

ಈ ಬಾರಿಯ ನವರಾತ್ರಿ, ದಸರೆಯ ಹಬ್ಬಕ್ಕೆ ಹೊಸ ಮನೆ, ಕಾರು ಕೊಳ್ಳಬೇಕೆಂದು ಇದ್ದೀರಾ? ಹಾಗಿದ್ದರೆ ನಿಮಗೆ ಕೊಂಚ ನಿರಾಸೆ ಕಾದಿದೆ. ಆರ್ಬಿಐನ ಹೊಸ ಗವರ್ನರ್ ಡಾ. ರಘುರಾಮ್ ರಾಜನ್ ಏಕಾಏಕಿ ರೆಪೋ ದರ ಹೆಚ್ಚಳ ಮಾಡಿದ್ದಾರೆ. ಅದರಿಂದಾಗಿ ಬ್ಯಾಂಕುಗಳು ನೀಡುವ ಸಾಲದ ಬಡ್ಡಿ ದರ ಹೆಚ್ಚಳವಾಗಲಿದೆ. ಹೀಗಾಗಿ ಎಂದಿನಂತೆಯೇ ಇಎಂಐ (ಪ್ರತಿ ತಿಂಗಳ ಸಮಾನ ಕಂತಿನ ಮೊತ್ತ) ಪ್ರಮಾಣ ಹೆಚ್ಚಾಗಲಿದೆ.
ಇತ್ತೀಚೆಗಷ್ಟೇ ಹೊಸ ಹೊಣೆ ಹೊತ್ತಿರುವ ರಘುರಾಮ್, ಅಮೆರಿಕದ ಡಾಲರ್ ಸೇರಿದಂತೆ ಪ್ರಮುಖ ಕರೆನ್ಸಿಗಳ ಎದುರು ಕುಸಿಯುತ್ತಿದ್ದ ರುಪಾಯಿ (ಸದ್ಯ ಅದರ ಮೌಲ್ಯ ಕೊಂಚ ಸ್ಥಿರವಾಗಿದೆ) ಮೇಲೆತ್ತಲು ಹಲವು ಕ್ರಮಗಳನ್ನು ಕೈಗೊಳ್ಳುವರು ಎಂಬ ನಿರೀಕ್ಷೆ ಇತ್ತು. ಹೆಚ್ಚಿನ ಆರ್ಥಿಕ ಬೆಳವಣಿ ಸಾಧಿಸುವ ನಿಟ್ಟಿನಿಂದ ಸಾಲದ ಮೇಲಿನ ಬಡ್ಡಿದರ ತಗ್ಗಿಸಲು ಹಲವು ಕ್ರಮಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ಲ ತಲೆಕೆಳಗಾಗಿದೆ.
ಆದರೆ, ಸಿಹಿ ಸುದ್ದಿ ಏನೆಂದರೆ... ಈ ಹಿಂದಿನಂತೆ ಬಡ್ಡಿದರ ಏರಿಕೆ ಸಂದರ್ಭದಲ್ಲಿ ತ್ರೈಮಾಸಿಕ ಸಾಲ ನೀತಿ ಪರಿಷ್ಕರಣೆ ವೇಳೆ ಸಾಲದ ಮೇಲಿನ ಬಡ್ಡಿದರ ಮಾತ್ರ ಹೆಚ್ಚಳವಾಗುತ್ತಿತ್ತು. ಈಗ ನಿಗದಿತ ಠೇವಣಿಗಳ ಮೇಲೆ ಕೂಡ ಬಡ್ಡಿದರ ಹೆಚ್ಚಳವಾಗಲಿದೆ.
ನಿರೀಕ್ಷೆಗಳೇನಿದ್ದವು?