ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಬಾಂಗ್ಲಾ ರಾಜಕೀಯದಲ್ಲಿ ಸಂಚಲನ: ಮರಣದಂಡನೆ ಭೀತಿ ನಡುವೆಯೂ ಡಿಸೆಂಬರ್ 16ಕ್ಕೆ ಢಾಕಾಗೆ ಮರಳಲು ಶೇಖ್ ಹಸೀನಾ ಮುಂದು!

ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದಾಗಿ 15 ವರ್ಷಗಳ ಆಡಳಿತ ಅಂತ್ಯಗೊಂಡ ಬಳಿಕ, 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದಿದ್ದರು.

ಶೇಖ್ ಹಸೀನಾ
Manjula VN
Updated On : 24 Nov 2026, 10:00 am

ಢಾಕಾ/ನವದೆಹಲಿ: ಬಾಂಗ್ಲಾದೇಶದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಗೆ ವೇದಿಕೆ ಸಿದ್ಧವಾಗಿದೆ. ಬಾಂಗ್ಲಾದೇಶ ದೇಶದಿಂದ ಪದಚ್ಯುತಗೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, ಡಿಸೆಂಬರ್ 16ರಂದು ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದ ವಿಜಯೋತ್ಸವದ ದಿನವೇ ವಾಪಸಾಗುವ ಅವರ ಘೋಷಣೆ ಹಾಲಿ ಪ್ರಧಾನಿ ತಾರಿಕ್ ರೆಹಮಾನ್ ಸರ್ಕಾರಕ್ಕೆ ಹೊಸ ರಾಜಕೀಯ ಸವಾಲು ತಂದೊಡ್ಡುವ ಸಾಧ್ಯತೆಯಿದೆ.

ಬಾಂಗ್ಲಾದೇಶದ ವಿಜಯೋತ್ಸವದ ದಿನದಂದೇ ಅವರು ವಾಪಸಾಗುವ ಉದ್ದೇಶ ಹೊಂದಿದ್ದಾರೆ ಎಂದು ಅವರ ವಕ್ತಾರ ಮಂಗಳವಾರ ತಿಳಿಸಿದ್ದಾರೆ.

Advertisement

Advertisement

ಈ ಬೆಳವಣಿಗೆಯಿಂದ ಪ್ರಧಾನಿ ತಾರಿಕ್ ರೆಹಮಾನ್ ನೇತೃತ್ವದ ಸರ್ಕಾರದೊಂದಿಗೆ ಹೊಸ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದಾಗಿ 15 ವರ್ಷಗಳ ಆಡಳಿತ ಅಂತ್ಯಗೊಂಡ ಬಳಿಕ, 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದಿದ್ದರು.

ಇದೀಗ ದೆಹಲಿಯಿಂದ ಢಾಕಾಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದ ಮೂಲಕ ತಮ್ಮನ್ನು ವಾಪಸ್ ಕಳುಹಿಸುವ ವ್ಯವಸ್ಥೆ ಮಾಡುವಂತೆ ಬಾಂಗ್ಲಾದೇಶ ಸರ್ಕಾರವನ್ನು ಅವರು ಕೋರಿದ್ದಾರೆ.

2024ರ ಆಗಸ್ಟ್ 5ರಂದು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿತ್ತು. ಇದೀಗ ದೆಹಲಿಯಿಂದ ಢಾಕಾಗೆ ಮರಳಲು ವಿಮಾನಯಾನ ವ್ಯವಸ್ಥೆ ಮಾಡುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ ಎಂದು ಅವರ ವಕ್ತಾರ ಸೈಯದ್ ಮೊಝಮ್ಮೆಲ್ ಅಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಡಿಸೆಂಬರ್ 16ರಂದು ವಿಜಯೋತ್ಸವ ದಿನವನ್ನು ಆಚರಿಸಲಾಗುತ್ತದೆ. 1971ರ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಜಯಗಳಿಸಿ ಸ್ವಾತಂತ್ರ್ಯ ಪಡೆದ ದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ಈ ದಿನವನ್ನು ಆಯ್ಕೆ ಮಾಡಿಕೊಂಡಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ. ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕರಾಗಿದ್ದು, ದೇಶದ ಸಂಸ್ಥಾಪಕ ನಾಯಕರಾಗಿದ್ದಾರೆ.

Also Read

ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯಿದೆ: ಮರಣದಂಡನೆ ಭೀತಿ ನಡುವೆ ಶೇಖ್ ಹಸೀನಾ ಪ್ರತಿಜ್ಞೆ

ಹಸೀನಾ ಅವರ ವಾಪಸಾತಿ ಘೋಷಣೆಯ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಅವರ ಸರ್ಕಾರ ಹತ್ತಿಕ್ಕಿದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಅವರಿಗೆ ಮರಣದಂಡನೆ ವಿಧಿಸಿದೆ.

ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಹಸೀನಾ ತಪ್ಪಿತಸ್ಥರು ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ. ಆದರೆ, ಈ ವಿಚಾರಣಾ ಪ್ರಕ್ರಿಯೆಯನ್ನು ತಿರಸ್ಕರಿಸಿರುವ ಅವರು, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ್ದಾರೆ.

ವಿವಾದಾತ್ಮಕ ಸರ್ಕಾರಿ ಉದ್ಯೋಗ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ದೇಶವ್ಯಾಪಿ ಚಳವಳಿಯಾಗಿ ರೂಪುಗೊಂಡಿತ್ತು. ಹಸೀನಾ ರಾಜೀನಾಮೆ ನೀಡಬೇಕೆಂಬ ಒತ್ತಾಯ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 1,400 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಹಸೀನಾ ಬಾಂಗ್ಲಾದೇಶಕ್ಕೆ ಮರಳಿದರೆ ಅವರನ್ನು ಬಂಧಿಸುವುದಾಗಿ ಅಲ್ಲಿನ ಹಾಲಿ ಸರ್ಕಾರ ಎಚ್ಚರಿಕೆ ನೀಡಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಅವರನ್ನು ವಾಪಸ್ ಕಳುಹಿಸುವಂತೆಯೂ ಢಾಕಾ ಈಗಾಗಲೇ ಭಾರತವನ್ನು ಕೋರಿದೆ.

ಸೋಮವಾರ ಮಾತನಾಡಿದ್ದ ಬಾಂಗ್ಲಾದೇಶದ ಸಚಿವರೊಬ್ಬರು, ಹಸೀನಾ ದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಅವರ ವಾಪಸಾತಿಗೆ ಸಂಬಂಧಿಸಿದಂತೆ ನವದೆಹಲಿ ಜೊತೆ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ ಎಂದೂ ಹೇಳಿದ್ದಾರೆ.

ಕಳೆದ 15 ವರ್ಷಗಳಲ್ಲಿ ಬಹುತೇಕ ಅವಧಿಗೆ ಬಾಂಗ್ಲಾದೇಶವನ್ನು ಆಳಿದ್ದ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಈ ನಿಷೇಧದಿಂದಾಗಿ 2026ರ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಈ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಗೆಲುವು ಸಾಧಿಸಿತ್ತು. ಹಲವು ವರ್ಷಗಳ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಳಿಕ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಫೆಬ್ರವರಿಯಲ್ಲಿ ತಾರಿಕ್ ರೆಹಮಾನ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಇನ್ನು, ಇತ್ತೀಚೆಗೆ ಹೊಸ ಪ್ರಯಾಣದ ದಾಖಲೆಗಳನ್ನು ನೀಡುವಂತೆ ಹಸೀನಾ ಸಲ್ಲಿಸಿದ್ದ ಮನವಿಯನ್ನು ಬಾಂಗ್ಲಾದೇಶ ತಿರಸ್ಕರಿಸಿದೆ. ಇದರಿಂದ ಅವರು ಯಾವ ಮಾರ್ಗದ ಮೂಲಕ ಸ್ವದೇಶಕ್ಕೆ ಮರಳಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಇತ್ತ, ಬಾಂಗ್ಲಾದೇಶದ ಇತ್ತೀಚಿನ ಹಸ್ತಾಂತರ ಮನವಿಗೆ ಭಾರತ ಈವರೆಗೆ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಸೀನಾ ಅವರ ವಾಪಸಾತಿ ಘೋಷಣೆಯಿಂದ ಅವಾಮಿ ಲೀಗ್ ಮತ್ತು ಬಿಎನ್‌ಪಿ ನೇತೃತ್ವದ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಅವರು ಮರಳಿದರೆ ಬಂಧನ, ಅವರ ವಿರುದ್ಧದ ಕಾನೂನು ಪ್ರಕರಣಗಳ ಭವಿಷ್ಯ ಹಾಗೂ ನಿಷೇಧಕ್ಕೊಳಗಾಗಿರುವ ಅವಾಮಿ ಲೀಗ್ ಪಕ್ಷದ ಮುಂದಿನ ರಾಜಕೀಯ ನಡೆಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement