

ಅದೊಂದು ಸುಂದರ ಗ್ರಾಮ. ಅಲ್ಲಿ ಮನುಷ್ಯರಿದ್ದಾರೆ, ಪ್ರಾಣಿ ಪಕ್ಷಿಗಳಿವೆ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಅವರು ಮಾತನಾಡುವುದಿಲ್ಲ. ಏಕೆಂದರೆ ಅದು ಕಲಾವಿದನ ಕಲ್ಪನೆಯ ಪ್ರಪಂಚ.
ಇಂಥ ಒಂದು ವೈವಿಧ್ಯಮಯ, ಭವ್ಯ ಲೋಕ ಸೃಷ್ಟಿಯಾಗಿರುವುದನ್ನು ನೋಡಬೇಕೆಂದರೆ ನೀವೊಮ್ಮೆ ಹಾವೇರಿಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಉತ್ಸವ ರಾಕ್‌ಗಾರ್ಡನ್‌ಗೆ ಬರಬೇಕು.
ವಿಶ್ವದಾಖಲೆ ಪುಸ್ತಕದಲ್ಲಿ ದಾಖಲಾದ ಈ ಕಲಾಗ್ರಾಮದಲ್ಲಿ ನೇಗಿಲು ಹಿಡಿದು ಸಾಮೂಹಿಕ ಬಿತ್ತನೆ ಮಾಡುವ ರೈತರು, ರೆಂಟೆ ಹೊಡೆಯುತ್ತಿರುವ ದೃಶ್ಯ, ಕಣದಲ್ಲಿ ಕಾಳು ಒಕ್ಕುತ್ತಿರುವ ರೈತ ಮಹಿಳೆ, ಗೌಡರ ದರ್ಬಾರ್, ಮಾದರಿ ಹಾಲಿನ ಡೈರಿ, ಹಕ್ಕಿ ಮನೆ, ಅಕ್ಕಿ ಕುಟ್ಟುವ ಮಹಿಳೆಯರು, ಬಾವಿಯಿಂದ ನೀರು ಸೇದುತ್ತಿರುವ ಗ್ರಾಮಸ್ಥರು, ದನ, ಕುರಿಗಾಹಿ, ಕಿರಾಣಿ ಅಂಗಡಿ ಶೆಟ್ಟರ ವ್ಯಾಪಾರ, ನೇಕಾರ, ಕಮ್ಮಾರ, ಕ್ಷೌರಿಕ, ಕುಲ ಕಸುಬುದಾರಿಕೆಯ ಮಾಹಿತಿ, ಸಾಕು, ಕಾಡು ಪ್ರಾಣಿ-ಪಕ್ಷಿಗಳ ಬದುಕಿನ ಸುಂದರ ಪರಿಚಯವಿದೆ.
ಅಜ್ಜ, ಮುತ್ತಜ್ಜ ಹೇಳುತ್ತಿದ್ದ ಗ್ರಾಮೀಣ ಸೊಗಡು ಬಿಂಬಿಸುವ ಕಥೆಗಳು ಇಲ್ಲಿ ಕಣ್ಣಿಗೆ ಕಟ್ಟಲಿವೆ. ಹಳ್ಳಿಗಳಲ್ಲಿನ ಹರಟೆ ಕಟ್ಟೆಗಳು ಚಿತ್ರವನ್ನೂ ಮೀರಿಸುವಂತಿವೆ. ಸಮಾಜದಲ್ಲಿನ ಎಲ್ಲ ವೃತ್ತಿಪರರ ಬಗ್ಗೆ ಚಿತ್ರಣ ಇಲ್ಲಿ ಸಿಗಲಿದೆ.
ಸಾಂಪ್ರದಾಯಿಕ ಬೇಸಾಯ, ಜ್ಯೋತಿಷ್ಯ ಕೇಳುತ್ತಿರುವ ದೃಶ್ಯ, ಅಕ್ಕಸಾಲಿಗರು, ಕಲಾಕುಟೀರಗಳು, ಕಲಾತ್ಮಕ ವಿಶ್ರಾಂತಿ ಸ್ಥಳ, ದೋಣಿ ವಿಹಾರ ವ್ಯವಸ್ಥೆ, ಸಮಕಾಲೀನ ಉದ್ಯಾನವನ, ಕಲಾವಿದರ ಕಲ್ಪನೆ ಮನ ತುಂಬಿ ಮೂಡಿಬಂದಿದೆ.
ಕುಟ್ಟುವುದು, ಬೀಸುವುದು, ಶ್ಯಾವಿಗೆ ಹೊಸೆಯುವುದು, ವಿಭಿನ್ನ ಶೈಲಿಯ ಗಾಜಿನ ಬೊಂಬೆಗಳು, ನವ್ಯ ಶಿಲ್ಪಗಳು ಸೃಜನಾತ್ಮಕ ಲೋಕಕ್ಕೆ ಕರೆದೊಯ್ಯುತ್ತವೆ. ಗೌಡರ ಮನೆಯ ಹೊರಾಂಗಣ- ಒಳಾಂಗಣ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ. ರಾಜ್‌ಕುಮಾರ ಅಭಿನಯದ ಚಿತ್ರಗಳ ವೈವಿಧ್ಯಮಯ ದೃಶ್ಯಗಳು, ನವ್ಯ ಹಾಗೂ ಜನಪದ ಶೈಲಿ ಶಿಲ್ಪಗಳು, ಸಸ್ಯ ಸಂಪತ್ತು, ಬಯಲು ರಂಗಮಂದಿರ ಮನಮೋಹಕವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಕಲಾವಿದನ ಕಲ್ಪನೆಯ ಮೂಲಕ ಹಬ್ಬಿಕೊಂಡಿರುವ ರಾಕ್ ಗಾರ್ಡನ್ ದೇಶದ ಸಂಸ್ಕೃತಿ, ಸೊಬಗಿಗೆ ಕಳಸಪ್ರಾಯವಾಗಿ ಕಣ್ಣು ಕುಕ್ಕುತ್ತಿದೆ. ಇಲ್ಲಿರುವ ಸಾವಿರಾರು ಕಲಾಕೃತಿಗಳು ಶಿಲ್ಪವನದ ಸೌಂದರ್ಯಕ್ಕೆ ಸಾಕ್ಷಿಯಾಗಿವೆ. ಪ್ರತಿದಿನ ಸಾವಿರಾರು ಜನರು ಕಲಾಗ್ರಾಮದ ರಮಣೀಯ ಸೌಂದರ್ಯ ಸವಿಯುತ್ತಾರೆ.
ಸುಮಾರು 42 ಎಕರೆ ಪ್ರದೇಶದಲ್ಲಿ ಈ ರಾಕ್ ಗಾರ್ಡನ್ ಶಿಲ್ಪವನ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಭಾರತೀಯರ ವಿಶ್ವಪ್ರೇಮ, ಪರಿಸರಪ್ರೇಮ, ಪ್ರಾಚೀನ ಭಾರತದ ವೈದ್ಯಕೀಯ ಮತ್ತು ಪ್ರಾಣಿ ಪಕ್ಷಿಗಳೋಂದಿಗಿನ ಮನುಷ್ಯ ಸಂಬಂಧ ಹೀಗೆ ನಿಸರ್ಗದ ಜೊತೆ ಹೊಂದಿಕೊಂಡು ಬಾಳುವುದು ಹೇಗೆ ಎಂಬುದನ್ನು ಬಿಂಬಿಸುವ ಪರಿಕಲ್ಪನೆ ಬೆಳೆಯುತ್ತಿರುವುದು ಅಭಿನಂದನೀಯ.
ದಾಖಲೆಗಳ ಗರಿ
ಮಹಾರಾಷ್ಟ್ರ, ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸಗಡ ಅಲ್ಲದೆ ಕರ್ನಾಟಕದ ಆಲಮಟ್ಟಿ ಮುಂತಾದ ಕಡೆ ಕಲಾತ್ಮಕ ಉದ್ಯಾನವನಗಳನ್ನು ನಿರ್ಮಿಸಿದ ಖ್ಯಾತ ಕಲಾವಿದ ಪ್ರೊ. ತಿಪ್ಪಣ್ಣ.ಬಿ.ಸೋಲಬಕ್ಕನವರ ಮತ್ತು ಅವರ ತಂಡ ಆರಂಭಿಸಿದ ಕಲಾ ಆಂದೋಲನವಿದು. ಈ ಶಿಲ್ಪವನವನ್ನು ಯುನೈಟೆಡ್ ಕಿಂಗ್‌ಡಂ ಮೂಲದ ಆರ್‌ಎಚ್‌ಆರ್ ಸಂಸ್ಥೆಯು ವಿಶ್ವದಾಖಲೆಯ ಪುಸ್ತಕಕ್ಕೆ ಸೇರಿಸಿ, ವಿಶ್ವ ಮಾನ್ಯತೆ ನೀಡಿದೆ. ಜೊತೆಗೆ ಅಹಮದಾಬಾದ್ ವರ್ಲ್ಡ್ ರೆಕಾರ್ಡ್ ಇಂಡಿಯಾ, ಪಂಜಾಬ್‌ನ ಯುನಿಕ್ ವರ್ಲ್ಡ್ ರೆಕಾರ್ಡ್, ಫರಿದಾಬಾದ್ನ ಇಂಡಿಯಾ ಬುಕ್ ಆಫ್ ಆವಾರ್ಡ್ಸ್‌ನಂಥ ಭಾರತೀಯ ಸಂಸ್ಥೆಗಳೂ ಈ ಉದ್ಯಾನವನವನ್ನು ದಾಖಲೆ ಪುಸ್ತಕದಲ್ಲಿ ಸೇರಿಸಿದ್ದಾರೆ.
ಹೀಗೆ ಬನ್ನಿ
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ರಾಕ್ ಗಾರ್ಡನ್ ಶಿಗ್ಗಾವಿಯಿಂದ 8 ಕಿ.ಮೀ., ಹಾವೇರಿಯಿಂದ ಸುಮಾರು 52 ಕಿಮೀ ಹಾಗೂ ಹುಬ್ಬಳ್ಳಿಯಿಂದ 38 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಹಾವೇರಿಗೆ 395 ಕಿಮೀ ದೂರವಿದ್ದು ಬಸ್, ರೈಲು ಸಂಪರ್ಕವಿದೆ.
-ಚಿತ್ರ-ಲೇಖನ:
ನಾಮದೇವ ಕಾಗದಗಾರ
ರಾಣೆಬೆನ್ನೂರು