ನವದೆಹಲಿ: ಖ್ಯಾತ ಐಸ್ ಕ್ರೀಮ್ ತಯಾರಿಕಾ ಸಂಸ್ಥೆ ಕ್ವಾಲಿಟಿ ವಾಲ್ಸ್ (Kwality Wall’s) ಇನ್ನು ಮುಂದೆ ತನ್ನ ಎಲ್ಲ ಉತ್ಪನ್ನಗಳು ಹಾಲು ಆಧಾರಿತವಾಗಿರಲಿದೆ ಎಂದು ಶುಕ್ರವಾರ ಘೋಷಣೆ ಮಾಡಿದೆ.
ಹೌದು.. ಕ್ವಾಲಿಟಿ ವಾಲ್ಸ್ ತನ್ನ ಸಂಸ್ಥೆಯ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್‌ಗಳಾದ ಮ್ಯಾಗ್ನಮ್ (Magnum), ಕಾರ್ನೆಟೋ (Cornetto) ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಇನ್ನು ಮುಂದೆ ಸಂಪೂರ್ಣ ಡೈರಿ ಆಧಾರಿತ ಐಸ್‌ಕ್ರೀಮ್‌ಗಳಾಗಿ ಮಾರಾಟ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ನೆದರ್‌ಲ್ಯಾಂಡ್ಸ್ ಕೇಂದ್ರವಾಗಿರುವ ದಿ ಮ್ಯಾಗ್ನಮ್ ಐಸ್ ಕ್ರೀಮ್ ಕಂಪನಿ (The Magnum Ice Cream Company)ಯ ಜಾಗತಿಕ ಸಿಇಒ ಪೀಟರ್ ಕುಲ್ವೆ (Peter Kulve) ಈ ಕುರಿತು ಮಾಹಿತಿ ನೀಡಿದ್ದು, ಕಂಪನಿ ಸಂಪೂರ್ಣ ಡೈರಿ ಉತ್ಪನ್ನಗಳತ್ತ ಸಾಗಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಈ ವರ್ಷ ಕಂಪನಿಯ ಅರ್ಧ ಉತ್ಪನ್ನ ಪೋರ್ಟ್‌ಫೋಲಿಯೊ ಡೈರಿ ಆಧಾರಿತವಾಗಲಿದ್ದು, ಉಳಿದವುಗಳನ್ನು ಮುಂದಿನ ವರ್ಷ ಪರಿವರ್ತಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. “ನಾವು ಇನ್ನು ಮುಂದೆ ವಿಶ್ವದ ಯಾವುದೇ ಭಾಗದಲ್ಲೂ ‘ಫ್ರೋಜನ್ ಡೆಸರ್ಟ್’ ಕಂಪನಿಯಲ್ಲ. ನಾವು ಐಸ್‌ಕ್ರೀಮ್ ಕಂಪನಿ. ಭಾರತದಲ್ಲಿ ನಾವು ಎಲ್ಲವನ್ನೂ ಬದಲಾಯಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಹಾಗಾದರೆ ಇದುವರೆಗೆ ಈ ಸಂಸ್ಥೆಯ ಐಸ್‌ಕ್ರೀಮ್‌ನಲ್ಲಿ ಏನಿತ್ತು?
ಸಂಸ್ಥೆಯ ಸಿಇಒ ಘೋಷಣೆ ಬೆನ್ನಲ್ಲೇ ಇದೀಗ ಜಾಗತಿಕವಾಗಿ ಈ ಐಸ್ ಕ್ರೀಂ ಸಂಸ್ಥೆಯ ಉತ್ಪನ್ನಗಳ ವಿಚಾರವಾಗಿ ವ್ಯಾಪಕ ಚರ್ಚೆ ನಡೆದಿದ್ದು. ಹಾಗಾದ್ರೆ ಈ ಉತ್ಪನ್ನಗಳಲ್ಲಿ ಏನಿತ್ತು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಸಂಸ್ಥೆಯ ವರದಿಯ ಪ್ರಕಾರ, ಕಂಪನಿಯ ಹಲವು “ಫ್ರೋಜನ್ ಡೆಸರ್ಟ್” ಉತ್ಪನ್ನಗಳಲ್ಲಿ ಹಾಲಿನ ಬದಲು ಪಾಮ್ ಎಣ್ಣೆ ಸೇರಿದಂತೆ ಸಸ್ಯ ಮೂಲದ ಕೊಬ್ಬುಗಳನ್ನು ಬಳಸಲಾಗುತ್ತಿತ್ತು. ಭಾರತೀಯ ಗ್ರಾಹಕರು ಹಾಲು ಆಧಾರಿತ ಉತ್ಪನ್ನಗಳನ್ನು ಹೆಚ್ಚು ಗುಣಮಟ್ಟದ ಹಾಗೂ ಪೌಷ್ಟಿಕವೆಂದು ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತಕ್ಕೆ ಮಾತ್ರವಲ್ಲ, ಜಾಗತಿಕ ಮಟ್ಟದ ನಿರ್ಧಾರ
ಅಂತೆಯೇ ಸಂಸ್ಥೆಯ ಈ ಬದಲಾವಣೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಕಂಪನಿ ಕಾರ್ಯನಿರ್ವಹಿಸುವ ಇತರೆ ದೇಶಗಳಲ್ಲಿಯೂ ವ್ಯಾಪಕ ಪರಿಷ್ಕರಣೆ ನಡೆಸಲಾಗುತ್ತಿದೆ. ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಭಾರತೀಯ ಮಾರುಕಟ್ಟೆ ಭವಿಷ್ಯದಲ್ಲಿ ಕಂಪನಿಯ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಕಂಪನಿ ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಸಜ್ಜಾಗಿದೆ.
ತನ್ನ ಜಾಗತಿಕ ಐಸ್‌ಕ್ರೀಮ್ ವ್ಯವಹಾರವನ್ನು ಪ್ರತ್ಯೇಕಗೊಳಿಸಿರುವುದರಿಂದ ಈ ಘಟಕಕ್ಕೆ ಹೆಚ್ಚಿನ ಸ್ವಾಯತ್ತತೆ ಮತ್ತು ಕಾರ್ಯಚಟುವಟಿಕೆಗಳ ಲವಚಿಕತೆ ಸಿಕ್ಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಭಾರೀ ವಿಸ್ತರಣೆಯ ಯೋಜನೆ
ಪ್ರಸ್ತುತ ದೇಶದಾದ್ಯಂತ ಒಂದೇ ನಾಶಿಕ್ ಘಟಕದಿಂದ ಐಸ್‌ಕ್ರೀಮ್ ಪೂರೈಕೆ ಮಾಡುಲಾಗುತ್ತಿದ್ದು, ಗುಣಮಟ್ಟ, ವೆಚ್ಚ ಮತ್ತು ಸೇವೆಯನ್ನು ಸಮತೋಲನದಲ್ಲಿಡಲು ಸಾಧ್ಯವಾಗುತ್ತಿಲ್ಲ ಎಂದು ಪೀಟರ್ ಟರ್ ಕುಲ್ವೆ ಹೇಳಿದ್ದಾರೆ. “ಟರ್ಕಿಯಲ್ಲಿ ಪ್ರತಿ 350 ಜನರಿಗೆ ಒಂದು ಐಸ್‌ಕ್ರೀಮ್ ಕ್ಯಾಬಿನೆಟ್ ಇದೆ. ಅಂತಿಮವಾಗಿ ಭಾರತದಲ್ಲಿ ನನಗೆ 10 ಲಕ್ಷ ಕ್ಯಾಬಿನೆಟ್‌ಗಳು ಬೇಕಾಗುತ್ತವೆ” ಎಂದು ಅವರು ಹೇಳಿದ್ದಾರೆ.
ಬೆಲೆ ಇಳಿಕೆ, ಹೊಸ ಭಾರತೀಯ ರುಚಿಗಳು
ಅಂತೆಯೇ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಕೆಲವು ವಿಭಾಗಗಳಲ್ಲಿ ಕಂಪನಿ ಶೇ. 30ರ ವರೆಗೆ ಬೆಲೆ ಇಳಿಸುವ ಯೋಜನೆಯನ್ನೂ ರೂಪಿಸಿದೆ. ಇದರ ಜೊತೆಗೆ ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕುಲ್ಫಿ, ಕೇಸರ್ ಭೋಗ್ ಸೇರಿದಂತೆ ಸ್ಥಳೀಯ ರುಚಿಗಳನ್ನು ಪರಿಚಯಿಸಲು ಕಂಪನಿ ಮುಂದಾಗಿದೆ.