ಯುಎಇಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ತಯಾಬ್ ಖಾನ್, ಯುಎಇ ಲಾಟರಿಯ ಲಕ್ಕಿ ಡೇ ಡ್ರಾದಲ್ಲಿ 30 ಮಿಲಿಯನ್ ದಿರ್ಹಮ್ (ಸುಮಾರು ₹78 ಕೋಟಿ) ಮೊತ್ತವನ್ನು ಗಳಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ದೀರ್ಘ ಪಾಳಿಗಳಲ್ಲಿ ಕೆಲಸ ಮಾಡುತ್ತಿರುವ ವಿಜೇತರು, ಆಕಸ್ಮಿಕವಾಗಿ ಟಿಕೆಟ್ ಖರೀದಿಸಿದರು ಮತ್ತು ಅಂತಿಮವಾಗಿ ಉನ್ನತ ಬಹುಮಾನವನ್ನು ಪಡೆದಿದ್ದಾರೆ.
ನೇಪಾಳದ 26 ವರ್ಷದ ವ್ಯಕ್ತಿ, ತಾನು ಡ್ರಾವನ್ನು ವೀಕ್ಷಿಸಿಲ್ಲ ಮತ್ತು ಈ ಸುದ್ದಿ ಸಂಪೂರ್ಣ ಆಘಾತಕಾರಿಯಾಗಿತ್ತು. ಇದನ್ನು ನಂಬಲು ಸಹ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಹಲವು ಬಾರಿ ಪರಿಶೀಲಿಸಬೇಕಾಯಿತು. ಇಮೇಲ್ ಮೂಲಕ ಗೆಲುವಿನ ಬಗ್ಗೆ ತಿಳಿದುಕೊಂಡೆ ಎಂದಿದ್ದಾರೆ.
'ಸಣ್ಣ ಬಹುಮಾನಗಳಿಗಾಗಿ ನನಗೆ ಈ ಹಿಂದೆ ಇದೇ ರೀತಿಯ ಇಮೇಲ್‌ಗಳು ಬಂದಿದ್ದವು. ಆದ್ದರಿಂದ, ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಆದರೆ, ನಾನು ಇಮೇಲ್ ತೆರೆದಾಗ 30 ಮಿಲಿಯನ್ ದಿರ್ಹಮ್‌ಗಳನ್ನು ನೋಡಿದಾಗ, ನನ್ನ ಕೈಗಳು ನಡುಗುತ್ತಿದ್ದವು ಮತ್ತು ನನ್ನ ಕಾಲುಗಳು ನಡುಗುತ್ತಿದ್ದವು. ಅದು ಕನಸಿನಂತೆ ಭಾಸವಾಯಿತು' ಎಂದು ತಯಾಬ್ ಹೇಳಿದರು.
ವರದಿ ಪ್ರಕಾರ, ಲಾಟರಿ ಖರೀದಿಸಲು ನಿಯಮಿತವಾಗಿ ಹಣ ಸಂಗ್ರಹಿಸುತ್ತಿದ್ದ ಐವರು ಆಪ್ತ ಸ್ನೇಹಿತರು ಈ ಹಣವನ್ನು ಹಂಚಿಕೊಂಡಿದ್ದಾರೆ. ಜಾಕ್‌ಪಾಟ್ ಮೊತ್ತವನ್ನು ಸಮಾನವಾಗಿ ವಿಭಜಿಸಲಾಗುತ್ತದೆ. ಆಗ ಪ್ರತಿಯೊಬ್ಬ ಸ್ನೇಹಿತನಿಗೆ 6 ಮಿಲಿಯನ್ ದಿರ್ಹಮ್‌ಗಳು ಸಿಗುತ್ತವೆ ಎನ್ನಲಾಗಿದೆ. ಭಾರತೀಯ ಕರೆನ್ಸಿಯಲ್ಲಿ 6 ಮಿಲಿಯನ್ ದಿರ್ಹಮ್‌ಗಳು ಸುಮಾರು ₹15 ಕೋಟಿಯಾಗಿದೆ.
'ನಾವು ಒಟ್ಟು ಐದು ಜನ ಇದ್ದೇವೆ. ನಾವು ನಮ್ಮ ಹಣವನ್ನು ಒಟ್ಟುಗೂಡಿಸಿ ನಿಯಮಿತವಾಗಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೆವು. ಪ್ರತಿ ವಾರ, ಒಬ್ಬರು ಸರದಿಯಂತೆ ಸಂಖ್ಯೆಗಳನ್ನು ಆಯ್ಕೆ ಮಾಡುತ್ತಿದ್ದೆವು' ಎಂದು ಅವರು ಹೇಳಿದರು.
ಲಾಟರಿ ಗೆದ್ದ ನಂತರ ತಾನು ಮೊದಲು ತಮ್ಮ ಚಿಕ್ಕಪ್ಪನೊಂದಿಗೆ ಮಾತನಾಡಿದೆ. 'ನಾನು ಇಲ್ಲಿಗೆ ಬರಲು ಅವರೇ ಕಾರಣ. ನಾವು ಎಷ್ಟು ಗೆದ್ದಿದ್ದೇವೆ ಎಂದು ನಾನು ಅವರಿಗೆ ಹೇಳಿದಾಗ, ಅವರು ಸಂಪೂರ್ಣವಾಗಿ ಮೂಕರಾಗಿದ್ದರು ಮತ್ತು ಅವರು ಕಣ್ಣೀರಾಕಿದರು' ಎಂದು ಖಾನ್ ಹೇಳಿದರು.
ಥಾರ್ ಖರೀದಿಸುವ ಆಸೆ
ಈ ಗೆಲುವಿನೊಂದಿಗೆ, ತನ್ನ ಕೆಲಸವನ್ನು ತ್ಯಜಿಸಿ ಉದ್ಯಮಶೀಲತೆ ಮತ್ತು ಹೂಡಿಕೆಯತ್ತ ಗಮನಹರಿಸಲು ಯೋಜಿಸುವುದಾಗಿ ತಿಳಿಸಿದ್ದಾರೆ. ತನ್ನ ಕುಟುಂಬಕ್ಕಾಗಿ ಒಂದು ಮನೆಯನ್ನು ನಿರ್ಮಿಸಬೇಕು ಮತ್ತು ಕೆಲವು ವೈಯಕ್ತಿಕ ಆಸೆಗಳನ್ನು ಪೂರೈಸಬೇಕು. ನನ್ನ ಶಾಪಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮಹೀಂದ್ರಾ ಥಾರ್ ಇದೆ. ಹಲವು ವರ್ಷಗಳಿಂದ ಖರೀದಿಸುವ ಮನಸ್ಸಿದ್ದರೂ, ತನ್ನ ಸಂಬಳದಲ್ಲಿ ಅದು ಸಾಧ್ಯವಿರಲಿಲ್ಲ.
'ನನ್ನ ಕುಟುಂಬಕ್ಕೆ ಒಳ್ಳೆಯ ಮನೆ ಖರೀದಿಸುವುದು ನನ್ನ ಮೊದಲ ಗುರಿಯಾಗಿತ್ತು. ಈಗ ನಾನು ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲವನ್ನೂ ಹೊಂದಿರುವ ಉತ್ತಮ ಸ್ಥಳದಲ್ಲಿ ಸರಿಯಾದ ಮನೆಯನ್ನು ನಿರ್ಮಿಸಬಲ್ಲೆ. ನಾನು ನಾಲ್ಕು ವರ್ಷಗಳಿಂದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು ಮುಂದಿನ ಹಂತಕ್ಕೆ ಹೋಗಲು ಬಯಸುತ್ತೇನೆ. ನಾನು ಉದ್ಯಮಶೀಲತೆ ಮತ್ತು ಹೂಡಿಕೆಯನ್ನು ಅನ್ವೇಷಿಸಲು ಬಯಸುತ್ತೇನೆ' ಎಂದು ಅವರು ಹೇಳಿದರು.
ನಾನು ಮಹೀಂದ್ರಾ ಥಾರ್ ಜೀಪ್ ಮತ್ತು ರೋಲೆಕ್ಸ್ ವಾಚ್ ಖರೀದಿಸುತ್ತೇನೆ. ಉಳಿದ ಹಣವನ್ನು ಸಾಲ ತೀರಿಸಲು, ಸಂಬಂಧಿಕರಿಗೆ ಸಹಾಯ ಮತ್ತು ಅವರ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಳಸಲಾಗುತ್ತದೆ. ಭದ್ರತಾ ಕೆಲಸಕ್ಕೆ ಮರಳುವ ಬದಲು ಸಣ್ಣ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆಯೂ ತಾನು ಯೋಚಿಸುತ್ತಿದ್ದೇನೆ ಎಂದರು.