ಹಣಕಾಸು ನಿರ್ವಹಣೆ ವಿಚಾರದಲ್ಲಿ ಬಹುತೇಕರು ಎಡವುತ್ತಾರೆ. ಯಾರ್ಯಾರದ್ದೋ ಮಾತು ಕೇಳಿ ನಷ್ಟ ಮಾಡಿಕೊಳ್ಳುತ್ತಾರೆ. ಹಾಗಿದ್ದರೆ ಹಣಕಾಸು ನಿರ್ವಹಣೆ ಮಾಡುವುದು ಹೇಗೆ? ಇಲ್ಲಿದೆ ಆ ಕುರಿತು ಒಂದಷ್ಟು ಸರಳ ಪರಿಹಾರ...
ತುರ್ತು ನಿಧಿ
ತುರ್ತು ನಿಧಿಯೊಂದನ್ನು ಇಟ್ಟುಕೊಂಡಿರುವುದು ಆರೋಗ್ಯಕರ ಹಣಕಾಸು ಜೀವನದೆಡೆಗಿನ ಮೊದಲ ಹೆಜ್ಜೆಯಾಗಿದೆ. ಜೀವನ ನಾವು ಅಂದುಕೊಂಡಂತಿರುವುದಿಲ್ಲ. ಅನೇಕ ಬಾರಿ ನಾವು ತುರ್ತು ಪರಿಸ್ಥಿತಿಗಳನ್ನೂ ಎದುರಿಸಬೇಕಾಗುತ್ತದೆ. ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡರೆ ಇಂಥ ಪರಿಸ್ಥಿತಿಗಳನ್ನು ನಿಭಾಯಿಸುವುದು ಸುಲಭ.
ವಿಭಜನೆ
ಕ್ರಿಕೆಟ್ ಅನ್ನುವುದು ಭಾರತದ ಜನಪ್ರಿಯ ಕ್ರೀಡೆ. ಯಾವುದೇ ಕ್ರಿಕೆಟ್ ತಂಡ 11 ಬೌಲರ್ಸ್ ಅಥವಾ ಬ್ಯಾಟ್ಸ್ಮೆನ್ಗಳನ್ನು ಹೊಂದಿರುವುದಿಲ್ಲ. ಬೌಲರ್ಸ್ ಮತ್ತು ಬ್ಯಾಟ್ಸ್ಮೆನ್, ಆಲ್ರೌಂಡರ್, ವಿಕೆಟ್ ಕೀಪರ್ಗಳ ಸಮ್ಮಿಶ್ರಣ ಅದು. ತಂಡದ ವ್ಯವಸ್ಥಾಪನ ಮಂಡಳಿ ಪ್ರತಿಸ್ಪರ್ಧಿಗಳು ಹಾಗೂ ಪರಿಸ್ಥಿತಿಯನ್ನು ನೋಡಿಕೊಂಡು ಬೌಲರ್ಗಳು ಎಷ್ಟಿರಬೇಕು, ಬ್ಯಾಟ್ಸ್ಮೆನ್ಗಳು ಎಷ್ಟಿರಬೇಕೆಂಬುದನ್ನು ನಿರ್ಧರಿಸುತ್ತದೆ. ಇದು
ಹಣಕಾಸು ವಿಚಾರಕ್ಕೂ ಅನ್ವಯವಾಗುವ ವಿಚಾರ. ಯಾವತ್ತೂ ಒಂದೇ ರೀತಿಯ ಆಸ್ತಿಯಲ್ಲಿ ಹಣ ಹೂಡಬಾರದು. ವಿವಿಧ ರೂಪಗಳಲ್ಲಿ ಹೂಡಿಕೆ ಮಾಡಬೇಕು. ಆದರೆ, ಇದು ವ್ಯಕ್ತಿಯ ವೈಯಕ್ತಿಕ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿರಬೇಕು.
ಹಣಕಾಸು ಸಲಹೆ
ಬಹುತೇಕರು ಹಣಕಾಸು ನಿರ್ವಹಣೆ ಹೊರತುಪಡಿಸಿ ಎಲ್ಲಾ ವಿಚಾರಕ್ಕೂ ತಜ್ಞರ ಅಭಿಪ್ರಾಯ ಪಡೆಯುತ್ತಾರೆ. ಶಸ್ತ್ರಚಿಕಿತ್ಸೆಗಾಗಿ ಯಾರೂ ಎಂಜಿನಿಯರನ್ನೋ ಅಥವಾ ಮನೆಕಟ್ಟಲು ವೈದ್ಯರನ್ನೋ ಕೇಳುವುದಿಲ್ಲ. ಹಾಗಿದ್ದರೆ ಹಣಕಾಸು ವಿಚಾರದಲ್ಲಿ ಅನ್ಯರ ಅಭಿಪ್ರಾಯ ಕೇಳಬೇಕು. ಹಣಕಾಸು ವಿಚಾರದಲ್ಲಿ ನಾವು ಹೆಚ್ಚಾಗಿ ಕುಟುಂಬ ಸದಸ್ಯರು, ಗೆಳೆಯರು, ನೆರೆಕರೆಯವರು ಹಾಗೂ ಸಹೋದ್ಯೋಗಿಗಳ ಅಭಿಪ್ರಾಯ ಕೇಳುತ್ತೇವೆ. ಈ ವಿಷಯದಲ್ಲಿ ಹಣಕಾಸು ಸಲಹೆಗಾರ ಕೊನೆಯ ಆಯ್ಕೆ ಆಗಿರುತ್ತಾರೆ. ಆದರೆ, ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳುವಾಗ ವಿಶ್ವಾಸಾರ್ಹ ಸಲಹೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
ಹಣಕಾಸು ನಿರ್ಧಾರಗಳು
ಟೀಂ ವರ್ಕ್ ಅನ್ನುವುದು ಹೇಗೆ ಉತ್ತಮ ಫಲಿತಾಂಶ ಕೊಡುತ್ತದೆ ಅನ್ನುವುದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಅದು ಕ್ರಿಕೆಟೇ ಆಗಿರಲಿ ಅಥವಾ ಫುಟ್ಬಾಲೇ ಆಗಿರಲಿ ಅಲ್ಲಿ ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರನ ಪಾತ್ರವೂ ಮುಖ್ಯ. ನೀವು ವಿವಿಧ ಅವಕಾಶಗಳಲ್ಲಿ ಮಾಡುವ ಹೂಡಿಕೆಗಳೂ ಅಷ್ಟೆ. ಒಟ್ಟಾರೆ ನಿಮ್ಮ ಆದಾಯವನ್ನು ಹೆಚ್ಚಿಸುವಂತಿರಬೇಕು. ಒಂದು ವೇಳೆ ಆಯ್ಕೆಯಲ್ಲಿ ನೀವು ಎಡವಿದರೆ ಆದಾಯವಷ್ಟೇ ಕಡಿಮೆಯಾಗುವುದಿಲ್ಲ. ಬದಲಾಗಿ ಅದು ಎಲ್ಲಾ ಉಳಿತಾಯವನ್ನೂ ಹಾಳು ಮಾಡುತ್ತದೆ ಎನ್ನುವುದೂ ನೆನಪಿನಲ್ಲಿರಲಿ. ಹಾಗಾಗಿ ಹೂಡಿಕೆ ಅವಕಾಶಗಳ ಆಯ್ಕೆಗೂ ಮೊದಲು ಸಾಕಷ್ಟು ಅಧ್ಯಯನ ಮಾಡಿ.