ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಏಳು ಹೊಚ್ಚ ಹೊಸ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ. ಅವುಗಳು ಯಾವ ದೇಶಕ್ಕೆ ಸೇರಿವೆ ಎಂಬುದನ್ನು ನಿರ್ದಿಷ್ಟಪಡಿಸದ ಅವರು ಎರಡು ದೊಡ್ಡ ಪರಮಾಣು ಶಕ್ತಿಗಳ ನಡುವಿನ ಯುದ್ಧವನ್ನು ನಾನು ಬಗೆಹರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಟೋಕಿಯೊದಲ್ಲಿ ಉದ್ಯಮ ನಾಯಕರೊಂದಿಗೆ ನಡೆದ ಸ್ವಾಗತ ಮತ್ತು ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ, ಏಳು ಹೊಚ್ಚ ಹೊಸ, ಸುಂದರವಾದ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ ಸಂಭಾವ್ಯ ಯುದ್ಧವನ್ನು ಬಗೆಹರಿಸಿದ್ದು ನಾನು ಎಂದು ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಪರಿಹರಿಸಲು ವ್ಯಾಪಾರ ಮಾರ್ಗವನ್ನು ನಾನು ಬಳಸಿದೆನು ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದರು.
ಟ್ರಂಪ್ ಹೇಳಿದ್ದೇನು?
ನಾನು ಪ್ರಧಾನಿ ಮೋದಿಗೆ ಹೇಳಿದೆ, ಅವರು ತುಂಬಾ ಒಳ್ಳೆಯ ವ್ಯಕ್ತಿ, ಪಾಕಿಸ್ತಾನದಲ್ಲಿರುವ ಫೀಲ್ಡ್ ಮಾರ್ಷಲ್‌ಗೆ ಕೂಡ ಹೇಳಿದೆ, ನೋಡಿ, ನೀವು ಹೋರಾಡುತ್ತಿದ್ದರೆ ನಾವು ಯಾವುದೇ ವ್ಯಾಪಾರವನ್ನು ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದರು.
ಭಾರತ ಮತ್ತು ಪಾಕಿಸ್ತಾನವು ಯುಎಸ್ ಜೊತೆಗಿನ ವ್ಯಾಪಾರಕ್ಕೂ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿವೆ ಎಂದು ಟ್ರಂಪ್ ಹೇಳಿದರು.
ನೀವು ಯುದ್ಧ ಮಾಡಿದರೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದೆವು. 24 ಗಂಟೆಗಳಲ್ಲಿ, ಅದು ಕೊನೆಗೊಂಡಿತು. ವಾಸ್ತವವಾಗಿ ಅದು ಒಪ್ಪಂದ ಅದ್ಭುತವಾಗಿತ್ತು ಎಂದರು.
ಕಳೆದ ಮೇ 10 ರಂದು, ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದಾಗಿನಿಂದ, ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದ್ದಾಗಿ ಹಲವಾರು ಬಾರಿ ಹೇಳಿಕೊಂಡು ಬಂದಿದ್ದಾರೆ.
ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಎರಡು ಮಿಲಿಟರಿಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಗಳ ನಂತರ ಒಪ್ಪಂದಕ್ಕೆ ಬರಲಾಯಿತು ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಪ್ರಾರಂಭಿಸಿತು.
ಗಡಿಯಾಚೆಗಿನ ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಒಪ್ಪಂದಕ್ಕೆ ಬಂದವು.