ನೇಪಾಳ: ಕಳೆದ ಆಗಸ್ಟ್ 26 ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭಾರಿ ಹಿಮಪಾತ ಹಾಗೂ ಭೂಕುಸಿತದಿಂದ ಸೃಷ್ಟಿಯಾದ ಮಹಾ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 1,344 ಕ್ಕೆ ತಲುಪಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 11ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಪೀಡಿತ ಪ್ರದೇಶಗಳಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆಯಾಗುತ್ತಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಸುಮಾರು 4,900 ಮಂದಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಇದೂವರೆಗೆ ಪತ್ತೆಯಾದ ಮೃತದೇಹಗಳಲ್ಲಿ 758 ಮಂದಿ ವಯಸ್ಕರು, 85 ಮಕ್ಕಳು ಸೇರಿದ್ದಾರೆ. ಇನ್ನೂ 501 ಮೃತದೇಹಗಳು ಭಾಗಶಃ ಪತ್ತೆಯಾಗಿವೆ. ನೀರಿನಲ್ಲಿ ದೀರ್ಘಕಾಲ ಇದ್ದಿರುವುದು ಹಾಗೂ ಅವಶೇಷಗಳ ಭಾರದಿಂದ ಮೃತದೇಹಗಳ ಸ್ಥಿತಿ ಹದಗೆಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಸಮೀಪ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಈ ಹಠಾತ್ ಪ್ರವಾಹ ಉಂಟಾಗಿತ್ತು. ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದವು.
ಹಿಮಾಲಯದ ಗಡಿ ಪ್ರದೇಶದಿಂದ ದಕ್ಷಿಣಕ್ಕೆ ಹರಿಯುವ ಭೋಟೆಕೋಶಿ ನದಿ ಪ್ರವಾಹದ ನೀರನ್ನು ಕೆಳಭಾಗಕ್ಕೆ ಹೊತ್ತೊಯ್ದ ಪರಿಣಾಮ ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.
ಚೀನಾದ ಭಾಗದಲ್ಲೂ ಈ ದುರಂತಕ್ಕೆ ಕನಿಷ್ಠ 21 ಮಂದಿ ಮೃತಪಟ್ಟಿದ್ದು, ಟಿಬೆಟ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ನೇಪಾಳದ ಚಿತ್ವಾನ್ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 360 ಮೃತದೇಹಗಳು ಪತ್ತೆಯಾಗಿದ್ದು, ಇದು ಎಲ್ಲ ಜಿಲ್ಲೆಗಳ ಪೈಕಿ ಅತ್ಯಧಿಕವಾಗಿದೆ. ರಾಸುವಾ, ನುವಾಕೋಟ್, ಧಾದಿಂಗ್, ಗೋರ್ಖಾ, ತನಹುನ್, ನವಲ್ಪರಾಸಿ ಪೂರ್ವ ಹಾಗೂ ನವಲ್ಪರಾಸಿ ಪಶ್ಚಿಮ ಜಿಲ್ಲೆಗಳಲ್ಲೂ ಮೃತದೇಹಗಳು ಪತ್ತೆಯಾಗಿವೆ.
ಅಗತ್ಯ ಪ್ರಕ್ರಿಯೆಗಳು ಹಾಗೂ ಡಿಎನ್‌ಎ ಮಾದರಿ ಸಂಗ್ರಹ ಪೂರ್ಣಗೊಂಡ ಬಳಿಕ 1,030 ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಕೋಶಿ, ನಾರಾಯಣಿ, ಬಾಗ್ಮತಿ, ಕರ್ಣಾಲಿ, ಮಹಾಕಾಳಿ, ಕಾಂಕೈ, ಕಮಲ್, ಕಮಲಾ, ಬಬಾಯಿ, ಪೂರ್ವ ರಾಪ್ತಿ ಹಾಗೂ ಪಶ್ಚಿಮ ರಾಪ್ತಿ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದಾರೆ. ನೇಪಾಳ ಸೇನೆಯ ನೇತೃತ್ವದ ಜಂಟಿ ರಕ್ಷಣಾ ತಂಡಗಳು 11ನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.
ನಾಪತ್ತೆಯಾದವರ ಸಂಖ್ಯೆ 4,898 ಎಂದು ಅಂದಾಜಿಸಲಾಗಿದೆ. ರಾಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲೇ 600ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇದುವರೆಗೆ 13,000ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳ ಹಲವು ಜಲವಿದ್ಯುತ್ ಯೋಜನೆಗಳಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನೂರಾರು ಕಾರ್ಮಿಕರು ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದಿಂದ ಇಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಯೋಜನೆಯ ಯಾಂತ್ರಿಕ ಮೇಲ್ವಿಚಾರಕರಾದ 45 ವರ್ಷದ ಕಬೀರ್ ಮಹಾರ್ಜನ್ ಹಾಗೂ 30 ವರ್ಷದ ಫೋರ್‌ಮನ್ ಸಂಜಯ್ ಸಾಹ್ ಅವರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಸೇನೆಯ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ತಿಳಿಸಿದೆ.
ಇದೇ ವೇಳೆ, ನೇಪಾಳ ಸೇನೆಯೊಂದಿಗೆ ಸೇರಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸುರಂಗ ರಕ್ಷಣಾ ತಂಡವು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಸುವಾ ಜಿಲ್ಲೆಯ ಚಿಲಿಮೇ ಸುರಂಗದೊಳಗೆ ತಾತ್ಕಾಲಿಕ ಮಾರ್ಗ ನಿರ್ಮಿಸಿದೆ. ಇದರಿಂದ ಹೆಚ್ಚಿನ ಭಾರ ಹೊತ್ತ ಉಪಕರಣಗಳನ್ನು ಸುರಂಗದೊಳಗೆ ಸಾಗಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದ ನೀರನ್ನು ಹೊರಹಾಕಲು ತಂಡಗಳು ಶುಕ್ರವಾರ ಸುರಂಗದೊಳಗೆ ಮತ್ತಷ್ಟು ಆಳಕ್ಕೆ ತೋಡಿವೆ.
ನೇಪಾಳ ಸೇನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸುರಂಗ ರಕ್ಷಣಾ ತಂಡವು ನಿನ್ನೆ ಚಿಲಿಮೇ ಸುರಂಗದೊಳಗೆ ಮತ್ತಷ್ಟು ಆಳಕ್ಕೆ ತೆರಳಿ ನೀರನ್ನು ಹೊರಹಾಕಿದೆ. ಹೆಚ್ಚಿನ ಭಾರೀ ಉಪಕರಣಗಳನ್ನು ಸುರಂಗದೊಳಗೆ ಸಾಗಿಸಲು ತಾತ್ಕಾಲಿಕ ಮಾರ್ಗವನ್ನೂ ನಿರ್ಮಿಸಲಾಗುತ್ತಿದೆ.
ತಂಡದ ವೈದ್ಯರು ಸ್ಥಳೀಯ ಸಮುದಾಯಕ್ಕಾಗಿ ಆರೋಗ್ಯ ಶಿಬಿರವನ್ನೂ ನಡೆಸಿದ್ದಾರೆ ಎಂದು ನೇಪಾಳದಲ್ಲಿನ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಭಾರತವು ನೇಪಾಳಕ್ಕೆ ನೆರವಾಗಲು ವಿಶೇಷ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಪ್ರವಾಹದಿಂದ ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪ್ರದೇಶಗಳು ತತ್ತರಿಸಿದ್ದು, 1,344 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ನಾಶವಾಗಿವೆ.
ನೇಪಾಳದ ವಿವಿಧ ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ನಾಪತ್ತೆಯಾಗಿರುವ ಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಪತ್ತೆಹಚ್ಚಲು ಭಾರತ ಮತ್ತು ಚೀನಾದ ತಜ್ಞರ ತಂಡಗಳು ನೇಪಾಳದ ರಕ್ಷಣಾ ತಂಡಗಳೊಂದಿಗೆ ಕೈಜೋಡಿಸಿವೆ. ಹಲವರು ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ.
ನೇಪಾಳದ 12 ಜಲವಿದ್ಯುತ್ ಯೋಜನೆಗಳಿಂದ ಕನಿಷ್ಠ 900 ಕಾರ್ಮಿಕರು ನಾಪತ್ತೆಯಾಗಿದ್ದು, ಅವರಲ್ಲಿ ಸುಮಾರು 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಲಿಮೇ ಜಲವಿದ್ಯುತ್ ಯೋಜನೆಯ ಸ್ಥಳವು ರಾಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಗ್ರಾಮದ ಸಮೀಪದಲ್ಲಿದೆ. ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಈ ಜಿಲ್ಲೆ ತೀವ್ರವಾಗಿ ಹಾನಿಗೊಳಗಾಗಿದೆ.
ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರವು ಶುಕ್ರವಾರ ಮಂಡಿಸಿದ ವರದಿ ಪ್ರಕಾರ, ಭೀಕರ ಪ್ರವಾಹದಿಂದ 32,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಭಾರೀ ಹಾನಿಯಾಗಿದೆ.