ಡೊನಾಲ್ಡ್ ಟ್ರಂಪ್  
ವಿದೇಶ

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

ಈಗಾಗಲೇ ಸಂದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದ ಅರ್ಜಿದಾರರಿಗೆ ಅವರ ನೇಮಕಾತಿಯನ್ನು ಮುಂದೂಡಲಾಗಿದೆ ಎಂದು ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗಿದ್ದು, ಹೊಸ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ವಾಷಿಂಗ್ಟನ್: ಡೊನಾಲ್ಡ್‌ ಟ್ರಂಪ್‌ ಸರ್ಕಾರ ಅಮೆರಿಕದ ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಿರುವ ಬೆನ್ನಲ್ಲೇ, ವಲಸೆ ವೀಸಾ ಅರ್ಜಿದಾರರಿಗೆ ದೊಡ್ಡ ಹೊಡೆತ ಎದುರಾಗಿದೆ.

ವಿಶ್ವದಾದ್ಯಂತ ಅಮೆರಿಕದ ರಾಯಭಾರ ಕಚೇರಿಗಳು ಹಾಗೂ ಕಾನ್ಸುಲೇಟ್‌ಗಳಲ್ಲಿ ವಲಸೆ ವೀಸಾ ಸಂದರ್ಶನಗಳ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ವೀಸಾ ಅರ್ಜಿದಾರರು ಅಮೆರಿಕದ ಸರ್ಕಾರಿ ಸೌಲಭ್ಯಗಳ ಮೇಲೆ ಅವಲಂಬಿತರಾಗುವ ಸಾಧ್ಯತೆಯಿದೆಯೇ ಎಂಬುದನ್ನು ಪರಿಶೀಲಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಿಶ್ವದಾದ್ಯಂತ ಅಮೆರಿಕದ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳಲ್ಲಿ ವಲಸೆ ವೀಸಾ (Immigrant Visa) ನೇಮಕಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಫೈನಾನ್ಷಿಯಲ್‌ ಟೈಮ್ಸ್‌ ವರದಿ ಮಾಡಿದೆ.

ಈಗಾಗಲೇ ಸಂದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದ ಅರ್ಜಿದಾರರಿಗೆ ಅವರ ನೇಮಕಾತಿಯನ್ನು ಮುಂದೂಡಲಾಗಿದೆ ಎಂದು ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗಿದ್ದು, ಹೊಸ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಮಾಹಿತಿ ಪ್ರಕಟಿಸಲಾಗಿದೆ.

ವೀಸಾ ಅರ್ಜಿದಾರರು ಭವಿಷ್ಯದಲ್ಲಿ ಸರ್ಕಾರದ ಆರ್ಥಿಕ ನೆರವು ಅಥವಾ ಸಾರ್ವಜನಿಕ ಸೌಲಭ್ಯಗಳ ಮೇಲೆ ಅವಲಂಬಿತರಾಗುವ ಸಾಧ್ಯತೆಯಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ವಿದೇಶಾಂಗ ಇಲಾಖೆ ಜಾಗತಿಕ ತರಬೇತಿ ಕಾರ್ಯಕ್ರಮ ಆರಂಭಿಸಿದೆ.

ಅಮೆರಿಕದ ವಲಸೆ ಕಾನೂನಿನಲ್ಲಿರುವ ‘ಪಬ್ಲಿಕ್‌ ಚಾರ್ಜ್‌’ ನಿಯಮದ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಸರ್ಕಾರದ ಆರ್ಥಿಕ ನೆರವಿನ ಮೇಲೆ ಮುಖ್ಯವಾಗಿ ಅವಲಂಬಿತರಾಗುವ ಸಾಧ್ಯತೆ ಇರುವ ವಲಸಿಗರನ್ನು ‘ಪಬ್ಲಿಕ್‌ ಚಾರ್ಜ್‌’ ಎಂದು ಪರಿಗಣಿಸಲಾಗುತ್ತದೆ.

ಅಮೆರಿಕವನ್ನು ಹೆಚ್ಚು ಸಮೃದ್ಧಗೊಳಿಸುವುದೆಂದರೆ, ವೀಸಾ ಅರ್ಜಿದಾರರು ಅಮೆರಿಕದ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ ‘ಪಬ್ಲಿಕ್‌ ಚಾರ್ಜ್‌’ ಆಗುವ ಅಥವಾ ಅಗತ್ಯವಿರುವ ಅರ್ಹ ಅಮೆರಿಕನ್ನರಿಗೆ ಮೀಸಲಾದ ಸಾರ್ವಜನಿಕ ಸೌಲಭ್ಯಗಳ ಮೇಲೆ ಅವಲಂಬಿತರಾಗುವ ಸಾಧ್ಯತೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಫೈನಾನ್ಷಿಯಲ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ವೀಸಾ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಲು ಕಾನ್ಸುಲರ್‌ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡುವ ಜಾಗತಿಕ ತರಬೇತಿ ಉಪಕ್ರಮವನ್ನು ಆಗಸ್ಟ್‌ನಲ್ಲೇ ಆರಂಭಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಟ್ರಂಪ್‌ ಆಡಳಿತ ಅಮೆರಿಕದ ವಲಸೆ ನೀತಿಯನ್ನು ಕಠಿಣಗೊಳಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಗ್ರೀನ್‌ ಕಾರ್ಡ್‌ ಅರ್ಜಿಗಳ ಮೇಲಿನ ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ಅಕ್ರಮ ವಲಸೆಯ ವಿರುದ್ಧದ ಕ್ರಮಗಳು ಕೂಡ ತೀವ್ರಗೊಂಡಿವೆ.

ಇದರ ಬೆನ್ನಲ್ಲೇ, H-1B ವೀಸಾಗೆ 1,03,265 ಅಮೆರಿಕನ್‌ ಡಾಲರ್‌ ಅರ್ಜಿ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಆಡಳಿತ ಮಂಡಳಿ ಮುಂದಿಟ್ಟಿದೆ.

ಅಮೆರಿಕದ ಕಂಪನಿಗಳು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳಿಂದ ನುರಿತ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು H-1B ವೀಸಾಗಳನ್ನು ವ್ಯಾಪಕವಾಗಿ ಬಳಸುತ್ತವೆ.

ಇದಕ್ಕೂ ಮೊದಲು ‘ಪಬ್ಲಿಕ್‌ ಚಾರ್ಜ್‌’ ಆಧಾರದ ಮೇಲೆ ವಲಸೆಯನ್ನು ನಿರ್ಬಂಧಿಸಲು ಅಮೆರಿಕ ಸರ್ಕಾರ ಕ್ರಮ ಕೈಗೊಂಡಿತ್ತು. ಸುಮಾರು 75 ದೇಶಗಳ ಅರ್ಜಿದಾರರ ಮೇಲೆ ಪರಿಣಾಮ ಬೀರುವ ಕ್ರಮವನ್ನೂ ಆಡಳಿತ ಮುಂದಿಟ್ಟಿತ್ತು.

ಜನವರಿಯಲ್ಲಿ ವಿದೇಶಾಂಗ ಇಲಾಖೆ ವಿಶ್ವದ ಸುಮಾರು 40 ಪ್ರತಿಶತ ದೇಶಗಳ ಅರ್ಜಿದಾರರ ವಲಸೆ ವೀಸಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳ ಮೇಲೆ ಅವಲಂಬಿತರಾಗುವ ಸಾಧ್ಯತೆ ಇರುವವರ ಪ್ರವೇಶವನ್ನು ತಡೆಯುವುದು ಇದರ ಉದ್ದೇಶ ಎಂದು ಇಲಾಖೆ ತಿಳಿಸಿತ್ತು.

ಅಮೆರಿಕದ ಕಾನೂನಿನ ಪ್ರಕಾರ, ವಲಸಿಗರು ‘ಪಬ್ಲಿಕ್‌ ಚಾರ್ಜ್‌’ ಆಗುವ ಸಾಧ್ಯತೆಯಿದೆಯೇ ಎಂಬುದನ್ನು ನಿರ್ಧರಿಸುವಾಗ ಅವರ ಆರ್ಥಿಕ ಸ್ಥಿತಿ, ವಯಸ್ಸು, ಆರೋಗ್ಯ, ಕೌಶಲ್ಯಗಳು ಹಾಗೂ ಕುಟುಂಬ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ.

ಆದರೆ, ಈ ಹಿಂದಿನ ನೀತಿಗೆ ಸಂಬಂಧಿಸಿದಂತೆ ಫೆಡರಲ್‌ ನ್ಯಾಯಾಧೀಶರು ಶುಕ್ರವಾರ ಅದನ್ನು ರದ್ದುಗೊಳಿಸಿದ್ದರು. ಆ ನೀತಿಯು ಕಾನೂನಿಗೆ ವಿರುದ್ಧವಾಗಿದ್ದು, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯನ್ನು ಮೀರಿದೆ ಎಂದು ನ್ಯಾಯಾಲಯ ಹೇಳಿರುವುದಾಗಿ CNN ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!