ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಸುದೀರ್ಘ ಯುದ್ಧವನ್ನು ಅಂತ್ಯಗೊಳಿಸಲು ಮುಂದಾಗಿದ್ದ ಅಮೆರಿಕಕ್ಕೆ ಭಾರತೀಯ ಸೇನೆಯ ಶಾಂತಿಪಾಲನಾ ಪಡೆ ಉತ್ತಮ ಆಯ್ಕೆ ಎಂದು ತೋಚಿದ್ದರೂ ಇದಕ್ಕೆ ಡೊನಾಲ್ಡ್ ಟ್ರಂಪ್ ಮಾತ್ರ ವ್ಯತಿರಿಕ್ತ ಉತ್ತರ ನೀಡಿದ್ದರು ಎನ್ನಲಾಗಿದೆ.
ಹೌದು.. ಉಕ್ರೇನ್‌ನಲ್ಲಿ ಶಾಂತಿ ಕಾಪಾಡುವ ಉದ್ದೇಶದ "ಶಾಂತಿಪಾಲನಾ" ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಭಾಗವಹಿಸುವ ಸಾಧ್ಯತೆಯಿತ್ತು.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕಳೆದ ವರ್ಷದ ಜನವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಕದನ ವಿರಾಮ ಜಾರಿಗೆ ತರಲು ರೂಪಿಸಿದ್ದ ವಿಶಾಲ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಈ ಯೋಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದರು ಎಂದು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ.
ದಿ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತರಾದ ಮ್ಯಾಗಿ ಹ್ಯಾಬರ್‌ಮನ್ ಮತ್ತು ಜೊನಾಥನ್ ಸ್ವಾನ್ ಬರೆದಿರುವ 'Regime Change: Inside the Imperial Presidency of Donald Trump' ಪುಸ್ತಕದ ಪ್ರಕಾರ, ಟ್ರಂಪ್ ಅವರು 2025ರ ಜನವರಿ 30ರಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಜೆಡಿ ವ್ಯಾನ್ಸ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಟ್ರಂಪ್ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಕೇವಲ 10 ದಿನಗಳ ಬಳಿಕ ಈ ಸಭೆ ನಡೆದಿತ್ತು ಎನ್ನಲಾಗಿದೆ.
24 ಗಂಟೆಯಲ್ಲಿ ಯುದ್ಧ ಅಂತ್ಯಗೊಳಿಸುತ್ತೇನೆ ಎಂದು ಬಡಾಯಿಕೊಚ್ಚಿಕೊಂಡಿದ್ದ ಟ್ರಂಪ್
ಇನ್ನು ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಬರುತ್ತಲೇ ರಷ್ಯಾ ಉಕ್ರೇನ್ ಯುದ್ಧದ ಕುರಿತು ಮಹತ್ವದ ಸಭೆ ನಡೆಸಿದ್ದರು. ಇದಕ್ಕೂ ಮೊದಲು ರಷ್ಯಾ-ಉಕ್ರೇನ್ ಯುದ್ಧವನ್ನು ತ್ವರಿತವಾಗಿ ಅಂತ್ಯಗೊಳಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಭರವಸೆ ನೀಡಿದ್ದರು.
"ಒಂದು ದಿನದಲ್ಲೇ ಯುದ್ಧವನ್ನು ಪರಿಹರಿಸುತ್ತೇನೆ" ಮತ್ತು "24 ಗಂಟೆಗಳೊಳಗೆ ಈ ಯುದ್ಧ ಕೊನೆಗೊಳ್ಳುತ್ತದೆ" ಎಂದು ಅವರು ಎರಡು ಸಂದರ್ಭಗಳಲ್ಲಿ ಹೇಳಿದ್ದರು. ಇದೇ ವಿಚಾರವಾಗಿ ನಡೆದಿದ್ದ ಈ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ವಿಚಾರಗಳ ವಿಶೇಷ ರಾಯಭಾರಿಯಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೀತ್ ಕೆಲಾಗ್ ಕೂಡ ಭಾಗವಹಿಸಿದ್ದರು. ಯುದ್ಧ ಅಂತ್ಯಗೊಳಿಸುವಲ್ಲಿ ಅಮೆರಿಕದ ಪಾತ್ರದ ಕುರಿತು ನಿರ್ಧಾರ ಕೈಗೊಳ್ಳುವುದೇ ಸಭೆಯ ಉದ್ದೇಶವಾಗಿತ್ತು.
ಉಕ್ರೇನ್ ನಲ್ಲಿ ಶಾಂತಿಪಾಲನಾ ಪಡೆ ನಿಯೋಜನೆಗೆ ಪ್ರಸ್ತಾಪ
ಕೀತ್ ಕೆಲಾಗ್ ಅವರ Trump's Historic Peace Deal ಯೋಜನೆಯಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ದೇಶಗಳ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸುವ ಪ್ರಸ್ತಾಪವಿತ್ತು. ಆದರೆ ನ್ಯಾಟೋ ಸದಸ್ಯ ರಾಷ್ಟ್ರಗಳ ಪಡೆಗಳನ್ನು ಬಳಸುವುದಕ್ಕೆ ಜೆಡಿ ವ್ಯಾನ್ಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಟೋ ಮೇಲಿನ ರಷ್ಯಾದ ಅವಿಶ್ವಾಸವನ್ನು ಉಲ್ಲೇಖಿಸಿದ ಅವರು, ಇಂತಹ ಕ್ರಮ ರಷ್ಯಾವನ್ನು ಮತ್ತಷ್ಟು ಪ್ರಚೋದಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಸಭೆಗೆ ಒಂದು ವಾರ ಮೊದಲು ರಷ್ಯಾ ವಿದೇಶಾಂಗ ಸಚಿವ ಸೆರ್ಗೇ ಲಾವ್ರೋವ್ ಅವರೂ ಕೂಡ ನ್ಯಾಟೋ ಪಡೆಗಳ ನಿಯೋಜನೆ "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದರು.
'ಭಾರತೀಯರು ಅದನ್ನು ಮಾಡುವುದಿಲ್ಲ': ಟ್ರಂಪ್
ಹ್ಯಾಬರ್‌ಮನ್ ಮತ್ತು ಸ್ವಾನ್ ಅವರ ಪ್ರಕಾರ, ವ್ಯಾನ್ಸ್ ನಂತರ "ಈ ಕಾರ್ಯಕ್ಕೆ ಯುರೋಪ್ ಹೊರಗಿನ ದೇಶಗಳ ಪಡೆಗಳನ್ನು ಬಳಸಬಹುದೇ?" ಎಂದು ಪ್ರಶ್ನಿಸಿ, ಭಾರತದ ಹೆಸರನ್ನು ಸೂಚಿಸಿದ್ದರು. ಇದಕ್ಕೆ ಟ್ರಂಪ್ ನಗುತ್ತಾ, "ಭಾರತೀಯರು ಅದನ್ನು ಮಾಡುವುದಿಲ್ಲ... ಅಂತಹ ಕಾರ್ಯಕ್ಕಾಗಿ ವೆಚ್ಚ ಮಾಡುವುದಿಲ್ಲ" ಎಂದು ಹೇಳಿದ್ದರೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಸ್ನೇಹದ ಬಗ್ಗೆ ಟ್ರಂಪ್ ಪ್ರಸ್ತಾಪಿಸಿದ್ದರು.
ಉಕ್ರೇನ್ ಯುದ್ಧದ ಕುರಿತು ಭಾರತ ಸರ್ಕಾರ ತನ್ನ ನಿಲುವನ್ನು ನಿರಂತರವಾಗಿ ಸ್ಪಷ್ಟಪಡಿಸಿದ್ದು, ಯುದ್ಧಕ್ಕೆ ಸಂಪೂರ್ಣ ಅಂತ್ಯವಾಗಬೇಕು ಹಾಗೂ ಎಲ್ಲಾ ಸಮಸ್ಯೆಗಳು ಶಾಂತಿಯುತ ಸಂವಾದದ ಮೂಲಕ ಬಗೆಹರಿಯಬೇಕು ಎಂದು ಒತ್ತಾಯಿಸಿದೆ. 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ವಾಷಿಂಗ್ಟನ್ ಡಿ.ಸಿ.ಯಲ್ಲಿ ಭೇಟಿಯಾಗಿದ್ದರು. ಈ ಭೇಟಿ ಪುಸ್ತಕದಲ್ಲಿ ಉಲ್ಲೇಖಿಸಲಾದ ಶ್ವೇತಭವನದ ಸಭೆಯ ಕೆಲವೇ ದಿನಗಳ ಬಳಿಕ ನಡೆದಿತ್ತು.
ಈ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಪುನರುಚ್ಚರಿಸಿತ್ತು. "ಯಾವುದೇ ಸಂಘರ್ಷಕ್ಕೆ ಯುದ್ಧಭೂಮಿಯಲ್ಲಿ ಪರಿಹಾರವಿಲ್ಲ... ಇದು ಯುದ್ಧದ ಯುಗವಲ್ಲ" ಎಂದು ಮೋದಿ ಹೇಳಿದ್ದರು. ಉಕ್ರೇನ್‌ಗೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವ ಪ್ರಶ್ನೆಯನ್ನು ಭಾರತ ಸರ್ಕಾರ ಅಧಿಕೃತವಾಗಿ ಎಂದಿಗೂ ಪರಿಗಣಿಸಿಲ್ಲ. ಆದರೆ ಎರಡು ತಿಂಗಳ ಬಳಿಕ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. 2025ರ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟ್ರಂಪ್ ಭರವಸೆ ನೀಡಿದ ಕದನ ವಿರಾಮ ಜಾರಿಯಾದರೆ ಭಾರತವು ಸಣ್ಣ ಪ್ರಮಾಣದ ಶಾಂತಿಪಾಲನಾ ಪಡೆಯನ್ನು ಕಳುಹಿಸುವ ಬಗ್ಗೆ ಯೋಚಿಸಬಹುದು ಎಂದು ಸೂಚಿಸಿದ್ದರು.
"ಶಾಂತಿಪಾಲನಾ ಪಡೆಗಳಿಗಾಗಿ ಯುರೋಪ್‌ನ ಹೊರಗೆ ನೋಡಬೇಕು... ಭಾರತ ಇಲ್ಲಿ ಪ್ರಮುಖ ಪಾತ್ರವಹಿಸಬಹುದು" ಎಂದು ತರೂರ್ ಹೇಳಿದ್ದರು.
ಭಾರತವೇ ಏಕೆ?
ಭಾರತೀಯ ಸೇನೆಗೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವವಿದೆ. ಕಳೆದ ಒಂದು ದಶಕದಲ್ಲಿ ದಕ್ಷಿಣ ಸುಡಾನ್, ಸೋಮಾಲಿಯಾ, ಲೆಬನಾನ್ ಸೇರಿದಂತೆ ಹಲವು ಸಂಘರ್ಷಪೀಡಿತ ರಾಷ್ಟ್ರಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತೀಯ ಸೈನಿಕರು ಮಹತ್ವದ ಸೇವೆ ಸಲ್ಲಿಸಿದ್ದಾರೆ.