'ಡಬಲ್ ಇಂಜಿನ್' ಸರ್ಕಾರ ನಡೆಸಲು ಸಾಧ್ಯವಾಗದಿರುವಾಗ ಅಮೀರ್ ಖಾನ್ ಟ್ರಿಪಲ್ ಇಂಜಿನ್ ಓಡಿಸುತ್ತಿದ್ದಾರೆ': 3ನೇ ಮದುವೆ ಬಗ್ಗೆ ಶೇಖರ್ ಸುಮನ್

'ರಾಜಕಾರಣಿಗಳು ಅವರಿಂದ ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.
Gauri Spratt - Aamir Khan
ಗೌರಿ ಸ್ಪ್ರಾಟ್‌ - ಅಮೀರ್ ಖಾನ್
Updated on

ಮುಂಬೈ: ನಟ ಮತ್ತು ನಿರೂಪಕ ಶೇಖರ್ ಸುಮನ್ ಅವರು ಗೌರಿ ಸ್ಪ್ರಾಟ್‌ ಅವರೊಂದಿಗಿನ ಅಮಿರ್ ಖಾನ್ ಅವರ ಮೂರನೇ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ತಮ್ಮ ಯೂಟ್ಯೂಬ್ ಶೋ ಶೇಖರ್ ಟೋನೈಟ್‌ನ ಇತ್ತೀಚಿನ ಕಂತಿನಲ್ಲಿ, 'ಈ ವ್ಯಕ್ತಿ ಇನ್ನೂ ಮುಂಬರುವ ಹಲವಾರು ತಲೆಮಾರುಗಳಿಗೆ ವಿಶಿಷ್ಟವಾದ ದೃಷ್ಟಿಕೋನವನ್ನು ನೀಡಿದ್ದಾರೆ. ಯಾವುದೇ ಆದರೂ ನೀವು ಅದನ್ನು ಸಾಧಿಸುವವರೆಗೆ ಬೆನ್ನಟ್ಟುವುದೇ ಆ ದೃಷ್ಟಿಕೋನವಾಗಿದೆ' ಎಂದು ಅವರು ಹೇಳಿದರು.

'ವಿಶೇಷವಾಗಿ ರಾಜಕಾರಣಿಗಳು ಅವರಿಂದ (ಅಮೀರ್) ಬಹಳಷ್ಟನ್ನು ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.

ಗೌರಿ ಸ್ಪ್ರಾಟ್‌ ಅವರೊಂದಿಗಿನ ವಿವಾಹದ ಬಗ್ಗೆ ಮಾತನಾಡುವ ಮೊದಲು ಶೇಖರ್ ಅವರು, ರೀನಾ ದತ್ತಾ ಮತ್ತು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರೊಂದಿಗೆ ಅಮೀರ್ ಖಾನ್ ಅವರ ಮೊದಲ ಎರಡು ವಿವಾಹಗಳ ಬಗ್ಗೆ ಪ್ರಸ್ತಾಪಿಸಿದರು.

ಎರಡು ವಿಫಲ 'ಮೈತ್ರಿ'ಗಳ ನಂತರ, ಮೂರನೆಯದನ್ನು 'ಮಹಾಮೈತ್ರಿ' (ಮಹಾಘಠಬಂಧನ್) ಎಂದು ಕರೆಯಬೇಕು. 'ನಮ್ಮ ಸರ್ಕಾರವೇ 'ಡಬಲ್ ಇಂಜಿನ್' ಅನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ, ಇನ್ನು ಅವರು ಈಗ 'ಟ್ರಿಪಲ್ ಇಂಜಿನ್' ಅನ್ನು ನಡೆಸುತ್ತಿದ್ದಾರೆ' ಎಂದು ಅವರು ವ್ಯಂಗ್ಯವಾಡಿದರು.

'ಆಪ್ನೇ ಗೌರಿ... ಒಂದು ನಿಮಿಷ... ಗೌರ್ ಕಿಯಾ ಹೋಗಾ' ಎಂದು ತಮ್ಮ ಟ್ರೇಡ್‌ಮಾರ್ಕ್ ಪದಪ್ರಯೋಗವನ್ನು ಮುಂದುವರೆಸುತ್ತಾ, 'ಅವರ ಪ್ರತಿಭೆ ಊಹಿಸಲೂ ಸಾಧ್ಯವಿಲ್ಲ. ಅವರು ವಿಶಿಷ್ಟರು. ಅವರು ಪೆಟ್ರೋಲ್, ಎಥೆನಾಲ್ ಮತ್ತು ಐಸೊಬುಟನಾಲ್ ಅನ್ನು ಒಟ್ಟಿಗೆ ಬೆರೆಸಿದ ಎಂಜಿನ್‌ನಂತಿದ್ದಾರೆ. ಆದರೆ, ಅದರ ಹೊರತಾಗಿಯೂ, ಈ ಎಂಜಿನ್ ಇನ್ನೂ ನಿಂತಿಲ್ಲ ಮತ್ತು ಹೊಸ ಗಮ್ಯಸ್ಥಾನದ ಕಡೆಗೆ ಹಳಿಗಳಲ್ಲಿ ಸರಾಗವಾಗಿ ಚಲಿಸುತ್ತಿದೆ' ಎಂದು ಅವರು ಹೇಳಿದರು.

Gauri Spratt - Aamir Khan
61ನೇ ವಯಸ್ಸಿನಲ್ಲಿ 3ನೇ ಮದುವೆ: ಕುಟುಂಬಸ್ಥರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗೌರಿ ಸ್ಪ್ಯ್ರಾಟ್‌ ಕೈಹಿಡಿದ ಬಾಲಿವುಡ್ ನಟ ಆಮೀರ್ ಖಾನ್! FIRST Pic ವೈರಲ್

'ಅಮೀರ್ ಖಾನ್ ಮೂರನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದ್ದಾರೆ. ಅಮೀರ್ ಖಾನ್ ಅವರೇನು ಎನ್‌ಡಿಎ (NDA) ಸರ್ಕಾರವೇ? ನೆಹರೂ ಅವರ ದಾಖಲೆಯನ್ನು ಮುರಿದಿದ್ದೇನೆ ಎಂದುಕೊಳ್ಳುತ್ತಿದ್ದ ಪ್ರಧಾನಿ ಮೋದಿ ಕೂಡ, ಈಗ ಅಮೀರ್ ಖಾನ್ ರೂಪದಲ್ಲಿ ತಮಗೆ ಹೊಸ ಪ್ರತಿಸ್ಪರ್ಧಿ ಎದುರಾಗಿದ್ದಾರೆ ಎಂದು ಯೋಚಿಸುತ್ತಿರಬಹುದು' ಎಂದು ಕಾಲೆಳೆದರು.

ಅಮೀರ್ ಅವರ ಹಿಂದಿನ ಸಂಬಂಧಗಳಿಂದ ಜನಿಸಿದ ಮಕ್ಕಳು ಅವರ ಮದುವೆಯಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿದ ಅವರು, ಇದನ್ನು 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಪರಿಕಲ್ಪನೆಗೆ ಒಂದು ಉದಾಹರಣೆಯಾಗಿದೆ. ಹಳೆಯ ಮಿತ್ರಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗುವ ಬಗೆಯನ್ನು ಅಮೀರ್ ಅವರಿಂದ 'ಇಂಡಿಯಾ' (INDIA Bloc) ಮೈತ್ರಿಕೂಟವು ಕಲಿಯಬೇಕು ಎಂದೂ ತಮಾಷೆಯಾಗಿ ಹೇಳಿದರು.

'ಈಗ ನನಗೆ ಅರ್ಥವಾಯಿತು, ಅವರನ್ನು 'perfectionist' ಎಂದು ಏಕೆ ಕರೆಯುತ್ತಾರೆಂದು. ಅವರು ಪರಿಪೂರ್ಣರಾಗುವವರೆಗೂ ಏನಾದರೂ ಮಾಡುತ್ತಲೇ ಇರುತ್ತಾರೆ. ನಮಗೆಲ್ಲರಿಗೂ ತಿಳಿದಿರುವಂತೆ, ಪರಿಪೂರ್ಣತೆ ಕಿ ಕೋಯಿ ಸೀಮಾ ನಹಿ ಹೋತಿ... ಸೀಮಾ ಛೋಡಿಯೇ, ಕೋಯಿ ರೀನಾ, ಕೋಯಿ ಕಿರಣ್ ನಹಿ ಹೋತಿ' ಎಂದು ಶೇಖರ್ ಮತ್ತೊಂದು ಪಂಚ್‌ಲೈನ್‌ನೊಂದಿಗೆ ಮುಗಿಸಿದರು.

ಅಮೀರ್ ಖಾನ್ ಜುಲೈ 5 ರಂದು ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಆಪ್ತರ ಸಮ್ಮುಖದಲ್ಲಿ ಗೌರಿ ಸ್ಪ್ರಾಟ್‌ ಅವರನ್ನು ವಿವಾಹವಾದರು. 2025ರ ಮಾರ್ಚ್‌ನಲ್ಲಿ ನಡೆದ ತಮ್ಮ 60ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ನಟ ಮೊದಲ ಬಾರಿಗೆ ಗೌರಿ ಅವರೊಂದಿಗಿನ ತಮ್ಮ ಸಂಬಂಧವನ್ನು ದೃಢಪಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com