ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ತನ್ನ 5 ಇಂಧನ ಟ್ಯಾಂಕರ್ ಗಳ ಮೇಲಿನ ಅಮೆರಿಕದ ದಾಳಿಗೆ ಪ್ರತಿಯಾಗಿ ಇದೀಗ ಇರಾನ್ ಅಮೆರಿಕದ ಮಾನವ ರಹಿತ ಸಬ್ ಮೆರಿನ್ ಅನ್ನು ಸೀಜ್ ಮಾಡಿರುವುದಾಗಿ ಘೋಷಣೆ ಮಾಡಿದೆ.
ಹೌದು.. ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ಅಮೆರಿಕ ಸೇನೆಯ ಅತ್ಯಾಧುನಿಕ ಅನ್‌ಮ್ಯಾನ್ಡ್ ನೀರೊಳಗಿನ ವಾಹನ (ಸಬ್ ಮೆರಿನ್)ವನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ನೌಕಾಪಡೆ ಹೇಳಿಕೊಂಡಿದೆ. ಈ ಬೆಳವಣಿಗೆಯಿಂದ ಈಗಾಗಲೇ ಉದ್ವಿಗ್ನವಾಗಿರುವ ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಅಧಿಕೃತ ಸುದ್ದಿವಾಹಿನಿ ಸೆಪಾಹ್ ನ್ಯೂಸ್ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಗುಪ್ತಚರ ಕಾರ್ಯಾಚರಣೆಯೊಂದರಲ್ಲಿ ಅಮೆರಿಕದ Dive-LD ಹೆಸರಿನ ಅನ್‌ಮ್ಯಾನ್ಡ್ ಅಂಡರ್‌ವಾಟರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ವಿಶ್ವದ ಅತ್ಯಾಧುನಿಕ ನೀರೊಳಗಿನ ತಂತ್ರಜ್ಞಾನವನ್ನು ಹೊಂದಿರುವ ಈ ವಾಹನವನ್ನು ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿರುವುದಾಗಿ ಇರಾನ್ ಹೇಳಿದೆ.
ವಶಪಡಿಸಿಕೊಂಡ ವಾಹನದ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.
US ಡ್ರೋನ್ ಹೊಡೆದುರುಳಿಸಿದ ಇರಾನ್?
ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕದ MQ-9 Reaper ಡ್ರೋನ್ ಅನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು IRGC ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸೆಪಾಹ್ ನ್ಯೂಸ್ ವರದಿ ಮಾಡಿದೆ.
ಆದರೆ, ಇರಾನ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಸೇನೆ, ತನ್ನ ಒಂದು ಅಂಡರ್‌ವಾಟರ್ ಡ್ರೋನ್ ಒಂದು ದಿನದ ಹಿಂದೆ ಕಾರ್ಯನಿರ್ವಹಿಸುವ ವೇಳೆ ‘ತಾಂತ್ರಿಕ ದೋಷಕ್ಕೆ ಒಳಗಾಗಿತ್ತು’ ಎಂದು ಹೇಳಿದೆ.
ಪ್ರಾದೇಶಿಕ ಸಮುದ್ರ ಪ್ರದೇಶದ ಸಮೀಕ್ಷೆ ನಡೆಸುವ ಕಾರ್ಯಾಚರಣೆಯಲ್ಲಿ ಅದು ತೊಡಗಿಸಿಕೊಂಡಿತ್ತು ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ. ಆದರೆ ಇರಾನ್ ವಶಪಡಿಸಿಕೊಂಡಿರುವುದು ಇದೇ ಸಾಧನವೇ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿಲ್ಲ.
ಆ ಅಂಡರ್‌ವಾಟರ್ ಡ್ರೋನ್ ಹಳೆಯ ಮಾದರಿಯಾಗಿದ್ದು, ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಲಿಲ್ಲ ಹಾಗೂ ಯಾವುದೇ ರಹಸ್ಯ ಸೋನಾರ್ ಅಥವಾ ರೇಡಾರ್ ಉಪಕರಣವನ್ನು ಹೊಂದಿರಲಿಲ್ಲ ಎಂದು ಅಮೆರಿಕ ಸೇನೆ ಹೇಳಿದೆ.
6,000 ಮೀಟರ್ ಆಳಕ್ಕೂ ಇಳಿಯಬಲ್ಲ Dive-LD
ಅಮೆರಿಕ ಸೇನೆ ಇತ್ತೀಚಿನ ವರ್ಷಗಳಲ್ಲಿ ಮಾನವರಹಿತ ನೌಕಾ ವ್ಯವಸ್ಥೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಸಮುದ್ರದ ವಿಶಾಲ ಪ್ರದೇಶಗಳನ್ನು ಕಡಿಮೆ ವೆಚ್ಚದಲ್ಲಿ ಮೇಲ್ವಿಚಾರಣೆ ಮಾಡುವುದು, ಗುಪ್ತಚರ ಮಾಹಿತಿ ಸಂಗ್ರಹಿಸುವುದು ಹಾಗೂ ಶತ್ರುಗಳ ಹಡಗು ಮತ್ತು ಸಬ್‌ಮರೀನ್‌ಗಳನ್ನು ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ. Anduril ಸಂಸ್ಥೆಯ ಮಾಹಿತಿಯ ಪ್ರಕಾರ, Dive-LD ಸುಮಾರು 10 ದಿನಗಳವರೆಗೆ ಬೇಸ್‌ಗೆ ಮರಳದೇ ಕಾರ್ಯನಿರ್ವಹಿಸಬಲ್ಲದು. ಇದು ಸುಮಾರು 6,000 ಮೀಟರ್ (19,700 ಅಡಿ) ಆಳಕ್ಕೆ ಇಳಿಯುವ ಸಾಮರ್ಥ್ಯ ಹೊಂದಿದೆ. 2024ರ ವರದಿಯೊಂದರ ಪ್ರಕಾರ, ಪ್ರತಿ Dive-LD ಘಟಕದ ಬೆಲೆ ಸುಮಾರು 25 ಲಕ್ಷ ಡಾಲರ್ ಎಂದು ತಿಳಿದುಬಂದಿದೆ.
5 ಇರಾನಿ ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದ ಅಮೆರಿಕ
ಈ ನಡುವೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಅಮೆರಿಕದ ಯುದ್ಧನೌಕೆಯ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಐದು ಇರಾನಿ ಕಚ್ಚಾ ತೈಲ ಸಾಗಣೆ ಟ್ಯಾಂಕರ್‌ಗಳನ್ನು ನಾಶಪಡಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೊಂಡಿದೆ. ಕಳೆದ ಎರಡು ದಿನಗಳಲ್ಲಿ ಇರಾನ್ ಅಮೆರಿಕದ ಯುದ್ಧನೌಕೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಎರಡು ಬಾರಿ ಗುರಿಯಾಗಿಸಲು ಪ್ರಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಈ ದಾಳಿ ನಡೆಸಿದೆ ಎಂದು CENTCOM ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.
27 ಇರಾನಿ ಏರ್‌ಲೈನ್‌ಗಳ ಮೇಲೆ ಅಮೆರಿಕ ನಿರ್ಬಂಧ
ಇದರ ನಡುವೆ, ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಮತ್ತೊಂದು ಕ್ರಮವಾಗಿ ಅಮೆರಿಕದ ಖಜಾನೆ ಇಲಾಖೆ 27 ಇರಾನಿ ವಿಮಾನಯಾನ ಸಂಸ್ಥೆಗಳನ್ನು Specially Designated Nationals ಪಟ್ಟಿಗೆ ಸೇರಿಸಿದೆ. ಇರಾನ್‌ನ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ದೇಶದ ಅಸ್ಥಿರತೆಯನ್ನು ಉಂಟುಮಾಡುವ ಚಟುವಟಿಕೆಗಳಿಗೆ ದೀರ್ಘಕಾಲದಿಂದ ಬೆಂಬಲ ನೀಡುತ್ತಿವೆ ಎಂದು ಅಮೆರಿಕ ಆರೋಪಿಸಿದೆ.
IRGC, ಖಾಸಗಿ ವಿಮಾನಯಾನ ಸಂಸ್ಥೆಗಳಂತೆ ಕಾಣುವ ಸಂಸ್ಥೆಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರಗಳ ಖರೀದಿ ಮತ್ತು ಸಾಗಣೆ ಹಾಗೂ ಸಿಬ್ಬಂದಿಯ ಸ್ಥಳಾಂತರಕ್ಕೆ ನೆರವು ಪಡೆಯುತ್ತಿದೆ ಎಂದು ಅಮೆರಿಕ ಹೇಳಿದೆ.
2011ರ ಅಕ್ಟೋಬರ್‌ನಲ್ಲಿ ಅಮೆರಿಕ ಮೊದಲ ಬಾರಿಗೆ ಇರಾನ್‌ನ ಮಹಾನ್ ಏರ್ ವಿರುದ್ಧ ನಿರ್ಬಂಧ ವಿಧಿಸಿತ್ತು. ಬಳಿಕ ಜುಲೈ 30ರಂದು ಮಹಾನ್ ಏರ್‌ನ ಸಾಮಾನ್ಯ ಮಾರಾಟ ಏಜೆಂಟ್‌ಗಳೆಂದು ಪರಿಗಣಿಸಲಾದ ಹಲವು ಸಂಸ್ಥೆಗಳ ಮೇಲೂ ಕ್ರಮ ಕೈಗೊಂಡಿತ್ತು.
ಇರಾನ್ ಅಮೆರಿಕ ಮೂಲದ ವಿಮಾನಗಳು ಹಾಗೂ ಸೂಕ್ಷ್ಮ ತಂತ್ರಜ್ಞಾನ ಪಡೆಯಲು ಬಳಸುತ್ತಿದೆ ಎನ್ನಲಾದ ನಕಲಿ ಮುಂಚೂಣಿ ಕಂಪನಿಗಳು, ವಿದೇಶಿ ಮಧ್ಯವರ್ತಿಗಳು ಹಾಗೂ ಮೋಸದ ಸಾಗಣೆ ಮಾರ್ಗಗಳನ್ನೂ ಹೊಸ ನಿರ್ಬಂಧಗಳು ಗುರಿಯಾಗಿಸಿವೆ ಎಂದು ಅಮೆರಿಕ ಹೇಳಿದೆ.
‘ಆಕ್ರಮಣಕಾರರು ಪಶ್ಚಾತ್ತಾಪಪಡುವವರೆಗೂ ಪ್ರತಿರೋಧ’
ಇನ್ನೊಂದೆಡೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ದೇಶದ ಪ್ರತಿರೋಧ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. “ಇರಾನ್ ಯಾವಾಗಲೂ ಯುದ್ಧವನ್ನು ವಿರೋಧಿಸಿದೆ. ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಹಾಗೂ ಪಶ್ಚಿಮ ಏಷ್ಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಯುದ್ಧೋನ್ಮಾದದಿಂದ ದೂರವಿರುವುದರಲ್ಲಿದೆ” ಎಂದು ಅವರು ಸಾಮಾಜಿಕ ಜಾಲತಾಣ Xನಲ್ಲಿ ಹೇಳಿದ್ದಾರೆ.
ಆದರೆ, ಆಕ್ರಮಣಕ್ಕೆ ಪ್ರತಿರೋಧ ತೋರಿಸುವ ತನ್ನ ಹೋರಾಟವನ್ನು ಇರಾನ್ ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಆಕ್ರಮಣಕಾರರು ಸಂಪೂರ್ಣವಾಗಿ ಪಶ್ಚಾತ್ತಾಪಪಡುವವರೆಗೂ ಇರಾನ್ ತನ್ನ ಪ್ರತಿರೋಧವನ್ನು ಶಕ್ತಿಯುತವಾಗಿ ಮುಂದುವರಿಸಲಿದೆ. ಮಹಾನ್ ಇರಾನಿನ ಜನರ ಹಕ್ಕುಗಳ ರಕ್ಷಕನಾಗಿ ದೇಶ ಮುಂದುವರಿಯಲಿದೆ” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.