ಬೇಬಿ ಸಿಂಧು

ಬಣ್ಣ ಹಚ್ಚಿದ್ದು ಬಾಲ ನಟನಾಗಿ. ಆದರೆ ಕ್ಯಾಮೆರಾ ಜಗತ್ತು ಗುರುತಿಸಿದ್ದು ಮಾತ್ರ ಬಾಲ ನಟಿಯಾಗಿ! ಬಾಲಕಿಯಾದರೂ ಬಾಲಕನ ಪಾತ್ರಗಳಲ್ಲಿ ಸೈ ಎನ್ನಿಸಿಕೊಂಡ ಈ ಚೈಲ್ಡ್ ಆರ್ಟಿಸ್ಟ್ ಈಗ ದೊಡ್ಡ ಕಲಾವಿದೆ.
ಬೇಬಿ ಸಿಂಧು
Updated on: 

ನಟಿ ಸಿಂಧು ಚೇತನ್ ನಿಮ್ಗೆ ಗೊತ್ತೇ? ಎಂದರೆ 'ಯಾರು ಆಕೆ?' ಅನ್ನೋರೇ ಹೆಚ್ಚು. ಆದರೆ 'ಬೇಬಿ ಸಿಂಧು ನೆನಪಿದೆಯಲ್ಲ ಅಂದ್ರೆ', 'ಓಹ್... ಗೊತ್ತು ಗೊತ್ತು' ಎಂದು ಎನ್ನುತ್ತಲೇ 'ನಾನೆಂದೂ ನಿಮ್ಮವನೆ', 'ರಾಯರು ಬಂದರು ಮಾವನ ಮನೆಗೆ', 'ಟೈಮ್‌ಬಾಂಬ್‌', 'ಕಿಡ್ನಾಪ್‌', 'ಮಿ. ಮಹೇಶ್‌', 'ರಾಜಾ', 'ಮದರ್ ಇಂಡಿಯಾ', 'ಒಂದಾಗೋಣ ಬಾ' ಮುಂತಾದ ಚಿತ್ರಗಳನ್ನು ನೆನಪಿಸಿಕೊಳ್ತಾರೆ. ಹೌದು, ಅದೇ ಬೇಬಿ ಸಿಂಧು ಈಗ ಕಿರುತೆರೆಯಲ್ಲೂ ನಂ.1 ತಂಗಿ. ಆರು ವರ್ಷಕ್ಕೆ ಕ್ಯಾಮೆರಾ ಮುಂದೆ ನಿಂತ ಸಿಂಧು ಚೇತನ್ ಅಲ್ಲಲ್ಲ, ಬೇಬಿ ಸಿಂಧುಳ ಸಿನಿಮಾ ಜೀವನಕ್ಕೆ ಈಗ 23 ವರ್ಷ. 85ಕ್ಕೂ ಹೆಚ್ಚು ಚಿತ್ರಗಳಲ್ಲಿ, 15ಕ್ಕೂ ಹೆಚ್ಚು ಧಾರಾವಾಹಿ ನಟಿಸಿದ್ದಾರೆ.    
'ನಮ್ಮ ಕುಟುಂಬದಲ್ಲಿ ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ನಿರ್ದೇಶಕ ಫಣಿರಾಮಚಂದ್ರ 'ನಾನೆಂದೂ ನಿಮ್ಮವನೆ' ಚಿತ್ರದಲ್ಲಿ ಬಾಲ ಕಲಾವಿದರ ಪಾತ್ರಕ್ಕಾಗಿ ಹುಡುಕುತ್ತಿದ್ದಾಗ ನಮ್ಮ ಅಜ್ಜಿ ಕರೆದುಕೊಂಡು ಹೋಗಿ ಫಣಿ ಸಾರ್ ಅವರಿಗೆ ತೋರಿಸಿದರು. ಮೊದಲ ಚಿತ್ರದಲ್ಲೇ ಬಾಲಕನ ಪಾತ್ರ ಮಾಡಿದಾಕೆ ನಾನು! ನಂತರ 'ರಾಯರು ಬಂದರು ಮಾವನ ಮನೆಗೆ' ಚಿತ್ರದಲ್ಲೂ ಬಾಲಕನ ಪಾತ್ರವೇ. ಹೀಗೆ ಏಳೆಂಟು ಚಿತ್ರಗಳಲ್ಲಿ ಸತತವಾಗಿ ಬಾಲ ನಟನಾಗಿ ಅಭಿನಯಿಸಿದ ಅದೃಷ್ಟ ನಟಿ ನಾನು!' ಎನ್ನುವ ಸಿಂಧುಗೆ ಮದ್ವೆಯಾಗಿದ್ದರೂ ಪ್ರೇಕ್ಷಕರ ಪಾಲಿಗೆ ಈಕೆ ಈಗಲೂ 'ಬೇಬಿ'ನೇ!
'ಮಾಂಗಲ್ಯ' ಚಿತ್ರದ ಮೂಲಕ ಕಿರುತೆರೆ ಪ್ರವೇಶಿಸಿದರು. 'ರಂಗೋಲಿ' ಧಾರಾವಾಹಿಯಲ್ಲಿ ಮಾಡಿದ ಆರತಿ ಪಾತ್ರ ತುಂಬಾ ಹೆಸರು ತಂದುಕೊಟ್ಟಿತು. ಇತ್ತೀಚೆಗೆ 'ಎರಡನೆ ಮದುವೆ', 'ಆಪ್ತರಕ್ಷಕ', 'ರೆಬೆಲ್‌' ಚಿತ್ರಗಳಲ್ಲೂ ಅಭಿನಯಿಸಿರುವ ಸಿಂಧು ಕನ್ನಡ ಚಿತ್ರಲೋಕದ ಅಮುಲ್‌ಬೇಬಿ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com