ಟೆಲ್ ಅವಿವ್: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರೆಸಿದ್ದು, ಕ್ಷಿಪಣಿಯ ಚೂರುಗಳು ಕುತ್ತಿಗೆಗೆ ತಗುಲಿ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಗಾಯಗೊಂಡಿದ್ದ ವ್ಯಕ್ತಿಗೆ ಟೆಲ್ ಅವಿವ್‌ನ ಇಚಿಲೋವ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
"ಕುತ್ತಿಗೆಯಲ್ಲಿ ಗಂಭೀರವಾಗಿ ಗಾಯೊಂಡಿರುವ ಸ್ಥಿತಿಯಲ್ಲಿ ನಿನ್ನೆ ಅವರು ಆಸ್ಪತ್ರೆಗೆ ಆಗಮಿಸಿದರು. ಇಚಿಲೋವ್‌ನಲ್ಲಿರುವ ವೈದ್ಯಕೀಯ ತಂಡವು ಅವರ ಜೀವ ಉಳಿಸಲು ಹೋರಾಡಿತು. ಅವರು ದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾದರು. ಅದೃಷ್ಟವಶಾತ್, ಈಗ ಅವರ ಆರೋಗ್ಯ ಸ್ಥಿರವಾಗಿದೆ" ಎಂದು ಆಸ್ಪತ್ರೆಯ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ರಾಯಭಾರ ಕಚೇರಿಯ ಪ್ರತಿಕ್ರಿಯೆ
ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅವರ ಯೋಗಕ್ಷೇಮವನ್ನು ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೂ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳೊಂದಿಗೆ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.