ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮೋದಿ ಅವರ ಬಳಿ ಉತ್ತಮ ಆಲೋಚನೆಗಳಿವೆ ಎಂದು ಹೇಳಿದ್ದಾರೆ.
ನಮ್ಮ ನಡುವೆ ಉತ್ತಮ ಮತ್ತು ಸ್ನೇಹಪರ ಸಂಬಂಧಗಳು, ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಇದ್ದರೂ, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಅಂತ್ಯಗೊಳಿಸುವ ಪ್ರಶ್ನೆಯನ್ನು ನಿರಂತರವಾಗಿ ಪ್ರಸ್ತಾಪಿಸುವ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.
ಪರಸ್ಪರ ಒಪ್ಪಿಗೆಗೆ ಬರುವ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಧಾನಿ ಮೋದಿ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಪರಸ್ಪರ ಒಪ್ಪಿಕೊಳ್ಳಬಹುದಾದ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿ ಇದೆ ಮತ್ತು ಉತ್ತಮ ಆಲೋಚನೆಗಳಿವೆ. ಆ ದೃಷ್ಟಿಯಿಂದ ಪ್ರಧಾನಿ ಸಹಜವಾಗಿಯೇ ತಟಸ್ಥ ನಿಲುವನ್ನು ಹೊಂದಿದ್ದಾರೆ. ಆದರೆ ಸಂಘರ್ಷ ಅಂತ್ಯಗೊಳ್ಳಬೇಕೆಂಬ ಆಸಕ್ತಿಯೂ ಅವರಲ್ಲಿದೆ. ಇದನ್ನು ನೇರವಾಗಿ ಹೇಳುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಅವರ ಆಲೋಚನೆಗಳಿಗಾಗಿ ಪ್ರಧಾನಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಪುಟಿನ್ ಹೇಳಿದರು.
ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಮೋದಿ ಅವರ ಪ್ರಯತ್ನಗಳು ಮತ್ತು ನಿರಂತರ ಬೆಂಬಲಕ್ಕಾಗಿ ಪುಟಿನ್ ಕೃತಜ್ಞತೆ ಸಲ್ಲಿಸಿದರು.
ಶಾಂತಿಯುತ ಮಾರ್ಗಗಳ ಮೂಲಕ ಮತ್ತು ಸಾಧ್ಯವಾದಷ್ಟು ಶೀಘ್ರವಾಗಿ ಈ ಸಂಘರ್ಷವನ್ನು ಅಂತ್ಯಗೊಳಿಸಬೇಕೆಂಬ ಅವರ ಆಶಯಕ್ಕಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಶಾಂತಿಗೆ ಹಲವು ಬಾರಿ ಕರೆ ನೀಡಿದ್ದು, ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಭಾರತ ತತ್ವಬದ್ಧ ಹಾಗೂ ಮಾನವೀಯ ನಿಲುವನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಜಪಾನ್ ಪ್ರವಾಸದ ವೇಳೆ ಜಪಾನ್‌ನ ‘ದಿ ಯೊಮಿಯುರಿ ಶಿಂಬುನ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ಸಂಘರ್ಷದ ವಿಚಾರದಲ್ಲಿ ಭಾರತ ತತ್ವಬದ್ಧ ಮತ್ತು ಮಾನವೀಯ ನಿಲುವನ್ನು ಕಾಯ್ದುಕೊಂಡಿದೆ. ಇದನ್ನು ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಝೆಲೆನ್‌ಸ್ಕಿ ಇಬ್ಬರೂ ಸಮಾನವಾಗಿ ಮೆಚ್ಚಿದ್ದಾರೆ. ಇದರ ಭಾಗವಾಗಿ, ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇಬ್ಬರೂ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಭಾರತದ ತತ್ವಬದ್ಧ ಮತ್ತು ಸ್ಥಿರ ನಿಲುವನ್ನು ನಾನು ಪುನರುಚ್ಚರಿಸಿದ್ದು, ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದ್ದೇನೆ ಎಂದು ಪ್ರಧಾನಿ ಹೇಳಿದರು.
ಎರಡೂ ದೇಶಗಳ ನಡುವಿನ ಶಾಂತಿ ಪ್ರಯತ್ನಗಳಲ್ಲಿ ಭಾರತ ಯಾವ ರೀತಿಯ ಪಾತ್ರ ವಹಿಸಲು ಬಯಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಉದ್ದೇಶದ ಅರ್ಥಪೂರ್ಣ ಪ್ರಯತ್ನಗಳಿಗೆ ಬೆಂಬಲ ನೀಡಲು ಭಾರತ ಸಿದ್ಧವಿದೆ ಎಂಬುದನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಎರಡೂ ಕಡೆಯವರೊಂದಿಗೆ, ಪ್ರಮುಖ ಪಾಲುದಾರರೊಂದಿಗೂ ಭಾರತ ಹೊಂದಿರುವ ಉತ್ತಮ ಸಂಬಂಧಗಳ ಮೂಲಕ ಉಕ್ರೇನ್‌ನಲ್ಲಿ ಶೀಘ್ರ ಮತ್ತು ಶಾಶ್ವತ ಶಾಂತಿ ಪುನಃಸ್ಥಾಪಿಸುವ ಪ್ರಯತ್ನಗಳನ್ನು ನಾವು ಬಲಪಡಿಸಬಹುದು ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಅವರು ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಕೊನೆಯ ಬಾರಿ ಭೇಟಿಯಾಗಿದ್ದರು. ಈ ವೇಳೆ 2030ರ ಆರ್ಥಿಕ ಸಹಕಾರ ಕಾರ್ಯಕ್ರಮದ ಅನುಷ್ಠಾನ ಸೇರಿದಂತೆ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದರು. ಮೂಲಸೌಕರ್ಯ, ಇಂಧನ, ತಂತ್ರಜ್ಞಾನ, ರಕ್ಷಣಾ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದರು.