

ಒಂದೊಮ್ಮೆ ಆಗಿದ್ದರೆ ಮ್ಯಾಪ್ ಮೈ ಇಂಡಿಯಾ ಸಂಸ್ಥೆ ಹೊಸದಾಗಿ ಬೈಕ್ಗಳಿಗೆಂದೇ 'ಟ್ರೇಲ್ಬ್ಲೇಝರ್-2' ಎಂಬ ಜಿಪಿಎಸ್ ಆಧಾರಿತ ಸಾಧನವನ್ನು ಬಿಡುಗಡೆ ಮಾಡಿದೆ.
3ಡಿ ತಂತ್ರಜ್ಞಾನ ಹೊಂದಿರುವ ಮ್ಯಾಪ್ ಮೈ ಇಂಡಿಯಾ ಸಾಧನ ದೇಶದ 5 ಸಾವಿರ ನಗರಗಳ ನಕಾಶೆಯನ್ನು ಹೊಂದಿದೆ. ಬೈಕ್ ಸವಾರರಿಗೆಂದೇ ವಿಶೇಷವಾಗಿ ರೂಪಿಸಿರುವ 'ಟ್ರೇಲ್ಬ್ಲೇಝರ್-2' ಮೊಬೈಲ್ ಯಂತ್ರವಾಗಿದೆ. 8.9 ಸೆಂ.ಮೀ. ಟಚ್ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, ಸಿಮ್ ಕಾರ್ಡ್ ಅಥವಾ ಅಂತರ್ಜಾಲ ಸೌಲಭ್ಯವಿಲ್ಲದೇ ಕಾರ್ಯನಿರ್ವಹಿಸುತ್ತದೆ.
50 ನಗರಗಳ ಮನೆ ಮನೆಯ ವಿಳಾಸ, ಸುಮಾರು 1.33 ಕೋಟಿಯಷ್ಟು ವಿವಿಧ ಮಾಹಿತಿ, 5 ಸಾವಿರ ನಗರಗಳ ರಸ್ತೆಗಳ ಮಾಹಿತಿ ಹಾಗೂ 6 ಲಕ್ಷ ಪಟ್ಟಣ ಹಾಗೂ ಹಳ್ಳಿಗಳ ಮಾಹಿತಿ ಇದರಲ್ಲಿ ಮೊದಲೇ ಅಪ್ಲೋಡ್ ಆಗಿರುತ್ತದೆ.
ಟಿಎಪ್ಟಿ ಸ್ಕ್ರೀನ್ ಹೊಂದಿರುವ 'ಟ್ರೇಲ್ಬ್ಲೇಝರ್-2', ವಿಂಡೋಸ್ ಸಿಇ 6 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 2 ಜಿಬಿ ಇಂಟರ್ನಲ್ ಮೆಮೋರಿ ಹಾಗೂ ಮತ್ತೆ 4 ಜಿಬಿ ಹೆಚ್ಚುವರಿ ಎಸ್ಡಿ ಕಾರ್ಡ್ ಅಳವಡಿಸಲು ಅವಕಾಶ ನೀಡಲಾಗಿದೆ. ಇದರೊಂದಿಗೆ 1,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಈ ಹಿಂದೆ 4-ಚಕ್ರಗಳ ಚಾಲಕರಿಗಾಗಿ ಮ್ಯಾಪ್ ಮೈ ಇಂಡಿಯಾ ಸಂಸ್ಥೆ ಜಿಪಿಎಸ್ ಆಧಾರಿತ ಸಾಧನ ಬಿಡುಗಡೆ ಮಾಡಿತ್ತು. ಈಗ ದೇಶದಲ್ಲಿರುವ ದೊಡ್ಡ ಸಂಖ್ಯೆಯ ಬೈಕ್ ಸವಾರರನ್ನು ಗಮನದಲ್ಲಿಟ್ಟುಕೊಂಡು 'ಟ್ರೇಲ್ಬ್ಲೇಝರ್-2' ರೂಪಿಸಲಾಗಿದೆ. ಆದರೆ 'ಟ್ರೇಲ್ಬ್ಲೇಝರ್-2' ಬೆಲೆಯು ಕೊಂಚ ಹೆಚ್ಚಿದೆ. ಆನ್ಲೈನ್ ಖರೀದಿಗೆ ಬರೋಬ್ಬರಿ 16,990 ಭರಿಸಬೇಕಿದೆ.
ಆದರೆ 'ಟ್ರೇಲ್ಬ್ಲೇಝರ್-2'ನ ವೈಶಿಷ್ಟ್ಯವೆಂದರೆ ನಿಮಗೆ ಬೇಕಾದ ವಿಳಾಸವನ್ನು ತೋರಿಸುವ ಜತೆಗೆ, ಆಡಿಯೋ, ವಿಡಿಯೋ ಹಾಗೂ ಇಮೇಜ್ ಪ್ಲೇಯರ್ಗಳನ್ನಾಗಿ ಇದನ್ನು ಬಳಸಬಹುದು. ಬೆಂಗಳೂರಿನಂಥ ನಗರಗಳ ಟ್ರಾಫಿಕ್ ದಟ್ಟಣೆ ಹಾಗೂ ಸಿಗ್ನಲ್ಗಳಲ್ಲಿ ಟೈಂಪಾಸ್ಗೆ ಸಹಕಾರಿಯಾಗುತ್ತದೆ. ಮತ್ತೊಂದೆಡೆ ಬ್ಯಾಟರಿ ಖಾಲಿಯಾಯಿತೆಂಬ ಚಿಂತೆಯೂ ಬೇಕಿಲ್ಲ, ಬೈಕ್ನ ಬ್ಯಾಟರಿಯನ್ನು ಇದು ಉಪಯೋಗಿಸಿಕೊಳ್ಳುತ್ತದೆ.
ಅಂದಹಾಗೆ 'ಟ್ರೇಲ್ಬ್ಲೇಝರ್-2' ಅನ್ನು ಬೈಕ್ಗೆ ಕಾಯಂ ಆಗಿ ಅಳವಡಿಸುವ ಅಗತ್ಯವಿಲ್ಲ. ಬೈಕ್ ಅನ್ನು ಪಾರ್ಕ್ ಮಾಡಿ ದೂರ ಹೋಗುವಾಗ ನಿಮ್ಮ ಬ್ಯಾಗ್ನಲ್ಲಿಯೇ ಇರಿಸಿಕೊಂಡು ಪಾದಯಾತ್ರೆಗೂ ವಿಳಾಸ ನೋಡಿಕೊಳ್ಳಬಹುದು!