ಅಕ್ಷಯ ತೃತೀಯಕ್ಕೆ ಕೀರ್ತಿಲಾಲ್ಸ್ ವಜ್ರದಾಭರಣ ಸಂಗ್ರಹ
ಬೆಂಗಳೂರು: ದೇಶದ ಮುಂಚೂಣಿ ಚಿನ್ನ ಹಾಗೂ ವಜ್ರದಾಭರಣ ತಯಾರಕ ಹಾಗೂ ಮಾರಾಟಗಾರರಾದ ಕೀರ್ತಿಲಾಲ್ಸ್ ಅಕ್ಷಯ ತೃತೀಯಾ ಅಂಗವಾಗಿ ಹೊಸ ಬಗೆಯ ವಿವಿಧ ಶ್ರೇಣಿಗಳ ಚಿನ್ನ ಹಾಗೂ ವಜ್ರದಾಭರಣಗಳ ಹೊಸ ಸಂಗ್ರಹಗಳನ್ನು ಪರಿಚಯಿಸುತ್ತಿದೆ. ನೆಕ್ಲೇಸ್, ಬಳೆಗಳು, ಓಲೆ, ಉಂಗುರ, ವಜ್ರದ ಸೊಂಟದ ಪಟ್ಟಿ ಹಾಗೂ ವಜ್ರದ ಜಡೆ ಶ್ರೇಣಿಯಲ್ಲಿ ನೂತನ ಸಂಗ್ರಹ ಹೊಂದಿದೆ. ಕೀರ್ತಿಲಾಲ್ಸ್ ತನ್ನ ಸಂಗ್ರಹಕ್ಕೆ 2013ರಲ್ಲಿ ಜಿಜೆಎಫ್ ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿಗಾಗಿ ಭಾರತದಾದ್ಯಂತ 101ನಗರಗಳಿಂದ ಪಾಲ್ಗೊಂಡ 312 ಆಭರಣ ತಯಾರಕರು 996 ಆಭರಣವನ್ನು ಸಿದ್ದಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದ ಆಭರಣ ಸಂಗ್ರಹವನ್ನೇ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಗ್ರಾಹಕರು ಅಕ್ಷಯ ತೃತೀಯ ಸಂದರ್ಭದಲ್ಲಿ ತಮ್ಮ ಮನಕ್ಕೊಪ್ಪುವ ವಜ್ರದಾಭರಣವನ್ನು ಆಯ್ಕೆ ಮಾಡಿ ಮುಂಗಡವಾಗಿ ಕಾಯ್ದಿರಿಸಿ ಹಬ್ಬದ ದಿನದಂದು ಮನೆಗೆ ಕೊಂಡೊಯ್ಯಬಹುದಾಗಿದೆ. ಈ ಸಂಗ್ರಹವು 25,000 ಆರಂಭವಾಗಲಿದೆ ಎಂದು ಕೀರ್ತಿಲಾಲ್ಸ್ ಮಳಿಗೆಯ ವ್ಯವಸ್ಥಾಪಕ ರಾಜ್‌ಪಾಲ್ ಕೆ. ಪ್ರಭು ತಿಳಿಸಿದ್ದಾರೆ.
ಟೀಮ್ ಏರೋಬಸ್ಟಾ ವ್ಯಾನ್
ನೋಯ್ಸ್‌ಗೆ ಬಹುಮಾನ
ಟೀಮ್ ಏರೋಬಸ್ಟಾ ವ್ಯಾನ್ ನೋಯ್ಸ್ ಕ್ಯಾಲಿಫೋರ್ನಿಯಾದಲ್ಲಿ ನಡೆದ ಎಸ್‌ಎಇ ಏರೋ ಡಿಸೈನ್ ವೆಸ್ಟ್ 2013ರಲ್ಲಿ ಭಾರತೀಯ ತಂಡಗಳ ಪೈಕಿ ತರಬೇತಿ ಪಡೆದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದೆ. ವಿಶ್ವದಾದ್ಯಂತ ಎಲ್ಲಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ 18ನೇ ಸ್ಥಾನವನ್ನು ಪಡೆದು ಭಾರತದ ಕೀರ್ತಿಪತಾಕೆಯನ್ನು ಬೃಹತ್ ಮಟ್ಟದಲ್ಲಿ ಗರಿಗೆದರುವಂತೆ ಮಾಡಿದೆ. 2011ರ ಮೈಕ್ರೋ ಕ್ಲಾಸ್ ಸ್ಪರ್ಧೆಯ ಭಾಗವಹಿಸುವಿಕೆ ನಂತರ ಟೀಮ್ ಏರೋಬಸ್ಟಾ 2ನೇ ಸ್ಪರ್ಧೆ ಇದಾಗಿದೆ. ಟೀಮ್‌ನಲ್ಲಿ ಪದವಿಪೂರ್ವ, ಪದವಿ ಪಡೆದ ಎಂಜನಿಯರಿಂಗ್ ವಿದ್ಯಾರ್ಥಿಗಳ ಸವಾಲಿನ ಸ್ಪರ್ಧೆಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಕಾರ್ಯಪ್ರವೃತ್ತಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಟೀಮ್ ಏರೋಬಾಸ್ಟಾ ಹೇಳಿಕೊಂಡಿದೆ.
ಇವೋಕ್ ರಿಟೇಲ್ ಮಳಿಗೆ ಆರಂಭ
ಆಕರ್ಷಕ ವಿನ್ಯಾಸದ ಗೃಹಾಲಂಕಾರಿ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಇವೋಕ್ ಇದೀಗ ಸಿಲಿಕಾನ್ ಸಿಟಿಯಲ್ಲಿ ತನ್ನ ರಿಟೇಲ್ ಮಳಿಗೆ ತೆರೆದಿದೆ. ದಕ್ಷಿಣ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 3ನೇ ಮಳಿಗೆಯನ್ನು ನಗರದಲ್ಲಿ ಪ್ರಾರಂಭಿಸಲಾಗಿದೆ. ಇದು ಸೇರಿ ಮಳಿಗೆಗಳ ಸಂಖ್ಯೆ ದೇಶದಾದ್ಯಂತ 17ಕ್ಕೆ ಏರಿದೆ. ಬೆಂಗಳೂರಿನ ಮಳಿಗೆ 13,000ಚದರ ಅಡಿ ವಿಸ್ತೀರ್ಣದಲ್ಲಿ 4 ಹಂತಗಳಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಮಳಿಗೆ ಉದ್ಘಾಟಿಸಿದ ಹಿಂಡ್‌ವೇರ್ ಹೋಮ್ ರಿಟೇಲ್ ಕಂಪನಿಯ ಸಿಇಒ ಸಂದೀಪ್ ಅರೋರಾ ಮಾತನಾಡಿ, ದಕ್ಷಿಣ ಭಾರತದಲ್ಲಿ ನಮ್ಮ ಮಾರುಕಟ್ಟೆ ಸ್ಥಾನವನ್ನು ಗಟ್ಟಿಗೊಳಿಸಬೇಕೆಂಬ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಇವೋಕ್ ಮಳಿಗೆಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಮರದ ಪೀಠೋಪಕರಣ ಹಾಗೂ ಗೃಹಲಂಕಾರಿ ವಸ್ತುಗಳಲ್ಲಿಯೇ ಹೊಸ ಟ್ರೆಂಡ್ ಶುರು ಮಾಡಿದ ಹೆಗ್ಗಳಿಕೆ ನಮ್ಮದು ಎಂದರು.
ಕೆನರಾ ಬ್ಯಾಂಕ್‌ಗೆ ರು. 2872 ಕೋಟಿ ನಿವ್ವಳ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2012- 13 ಮೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2872 ಕೋಟಿ ನಿವ್ವಳ ಲಾಭಗಳಿಸಿರುವ ಬ್ಯಾಂಕ್, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆರ್ಥಿಕ ವರ್ಷದ ಲಾಭಾಂಶ 231 ಕೋಟಿ ಕಡಿಮೆಯಾಗಿದೆ. ಆದರೆ ಕೊನೆಯ ತ್ರೈಮಾಸಿಕದಲ್ಲಿ ಸ್ವಲ್ಪ ಚೇತರಿಕೆಯಾಗಿದ್ದು, ಲಾಭವು 725 ಕೋಟಿಗೆ ಏರಿದೆ. ವಾರ್ಷಿಕ ವರದಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆನರಾ ಬ್ಯಾಂಕ್ ಅಧ್ಯಕ್ಷ ಆರ್.ಕೆ. ದುಬೆ, ಬ್ಯಾಂಕಿನ ಒಟ್ಟು ಠೇವಣಿ 3.55 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಕಳೆದ ಆರ್ಥಿಕ ವರ್ಷಕ್ಕಿಂತ ಶೇ.9.8ರಷ್ಟು ಅಧಿಕ ಸಂಗ್ರಹವಾಗಿದೆ. ವಾರ್ಷಿಕ ಲಾಭದಲ್ಲಿ ಇಳಿಕೆಯಾಗಿದ್ದರೂ ಶೇರುದಾರರಿಗೆ ಶೇ. 130ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 569 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗೆ 50 ಲಕ್ಷ ನೂತನ ಗ್ರಾಹಕರು ಸೇರ್ಪಡೆಯಾಗಿದ್ದು, ಇದರೊಂದಿಗೆ ಬ್ಯಾಂಕ್‌ನ ಒಟ್ಟು ಗ್ರಾಹಕರ ಸಂಖ್ಯೆ 4.70 ಕೋಟಿಗೆ ಏರಿದೆ. ಇದರಲ್ಲಿ 4.17 ಠೇವಣಿ ಖಾತೆ ಹಾಗೂ 53 ಲಕ್ಷ ಸಾಲದ ಖಾತೆಗಳಿವೆ. 2012- 13ನೇ ಆರ್ಥಿಕ ವರ್ಷದಲ್ಲಿ 4006 ಕೋಟಿ ಸಾಲ ಮರುಪಾವತಿಯಾಗಿದೆ ಎಂದು ತಿಳಿಸಿದರು. ಪ್ರಸಕ್ತ ವರ್ಷ 128 ನೂತನ ಶಾಖೆ ಹಾಗೂ 668 ಎಟಿಎಂ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ಎರಡು ಆರ್ಥಿಕ ವರ್ಷದೊಳಗೆ ಇದನ್ನು ಕ್ರಮವಾಗಿ 5 ಸಾವಿರ ಹಾಗೂ 10 ಸಾವಿರಕ್ಕೆ ಏರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಮತ್ತೊಂದೆಡೆ ಒಟ್ಟು ವ್ಯವಹಾರವನ್ನು 7 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ದುಬೆ ಹೇಳಿದರು.
ಇಂಡಿಯನ್ ಬ್ಯಾಂಕ್ ವ್ಯವಹಾರ
ರು. 10 ಸಾವಿರ ಕೋಟಿ ಹೆಚ್ಚಳ
ಇಂಡಿಯನ್ ಬ್ಯಾಂಕ್ ಸ್ವ ಸಹಾಯ ಸಮೂಹ (ಎಸ್‌ಎಚ್‌ಜಿ) ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ತನ್ನ ವ್ಯವಹಾರವನ್ನು 10 ಸಾವಿರ ಕೋಟಿಯಷ್ಟು ಹೆಚ್ಚಿಸಿಕೊಂಡಿದೆ. ಈ ಕುರಿತು ಮಾತನಾಡಿದ ಇಂಡಿಯನ್ ಬ್ಯಾಂಕ್ ಅಧ್ಯಕ್ಷ ಟಿ.ಎಂ. ಭಾಸೀನ್, ಸ್ವ ಸಹಾಯ ಸಮೂಹ ಜತೆಗೆ ಸಂಪರ್ಕ ಕಲ್ಪಿಸಿಕೊಂಡಿರುವುದರಿಂದಾಗಿ ಇಂದು 2100 ಶಾಖೆಗಳು ಹೊಂದಲು ಸಾಧ್ಯವಾಗಿದೆ. 500 ಸ್ವ ಸಹಾಯ ಸಮೂಹದ ಸದಸ್ಯರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿದ್ದೇವೆ. ಬ್ಯಾಂಕಿನ ವಹಿವಾಟು 36,414 ಕೋಟಿ ತಲುಪಿದೆ ಎಂದರು. ಕೃಷಿ ಕ್ಷೇತ್ರದಲ್ಲಿ 17,006 ಕೋಟಿ ವಹಿವಾಟು ನಡೆಸಿದೆ. ಸ್ವ ಸಹಾಯ ಸಮೂಹದಿಂದ ಮಹಿಳೆಯರ ಉದ್ಯೋಗವಕಾಶಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ. ಯುವಕರಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಈ ಬಾರಿ 29 ಎಂಜಿನಿಯರಿಂಗ್ ಪದವೀಧರರನ್ನು ನಮ್ಮ ಬ್ಯಾಂಕ್ ನೇಮಕ ಮಾಡಿಕೊಂಡಿದ್ದೇವೆ ಎಂದರು.
ಜೂಪ್, ಮಾರ್ವೆಲ್ ಕಾಮಿಕ್ಸ್ ಸಹಭಾಗಿತ್ವ
ಟೈಟಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಕ್ಕಳ ಕೈಗಡಿಯಾರ ಬ್ರ್ಯಾಂಡ್ ಜೂಪ್, ಮಾರ್ವೆಲ್ ಕಾಮಿಕ್ಸ್ ಗ್ರೂಪ್‌ನೊಂದಿಗೆ ಕೈಜೋಡಿಸಿದೆ. ಇದರಿಂದಾಗಿ ವಿಶ್ವದ ಅತ್ಯಂತ ಭರವಸೆಯ ಪಾತ್ರ ಆಧಾರಿತ ಮನರಂಜನೆ ಕಂಪನಿ ಮತ್ತು ದೇಶದ ನಂಬರ್ ಒನ್ ಕೈಗಡಿಯಾರ ಉತ್ಪಾದಕ ಹಾಗೂ ರೀಟೇಲರ್‌ಗಳ ಸಹಭಾಗಿತ್ವ ಉದ್ಯಮದಲ್ಲಿ ಹೊಸ ಸಂಚಲನ ಮೂಡಿದೆ. ಈ ಸಹಭಾಗಿತ್ವದ ಮೂಲಕ ಜೂಪ್ ಐರನ್ ಮ್ಯಾನ್ 3 ಸಂಗ್ರಹ ಬಿಡುಗಡೆಗೊಳಿಸಲಿದೆ. ಇದು ಮಾರ್ವೆಲ್ ಸ್ಟುಡಿಯೋಸ್ ಐರನ್‌ಮ್ಯಾನ್ 3ನಿಂದ ಸ್ಪೂರ್ತಿ ಪಡೆದಿದೆ. ಸಹಭಾಗಿತ್ವದ ಕುರಿತು ಮಾತನಾಡಿದ ಟೈಟಾನ್ ಇಂಡಸ್ಟ್ರೀಸ್ ಟೈಟಾನ್ ಮತ್ತು ರೀಟೇಲ್ ವಿಭಾಗದ ಉಪಾಧ್ಯಕ್ಷ ಅಜೊಯ್ ಚಾವ್ಲಾ, ಮಕ್ಕಳೊಂದಿಗೆ ಸಂಪರ್ಕ ಹೊಂದಲು ಅವರ ಜಗತ್ತಿನ ಒಂದು ಭಾಗವಾಗುವುದು ಅತಿಮುಖ್ಯ. ಇದಕ್ಕಾಗಿ ಅನೇಕ ಅಚ್ಚರಿಯ ಸಂಗ್ರಹಗಳನ್ನು ಮಾಡಲಾಗಿದ್ದು, ಮಾರ್ವೆಲ್‌ನ ಸಹಭಾಗಿತ್ವ ನಮ್ಮ ಈ ಧ್ಯೇಯವನ್ನು ಸಾಬೀತುಪಡಿಸುವ ಯತ್ನ ಎಂದು ಹೇಳಿದರು. ಜಾಗತಿಕ ಬ್ರ್ಯಾಂಡ್‌ನೊಂದಿಗಿನ ಈ ವಿಭಿನ್ನ ಸೂಪರ್‌ಹೀರೋಗಳಿಂದ ಸ್ಫೂರ್ತಿ ಪಡೆದ ಅಚ್ಚರಿಯ ಉತ್ಪನ್ನಗಳನ್ನು ನೀಡಲಿದೆ. ಮೇ ಅಂತ್ಯದಲ್ಲಿ ಮೊದಲ ಉತ್ಪನ್ನ ಬಿಡುಗಡೆಗೊಳಿಸಲಿದ್ದೇವೆ ಎಂದರು.
ವಾಲ್‌ಮಾರ್ಕ್ ರಿಯಾಲಿಟಿ ಫಂಡ್-ಸ್ಕೀಮ್
ದಕ್ಷಿಣ ಭಾರತದ ಮುಂಚೂಣಿ ರಿಯಲ್ ಎಸ್ಟೇಟ್ ಉದ್ಯಮ ವಾಲ್‌ಮಾರ್ಕ್ ಇನ್ಫ್ರಾ ಮತ್ತು ರಿಯಾಲಿಟಿ ಟ್ರಸ್ಟ್, ತೇಜ್‌ರಾಜ್ ಗುಲೇಚ್ಛಾ ಪ್ರೊಮೋಟರ್ಸ್ ವತಿಯಿಂದ ಬೆಂಗಳೂರಿನಲ್ಲಿ ವಾಲ್‌ಮಾರ್ಕ್ ಮತ್ತು ಮಾನ್ಯತಾ ಗ್ರೂಪ್ ಜಂಟಿಯಾಗಿ ಐದು ವರ್ಷದ ವಾಲ್‌ಮಾರ್ಕ್ ರಿಯಾಲಿಟಿ ಫಂಡ್-ಸ್ಕೀಮ್ ಅನ್ನು ಪರಿಚಯಿಸುತ್ತಿದೆ. ಇದರ ಹೂಡಿಕೆಯು ಗರಿಷ್ಠ 125 ಕೋಟಿ ಇದೆ. ವಾಲ್‌ಮಾರ್ಕ್ ಗ್ರೂಪ್ ನಿರ್ವಹಣಾ ಸಂಸ್ಥೆ ಕಮರ್ಷಿಯಲ್ ಪ್ರಾಜೆಕ್ಟ್ಸ್, ರೆಸಿಡೆನ್ಷಿಯಲ್ ಮತ್ತು ಅಪಾರ್ಟ್‌ಮೆಂಟ್ಸ್ ಮುಂತಾದ ದೊಡ್ಡ ಮಟ್ಟದ ಪ್ರೊಜೆಕ್ಟ್‌ಗಳನ್ನು ನಿರ್ವಹಿಸುತ್ತಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಈ ಫಂಡ್ ಮೂಲಕ ಗೃಹಸಂಬಂಧಿ ಹೂಡಿಕೆದಾರರ ಮತ್ತು ಕನಿಷ್ಠ ಹೂಡಿಕೆ ಮಾಡುವ ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಶೇ. 15ರಷ್ಟು ವರ್ಷಾಂತ್ಯದಲ್ಲಿ ಕಟ್ಟುವ, ಶೇ. 80ರಷ್ಟು ಶೇರುಗಳ ಮೂಲಕ ಹೂಡಿಕೆ ಹೊಂದಿರುವ ಇದು ಶೇ. 20ರಷ್ಟು ಬಡ್ಡಿರಹಿತ ಹೂಡಿಕೆಯ ಯೋಜನೆಯಾಗಿದೆ. ಯೋಜನೆಗೆ ಈಗಾಗಲೇ 25 ಕೋಟಿಯಷ್ಟು ಸಂಗ್ರಹವಾಗಿದ್ದು, 'ದಿ ಗ್ರೀನ್' ರೆಸಿಡೆನ್ಷಿಯಲ್ ರೀತಿಯಲ್ಲಿ 1278 ಅಪಾರ್ಟ್‌ಮೆಂಟ್ಸ್‌ಗಳನ್ನು 12 ಎಕರೆ ಭೂಮಿಯಲ್ಲಿ ನಿರ್ಮಿಸಲು ಗುರಿ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ಮೈಕ್ರೋ ಮತ್ತು ನ್ಯಾನೋ ಟೆಕ್ನಾಲಜಿ
ಸಹಯೋಗದಲ್ಲಿ ಕಾರ್ಯಾಗಾರ
ಮೈಕ್ರೋ ಮತ್ತು ನ್ಯಾನೋ ಟೆಕ್ನಾಲಜಿ ಸಹಯೋಗದೊಂದಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಇತ್ತೀಚಿಗೆ 3ದಿನಗಳ ಕಾಲ ಕಾರ್ಯಾಗಾರ ನಡೆಯಿತು. ಪದ್ಮಭೂಷಣ ಡಾ.ವಿ.ಕೆ. ಆತ್ರೆ ಮತ್ತು ಡಾ.ಕೆ.ಎನ್. ಭಟ್ ಅವರು ಕಾರ್ಯಾಗಾರ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ. ಆತ್ರೆ, 'ಮೆಮ್ಸ್ ಮತ್ತು ನ್ಯಾನೋ ಟೆಕ್ನಾಲಜಿ', ತಂತ್ರಜ್ಞಾನದ ಹೊಸ ಆವಿಷ್ಕಾರವನ್ನು ಕ್ರೋಡೀಕರಿಸುವುದು ಮತ್ತು ಆಧುನಿಕ ಆವಿಷ್ಕಾರಗಳಲ್ಲಿ ಬದಲಾವಣೆ ತರುವ ದ್ಯೇಯೋದ್ದೇಶ ಹೊಂದಿದೆ. ಅಲ್ಲದೆ, ವಿಶ್ವದ ಬೌತಿಕ ಮಟ್ಟದಲ್ಲಿ ತನ್ನದೇ ವಿಶಿಷ್ಟ ಛಾಪು ರೂಪಿಸುವ ಕನಸನ್ನು ಹೊಂದಿದೆ. ಹೊಸ ಹೊಸ ಆವಿಷ್ಕಾರಗಳ ಮೂಲಕ ಯುವ ಜಗತ್ತಿಗೆ ಅಭಿವೃದ್ಧಿ ತಂತ್ರಜ್ಞಾನವನ್ನು ಬಯೋ- ನ್ಯಾನೋ ಸೈನ್ಸ್ ಸಾರಿ ಹೇಳಲಿದೆ ಎಂದರು.
ಕಾರ್ಪೋರೇಷನ್ ಬ್ಯಾಂಕ್ ಶಾಖೆ ನವೀಕರಣ
ಬೆಂಗಳೂರಿನ ಮಲ್ಲೇಶ್ವರದ ಮಿಷನ್ ಸ್ಟ್ರೀಟ್‌ನಲ್ಲಿ ಕಾರ್ಪೋರೇಷನ್ ಬ್ಯಾಂಕ್ ತನ್ನ ಶಾಖೆಯನ್ನು ನವೀಕರಣಗೊಳಿಸಿದ್ದು, ಎಸ್‌ಎಂವಿ ಸಾಲ ನೀಡುವ ಕೇಂದ್ರವನ್ನು ಬ್ಯಾಂಕಿನ ಅಧ್ಯಕ್ಷರಾದ ಅಜಯ್‌ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ಯಾಂಕ್ ಸಂಕಲ್ಪ ಎಂಬ ಯೋಜನೆ ರೂಪಿಸಿದ್ದು, ಇದು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವ ನಾನಾ ಉಪ ಯೋಜನೆಗಳನ್ನು ಹೊಂದಿದೆ. ಈ ಯೋಜನೆಯನ್ನು ಮೊದಲ ಬಾರಿಗೆ ಮಲ್ಲೇಶ್ವರ ಶಾಖೆಯಲ್ಲಿ ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಲ್ಲೂ ವಿಸ್ತರಿಸುವ ಬಗ್ಗೆ ಚಿಂತಿಸಲಾಗಿದೆ ಎಂದರು. ಈ ಶಾಖೆಯಲ್ಲಿ ಪಾಸ್‌ಬುಕ್‌ಗಳ ಸ್ವಯಂಚಾಲಿತ ಮುದ್ರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಚೆಕ್ ಮತ್ತು ಠೇವಣಿ ಇಡುವವರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರೇಷ್ಮೆ ಮತ್ತು ಕೈಮಗ್ಗದ ಬಟ್ಟೆ ಮಾರಾಟ
ಸಿಲ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ರೇಷ್ಮೆ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಿದ್ದು, ಮೇ 7ರವರೆಗೆ ನಡೆಯಲಿದೆ. ನಗರದ ಇಂದಿರಾನಗರದ 100 ಫೀಟ್ ರಸ್ತೆಯ ಸೆಕೆಂಡ್ ಸ್ಟೇಜ್‌ನಲ್ಲಿರುವ ಎನ್.ಡಿ.ಕೆ. ಕಲ್ಯಾಣ ಮಂದಿರದಲ್ಲಿ ಮೇಳ ನಡೆಯುತ್ತಿದ್ದು, ಕೈಮಗ್ಗದ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು ಹಾಗೂ ರೇಷ್ಮೆ ಸೀರೆ, ದುಪ್ಪಟ್ಟ, ಸಲ್ವಾರ್ ಸೂಟ್ ಇತ್ಯಾದಿಗಳು ಮಾರಾಟಕ್ಕೆ ಲಭ್ಯವಿದೆ. ಆಂಧ್ರಪ್ರದೇಶದ ಚಿರಾಲಿ, ಮಂಗಲಗಿರಿ, ಕಲಾಂಕರಿ, ಗದ್ವಾಲ್ ಸೀರೆಗಳು ಹಾಗೂ ಕರ್ನಾಟಕದ ಕಾಂಜೀವರಮ್ ಮತ್ತು ಉಪ್ಪದ ಬ್ರ್ಯಾಂಡ್‌ಗಳೂ ಇವೆ. ಜತೆಗೆ ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ರಾಜ್ಯಗಳ ವಿವಿಧ ಬ್ರ್ಯಾಂಡ್‌ಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ಸಿಲ್ಕ್ ಆಫ್ ಇಂಡಿಯಾದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.