ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ 
ವಿದೇಶ

ಶಾಂತಿ ಮಾತುಕತೆಗೆ ಅಡ್ಡಿ: Iran ಸಂಧಾನಕಾರರ ಹತ್ಯೆಗೆ Israel ಭಾರೀ ಸಂಚು; ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಎಚ್ಚರಿಕೆ ರವಾನಿಸಿದ ಅಮೆರಿಕಾ..!

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಅವರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯಿದ್ದು, ಇದರಂತೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮೂಲಕ ಇರಾನ್‌ಗೆ ಅಮೆರಿಕಾ ಎಚ್ಚರಿಕೆ ರವಾನಿಸಿದೆ.

ವಾಷಿಂಗ್ಟನ್: ಶಾಂತಿ ಮಾತುಕತೆಗೆ ಗಂಭೀರ ಅಡ್ಡಿಯಾಗುವ ಸಾಧ್ಯತೆ ಇರುವ ಬೆಳವಣಿಗೆಯೊಂದರಲ್ಲಿ, ಇರಾನ್‌ನ ಪ್ರಮುಖ ಸಂಧಾನಕಾರರನ್ನು ಗುರಿಯಾಗಿಸಿ ಇಸ್ರೇಲ್ ಹತ್ಯೆ ಸಂಚು ರೂಪಿಸಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮೂಲಕ ಇರಾನ್‌ಗೆ ಎಚ್ಚರಿಕೆ ರವಾನಿಸಿರುವ ಅಮೆರಿಕಾ, ಸಾಧ್ಯವಿರುವ ದಾಳಿಯನ್ನು ತಡೆಯಲು ತೀವ್ರ ರಾಜತಾಂತ್ರಿಕ ಹಾಗೂ ಭದ್ರತಾ ಕಸರತ್ತು ನಡೆಸುತ್ತಿದೆ ಎಂದು ವರದಿಯಾಗಿದೆ.

ಈ ಬೆಳವಣಿಗೆಗಳು ಈಗಾಗಲೇ ಬಹಳ ಸೂಕ್ಷ್ಮವಾಗಿ ಸಾಗುತ್ತಿರುವ ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಅವರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯಿದ್ದು, ಇದರಂತೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮೂಲಕ ಇರಾನ್‌ಗೆ ಅಮೆರಿಕಾ ಎಚ್ಚರಿಕೆ ರವಾನಿಸಿ, ಉನ್ನತ ನಾಯಕರ ಭದ್ರತೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಇಬ್ಬರೂ ಇರಾನ್ ಪರವಾಗಿ ಅಮೆರಿಕದೊಂದಿಗೆ ನಡೆಯುತ್ತಿರುವ ಶಾಂತಿ ಮಾತುಕತೆಯ ಪ್ರಮುಖ ಮುಖಂಡರಾಗಿದ್ದಾರೆ.

ಇಸ್ರೇಲ್ ಇವರನ್ನು ಹತ್ಯೆ ಮಾಡಲು ಮುಂದಾದರೆ, ಶಾಂತಿ ಮಾತುಕತೆ ಸಂಪೂರ್ಣವಾಗಿ ವಿಫಲಗೊಂಡು ಮತ್ತೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಯುದ್ಧ ಭುಗಿಲೇಳುವ ಆತಂಕವನ್ನು ಅಮೆರಿಕ ಅಧಿಕಾರಿಗಳು ವ್ಯಕ್ತಪಡಿಸಿದ್ದಾಗಿ ವರದಿಯಲ್ಲಿ ತಿಳಿದುಬಂದಿದೆ.

ಫೆಬ್ರವರಿ 28ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಉನ್ನತ ನಾಯಕರು ಮೃತಪಟ್ಟ ನಂತರ ಆರಂಭವಾದ ಯುದ್ಧದಲ್ಲಿ, ಇರಾನ್‌ನ ಉನ್ನತ ನಾಯಕರನ್ನು ಗುರಿಯಾಗಿಸುವುದೇ ಇಸ್ರೇಲ್‌ನ ಪ್ರಮುಖ ತಂತ್ರವಾಗಿತ್ತು ಎಂದು ಹೇಳಲಾಗಿದೆ.

ಇಸ್ರೇಲ್ ಯುದ್ಧ ಆರಂಭವಾದ ದಿನಗಳಿಂದಲೇ ಇರಾನ್‌ನ ಉನ್ನತ ನಾಯಕತ್ವವನ್ನು ಗುರಿಯಾಗಿಸುವ ತಂತ್ರವನ್ನು ಅನುಸರಿಸುತ್ತಿತ್ತು. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನೇಯಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಮೃತಪಟ್ಟಿದ್ದರು. ಆದರೆ, ಶಾಂತಿ ಮಾತುಕತೆಗಳು ಏಪ್ರಿಲ್‌ನಲ್ಲಿ ಆರಂಭವಾದ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಅಮೆರಿಕಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಂತದಲ್ಲಿ ಸಂಧಾನಕಾರರ ಹತ್ಯೆಯಂತಹ ಯಾವುದೇ ಪ್ರಯತ್ನ ನಡೆದರೆ, ಅದು ಶಾಂತಿ ಮಾತುಕತೆಗಳನ್ನು ಸಂಪೂರ್ಣವಾಗಿ ನಾಶಮಾಡಬಹುದು ಎಂಬುದು ಅಮೆರಿಕಾದ ಲೆಕ್ಕಾಚಾರವಾಗಿದೆ.

ಇದರೊಂದಿಗ ಅಮೆರಿಕಾ ಮತ್ತು ಇಸ್ರೇಲ್ ನಡುವೆ ವೈಮನಸ್ಸು ಏರ್ಪಟ್ಟಿರುವುದು ಬಹಿರಂಗಗೊಂಡಿದ್ದು, ಅಮೆರಿಕಾ ಶಾಂತಿ ಒಪ್ಪಂದದತ್ತ ಒಲವು ತೋರಿಸುತ್ತಿದ್ದರೆ, ಇಸ್ರೇಲ್ ಇರಾನ್‌ನ ಸೇನಾ ಸಾಮರ್ಥ್ಯ, ಕ್ಷಿಪಣಿ ವ್ಯವಸ್ಥೆ ಹಾಗೂ ಪ್ರಾದೇಶಿಕ ಪ್ರಭಾವವನ್ನು ಕುಗ್ಗಿಸುವುದೇ ಮುಖ್ಯ ಗುರಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಯುದ್ಧದ ಆರಂಭಿಕ ಹಂತದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇರಾನ್‌ನ ಕೆಲವು ಉನ್ನತ ಅಧಿಕಾರಿಗಳು ಸಾವನ್ನಪ್ಪಿದ್ದರು. ಇವರಲ್ಲಿ ರಾಷ್ಟ್ರೀಯ ಭದ್ರತಾ ಪ್ರಮುಖ ಅಲಿ ಲರಿಜಾನಿ ಹಾಗೂ ಮಾಜಿ ವಿದೇಶಾಂಗ ಸಚಿವ ಕಮಾಲ್ ಖರಾಝಿ ಕೂಡ ಸೇರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್ ವೇಳೆಗೆ ಅಮೆರಿಕಾ ಮತ್ತು ಇರಾನ್ ನಡುವೆ ಹಾರ್ಮುಜ್ ಜಲಸಂಧಿಯನ್ನು ಮರು ತೆರೆಯುವ ಹಾಗೂ ಅಣು ಕಾರ್ಯಕ್ರಮದ ಕುರಿತು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಡುವ ತಾತ್ಕಾಲಿಕ ಚೌಕಟ್ಟು ಒಪ್ಪಂದವೂ ರೂಪುಗೊಂಡಿತ್ತು. ಆದರೆ, ಈ ಒಪ್ಪಂದವನ್ನು ಇಸ್ರೇಲ್ ತನ್ನ ಯುದ್ಧ ಗುರಿಗಳಿಗೆ ವಿರೋಧವಾಗಿದೆಯೆಂದು ಪರಿಗಣಿಸಿತ್ತು.

ಅದೇ ಸಮಯದಲ್ಲಿ ಇಸ್ರೇಲ್, ಇರಾನ್‌ನ ಪ್ರಮುಖ ನಾಯಕರನ್ನು ಗುರಿ ಪಟ್ಟಿಯಲ್ಲಿ ಸೇರಿಸಿದ್ದರೂ, ಅಮೆರಿಕದ ಒತ್ತಡದ ನಂತರ ಕೆಲವರ ಹೆಸರುಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾಗಿ ವರದಿಗಳು ತಿಳಿಸಿವೆ.

ಇದರ ಮಧ್ಯೆ ಇರಾನ್ ಸಂಧಾನಕಾರರಾದ ಅಬ್ಬಾಸ್ ಅರಾಘ್ಚಿ ಮತ್ತು ಮೊಹಮ್ಮದ್ ಬಘರ್ ಗಾಲಿಬಾಫ್ ಹಲವು ಬಾರಿ ಜೀವ ಅಪಾಯದಿಂದ ಪಾರಾಗಿರುವ ಘಟನೆಗಳೂ ನಡೆದಿರುವುದಾಗಿ ವರದಿಗಳು ತಿಳಿಸಿವೆ.

ಗಾಲಿಬಾಫ್ ಎರಡು ಬಾರಿ ಹತ್ಯೆ ಯತ್ನಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಭೂಗತ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಮೇಲೆಯೇ ದಾಳಿ ನಡೆದಿದ್ದು, ಅವರು ಅವಶೇಷಗಳಡಿ ಸಿಲುಕಿದ್ದರೂ ನಂತರ ರಕ್ಷಿಸಲ್ಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಜತಾಂತ್ರಿಕ ಚಟುವಟಿಕೆಗಳ ಸಂದರ್ಭದಲ್ಲಿ ಭದ್ರತಾ ಅಪಾಯ ಹೆಚ್ಚಾಗಿದ್ದ ಕಾರಣ, ಪಾಕಿಸ್ತಾನದಲ್ಲಿ ನಡೆದ ಮಾತುಕತೆ ವೇಳೆ ಇರಾನ್ ನಿಯೋಗಕ್ಕೆ ಯುದ್ಧ ವಿಮಾನಗಳ ಭದ್ರತಾ ಕಾವಲು ನೀಡಲಾಗಿತ್ತು.

70ಕ್ಕೂ ಹೆಚ್ಚು ಸದಸ್ಯರಿದ್ದ ನಿಯೋಗವನ್ನು ಪಾಕಿಸ್ತಾನದಿಂದ ಇಸ್ಲಾಮಾಬಾದ್ ವರೆಗೆ ಯುದ್ಧ ವಿಮಾನಗಳು ಬೆಂಗಾವಲಾಗಿ ಕರೆದೊಯ್ದಿದ್ದವು ಎಂದು ತಿಳಿದುಬಂದಿದೆ.

ಆದರೆ, ಹಿಂದಿರುಗುವ ವೇಳೆ, ಇಸ್ರೇಲ್ ದಾಳಿ ಸಾಧ್ಯತೆ ಕುರಿತು ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇರಾನ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಘಾಲಿಬಾಫ್ ಪ್ರಯಾಣಿಸುತ್ತಿದ್ದ ವಿಮಾನವನ್ನು ಭದ್ರತಾ ಕಾರಣಗಳಿಂದ ಮಶ್ಹದ್ ನಗರದಲ್ಲಿ ತುರ್ತು ಲ್ಯಾಂಡ್ ಮಾಡಿಸಿ, ನಂತರ ನಿಯೋಗ ರಸ್ತೆ ಮಾರ್ಗದ ಮೂಲಕ ಟೆಹ್ರಾನ್ ತಲುಪುವಂತೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. .

ಇಂತಹ ಗಂಭೀರ ಭದ್ರತಾ ಆತಂಕಗಳ ನಡುವೆಯೂ, ಅರಾಘ್ಚಿ ಮತ್ತು ಗಾಲಿಬಾಫ್ ಅವರು ಕತಾರ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕಾ ಪ್ರತಿನಿಧಿಗಳೊಂದಿಗೆ ಮಾತುಕತೆಗಳಲ್ಲಿ ಭಾಗವಹಿಸಿ, ಶಾಂತಿ ಮಾತುಕತೆ ಪ್ರಕ್ರಿಯೆ ಮುಂದುವರೆಸುತ್ತಿದ್ದಾರೆನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿಕ್ಕಬಳ್ಳಾಪುರ: ಕ್ವಾರಿಯಲ್ಲಿ ಡ್ರಿಲ್ಲಿಂಗ್ ವೇಳೆ ಸ್ಫೋಟ, ಕಾರ್ಮಿಕ ಸಾವು

ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್: Fuel surcharge ಇಳಿಸಿದ Air India; ವಿಮಾನ ಟಿಕೆಟ್ ದರವೂ ಇಳಿಕೆ ಸಾಧ್ಯತೆ..!

ಬೆಳಗಾವಿ: 300 ವರ್ಷಗಳ ಪುರಾತನ ಮೆಟ್ಟಿಲು ಬಾವಿಗೆ ಮರುಜೀವ, Video

ರಷ್ಯಾದಿಂದಲೇ ತೈಲ ತಂದು, ರಷ್ಯಾಕ್ಕೇ ಪೆಟ್ರೋಲ್ ಮಾರಾಟ...? ಏನಿದು ಭಾರತದ ರಿಫೈನರಿಗಳ ‘ಉಲ್ಟಾ’ ಗೇಮ್? ಕೇಂದ್ರ ಸರ್ಕಾರ ಹೇಳಿದ್ದೇನು..?

ಅಮೆರಿಕವೇ ಹೆಚ್ಚು ಖರ್ಚು ಮಾಡುತ್ತಿದ್ದರೂ ಕಷ್ಟದ ಸಮಯದಲ್ಲಿ ಕೈಕೊಟ್ಟರು: ಏಕಪಕ್ಷೀಯ ಸಂಬಂಧ ಮುಂದುವರಿಸುವುದು ಹಾಸ್ಯಾಸ್ಪದ: NATO ವಿರುದ್ಧ ಟ್ರಂಪ್‌ ಆಕ್ರೋಶ