಾಯುಪಡೆ ಸಂತಾಪ
ಅಂತೆಯೇ ಏರ್ ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನವಾಗಿ ಪೈಲಟ್ ಸಾವನ್ನಪ್ಪಿರುವುದಕ್ಕೆ ಭಾರತೀಯ ವಾಯುಪಡೆ ಸಂತಾಪ ಸೂಚಿಸಿದೆ. ಮಾತ್ರವಲ್ಲದೇ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಎಎಫ್, ಅಪಘಾತದ ಸಮಯದಲ್ಲಿ ಪೈಲಟ್ ಹೊರಬರಲಾಗದೆ ಜೀವ ಕಳೆದುಕೊಂಡಿದ್ದಾರೆ ಎಂದು ಖಚಿತಪಡಿಸಿದೆ. ಭಾರತೀಯ ಭದ್ರತಾ ಪಡೆಗಳು ಈ ದುಃಖದ ಸಮಯದಲ್ಲಿ ಪೈಲಟ್ನ ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತವೆ ಎಂದು ಐಎಎಫ್ ಹೇಳಿದೆ. ಹಾಗೆಯೇ ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದೆ.