ನವದೆಹಲಿ: ಡೊನಾಲ್ಡ್ ಟ್ರಂಪ್ ಅವರ ಸುಂಕಾಸ್ತ್ರದ ನಡುವೆ ಭಾರತ-ಯುಎಸ್ ಮಿಲಿಟರಿ ಸಮಾರಾಭ್ಯಾಸ 2025ರ 21ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಸೇನೆಯ ತುಕಡಿಯು ಅಲಾಸ್ಕಕ್ಕೆ ಆಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ತಿಳಿಸಿದೆ.
ಸೆಪ್ಟೆಂಬರ್ 14 ರವರೆಗೆ ನಡೆಯಲಿರುವ ಜಂಟಿ ಸಮಾರಾಭ್ಯಾಸದಲ್ಲಿ ಭಾರತೀಯ ಸೇನೆ ಅಮೆರಿಕದ ಪಡೆಯಿಂದ ಹೆಲಿಬೋರ್ನ್ ಕಾರ್ಯಾಚರಣೆ (ಹೆಲಿಕಾಪ್ಟರ್‌ಗಳನ್ನು ಬಳಸಿ ಸೇನಾ ಉಪಕರಣಗಳು ಅಥವಾ ಸಾಮಗ್ರಿಗಳನ್ನು ಶತ್ರುಗಳ ಪ್ರದೇಶದಲ್ಲಿ ಅಥವಾ ದುರ್ಗಮ ಸ್ಥಳಗಳಿಗೆ ಸಾಗಿಸುವ ಒಂದು ಪ್ರಮುಖ ಸೈನಿಕ ಕಾರ್ಯಾಚರಣೆ) ಪರ್ವತ ಯುದ್ಧ ಮತ್ತಿತರ ತರಬೇತಿ ಪಡೆಯಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ಫೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
C-17 III ವಿಮಾನದ ಮುಂಭಾಗದಲ್ಲಿರುವ ಭಾರತೀಯ ಸೈನಿಕರ ಫೋಟೋವನ್ನು ಶೇರ್ ಮಾಡಿದೆ.
ಮದ್ರಾಸ್ ರೆಜಿಮೆಂಟ್‌ನ ಬೆಟಾಲಿಯನ್ ಸಿಬ್ಬಂದಿ ಒಳಗೊಂಡಿರುವ ಭಾರತೀಯ ಸೇನಾ ತುಕಡಿ, ಎರಡು ವಾರಗಳ ಅವಧಿಯಲ್ಲಿ ಹೆಲಿಬೋರ್ನ್ ಕಾರ್ಯಾಚರಣೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಪರ್ವತ ಯುದ್ಧ, ಅಪಘಾತ ಸಂದರ್ಭಗಳಲ್ಲಿ ಸ್ಥಳಾಂತರಿಸುವಿಕೆ, ವೈದ್ಯಕೀಯ ನೆರವು ಮತ್ತು ಆರ್ಟಿಲರಿ, ಏವಿಯೇಷನ್, ಮತ್ತು ಇಲೆಕ್ಟ್ರಾನ್ ಸಿಸ್ಟಮ್‌ಗಳ ಸಮಗ್ರ ಬಳಕೆ ಸೇರಿದಂತೆ ಹಲವಾರು ಯುದ್ಧತಂತ್ರಗಳ ಬಗ್ಗೆ ತರಬೇತಿ ಪಡೆಯಲಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.