ವಾಷಿಂಗ್ಟನ್: ವಾರಗಳ ತಾತ್ಕಾಲಿಕ ಶಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ನೇರ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ನಾವು ಇರಾನ್ ಮೇಲೆ ಅತ್ಯಂತ ತೀವ್ರವಾಗಿ ದಾಳಿ ಮಾಡಲಿದ್ದೇವೆ," ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಉಭಯ ದೇಶಗಳ ನಡುವೆ ನಡೆದ ಕ್ಷಿಪಣಿ ದಾಳಿ ಬೆನ್ನಲ್ಲೇ ಟ್ರಂಪ್ ಈ ಆಕ್ರೋಶ ಹೊರಹಾಕಿದ್ದು, ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷ ಈಗ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿದೆ.
ಇರಾನ್ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ ಹೋರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಅಮೆರಿಕ ಇರಾನ್ ಬಂದರುಗಳ ವಿರುದ್ಧ ದಿಗ್ಭಂಧನ ಕ್ರಮ ಮುಂದುವರಿಸಿದೆ.
ಭಾನುವಾರ ಅಮೆರಿಕವು ಹಾರ್ಮುಜ್ ಜಲಸಂಧಿಯಲ್ಲಿರುವ ಇರಾನ್‌ನ ಲಾರಕ್ ದ್ವೀಪದ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಈ ಬೆಳವಣಿಗೆ ಮತ್ತೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಆತಂಕ ಮೂಡಿಸಿದೆ. ದಾಳಿಗೆ ಪ್ರತಿಕ್ರಿಯೆ ನೀಡುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ನಾವು ಅವರನ್ನು ಕಠಿಣವಾಗಿ ಹೊಡೆಯಲಿದ್ದೇವೆ. ಪ್ರತಿಕ್ರಿಯೆ ಖಂಡಿತವಾಗಿಯೂ ಇರುತ್ತದೆ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯ ಪ್ರಮುಖ ಸಾಗಣೆ ಮಾರ್ಗದಲ್ಲಿ ಇರಾನ್ ಗಣಿಗಳನ್ನು ಅಳವಡಿಸುವುದನ್ನು ತಡೆಯಲು ಲಾರಕ್ ದ್ವೀಪದಲ್ಲಿದ್ದ ರಾಕೆಟ್ ಉಡಾವಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ. ಆದರೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸೋಮವಾರ ಮಾತುಕತೆಗೆ ಕರೆ ನೀಡಿದ್ದಾರೆ.
ಯುದ್ಧ ಮುಂದುವರಿಸುವುದು ಇರಾನ್‌ಗೂ ಅಥವಾ ಇಡೀ ಪ್ರದೇಶಕ್ಕೂ ಹಿತಕರವಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಮತ್ತು ಸಹಕಾರವೇ ಮಾರ್ಗ ಎಂದು ಅವರು ಕಿರ್ಗಿಸ್ತಾನದಲ್ಲಿ ನಡೆದ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಭಾನುವಾರ ಲಾರಕ್ ದ್ವೀಪದ ಮೇಲೆ ನಡೆದ ಅಮೆರಿಕದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಜೋರ್ಡಾನ್‌ನಲ್ಲಿರುವ ಎರಡು ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಭಾರಿ ಹಾನಿಯಾಗಿದೆ ಎಂದು ಇರಾನ್‌ನ ಪ್ರಬಲ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ.
ಆದರೆ, ಅಮೆರಿಕ ಸೇನಾ ಪಡೆಗಳತ್ತ ಹಾರಿಸಲಾದ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಒಂದು ಕ್ಷಿಪಣಿ ಮಾತ್ರ ಅಪಾಯಕಾರಿಯಲ್ಲ ಎಂದು ನಿರ್ಧರಿಸಲಾಯಿತು ಎಂದು ಟ್ರಂಪ್ ಹೇಳಿದ್ದಾರೆ. ಜೋರ್ಡಾನ್ ಸೇನೆ ಎಂಟು ಕ್ಷಿಪಣಿಗಳನ್ನು ತಡೆದಿರುವುದಾಗಿ ತಿಳಿಸಿದೆ.
ಯುಎಇಯಲ್ಲಿರುವ ಅಮೆರಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದ್ದು, ಹೋರ್ಮುಜ್ ಜಲಸಂಧಿಯ ಮೇಲೆ ಹಾರುತ್ತಿದ್ದ ಅಮೆರಿಕದ ಡ್ರೋನ್‌ವೊಂದನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಯುಎಇ ಅಧಿಕಾರಿಗಳು ತಮ್ಮ ಜಲಪ್ರದೇಶದ ಮೇಲೆ ಹಾರುತ್ತಿದ್ದ ಡ್ರೋನ್‌ವೊಂದನ್ನು ತಡೆದಿರುವುದನ್ನು ದೃಢಪಡಿಸಿದರೂ, ಅಲ್ ಮಿನ್ಹಾದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.
ಇದೇ ವೇಳೆ, ಸೋಮವಾರ ಸಂಜೆ ಮತ್ತೊಂದು ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಅಮೆರಿಕ ತನ್ನ ಭೂಪ್ರದೇಶವನ್ನು ಬಳಸಿಕೊಂಡು ದಾಳಿ ನಡೆಸಲು ಅವಕಾಶ ನೀಡದಂತೆ ನೆರೆ ರಾಷ್ಟ್ರಗಳಿಗೆ ಇರಾನ್ ಸೇನೆಯ ಕೇಂದ್ರ ಕಮಾಂಡ್ ಎಚ್ಚರಿಕೆ ನೀಡಿದೆ.
ಹಾರ್ಮುಜ್ ಜಲಸಂಧಿಯಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ನ ಈಶಾನ್ಯ ಕರಾವಳಿಯ ಸಮೀಪ ಮೂರು ‘ಅಪರಿಚಿತ ಉತ್ಕ್ಷೇಪಕಗಳು’ ಬಡಿದಿವೆ ಎಂದು ಬ್ರಿಟನ್‌ನ ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸಂಸ್ಥೆ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಹಾಗೂ ಪರಿಸರದ ಮೇಲೂ ಯಾವುದೇ ಪರಿಣಾಮ ವರದಿಯಾಗಿಲ್ಲ.
ಈ ನಡುವೆ ವಾರಗಳ ಕಾಲ ತುಸು ಶಾಂತವಾಗಿದ್ದ ಪರಿಸ್ಥಿತಿಯ ಬಳಿಕ ಮತ್ತೆ ಗುಂಡಿನ ಚಕಮಕಿ ನಡೆದಿದ್ದು, ಟ್ರಂಪ್ ಆಡಳಿತವು ಇತ್ತೀಚೆಗೆ ಇರಾನ್ ವಿರುದ್ಧ ‘ಆರ್ಥಿಕ ಯುದ್ಧ’ದತ್ತ ಹೆಚ್ಚು ಗಮನ ಹರಿಸಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಸೋಮವಾರ ಟ್ರಂಪ್ ಇರಾನ್ ಅನ್ನು ‘ವಿಫಲ ರಾಷ್ಟ್ರ’ ಎಂದು ಕರೆದಿದ್ದರು. ಇರಾನ್ ಸೇನೆ ನಾಶವಾಗಿದ್ದು, ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ ಹಾಗೂ ಅಲ್ಲಿನ ನಾಯಕತ್ವ ಸಂಪೂರ್ಣ ಗೊಂದಲದಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಕೂಡ ಆರ್ಥಿಕ ಒತ್ತಡ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಒತ್ತಡದ ಕಾರ್ಯತಂತ್ರದಲ್ಲಿ ಮಹತ್ವದ ತಿರುವು ಕೆಲವೇ ವಾರಗಳು ಅಥವಾ ತಿಂಗಳುಗಳಲ್ಲಿ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.
ಸಂಘರ್ಷದ ಪ್ರಮುಖ ಕೇಂದ್ರ ಬಿಂದು ಹಾರ್ಮುಜ್ ಜಲಸಂಧಿ
ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿರ್ಬಂಧ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಯುದ್ಧಕ್ಕೂ ಮುನ್ನ ವಿಶ್ವದ ಸುಮಾರು ಐದನೇ ಒಂದು ಭಾಗದಷ್ಟು ತೈಲ ಈ ಜಲಸಂಧಿ ಮೂಲಕ ಸಾಗುತ್ತಿತ್ತು.
ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ನೌಕಾಪಡೆ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರೂ, ಇರಾನ್ ಮಾತ್ರ ಈ ಜಲಮಾರ್ಗದ ಮೇಲೆ ತನ್ನದೇ ನಿಯಂತ್ರಣವಿದೆ ಎಂದು ಒತ್ತಿ ಹೇಳುತ್ತಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಅಕ್ರಮ ಮಾರ್ಗದ ಮೂಲಕ ಸಂಚರಿಸಲು ಯತ್ನಿಸಿದ ತೈಲ ಸಾಗಣೆ ಹಡಗು ಎರಡು ಗಣಿಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಆದರೆ. ಅಮೆರಿಕ ಸೇನೆ ಈ ಹೇಳಿಕೆಯನ್ನು ‘ತಪ್ಪು ಮಾಹಿತಿ’ ಎಂದು ತಳ್ಳಿಹಾಕಿದ್ದು, ಹೋರ್ಮುಜ್ ಜಲಸಂಧಿಯಲ್ಲಿ ಯಾವುದೇ ಹಡಗು ಗಣಿಗೆ ಡಿಕ್ಕಿ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಯುದ್ಧ ಅಂತ್ಯಗೊಳಿಸಲು ಹಲವು ತಿಂಗಳಿಂದ ಮಧ್ಯಸ್ಥಿಕೆ ಪ್ರಯತ್ನಗಳು ನಡೆದಿದ್ದರೂ, ಈ ಹಿಂದೆ ಏರ್ಪಟ್ಟ ಕದನ ವಿರಾಮ ಹಾಗೂ ಒಪ್ಪಂದದ ತಿಳುವಳಿಕೆ ಎರಡೂ ವಿಫಲವಾಗಿವೆ.
ಇರಾನ್ ಇದೀಗ ಅಮೆರಿಕವನ್ನು ಹಿಂದಿನ ಒಪ್ಪಂದಕ್ಕೆ ಮರಳುವಂತೆ ಒತ್ತಾಯಿಸುತ್ತಿದೆ. ಅಮೆರಿಕ ತನ್ನ ಬದ್ಧತೆಗಳಿಗೆ ಮರಳಿದರೆ ಸಮಸ್ಯೆಗಳನ್ನು ಮತ್ತೆ ಸರಿಯಾದ ದಾರಿಗೆ ತರಬಹುದು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.