

ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮವೈವರ್ತ ಪುರಾಣ ಅತ್ಯಂತ ಮಹತ್ವದ್ದು. ಈ ಪುರಾಣವನ್ನು ನಾಲ್ಕು ಮಹಾಕಾಂಡಗಳಾಗಿ ವಿಂಗಡಿಸಲಾಗಿದೆ. ಮೊದಲ ಕಾಂಡದಲ್ಲಿ ಈ ವಿಶ್ವದ ನಿರ್ಮಾಣ ಹಾಗೂ 84 ಲಕ್ಷ ಜೀವರಾಶಿಗಳ ಸಂಪೂರ್ಣ ವಿವರಣೆ ಇದೆ. ಇದು ಹೇಗಿದೆ ಎಂದರೆ:-
ತ್ರಿಂಶಲಕ್ಷಂ ಗವಾನಾಂಚ- ಅಂದರೆ 30 ಲಕ್ಷ ಚತುಷ್ಟಾದಿಗಳು. ಸ್ಥಾವರೋ ಲಕ್ಷ ವಿಂಶತಿ- ಅಂದರೆ 20 ಲಕ್ಷ ಜಾತಿಯ ಸ್ಥಾವರಗಳು. ಕ್ರಿಮಿಣಾಂ ರುದ್ರ ಸಂಖ್ಯಶ್ಚ- 11 ಲಕ್ಷ ಕ್ರಿಮಿ-ಜಂತುಗಳು, ಪಕ್ಷಿಣಾಂ ದಶಲಕ್ಷಕಃ- ಅಂದರೆ, 10 ಲಕ್ಷ ಪಕ್ಷಿ ಜಾತಿಗಳು. ಜಲಚೋ ನವಲಕ್ಷಂತು- 9 ಲಕ್ಷ ಜಲಚರಗಳು. ಚತುರ್ಲಕ್ಷಚ ಮಾನವಾ- 4 ಲಕ್ಷ ಮಾನವ ಪ್ರಭೇದಗಳು ಎಂದು ಅರ್ಥ. ಈ ರೀತಿಯಾಗಿ 34 ಲಕ್ಷ ಜನ್ಮಗಳನ್ನು ಎತ್ತ ಬೇಕಾಗುತ್ತದೆಂದು ಹರಿಕಥೆಗಳಲ್ಲಿ ಹೇಳಲಾಗಿದೆ.
ಇದೆಲ್ಲಾ ಮೊದಲ ಕಾಂಡದಲ್ಲಿದ್ದರೆ, ಎರಡನೇ ಭಾಗದಲ್ಲಿ ದೇವ- ದೇವತೆಯರ ಆವಿರ್ಭಾವರ ಹಿನ್ನೆಲೆ, ಭಗವಂತನ ಹಿರಿಮೆ, ಆಚಾರ- ವಿಚಾರಗಳ ವರ್ಣನೆ ಇದೆ. ಮೂರನೇ ಕಾಂಡದಲ್ಲಿ ವಿಘ್ನನಾಶಕ ಗಣೇಶನ ಜನನ, ಆತನ ಅಪರಿಮಿತ ಶಕ್ತಿ- ಜ್ಞಾನಗಳ ವರ್ಣನೆ ಇದೆ.
ನಾಲ್ಕನೇ ಕಾಂಡದಲ್ಲಿ ಶ್ರೀಕೃಷ್ಣಾವತಾರದ ಉದ್ದೇಶವಾದ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ, ಧರ್ಮ ಸಂಸ್ಥಾಪನೆ, ಗೀತೋಪದೇಶ, ರಾಧಾ- ಕೃಷ್ಣರ ಭಕ್ತಿ- ಪ್ರೇಮಗಳ ಉತ್ಕಟತೆಯನ್ನು ವಿವರಿಸಲಾಗಿದೆ.
ಬ್ರಹ್ಮವೈವರ್ತ ಪುರಾಣವನ್ನು ಮೂಲದಲ್ಲಿ ದೇವಭಾಷೆ ಸಂಸ್ಕೃತದಲ್ಲೂ ನಂತರ ವಂಗಭಾಷೆಯಲ್ಲಿ (ಬೆಂಗಾಳಿ) ಬರೆಯಲಾಗಿದೆ.
ಸಕಲ ವೇದ ಪುರಾಣೇತಿಹಾಸ ಸಂಪನ್ನರಾದ ಸೂತಪುರಾಣಿಕರು ನೈಮಿಷಾರಣ್ಯವಾಸಿಗಳಾದ ಋಷಿ ಮುನಿಗಳಿಗೆ ಇದನ್ನು ಹೇಳಿದರು. ಇದರಲ್ಲಿ ಮೊದಲ ಕಾಂಡ ಬ್ರಹ್ಮಕಾಂಡ. ಇದರಲ್ಲಿ ಬ್ರಹ್ಮನ ಹುಟ್ಟು, ಜಗತ್ ಸೃಷ್ಟಿ, ಬ್ರಹ್ಮ ತನ್ನ ಮಾನಸ ಪುತ್ರನಾದ ನಾರದರಿಗೆ ಸಂವಾದ ರೂಪದಲ್ಲಿ ಸೃಷ್ಟಿಯ ರಹಸ್ಯ, ಪ್ರಳಯಗಳನ್ನು ವರ್ಣಿಸಿರುವ ಭಾಗ ಒಳಗೊಂಡಿದೆ.
ಎರಡನೆಯದು ಪ್ರಕೃತಿ ಕಾಂಡ. ಇದರಲ್ಲಿ ಆದಿಶಕ್ತಿ ಪ್ರಕೃತಿಯ ಸರ್ವೋಚ್ಚ ಶಕ್ತಿಯ ವಿವರಣೆ ಇದೆ. ಪಂಚಭೂತಾತ್ಮಕವಾದ ಈ ಪ್ರಪಂಚವನ್ನು ಆದಿಶಕ್ತಿ ಪ್ರಕೃತಿ ಹೇಗೆ ಸಂರಕ್ಷಿಸಿ ಕಲ್ಪಾಂತರದಲ್ಲಿ ಲಯಗೊಳಿಸುತ್ತಾಳೆ ಎಂಬದರ ವಿವರಣೆ ಇದೆ.
ಮೂರನೆಯದು ಗಣೇಶ ಕಾಂಡ. ಇದರಲ್ಲಿ ಗಣೇಶನ ಜ್ಞಾನ ವಿದ್ವತ್ತುಗಳ ವಿವರಣೆ, ಗಣೇಶನ ಆರಾಧನೆಯ ಫಲವನ್ನು ವಿವರಿಸಲಾಗಿದೆ. ನಾಲ್ಕನೆಯದು ಶ್ರೀ ಕೃಷ್ಣಾಕಾಂಡ. ಇದರಲ್ಲಿ ಶ್ರೀಕೃಷ್ಣನ ಜನ್ಮದ ಹಿನ್ನೆಲೆ, ಬಾಲಲೀಲೆಗಳು, ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಹಾಗೂ ಗೀತಾಬೋಧನೆಯ ವರ್ಣನೆ ಇದೆ. ಹಾಗೂ ಶ್ರೀ ಕೃಷ್ಣಾವತಾರ ಪರಮಾತ್ಮನ ಪೂರ್ಣಾವತಾರ ಹೇಗೆ ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಲಾಗಿದೆ.
- ವಿ. ಕೇಶವಮೂರ್ತಿ