ಮುಂಬೈ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಕುಸಿತ ಕಂಡುಬಂದಿದೆ.
ಇಂದು ಮಧ್ಯಾಹ್ನ 1.23ರ ಹೊತ್ತಿಗೆ ಬಿಎಸ್ ಇ ಸೆನ್ಸೆಕ್ಸ್ 530 ಅಂಕಗಳಷ್ಟು ಕುಸಿತ ಕಂಡು 27 ಸಾವಿರದ 061ಕ್ಕೆ ತಲುಪಿತ್ತು. ನಿಫ್ಟಿ 174 ಅಂಕಗಳಷ್ಟು ಕುಸಿತ ಕಂಡು 8 ಸಾವಿರದ 369 ಕ್ಕೆ ತಲುಪಿದೆ. ಷೇರುಗಳ ಮಾರಾಟದಲ್ಲಿ ಕೂಡ ತೀವ್ರ ಒತ್ತಡ ಕಂಡುಬಂತು.
ರಿಯಲ್ ಎಸ್ಟೇಟ್, ಆರೋಗ್ಯ ವಲಯ, ಬ್ಯಾಂಕಿಂಗ್ ವಲಯಗಳಲ್ಲಿನ ಷೇರುಗಳಲ್ಲಿ ಕುಸಿತ ಕಂಡುಬಂತು.
ಭಾರತೀಯ ರೂಪಾಯಿ ಮೌಲ್ಯ ಅಮೆರಿಕಾ ಡಾಲರ್ ವಿರುದ್ಧ 23 ಪೈಸೆ ಕುಸಿದು 66 ರೂಪಾಯಿ 85 ಪೈಸೆಯಷ್ಟಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಜೊತೆಗೆ 500 ಮತ್ತು 1000 ರೂಪಾಯಿ ಮುಖಬೆಲೆಯ ಕರೆನ್ಸಿಗಳ ಚಲಾವಣೆಯನ್ನು ಕಳೆದ ಮಧ್ಯರಾತ್ರಿಯಿಂದ ನಿಲ್ಲಿಸುವ ದಿಢೀರ್ ನಿರ್ಧಾರವನ್ನು ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡದ್ದು ಕೂಡ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ.
ಇತ್ತೀಚಿನ ವರದಿ ಬಂದಾಗ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 376 ಅಂಕ ಮತ್ತು ನಿಫ್ಟಿ 142 ಅಂಕ ಕುಸಿತ ಕಂಡುಬಂದಿದೆ.