ಭಾರತ ವಿರುದ್ದ ಚೀನಾ-ಬಾಂಗ್ಲಾ ಭಾಯಿಭಾಯಿ? ಕ್ಷಿಪಣಿ ತಯಾರಿಕೆ ತಂತ್ರಜ್ಞಾನವೇ ಗೊತ್ತಿಲ್ಲದ ಬಾಂಗ್ಲಾದೇಶಕ್ಕೆ 405 ಟನ್ ರಾಸಾಯನಿಕ ರವಾನೆಗೆ ಡ್ರ್ಯಾಗನ್ ಸ್ಕೆಚ್
ಚೀನಾದಿಂದ ಬಾಂಗ್ಲಾದೇಶಕ್ಕೆ ರಹಸ್ಯವಾಗಿ ಸಾಗಿಸಲಾಗುತ್ತಿದ್ದ 405 ಟನ್ ಸೋಡಿಯಂ ಪರ್ಕ್ಲೋರೇಟ್ ಎಂಬ ಕ್ಷಿಪಣಿ ಇಂಧನ ತಯಾರಿಕಾ ರಾಸಾಯನಿಕ ಮತ್ತು ಲಕ್ಷಾಂತರ ಅನಧಿಕೃತ ಸಿಮ್ ಕಾರ್ಡ್ಗಳನ್ನು ಹೊತ್ತಿದ್ದ ಸರಕು ಸಾಗಣೆ ಹಡಗನ್ನು ಇಂಡೋನೇಷ್ಯಾ ನೌಕಾಪಡೆ ವಶಪಡಿಸಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಜಾಗತಿಕ ರಾಜಕೀಯದಲ್ಲಿ ಯಾರನ್ನೇ ನಂಬಿದರೂ, ಚೀನಾವನ್ನು ಮಾತ್ರ ನಂಬಬಾರದು ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ಕಾರಣವೂ ಇದೆ; ತನ್ನ ಸುತ್ತಲಿನ ಬಹುತೇಕ ಎಲ್ಲಾ ರಾಷ್ಟ್ರಗಳೊಂದಿಗೆ ಚೀನಾ ಒಂದಿಲ್ಲೊಂದು ಭೂ ಅಥವಾ ಜಲ ಗಡಿ ವಿವಾದವನ್ನು ಕಟ್ಟಿಕೊಂಡಿದೆ. ಅದರಲ್ಲೂ ಭಾರತ, ತೈವಾನ್ ಹಾಗೂ ಫಿಲಿಪೈನ್ಸ್ ವಿಚಾರದಲ್ಲಿ ಸದಾ ಕುತಂತ್ರ ಹೂಡುವ ಈ 'ಡ್ರ್ಯಾಗನ್' ರಾಷ್ಟ್ರ, ಇದೀಗ ಭಾರತದ ವಿರುದ್ಧ ಮತ್ತೊಂದು ದೊಡ್ಡ ಷಡ್ಯಂತ್ರಕ್ಕೆ ಕೈಹಾಕಿದೆಯೇ? ಅಷ್ಟೇ ಅಲ್ಲ, ಈ ಬಾರಿ ಚೀನಾದ ಈ ಕುತಂತ್ರಕ್ಕೆ ನೆರೆಯ ಬಾಂಗ್ಲಾದೇಶ ಕೂಡ ಕೈಜೋಡಿಸಿದೆಯೇ ಎಂಬ ಬಲವಾದ ಅನುಮಾನ ಮೂಡಿದೆ! ಅದಕ್ಕೆ ಕಾರಣ, ಸ್ವಂತ ಕ್ಷಿಪಣಿ ತಯಾರಿಕಾ ಘಟಕಗಳೇ ಇಲ್ಲದಿದ್ದರೂ, ಚೀನಾ ಬಾಂಗ್ಲಾದೇಶಕ್ಕೆ ರಹಸ್ಯವಾಗಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಎಂಬ ಕ್ಷಿಪಣಿ ಇಂಧನ ತಯಾರಿಕಾ ರಾಸಾಯನಿಕ ಮತ್ತು ಲಕ್ಷಾಂತರ ಅನಧಿಕೃತ ಸಿಮ್ ಕಾರ್ಡ್ಗಳನ್ನು ಸಾಗಿಸುತಿತ್ತು. ಆದ್ರೆ, ಸುಮಾರು 100 ಕ್ಷಿಪಣಿಗಳನ್ನು ತಯಾರಿಸಲು ಸಾಕಾಗುವ ಈ ರಾಸಾಯನಿಕಗಳನ್ನು ಇಂಡೋನೇಷ್ಯಾ ನೌಕಾಪಡೆ ದಾರಿ ಮಧ್ಯದಲ್ಲಿ ವಶಪಡಿಸಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಹಡಗು ತಡೆಹಿಡಿದಿದ್ದು ಹೇಗೆ?
ಕೊಮೊರೊಸ್ ದೇಶದ ಧ್ವಜ ಹೊಂದಿದ್ದ ಎಂವಿ ಸ್ಟಾರ್ ಲೈನ್ ಎಂಬ ಹಡಗು ಚೀನಾದ ಲಿಯಾನ್ಯುಂಗಾಂಗ್ ಬಂದರಿನಿಂದ ಬಾಂಗ್ಲಾದೇಶದ ಮೊಂಗ್ಲಾ ಬಂದರಿಗೆ ತೆರಳುತ್ತಿತ್ತು. ನವೆಂಬರ್ 7ರಂದು ಇಂಡೋನೇಷ್ಯಾದ ಉತ್ತರ ಸುಮಾತ್ರಾದ ಬೆಲಾವನ್ ಕರಾವಳಿಯಲ್ಲಿ ಹಡಗಿನ ಅನುಮಾನಾಸ್ಪದ ಚಲನವಲನ ಮತ್ತು ರೇಡಿಯೋ ಸಂಪರ್ಕಕ್ಕೆ ಸ್ಪಂದಿಸದಿರುವುದನ್ನು ಗಮನಿಸಿದ ಇಂಡೋನೇಷ್ಯಾ ನೌಕಾಪಡೆಯ 'ಕೆಆರ್ಐ ಸಿಗಾಲು-857' ಗಸ್ತು ನೌಕೆಯು ಅದನ್ನು ತಡೆದು ಪರಿಶೀಲಿಸಿದೆ.
ಈ ವೇಳೆ ಹಡಗಿನಲ್ಲಿದ್ದ 36 ಕಂಟೇನರ್ಗಳ ಪೈಕಿ 15 ಕಂಟೇನರ್ಗಳಲ್ಲಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದೆ. ಇದರೊಂದಿಗೆ 54 ಪ್ಯಾಲೆಟ್ಗಳಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ನೋಂದಣಿಯಾಗದ ಖಾಲಿ 4G LTE ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಏತನ್ಮಧ್ಯೆ, ಹಡಗಿನ ನೋಂದಣಿ ಪರವಾನಗಿ ಅಮಾನತುಗೊಂಡಿದ್ದರೂ, 2027ರವರೆಗೆ ಮಾನ್ಯತೆ ಇದೆ ಎಂದು ನಕಲಿ ದಾಖಲೆಗಳನ್ನು ತೋರಿಸಲಾಗಿತ್ತು. ಅಲ್ಲದೆ, ಅಪಾಯಕಾರಿ ರಾಸಾಯನಿಕ ಸಾಗಣೆಯ ಕುರಿತು ಸರಕು ಪಟ್ಟಿಯಲ್ಲಿ ಯಾವುದೇ ಮಾಹಿತಿಯನ್ನು ಘೋಷಿಸಿರಲಿಲ್ಲ.
ಮುಂದುವರೆದು, ಕ್ಷಿಪಣಿ ತಯಾರಿಸುವ ಮೂಲಸೌಕರ್ಯವೇ ಇಲ್ಲದ ಬಾಂಗ್ಲಾದೇಶಕ್ಕೆ ಇಷ್ಟೊಂದು ಬೃಹತ್ ಪ್ರಮಾಣದ ಕ್ಷಿಪಣಿ ರಾಸಾಯನಿಕ ಮತ್ತು ಲಕ್ಷಾಂತರ ಸಿಮ್ ಕಾರ್ಡ್ಗಳನ್ನು ಏಕೆ ರವಾನಿಸಲಾಗುತ್ತಿತ್ತು ಎಂಬುದು ದಕ್ಷಿಣ ಏಷ್ಯಾ ವಲಯದಲ್ಲಿ ತೀವ್ರ ಭದ್ರತಾ ಆತಂಕಕ್ಕೆ ಕಾರಣವಾಗಿದೆ. ಈ ಸರಕನ್ನು ಬಾಂಗ್ಲಾದೇಶದಲ್ಲಿ ಯಾರು ಆಮದು ಮಾಡಿಕೊಳ್ಳುತ್ತಿದ್ದರು ಎಂಬುದರ ಕುರಿತು ಇಂಡೋನೇಷ್ಯಾ ಅಧಿಕಾರಿಗಳು ಹಡಗಿನ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಭಾರತ ವಿರೋಧಿ ಚೀನಾ ಕೃತ್ಯಗಳಿಗೆ ಬಾಂಗ್ಲಾದೇಶ ಸಾಥ್?
ಇತ್ತೀಚಿನ ಕೆಲವು ಬೆಳವಣಿಗೆಗಳು, ವಿಶೇಷವಾಗಿ ರಹಸ್ಯ ಕ್ಷಿಪಣಿ ಸಾಮಗ್ರಿ ಸಾಗಣೆ, ಚೀನಾದ ವ್ಲಾಗರ್ಗಳ ಅಪಪ್ರಚಾರ ಹಾಗೂ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಮತ್ತು ಆರ್ಥಿಕ ಹಸ್ತಕ್ಷೇಪಗಳು ಭಾರತದ ಭದ್ರತಾ ವಲಯದಲ್ಲಿ ತೀವ್ರ ಆತಂಕ ಮೂಡಿಸಿವೆ. ಅದರಲ್ಲೂ, ಬಾಂಗ್ಲಾದೇಶವು ನೇರವಾಗಿ ಭಾರತ ವಿರೋಧಿ ನಿಲುವು ತಳೆಯದಿದ್ದರೂ, ಚೀನಾದ ಕೆಲವು ಚಟುವಟಿಕೆಗಳಿಗೆ ಬಾಂಗ್ಲಾದೇಶದ ನೆಲ ಬಳಕೆಯಾಗುತ್ತಿರುವುದು ಮತ್ತು ರಕ್ಷಣಾ ಒಪ್ಪಂದಗಳು ಭಾರತಕ್ಕೆ ಸವಾಲಾಗಿ ಪರಿಣಮಿಸಿವೆ.
ಏತನ್ಮಧ್ಯೆ, ಬಾಂಗ್ಲಾದೇಶಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಸುವ ತಂತ್ರಜ್ಞಾನವಿಲ್ಲ. ಆದ್ದರಿಂದ, ಈ ರಾಸಾಯನಿಕಗಳನ್ನು ಬಾಂಗ್ಲಾದೇಶದ ಮೂಲಕ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಪ್ರತ್ಯೇಕತಾವಾದಿ ಸಂಘಟನೆಗಳಿಗೆ (ಉದಾಹರಣೆಗೆ ಉಲ್ಫಾ) ಅಥವಾ ಮ್ಯಾನ್ಮಾರ್ನ ಬಂಡುಕೋರ ಗುಂಪುಗಳಿಗೆ ಕಳ್ಳಸಾಗಣೆ ಮಾಡುವ ಹುನ್ನಾರವಿತ್ತೇ ಎಂಬ ಅನುಮಾನ ಮೂಡಿದೆ. ಯಾಕಂದ್ರೆ, 2004ರಲ್ಲಿ ಬಾಂಗ್ಲಾದೇಶದಲ್ಲಿ ವಶಪಡಿಸಿಕೊಳ್ಳಲಾಗಿದ್ದ 10 ಟ್ರಕ್ಗಳಷ್ಟು ಭಾರಿ ಶಸ್ತ್ರಾಸ್ತ್ರಗಳು ಅಸ್ಸಾಂನ ಉಲ್ಫಾ ಉಗ್ರರಿಗಾಗಿ ಸಾಗಿಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಹಾಗಾಗಿ, ಈಗಿನ ಘಟನೆಯು ಅದೇ ರೀತಿಯ ಕರಾಳ ಇತಿಹಾಸವನ್ನು ಮತ್ತೆ ನೆನಪಿಸುತ್ತಿದೆ.