ಗಣೇಶ ಜನಿಸಿದ್ದು, ಅವನಿಗೆ ಆನೆ ಮುಖ ಬಂದದ್ದು ಈ ಎಲ್ಲ ಪುರಾಣ ಕಥೆಗಳು ನಮಗೆ ಗೊತ್ತೇ ಇದೆ. ಪುರಾಣಗಳು ಅನೇಕ ರೂಪಕಗಳು, ಉದಾಹರಣೆಗಳನ್ನು ಬಳಸಿ ಕಥೆ ಹೇಳುತ್ತವೆ. ಅವುಗಳ ಉದ್ದೇಶ ಮನರಂಜನೆ ಅಲ್ಲ, ಜ್ಞಾನ ಒದಗಿಸುವುದು. ಪುರಾಣ ಕಥೆಗಳಲ್ಲಿ ಅಡಕವಾಗಿರುವ ಸಂಕೇತಗಳನ್ನು ಬಿಡಿಸುತ್ತ, ಅದರ ಜ್ಞಾನದ ತಿರುಳನ್ನು ಅರ್ಥ ಮಾಡಿಕೊಳ್ಳಲು ಸಾಧಕರಿಗೆ ಮಾತ್ರವೇ ಸಾಧ್ಯ. ಗಣೇಶ ಪರಮೋಚ್ಛ ದೇವತೆ. ಎಲ್ಲರ ಮನೆ, ಮನಗಳಲ್ಲಿ ಅವನಿಗೆ ಸ್ಥಾನ. ಯಾವುದೇ ಕಾರ್ಯ ಆರಂಭಿಸುವ ಮುನ್ನ ಅವನನ್ನು ಪ್ರಾರ್ಥಿಸುತ್ತೇವೆ. ಮೊದಲ ಪೂಜೆ ಸಲ್ಲುವುದೂ ಅವನಿಗೇ. ಗಣ ಎಂದರೆ ಕಾಪಾಡುವವನು. ಈಶ ಎಂದರೆ ಅತ್ಯುನ್ನತವಾದದ್ದು ಅಥವಾ ದೇವರು. ಆತನ ಆನೆ ಮುಖ ಅಪಾರ ಬುದ್ಧಿಶಕ್ತಿಯ ದ್ಯೋತಕ. ಡೊಳ್ಳು ಹೊಟ್ಟೆಯಿಂದ ಕೂಡಿದ ಮಾನವ ಶರೀರ ಮಣಿಪೂರಕ ಚಕ್ರದಲ್ಲಿ ಸಂಗ್ರಹಗೊಂಡಿರುವ ಅಗಾಧ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣೇಶ ಪರಮೋಚ್ಛ ಪುರುಷ ಮಹಾದೇವ ಮತ್ತು ಆದಿಶಕ್ತಿ ಪಾರ್ವತಿಯರ ಪುತ್ರ. ಹೀಗಾಗಿ ಗಣೇಶ ಸೃಷ್ಟಿಯಲ್ಲಿನ ಎಲ್ಲದರ ಪ್ರತೀಕವೂ ಹೌದು.
ತಾಂತ್ರಿಕ ಸಿದ್ಧಾಂತದಲ್ಲಿ ಸಾಧಕನಿಗೆ ಕಲಿಸಲಾಗುವ ಮೊದಲ ಸಾಧನೆ ಎಂದರೆ ಗಣಪತಿ ಸಾಧನೆ ಮತ್ತು ಗಣಪತಿ ಜಪ. ಇದು ಭೂಲೋಕದ ಆಚೆಗಿನ ಬಾಗಿಲುಗಳನ್ನು ತೆರೆಯುತ್ತದೆ. ಗಣಪತಿ ಸಾಧನೆ ಅತಿ ಸರಳ ಮತ್ತು ಅಷ್ಟೇ ಪ್ರಭಾವಶಾಲಿ. ಅದನ್ನು ಸಿದ್ಧಿಸಿಕೊಂಡವರು ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು ಮುನ್ನಡೆಯುವ ಶಕ್ತಿ ಪಡೆಯುವರು. ತಮ್ಮ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಹೊರಗಟ್ಟುವರು. ಯಾವ ದುಷ್ಟಶಕ್ತಿಯೂ ಅವರ ಬಳಿ ಸುಳಿಯದು. ಅದರಲ್ಲೂ ನಿಂತುಕೊಂಡೇ ಗಣಪತಿಯನ್ನು ಪೂಜಿಸುವ ಉಚ್ಛಿಷ್ಟ ತಾಂತ್ರಿಕ ಸಾಧನೆ ಬಹಳ ಶ್ರೇಷ್ಠವಾದದ್ದು. ಗಣಪತಿ ಜಪವೂ ಸರಳ, 'ಓಂ ಗಂ ಗಣಪತಯೇ ನಮಃ'. ಸಾಧನೆ ಮತ್ತು ಜಪವನ್ನು ಗುರುಮುಖೇನ ಕಲಿತು ಅನುಷ್ಠಾನಗೊಳಿಸಿದರೆ ಹೆಚ್ಚು ಪ್ರಭಾವಶಾಲಿ. ಪುರಾಣಗಳ ಪ್ರಕಾರ ಗಣಪತಿ ರಿದ್ಧಿ (ಸಂಪತ್ತು) ಮತ್ತು ಸಿದ್ಧಿ (ಅಧ್ಯಾತ್ಮ ಶಕ್ತಿ) ಅವರನ್ನು ಮದುವೆಯಾಗಿದ್ದಾನೆ. ಅಂದರೆ ಗಣೇಶ ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಎರಡೂ ವಿಧದಲ್ಲಿ ನಮ್ಮನ್ನು ಅನುಗ್ರಹಿಸುತ್ತಾನೆ ಎನ್ನುವುದರ ಸಂಕೇತ.
ಮಾಹಿತಿಗೆ: 09886714558.
- ಯೋಗಿ ಅಶ್ವಿನಿ