ವಾಷಿಂಗ್ಟನ್: ರಷ್ಯಾದ ತೈಲ ಖರೀದಿಗೆ ಪ್ರತಿಯಾಗಿ ಭಾರತದ ವಸ್ತುಗಳ ಮೇಲೆ ದಂಡನಾತ್ಮಕ ಸುಂಕ ವಿಧಿಸಿದ ತಿಂಗಳುಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಷ್ಯಾದಿಂದ ತೈಲ ಇನ್ನು ಮುಂದೆ ಖರೀದಿಸುವುದಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸುಂಕ ಹೇರಿಕೆ ಪ್ರಕ್ರಿಯೆ ತಕ್ಷಣವೇ ನಿಲ್ಲಿಸಲು ಸಾಧ್ಯವಿಲ್ಲ, ಆದರೆ ಪ್ರಕ್ರಿಯೆ ಮುಂದುವರಿದಿದ್ದು ಸದ್ಯದಲ್ಲಿಯೇ ನಿಲ್ಲಲಿದೆ ಎಂದರು. ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಕ್ಷಣವೇ ದೃಢಪಡಿಸಲಿಲ್ಲ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಹೊರತಾಗಿಯೂ, ಭಾರತ ತನ್ನ ಐತಿಹಾಸಿಕ ಪಾಲುದಾರ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿತ್ತು, ಪ್ರಧಾನಿ ಮೋದಿ ಈ ಹಿಂದೆ ಅದನ್ನು ಸಮರ್ಥಿಸಿಕೊಂಡಿದ್ದರು ಕೂಡ.
ಆದರೆ ದ್ವಿಪಕ್ಷೀಯ ಸಂಬಂಧ ಸುಧಾರಣೆ ಮಾಡುವ ದೃಷ್ಟಿಯಿಂದ ಮೋದಿ ಅವರು ನೂತನವಾಗಿ ನೇಮಕಗೊಂಡಿರುವ ಯುಎಸ್ ರಾಯಭಾರಿ, ಟ್ರಂಪ್ ಅವರ ಆಪ್ತ ರಾಜಕೀಯ ಸಹಾಯಕ ಸೆರ್ಗಿಯೊ ಗೋರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಟ್ರಂಪ್ ಅವರೊಂದಿಗಿನ ಸಂಬಂಧವನ್ನು ಸರಿಪಡಿಸುವ ಬಯಕೆಯನ್ನು ತೋರಿಸಿದಂತೆ ಕಂಡುಬಂದಿದೆ.
ಅಮೆರಿಕಾದಲ್ಲಿ ಟ್ರಂಪ್ ಆಡಳಿತವು ಭಾರತದೊಂದಿಗಿನ ಸಂಬಂಧವನ್ನು ಗೌರವಿಸುತ್ತದೆ. ಟ್ರಂಪ್ ಮತ್ತು ಮೋದಿ ನಡುವಿನ ದೂರವಾಣಿ ಮಾತುಕತೆ ಬಗ್ಗೆ ಆಶಾವಾದಿಗಳಾಗಿದ್ದೇವೆ ಎಂದಿದ್ದಾರೆ.
ಮೋದಿ ಅದ್ಭುತ ವ್ಯಕ್ತಿ
ಟ್ರಂಪ್ ಶ್ವೇತಭವನದಲ್ಲಿ ನೀಡಿದ ಹೇಳಿಕೆಯಲ್ಲಿ, ಜವಾಹರಲಾಲ್ ನೆಹರೂ ನಂತರ ಭಾರತದ ಎರಡನೇ ಅತಿ ಹೆಚ್ಚು ವರ್ಷ ಪ್ರಧಾನಿಯಾಗಿದ್ದ ಮೋದಿ ಅವರೊಂದಿಗಿನ ಸಂಬಂಧ ಉತ್ತಮವಾಗಿದೆ. ಮೋದಿ ಒಬ್ಬ ಮಹಾನ್ ವ್ಯಕ್ತಿ. ಅವರು ನನ್ನನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ.
ನಾನು ಅವರ ರಾಜಕೀಯ ವೃತ್ತಿಜೀವನವನ್ನು ನಾಶಮಾಡಲು ಬಯಸುವುದಿಲ್ಲ. ನಾನು ವರ್ಷಗಳಿಂದ ಭಾರತವನ್ನು ನೋಡುತ್ತಿದ್ದೇನೆ. ಅದು ಅದ್ಭುತ ದೇಶ, ನನ್ನ ಸ್ನೇಹಿತ ಬಹಳ ಸಮಯದಿಂದ ಅಲ್ಲಿದ್ದಾನೆ ಎಂದು ಹೇಳಿದರು.
ಆಗಸ್ಟ್‌ನಲ್ಲಿ ಟ್ರಂಪ್ ಅಮೆರಿಕಕ್ಕೆ ಭಾರತೀಯ ರಫ್ತಿನ ಮೇಲಿನ ಸುಂಕವನ್ನು ಶೇಕಡಾ 50 ಕ್ಕೆ ಹೆಚ್ಚಿಸಿದರು, ಟ್ರಂಪ್ ಅವರ ಸಹಾಯಕರು ಭಾರತವು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.