ವಾಷಿಂಗ್ಟನ್: ಅಧ್ಯಕ್ಷ ಮಡುರೋ ಅವರನ್ನು ಬಂಧಿಸಿ ವೆನೆಜುವೆಲಾ ಮೇಲೆ ಪಾರಮ್ಯ ಮೆರೆದಿದ್ದೇವೆ ಎಂದುಕೊಂಡಿದ್ದ ಅಮೆರಿಕಕ್ಕೆ ಇದೀಗ ಶಾಕ್ ಎದುರಾಗಿದ್ದು, ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮಡುರೋ ಬಂಧನ ಬಳಿಕ ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೆಲ್ಸಿ ರೊಡ್ರಿಗಸ್ ಭಾನುವಾರ ಅಮೆರಿಕದ ವಿರುದ್ಧವೇ ತಿರುಗಿ ಬಿದ್ದಿದ್ದು, ತುಂಬಾ ಆದೇಶ ಕೊಟ್ಟಿದ್ದೀರಿ.. ಇನ್ನು ಸಾಕು.. ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಭಾನುವಾರ ವಾಷಿಂಗ್ಟನ್‌ನಿಂದ "ಸಾಕಷ್ಟು" ಆದೇಶಗಳನ್ನು ಪಡೆದಿದ್ದೇವೆ ಎಂದು ಹೇಳಿದ್ದು, ಇದು ಅವರ ಮಧ್ಯಂತರ ಸರ್ಕಾರವು ಶ್ವೇತಭವನದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತಿರುವಾಗಲೂ, ಅಮೆರಿಕ ವಿರುದ್ಧ "ಅಪರೂಪದ ಪ್ರತಿವಾದ"ವನ್ನು ಸೂಚಿಸುತ್ತದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ತುಂಬಾ ಆದೇಶ ಕೊಟ್ಟಿದ್ದೀರಿ.. ಇನ್ನು ಸಾಕು..
ಕರಾವಳಿ ನಗರವಾದ ಪೋರ್ಟೊ ಲಾ ಕ್ರೂಜ್‌ನಲ್ಲಿ ತೈಲ ಕಾರ್ಮಿಕರೊಂದಿಗೆ ಮಾತನಾಡಿದ ರೊಡ್ರಿಗಸ್, 'ವೆನೆಜುವೆಲಾದ ರಾಜಕೀಯವನ್ನು ವಿದೇಶಿ ಹಸ್ತಕ್ಷೇಪವಿಲ್ಲದೆ ಆಂತರಿಕವಾಗಿ ಪರಿಹರಿಸಬೇಕು. ವೆನೆಜುವೆಲಾದ ರಾಜಕಾರಣಿಗಳ ಮೇಲಿನ ವಾಷಿಂಗ್ಟನ್‌ನ ಆದೇಶಗಳು ಸಾಕು. ವೆನೆಜುವೆಲಾದ ರಾಜಕೀಯವು ನಮ್ಮ ಭಿನ್ನಾಭಿಪ್ರಾಯಗಳನ್ನು ಮತ್ತು ನಮ್ಮ ಆಂತರಿಕ ಸಂಘರ್ಷಗಳನ್ನು ಪರಿಹರಿಸಲಿ" ಎಂದು ಅವರು ಸರ್ಕಾರಿ ಸ್ವಾಮ್ಯದ ವೆನೆಜೋಲಾನಾ ಡಿ ಟೆಲಿವಿಷನ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಹೇಳಿದರು.
'ನಾವು ಹೆದರುವುದಿಲ್ಲ. ಅಮೆರಿಕದೊಂದಿಗೆ ಗೌರವಯುತ ಸಂಬಂಧಗಳನ್ನು ಕಾಪಾಡಿಕೊಳ್ಳಲು ನಾವು ಹೆದರುವುದಿಲ್ಲ, ಆದರೆ ಅವು ಗೌರವವನ್ನು ಆಧರಿಸಿರಬೇಕು. ಅಂತಾರಾಷ್ಟ್ರೀಯ ಕಾನೂನಿಗೆ ಗೌರವ, ಪರಸ್ಪರ ಸಂಬಂಧಗಳಲ್ಲಿ ಮೂಲಭೂತ ಮಾನವ ಗೌರವ ಮತ್ತು ವೆನೆಜುವೆಲಾದ ಘನತೆ ಮತ್ತು ಇತಿಹಾಸಕ್ಕೆ ಗೌರವ ಎಂದು ಹೇಳಿದರು.
ರೋಡ್ರಿಗಸ್ ಆಡಳಿತದ ಮೇಲೆ ಅಮೆರಿಕ ಪ್ರಭಾವ
ಇನ್ನು ಅತ್ತೆ ವೆನೆಜುವೆಲಾದಲ್ಲಿ ಮಾಜಿ ಅಧ್ಯಕ್ಷ ಮಡುರೊ ನಿಷ್ಠಾವಂತರ ಬೆಂಬಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಇತ್ತ ತೈಲ ಉತ್ಪಾದನೆಯನ್ನು ಪುನರಾರಂಭಿಸಲು ಮತ್ತು ಅಮೆರಿಕ ಹಿತಾಸಕ್ತಿಗಳೊಂದಿಗೆ ನಿಕಟವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಬೇಡಿಕೆಗಳು ಸೇರಿದಂತೆ ಅಮೆರಿಕದಿಂದ ರೋಡ್ರಿಗಸ್ ಸರ್ಕಾರ ಒತ್ತಡವನ್ನು ಎದುರಿಸುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಜನವರಿ ಆರಂಭದಲ್ಲಿ ಅಮೆರಿಕ ನೇತೃತ್ವದ ದಾಳಿಯಲ್ಲಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ಯಲಾಯಿತು. ಬಳಿಕ ಉಪಾಧ್ಯಕ್ಷೆ ರೋಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ವೆನೆಜುವೆಲಾದಲ್ಲಿ ಅಮೆರಿಕ ಅಧಿಕಾರ
ಅತ್ತ ಮಡುರೋ ಬಂಧನ ಬೆನ್ನಲ್ಲೇ ಉಪಾಧ್ಯಕ್ಷೆ ರೋಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬೆನ್ನಲ್ಲೇ ಈ ಕುರಿತು ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈಲ ಸಮೃದ್ಧ ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾದಲ್ಲಿ ಅಮೆರಿಕ ಸರ್ಕಾರ ಮುನ್ನಡೆಸಲಿದೆ. ರೊಡ್ರಿಗಸ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದೇನೆ. ಅವರು "ಅದ್ಭುತ ವ್ಯಕ್ತಿ".. ಅವರ ಅಧಿಕಾರದ ಮೂಲಕ ಅಮೆರಿಕ "ವೆನೆಜುವೆಲಾದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿದೆ" ಎಂದು ಹೇಳಿದ್ದರು.