ಚಿಪೆವಾ ಫಾಲ್ಸ್: ಹಾರ್ಮುಜ್ ಜಲಸಂಧಿಯತ್ತ ಸಾಗುತ್ತಿದ್ದ ನಾಲ್ಕು ಇರಾನ್ ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದ್ದು, ಜೊತೆಗೆ ಹಲವು ರಾಡಾರ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕದನ ವಿರಾಮ ಒಪ್ಪಂದಕ್ಕೆ ಹೊಸ ಸವಾಲು ಎದುರು ಮಾಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿಯ ಪ್ರಕಾರ, ಇರಾನ್‌ನಿಂದ ಉಡಾಯಿಸಲಾದ ಡ್ರೋನ್‌ಗಳು ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಹಡಗುಗಳಿಗೆ ಹಾಗೂ ಅಂತರರಾಷ್ಟ್ರೀಯ ಸಾಗರ ಸಂಚಾರಕ್ಕೆ ತಕ್ಷಣದ ಅಪಾಯವನ್ನು ಉಂಟುಮಾಡಿದ್ದವು. ಈ ಹಿನ್ನೆಲೆಯಲ್ಲಿ ಅವುಗಳನ್ನು ಗುರಿಯಾಗಿಸಿ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದೆ. ವಿಶ್ವದ ಬಹುಪಾಲು ತೈಲ ರಫ್ತು ಇದೇ ಮಾರ್ಗದ ಮೂಲಕ ಸಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಇರಾನ್ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದ್ದು, ಇದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯೂ ಕಂಡುಬಂದಿದೆ.
ಇರಾನ್‌ನ ಬಂದರುಗಳ ವಿರುದ್ಧ ಅಮೆರಿಕಾ ಈಗಾಗಲೇ ನಿರ್ಬಂಧ ಕ್ರಮಗಳನ್ನು ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಹೆಚ್ಚಾಗಿದೆ.
ರಡಾರ್ ಕೇಂದ್ರಗಳ ಮೇಲೆ ಅಮೆರಿಕಾ ದಾಳಿ
ಡ್ರೋನ್ ದಾಳಿಯ ಬಳಿಕ ಅಮೆರಿಕ ಸೇನೆ ಇರಾನ್‌ನ ರಾಡಾರ್ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿರುವ ಒಂದು ದ್ವೀಪದ ಮೇಲಿನ ರಡಾರ್ ವ್ಯವಸ್ಥೆಯನ್ನೂ ಗುರಿಯಾಗಿಸಲಾಗಿದೆ.
“ಮುಂದಿನ ದಾಳಿಗಳನ್ನು ತಡೆಯಲು ಮತ್ತು ಸಮುದ್ರ ಭದ್ರತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ
ಈ ವಾರದ ಆರಂಭದಲ್ಲಿ ಇರಾನ್ ಬೆಂಬಲಿತ ಡ್ರೋನ್‌ಗಳು ಕುವೈತ್‌ನ ಪ್ರಮುಖ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಮೇಲೆ ದಾಳಿ ನಡೆಸಿದ್ದವು.
ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಅಲ್ಲದೆ, ಕೆಲಕಾಲ ವಿಮಾನ ಸಂಚಾರವೂ ಸ್ಥಗಿತಗೊಂಡಿತ್ತು. ಈ ಘಟನೆಯ ಬಳಿಕ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ.
ಈ ಬೆಳವಣಿಗೆಗಳ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ವಿಸ್ಕಾನ್ಸಿನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಇರಾನ್ ವಿಚಾರದಲ್ಲಿ ಪರಿಸ್ಥಿತಿ ಉತ್ತಮವಾಗಿ ಸಾಗುತ್ತಿದೆ. ಒಪ್ಪಂದದ ಮೂಲಕವಾಗಲಿ ಅಥವಾ ಕಠಿಣ ಕ್ರಮಗಳ ಮೂಲಕವಾಗಲಿ ನಾವು ಬಲಿಷ್ಠ ಫಲಿತಾಂಶದೊಂದಿಗೆ ಹೊರಬರುತ್ತೇವೆ ಎಂದು ಹೇಳಿದ್ದಾರೆ.
ಇರಾನ್‌ನ ಕ್ಷಿಪಣಿ ಸಾಮರ್ಥ್ಯ ಈಗಾಗಲೇ ಬಹಳ ಮಟ್ಟಿಗೆ ಕುಗ್ಗಿದ್ದು, ಅವರ ಬಳಿ ಸುಮಾರು 21 ರಿಂದ 22 ಶೇಕಡಾ ಕ್ಷಿಪಣಿಗಳು ಮಾತ್ರ ಉಳಿದಿವೆ ಎಂದು ಟ್ರಂಪ್ ಹೇಳಿದ್ದಾರೆ.
ಅಣು ಕಾರ್ಯಕ್ರಮದ ಮಾತುಕತೆ ಅಸ್ಪಷ್ಟ
ಅಮೆರಿಕಾ ಮತ್ತು ಇರಾನ್ ನಡುವೆ ಒಂದು ವಾರದ ಹಿಂದೆ 60 ದಿನಗಳ ಕದನ ವಿರಾಮ ವಿಸ್ತರಣೆ ಹಾಗೂ ಇರಾನ್‌ನ ಅಣ್ವಸ್ತ್ರ ಹೊಂದುವ ಯೋಜನೆ ಕುರಿತು ಮತ್ತೊಂದು ಸುತ್ತಿನ ಮಾತುಕತೆ ಆರಂಭಿಸುವ ಬಗ್ಗೆ ತಾತ್ಕಾಲಿಕ ಒಪ್ಪಂದ ಮೂಡಿತ್ತು. ಆದರೆ, ಟ್ರಂಪ್ ಆಡಳಿತ ಕೆಲವು ಹೊಸ ಷರತ್ತುಗಳನ್ನು ಮುಂದಿಟ್ಟಿರುವ ಕಾರಣ ಒಪ್ಪಂದ ಅಂತಿಮಗೊಳ್ಳುವುದು ವಿಳಂಬವಾಗುತ್ತಿದೆ.
ಇರಾನ್ ತನ್ನ ಸ್ವಾಯತ್ತತೆ ಮತ್ತು ರಾಷ್ಟ್ರೀಯ ಗೌರವಕ್ಕೆ ಧಕ್ಕೆಯಾಗುವ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶವನ್ನು ನೀಡುತ್ತಿರುವುದರಿಂದ ಮಾತುಕತೆಗಳು ಸಂಕೀರ್ಣ ಹಂತ ತಲುಪಿವೆ.
ಲೆಬನಾನ್‌ನಲ್ಲಿ ಮತ್ತೆ ಉಲ್ಬಣಗೊಂಡ ಪರಿಸ್ಥಿತಿ
ಇದರ ನಡುವೆ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದವಾಗಿದ್ದರೂ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಅದನ್ನು ತಿರಸ್ಕರಿಸಿದೆ.
ಶುಕ್ರವಾರ ದಕ್ಷಿಣ ಲೆಬನಾನ್‌ನ ಹಲವು ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಗ್ರಾಮಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಹೊಸ ನಿರ್ಬಂಧಗಳು
ಇದರ ಜೊತೆಗೆ ಹಿಂದೂ ಮಹಾಸಾಗರದಲ್ಲಿ ಇರಾನ್‌ಗೆ ಸಂಬಂಧಿಸಿದ ನಿರ್ಬಂಧಿತ ತೈಲ ಟ್ಯಾಂಕರ್‌ವೊಂದನ್ನು ಅಮೆರಿಕ ಪಡೆ ವಶಪಡಿಸಿಕೊಂಡಿದೆ.
ಇರಾನ್ ತನ್ನ ತೈಲ ಮಾರಾಟದಿಂದ ಆದಾಯ ಗಳಿಸುವುದನ್ನು ತಡೆಯಲು ಅಮೆರಿಕಾ ಹೊಸ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿದ್ದು, ಹಲವಾರು ಕಂಪನಿಗಳು, ವ್ಯಕ್ತಿಗಳು ಮತ್ತು ಹಡಗುಗಳ ಮೇಲೆ ಕ್ರಮ ಕೈಗೊಂಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಈ ಹೊಸ ಘರ್ಷಣೆ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇರಾನ್, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನತೆ ಕಡಿಮೆಯಾಗದಿದ್ದರೆ ಕದನ ವಿರಾಮ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ. ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ, ಇಂಧನ ಬೆಲೆಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.