ಸಿನಿಮಾ ಲೇಖನ

ಹೊಸ ಜೋಷ್‌ನಲ್ಲಿ ಶಿವಮಣಿ

ಹೊಸ ಜೋಷ್‌ನಲ್ಲಿ ಶಿವಮಣಿ
ಶಿವಮಣಿ, ಸುನೀಲ್ ಕುಮಾರ್ ದೇಸಾಯಿ
Published On :

ಒಂದು ಸಿನಿಮಾ ಸೋತ ಮೇಲೆ ಚಿತ್ರರಂಗದಿಂದ ದೂರವಿರುವುದು ಸರ್ವೇ ಸಮಾನ್ಯ. ಆದರೆ ಬರೀ ಹೊಸಬರನ್ನೇ ಇಟ್ಟುಕೊಂಡು ತಮ್ಮ ಎಂದಿನ ಶೈಲಿ ಬಿಟ್ಟು ಹೊಸತನದ ಜೋಷ್ ಎಂಬ ಚಿತ್ರ ಮಾಡಿ ದೊಡ್ಡ ಗೆಲುವು ಕಂಡಮೇಲೂ ಶಿವಮಣಿಯಂಥ ನಿರ್ದೇಶಕರು ಚಿತ್ರರಂಗದಿಂದ ದೂರ ಇದ್ದಿದ್ದು ಯಾಕೆ? ಎಂದರೆ ಜೋಷ್ ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗಿದ್ದೆ ಎನ್ನುತ್ತಾರೆ ಶಿವಮಣಿ. ಒಂಥರಾ ಖಾಲಿ, ಖಾಲಿ ಅನ್ನಿಸುತ್ತಿತ್ತು. ಒಂದರ ಹಿಂದೆ ಒಂದು ಚಿತ್ರದಂತೆ ಸತತವಾಗಿ ಕೆಲಸ ಮಾಡುತ್ತಿದ್ದರೆ ಯೋಚನೆ ಮಾಡಲು ಸಮಯ ಸಿಗುವುದಿಲ್ಲ ಎನ್ನುವ ಅವರ ಮಾತಿನಲ್ಲೇ ಅವರೊಳಗಿನ ನಿರ್ದೇಶಕ ಎದ್ದು ಕಾಣುತ್ತಾನೆ. ಒಂದು ದೊಡ್ಡ ನದಿ ಈಜಿದ ಮೇಲೆ ದಡದಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎನಿಸುತ್ತದಲ್ಲ ಅಂಥ ಗ್ಯಾಪ್ ಇದು. ಬಹಳ ದಿನಗಳಿಂದ ಆ ಬಗ್ಗೆ ಯೋಚಿಸುತ್ತಿದ್ದೆ. ಜೋಷ್ ಗೆದ್ದ ಮೇಲೆ ಇದೇ ಸರಿಯಾದ ಸಮಯ ಎನಿಸಿತು. ಹಾಗಾಗಿ ಸ್ವಲ್ಪ ದಿನ ದೂರ ಇದ್ದೆ ಎನ್ನುತ್ತಾರೆ ಶಿವಮಣಿ. ಆದರೆ ಈ ಗ್ಯಾಪ್‌ನಲ್ಲಿ ಅವರು ಕೇವಲ ವಿಶ್ರಾಂತಿ ಪಡೆದಿಲ್ಲ. ಕೆಲಸದಲ್ಲಿನ ಬದಲಾವಣೆಯೇ ವಿಶ್ರಾಂತಿ ಎನ್ನುವಂತೆ, ಹಲವು ಪುಸ್ತಕಗಳನ್ನು ಓದಿದ್ದಾರೆ, ಹಲವು ಹೊಸ ಬರಹಗಾರರನ್ನು ಭೇಟಿ ಮಾಡಿ ಫ್ರೆಷ್ ಆಗಿದ್ದಾರೆ. ಈ ಮಧ್ಯೆ ಒಂದು ಟಿವಿ ಧಾರಾವಾಹಿಯಲ್ಲೂ ತಮ್ಮ ಕ್ರಿಯಾಶೀಲತೆ ತೋರಿಸಿದ್ದಾರೆ.
 ಎಲ್ಲ ತಂತ್ರಜ್ಞರಿಗೂ ಇಂಥ ಬ್ರೇಕ್‌ನ ಅಗತ್ಯವಿದೆ ಎನ್ನುವುದು ಶಿವಮಣಿ ಅವರ ಅನುಭವದ ಮಾತು. ಇದುವರೆಗೆ 28 ಸಿನಿಮಾ ಮಾಡಿದ್ದೇನೆ. ಈ ವಿಶ್ರಾಂತಿಯಿಂದಾಗಿ ಈಗ ಇನ್ನೊಂದಿಪ್ಪತ್ತೈದು ಸಿನಿಮಾ ಮಾಡುವಷ್ಟು ಎನರ್ಜಿ ಬಂದಿದೆ ಎನ್ನುತ್ತಾ ಹೊಸಾ ಜೋಷ್‌ನಲ್ಲಿರುವ ಅವರಿಗೆ ಜೋಷ್‌ನ ನಂತರ ಅಂಥದ್ದೇ ಸಿನಿಮಾ ಮಾಡಲು ಹತ್ತಾರು ಆಫರ್‌ಗಳು ಬಂದವಂತೆ. ಆದರೆ ಅವರು ಮೊದಲೇ ಈ ಗ್ಯಾಪ್‌ನ ಬಗ್ಗೆ ನಿರ್ಧಾರ ಮಾಡಿದ್ದರಿಂದ ಅದ್ಯಾವುದನ್ನೂ ಒಪ್ಪಿಕೊಂಡಿಲ್ಲ.
ಏಕೆಂದರೆ ನನಗೆ ಹೊಸ ಥರದ ಸಿನಿಮಾ ಮಾಡಬೇಕಿತ್ತು ಎನ್ನುವ  ಶಿವಮಣಿ ಈಗ ಅಂಥದ್ದೇ ಹೊಸತನದ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ನಾಯಕ ದುನಿಯಾ ವಿಜಯ್. ಚಿತ್ರಕ್ಕೆ ಸಿಂಹಾದ್ರಿ ಎಂಬ ಹೆಸರಿಡುವ ಯೋಚನೆ ಇದೆ. ಕಳೆದ ವರ್ಷದ ಅಂತ್ಯದಲ್ಲೇ ಮತ್ತೆ ಸಿನಿಮಾ ಶುರು ಮಾಡಬೇಕು ಎಂದುಕೊಂಡವರು, ಈಗ ಅದನ್ನು ಕಾರ್ಯಗತ ಮಾಡಿದ್ದಾರೆ. ಅಂದಹಾಗೆ ಮತ್ತೆ ಅವರಲ್ಲಿ ಸಿನಿಮಾ ಜೋಷ್ ಹುಟ್ಟಲು ಕಾರಣ ತೆಲುಗಿನ ಮಹೇಶ್‌ಬಾಬು ಅಭಿನಯದ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೆ ಚೆಟ್ಟು ಚಿತ್ರ. ಹಾಗಂತ ಶಿವಮಣಿ ಆ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ ಎಂದು ಅವಸರದ ನಿರ್ಧಾರಕ್ಕೆ ಬರುವ ಅಗತ್ಯವಿಲ್ಲ. ಆ ಚಿತ್ರ ಕೇವಲ ಶಿವಮಣಿಯವರನ್ನು ಮತ್ತೆ ಸಿನಿಮಾ ಮಾಡುವಂತೆ ಪ್ರೇರೇಪಿಸಿದೆ ಅಷ್ಟೆ. ಆ ಚಿತ್ರ ನೋಡಿದ ಮೇಲೆ ಇಂದು ಅಂಥ ಕಥೆಗಳ ಅಗತ್ಯವಿದೆ ಎನ್ನಿಸಿತು. ಅದರಲ್ಲಿ ನಮ್ಮ ಸಂಸ್ಕೃತಿ  ಇದೆ, ಮೌಲ್ಯವಿದೆ, ಹಳ್ಳಿ ಮಣ್ಣಿನ ವಾಸನೆ ಇದೆ. ಈಗೀಗ ಮಾನವೀಯ ಸಂಬಂಧಗಳಿಗೆ ಒತ್ತು ಕೊಡುವ ಚಿತ್ರಗಳು ಕಡಿಮೆ. ಎಲ್ಲರೂ ಕೇವಲ ನಗರ ಕೇಂದ್ರಿತ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಹಾಗಾಗಿ ಅಂಥದೊಂದು ಹೊಸ ಅನುಭವ ಕೊಡುವ ಸಿನಿಮಾ ಮಾಡುವ ಆಸೆಯನ್ನು ಆ ಚಿತ್ರ ನನ್ನಲ್ಲಿ ತುಂಬಿತು. ಇಲ್ಲಿಯವರೆಗೂ ಹಲವಾರು ವೆರೈಟಿ ಚಿತ್ರಗಳನ್ನು ಮಾಡಿದ್ದೇನೆ. ಆದರೆ ಅಂಥ ಚಿತ್ರ ಮಾಡಿರಲಿಲ್ಲ. ಹಾಗಾಗಿ ಅದೇ ಕಾನ್ಸೆಪ್ಟ್‌ನ ಸಿಂಹಾದ್ರಿ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ ಅಂತಾರೆ ಶಿವಮಣಿ. ವಿಜಿ ಒಳ್ಳೆಯ ನಟ, ಅವರ ಸಾಮಥ್ಯವನ್ನು  ವಿಭಿನ್ನವಾಗಿ ಬಳಸಿಕೊಳ್ಳುವ ಆಸೆ ನನ್ನದು ಎನ್ನುವ ಅವರು ಚಿತ್ರಕ್ಕೆ ಅರ್ಜುನ್ ಜನ್ಯ ಅವರಿಂದ ಸಂಗೀತ ನಿರ್ದೇಶಕ ಮಾಡಿಸುವ ಯೋಚನೆಯಲ್ಲಿದ್ದಾರೆ. ಮುಂದಿನ ತಿಂಗಳು ಚಿತ್ರ ಸೆಟ್ಟೇರಲಿದೆ. ಆರ್.ಎಸ್.ಗೌಡ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದಷ್ಟೇ ಅಲ್ಲದೆ, ಈ ಗ್ಯಾಪ್‌ನಲ್ಲಿ ನಿರ್ದೇಶನ ಮಾಡದಿದ್ದರೂ ಒಂದಷ್ಟು ಚಿತ್ರಕಥೆಗಳನ್ನು ಬರೆದಿರುವ ಶಿವಮಣಿ, ಉಪೇಂದ್ರ, ಯಶ್, ದರ್ಶನ್ ಅವರಿಗಾಗಿ ಸಿನಿಮಾ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. 

ರಾಗ ಬದಲಿಸಿದ ದೇಸಾಯಿ
ಆರು ವರ್ಷಗಳ ನಂತರ.....

ಕ್ಷಣ ಕ್ಷಣ ಚಿತ್ರದ ನಂತರ, ಈಗ ಬರ್ತೀನಿ, ಆಗ ಬರ್ತೀನಿ ಎನ್ನುತ್ತಾ ದೇಸಾಯಿ ತಮ್ಮ ಅಭಿಮಾನಿಗಳಲ್ಲಿ ಆಸೆ ಹುಟ್ಟಿಸುತ್ತಲೇ ಇದ್ದವರು. ಅವರ ಮಾತು ಕೇಳಿ ಆಗಾಗ ಪ್ರೇಕ್ಷಕರು ದೇಸಾಯಿ ಆಗಮನಕ್ಕಾಗಿ ಕ್ಷಣಗಣನೆ ಮಾಡುತ್ತಲೇ ಇದ್ದರು. ಆದರೆ ಅದಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ. ಈಗ 'ತಂದಾನಾ ತಂದನಾನ' ಹಾಡುವ ಸಮಯ ಕೂಡಿಬಂದಿದೆ. ಹಾಗಾಗಿ, ತಮ್ಮ ನೆಚ್ಚಿನ ನಟರಾದ ಅನಂತ್‌ನಾಗ್,  ರಮೇಶ್ ಮುಂತಾದವರೊಂದಿಗೆ ದೇಸಾಯಿ ಮತ್ತೆ ಕಳೆಗಟ್ಟಿದ್ದಾರೆ.
ಹಲವು ದಿನಗಳಿಂದ 'ಸರಿಗಮಪ' ಹಾಡುತ್ತಿದ್ದ ದೇಸಾಯಿ ಈಗ ರಾಗ ಬದಲಾಯಿಸಿದ್ದಾರೆ ಎನ್ನಬಹುದು. ಏಕೆಂದರೆ ಈಗ 'ಸರಿಗಮಪ' ಚಿತ್ರವನ್ನು ಬಿಟ್ಟು 'ತಂದಾನಾ ತಂದನಾನಾ' ಹಾಡಲು ಅವರು ರೆಡಿ. ಮತ್ತೆ ಯಾವ ಎಡವಟ್ಟೂ ಆಗಬಾರದು ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು, ಪಕ್ಕಾ ಮನರಂಜನೆಗೆ ಸಿದ್ಧವಾಗಿದ್ದಾರಂತೆ. ದೇಸಾಯಿ ಎಂಬ ದೈತ್ಯ ಪ್ರತಿಭೆಯ ಜೊತೆ ಹಿರಿಯ ಛಾಯಾಗ್ರಾಹಕ ಭಾಸ್ಕರ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಎಂಬ ಇನ್ನೆರಡು ಲೆಜೆಂಡ್‌ಗಳು ಸೇರಿಕೊಂಡಿರುವುದು ಈ ಚಿತ್ರದ ವಿಶೇಷ.
ಕೆಲವು ವರ್ಷಗಳಿಂದ ಹಲವು ಸಂಕಷ್ಟಗಳನ್ನು ಅನುಭವಿಸುತ್ತ ಬಂದಿದ್ದರೂ ದೇಸಾಯಿ ಅವರ ಈ ಚಿತ್ರದಲ್ಲಿ ಯಾವುದೇ ನೆಗೆಟಿವ್ ಅಂಶಗಳು ಇಲ್ಲವಂತೆ. ಅಶ್ಲೀಲ, ಅಸಹ್ಯ, ಅನಿಷ್ಟಗಳಿಗೆ ಇಲ್ಲಿ ಜಾಗವೇ ಇಲ್ಲ ಎನ್ನುವ ಅವರ ಚಿತ್ರದಲ್ಲಿ ವಿಲನ್ ಕೂಡಾ ಇಲ್ಲವಂತೆ. ಹುಟ್ಟು, ಸಾವು, ಬದುಕು ಮತ್ತು ಅವುಗಳನ್ನು ಮೀರಿದ ವ್ಯಾಪ್ತಿ ಈ ಚಿತ್ರದ ಕಥೆಯಲ್ಲಿದೆಯಂತೆ.
  ಮೊನ್ನೆ ನಡೆದ ಚಿತ್ರದ ಮುಹೂರ್ತದ ವೇಳೆಯಲ್ಲಿ ದೇಸಾಯಿ ಮತ್ತೆ ಬಂದಿರುವುದು ತುಂಬಾ ಖುಷಿಯ ಸಂಗತಿ ಎಂದಿದ್ದು ಅವರ ಹಳೆಯ ಸಂಗಾತಿ ಅನಂತ್‌ನಾಗ್. ಶಂಕರ್‌ನಾಗ್ ಜೊತೆಯಲ್ಲಿದ್ದಾಗಿನಿಂದ ನೋಡಿದ್ದೇನೆ. ದೇಸಾಯಿ ಒಬ್ಬ ಜೀನಿಯಸ್. ಈಗ ಅವರು ಒಂದಿಷ್ಟು ಬದಲಾಗಿದ್ದಾರೆ. ಅವರನ್ನು ನೋಡುವುದೇ ಒಂದು ಖುಷಿ ಎನ್ನುತ್ತಾರೆ ಅನಂತ್.
ಮತ್ತೊಮ್ಮೆ ದೇಸಾಯಿಗೆ ಜೊತೆಯಾಗಿರುವ ರಮೇಶ್ ಕೂಡ, ಈ ಚಿತ್ರಕ್ಕೆ ದೇಸಾಯಿ ಬರೆದಿರುವಂಥ ಸ್ಕ್ರಿಪ್ಟ್ ಅನ್ನು ನಾನು ಯಾವುದೇ ಭಾರತೀಯ ಚಿತ್ರದಲ್ಲೂ ಇದುವರೆಗೆ ನೋಡಿಲ್ಲ ಎನ್ನುತ್ತಾರೆ. ಉಳಿದಂತೆ ರಮೇಶ್ ಭಟ್, ಶಿವರಾಂ, ಗೋವಿಂದರಾವ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ನಾಯಕಿಯರಾಗಿ ಮೈತ್ರೇಯಿ ಮತ್ತು ಕವಿತಾ ಪ್ರಿಯಾ ಇದ್ದಾರೆ. ಚಿದಂಬರಂ, ಪ್ರಕಾಶ್, ಶ್ರೀನಿವಾಸ್ ತಂದಾನಾ, ತಂದನಾನಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಹೊತ್ತಿಗೆ ದೇಸಾಯಿ ಚಿತ್ರ ತೆರೆಯ ಮೇಲೆ ಮೂಡಿಬರಲಿದೆಯಂತೆ.


-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.