ವಿಶ್ವಸಂಸ್ಥೆ: ಭಾರತದ ವಿರುದ್ಧ ವಿಶ್ವ ಸಂಸ್ಥೆಯಲ್ಲಿ ಟರ್ಕಿ ದೇಶ ಮತ್ತೆ ಕ್ಯಾತೆ ತೆಗೆದಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಅತ್ಯುನ್ನತ ಜಾಗತಿಕ ನಾಯಕರ 80ನೇ ಸಮ್ಮೇಳನದಲ್ಲಿ ಮಾತನಾಡಿದ ಟರ್ಕಿ ದೇಶದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ್ದಾರೆ.
ದಕ್ಷಿಣ ಏಷ್ಯಾದ ಪ್ರಾದೇಶಿಕ ಶಾಂತಿ, ಸುಭದ್ರತೆ ಹಾಗೂ ಸಮೃದ್ಧಿಯ ಕುರಿತಾಗಿ ಮಾತನಾಡಿದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಿದ್ದು, ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರದ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ಆಶಿಸುತ್ತೇವೆಂದು ಹೇಳಿದ್ದಾರೆ.
"ದಕ್ಷಿಣ ಏಷ್ಯಾದಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವೆಂದು ನಾವು ಪರಿಗಣಿಸುತ್ತೇವೆ. ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಯುದ್ಧ ಪರಿಸ್ಥಿತಿಯ ನಂತರ ಏರ್ಪಟ್ಟ ಕದನ ವಿರಾಮದಿಂದ ನಮಗೆ ಸಂತಸವಾಗಿದೆ, ಈ ಉದ್ವಿಗ್ನತೆಯು ಸಂಘರ್ಷಕ್ಕೆ ಕಾರಣವಾಯಿತು.
ಭಯೋತ್ಪಾದನೆ ನಿಗ್ರಹದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಹಕಾರವನ್ನು ನೋಡುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಟರ್ಕಿ ಅಧ್ಯಕ್ಷರು ವಿಶ್ವ ನಾಯಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ, ಮಾತನಾಡಿದ್ದರು.
26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಕಾರ್ಯಾಟರಣೆ ನಡೆಸಿತ್ತು.
ಈ ಕಾರ್ಯಾಚರಣೆ ನಾಲ್ಕು ದಿನಗಳ ಕಾಲ ಭಾರತ ಹಾಗೂ ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿ ಮಾಡಿತ್ತು. ಮೇ.10ರಂದು ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಂದನ್ನು ಒಪ್ಪಿಕೊಂಡಿತ್ತು.