ನ್ಯೂಯಾರ್ಕ್: ಈ ವಾರಾಂತ್ಯದಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮವನ್ನು ವಿರೋಧಿಸಿದ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಕಿಡಿಕಾರಿದ್ದಾರೆ.
"ಮಮ್ದಾನಿ ಮತ್ತು ಈ ಸಮಾಜವಾದಿ ಹುಚ್ಚರು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ (MSG) ನಲ್ಲಿ ನಡೆಯಲಿರುವ ಮೋಹನ್ ಭಾಗವತ್ ಅವರ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ, ಏಕೆಂದರೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದು ಮಿಲ್ಬೆನ್ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಅಮೆರಿಕಕ್ಕೆ ಆಗಮಿಸಿರುವ ಭಾಗವತ್, ಆಗಸ್ಟ್ 29 ರಂದು ಪ್ರಸಿದ್ಧ ಎಂಎಸ್‌ಜಿ (MSG) ಯಲ್ಲಿ ಸುಮಾರು 5,000 ಜನರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮ ವಿರುದ್ಧದ ಪ್ರತಿಭಟನೆ ಮತ್ತು ರದ್ದಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಮ್ದಾನಿ, ಆ ಕಾರ್ಯಕ್ರಮವನ್ನು ಬೆಂಬಲಿಸುವುದಿಲ್ಲ. ಆದರೆ ಅಂತಹ "ಖಾಸಗಿ" ಕಾರ್ಯಕ್ರಮವನ್ನು ರದ್ದುಗೊಳಿಸುವ ಅಧಿಕಾರ ನಮಗೆ ಇರಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆ ಉಲ್ಲೇಖಿಸಿ ಪೋಸ್ಟ್ ಮಾಡಿರುವ ಮಿಲ್ಬೆನ್ , ಇದು ಬಹಳ ಸ್ಪಷ್ಟವಾಗಿದೆ. ಈ ಹುಚ್ಚರು ಸಮಾಜವಾದದ ಸಿದ್ಧಾಂತವನ್ನು ನಂಬುವುದರಿಂದ, ಅವರಿಗೆ ಬಂಡವಾಳಶಾಹಿಯ ಬಗ್ಗೆ ತಿಳುವಳಿಕೆ ಇಲ್ಲ. ಎಂಎಸ್‌ಜಿ ಸಮಾಜವಾದಿಗಳ ಬೊಬ್ಬೆಗೆ ಉತ್ತರಿಸುವುದಿಲ್ಲ. ಅವರು ಬಂಡವಾಳಶಾಹಿಗೆ ಬದ್ಧರಾಗಿರುತ್ತಾರೆ. ಆದ್ದರಿಂದಲೇ ಈ ಕಾರ್ಯಕ್ರಮ ನಡೆಯುತ್ತದೆ. ಮಮ್ದಾನಿ ಮತ್ತು ಅವರ ಸಮಾಜವಾದಿ ಗುಂಪಿಗೆ ನನ್ನ ಸಲಹೆ ಏನೆಂದರೆ, ಬಂಡವಾಳಶಾಹಿಗಳಾಗಿ, ಹಣ ಸಂಗ್ರಹಿಸಿ, ಎಂಎಸ್‌ಜಿಯನ್ನು ಬಾಡಿಗೆಗೆ ಪಡೆಯಿರಿ ಮತ್ತು ನಿಮ್ಮ ಮೋದಿ-ವಿರೋಧಿ ಮೂರ್ಖತನದ ಪ್ರದರ್ಶನಕ್ಕಾಗಿ ನಿಮ್ಮದೇ ಆದ Rally ಆಯೋಜಿಸಿ ಎಂದು ಸಲಹೆ ನೀಡಿದ್ದಾರೆ.
ರಿಪಬ್ಲಿಕನ್ ಪಕ್ಷದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿರುವ ಮಿಲ್ಬೆನ್, ಆಗಸ್ಟ್ 29 ರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ Rally ಶೀರ್ಷಿಕೆ ನನಗೆ ಇಷ್ಟವಾಗಿದೆ - 'ಏಕತೆ' (Oneness). ನಾವೆಲ್ಲರೂ ಒಂದೇ ಕುಟುಂಬ. ಇದು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅರ್ಥಪೂರ್ಣ ಸಂವಾದವನ್ನು ಒಳಗೊಂಡಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
'ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್', 'ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್' ಮತ್ತು 'ಇಂಟರ್‌ಫೇತ್ ಸೆಂಟರ್ ಆಫ್ ನ್ಯೂಯಾರ್ಕ್' ಸೇರಿದಂತೆ ವಿವಿಧ ಅಂತರ್-ಧರ್ಮೀಯ ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು, ಎಂಎಸ್‌ಜಿ (MSG) ಯಲ್ಲಿ ಭಾಗವತ್ ಅವರ ನಿಗದಿತ ಕಾರ್ಯಕ್ರಮವನ್ನು ವಿರೋಧಿಸಿವೆ ಹಾಗೂ ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿವೆ.
ಸಾರ್ವಜನಿಕ ನೀತಿ ಮತ್ತು ಸಂಶೋಧನಾ ಟ್ರಸ್ಟ್ ಆಗಿರುವ 'ಎಹೆಡ್ ಫೋರಂ' (AHEAD Forum), "ಸಾರ್ವತ್ರಿಕ ಏಕತಾ ಸಂಭ್ರಮ" (Universal Oneness Celebration) ಎಂಬ ಶೀರ್ಷಿಕೆಯಡಿ ಅಮೆರಿಕದಲ್ಲಿ ಭಾಗವತ್ ಅವರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಭಿನ್ನಾಭಿಪ್ರಾಯಗಳನ್ನು ಮೀರಿ ನೋಡುವಂತೆ ಜನರಿಗೆ ಕರೆ ನೀಡಿರುವ ಈ ಸಂಸ್ಥೆಯು, ಆರ್‌ಎಸ್‌ಎಸ್ ಮುಖ್ಯಸ್ಥರ ಈ ಭೇಟಿಯು "ಶಾಶ್ವತ ಮತ್ತು ಸಾರ್ವತ್ರಿಕ ಸಂದೇಶವನ್ನು ಹೊಂದಿದೆ. ಜಗತ್ತೇ ಒಂದು ಕುಟುಂಬ" ಎಂದು ಸಾಮಾಜಿಕ ಜಾಲತಾಣವೊಂದರಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ.