ದಕ್ಷಿಣ ಕೊಲಂಬಿಯಾದಲ್ಲಿ 125 ಮಂದಿ ಪ್ರಯಾಣಿಸುತ್ತಿದ್ದ ಸೇನಾ ವಿಮಾನವು ಟೇಕ್‌ಆಫ್ ಆದ ತಕ್ಷಣ ಪತನಗೊಂಡ ಪರಿಣಾಮ ಕನಿಷ್ಠ 66 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಚಿವ ಪೆಡ್ರೋ ಸಾಂಚೆಝ್ ಅವರು ಎಕ್ಸ್ ಖಾತೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಈ ದುರಂತ ಅಪಘಾತ ಅಮೆಜಾನ್ ಪ್ರದೇಶದಲ್ಲಿರುವ ಪುಟುಮಾಯೋ ಪ್ರಾಂತ್ಯದ ದೂರದ ಪಟ್ಟಣವಾದ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದೆ.
ಈ ಪ್ರದೇಶವು ಪೆರು ಮತ್ತು ಇಕ್ವಡಾರ್ ದೇಶಗಳ ಗಡಿಗೆ ಹೊಂದಿಕೊಂಡಿದೆ. ಪುಟುಮಾಯೋ ರಾಜ್ಯಪಾಲ ಜೋನ್ ಗ್ಯಾಬ್ರಿಯೆಲ್ ಮೊಲಿನಾ ಅವರು ಸ್ಥಳೀಯ ಮಾಧ್ಯಮವಾದ ಕ್ಯಾರಕೋಲ್ ನೋಟಿಸಿಯಾಸ್‌ಗೆ ತಿಳಿಸಿರುವಂತೆ, 66 ಮಂದಿ ಮೃತಪಟ್ಟಿದ್ದು, ಇನ್ನೂ 21 ಮಂದಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.
ವಾಯುಪಡೆಯ ಪ್ರಕಾರ, ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹೆರ್ಕ್ಯುಲಿಸ್ ಸಿ-130 ವಿಮಾನವು ಪುಟುಮಾಯೋ ಪ್ರಾಂತ್ಯದ ಮತ್ತೊಂದು ನಗರಕ್ಕೆ ಸೈನಿಕರನ್ನು ಹೊತ್ತು ಸಾಗಿಸುತ್ತಿತ್ತು.
ಸಾಂಚೆಝ್ ಅವರ ಪ್ರಕಾರ, ವಿಮಾನವು ಟೇಕ್‌ಆಫ್ ಆದ ಸ್ಥಳದಿಂದ ಕೇವಲ 1.5 ಕಿಮೀ ದೂರದಲ್ಲೇ ನೆಲಕ್ಕೆ ಅಪ್ಪಳಿಸಿತು. ವಿಮಾನದಲ್ಲಿದ್ದ ಸ್ಫೋಟಕ ವಸ್ತುಗಳು ಬೆಂಕಿಯಿಂದ ಸ್ಫೋಟಗೊಂಡವು. ಅಕ್ರಮ ಗುಂಪುಗಳ ಅಥವಾ ಭಯೋತ್ಪಾದಕರ ದಾಳಿ ನಡೆದಿರುವ ಯಾವುದೇ ಸೂಚನೆ ತಕ್ಷಣಕ್ಕೆ ಇಲ್ಲ ಎಂದು ಸಾಂಚೆಝ್ ತಿಳಿಸಿದ್ದಾರೆ.
ಕೊಲಂಬಿಯಾ ವಾಯುಪಡೆಯ ಕಮಾಂಡರ್ ಕಾರ್ಲೋಸ್ ಫೆರ್ನಾಂಡೋ ಸಿಲ್ವಾ ಅವರ ಪ್ರಕಾರ, ಗಾಯಗೊಂಡವರನ್ನು ರಾಜಧಾನಿ ಬೋಗೋಟಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲು 74 ಹಾಸಿಗೆಗಳೊಂದಿಗೆ ಎರಡು ವಿಮಾನಗಳನ್ನು ಕಳುಹಿಸಲಾಗಿದೆ.
ಕೊಲಂಬಿಯಾ ದೇಶವು 1960ರ ದಶಕದ ಕೊನೆಯಲ್ಲಿ ತನ್ನ ಮೊದಲ ಹೆರ್ಕ್ಯುಲಿಸ್ ಸಿ-130 ವಿಮಾನವನ್ನು ಪಡೆದುಕೊಂಡಿದ್ದು, ಇತ್ತೀಚೆಗೆ ಅಮೆರಿಕಾದಿಂದ ಬಂದ ಹೊಸ ಮಾದರಿಗಳ ಮೂಲಕ ಕೆಲವು ಹಳೆಯ ಸಿ-130 ವಿಮಾನಗಳನ್ನು ನವೀಕರಿಸಿದೆ.
ಕಳೆದ ತಿಂಗಳು, ಬೊಲಿವಿಯಾದ ವಾಯುಪಡೆಯ ಮತ್ತೊಂದು ಹೆರ್ಕ್ಯುಲಿಸ್ ಸಿ-130 ವಿಮಾನವು ಎಲ್ ಆಲ್ಟೋ ನಗರದಲ್ಲಿ ಪತನಗೊಂಡಿತ್ತು. ಆ ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದರು.