ಸಿನಿಮಾ ಲೇಖನ

ಗುಂಪಲ್ಲಿ ಜನತಾ ದರ್ಶನ

ಗುಂಪಲ್ಲಿ ಜನತಾ ದರ್ಶನ
Published On :

ಚಂದನವನದಲ್ಲಿ ಇತ್ತೀಚೆಗೆ ಸ್ಟಾರ್‌ಗಳ ಚಿತ್ರಗಳು ಯಶಸ್ಸಿನ ಬರ ಅನುಭವಿಸುತ್ತಿದ್ದರೆ, ಹೊಸಬರನ್ನು 'ಸ್ನೇಹಿತರೇ ನಿಮಗೆ ಸ್ವಾಗತ' ಎಂದು ತೆರೆದ ಬಾಹುಗಳಿಂದ ಬರಮಾಡಿಕೊಳ್ಳುತ್ತಿದ್ದಾನೆ ಕನ್ನಡ ಪ್ರೇಕ್ಷಕ.

ಸದ್ಯಕ್ಕೆ ಶಿವರಾಜ್‌ಕುಮಾರ್ 'ಅಂದರ್‌ಬಾಹರ್‌' ಚಿತ್ರದ ಮೂಲಕ ಮತ್ತೊಂದು ಗ್ಯಾಂಬ್ಲಿಂಗ್‌ಗೆ ರೆಡಿಯಾಗುತ್ತಿದ್ದರೆ, 'ಟೋಪಿ' ಹಾಕಿಕೊಂಡು ಉಪೇಂದ್ರ ಸಿದ್ಧರಾಗಿದ್ದಾರೆ. ಇನ್ನು ಸುದೀಪ್ 'ಬಚ್ಚನ್‌' ಅವತಾರದಲ್ಲಿ ಕಾಣುತ್ತಿದ್ದರೆ 'ಸಂಗೊಳ್ಳಿರಾಯಣ್ಣ'ನ ನಂತರ ದರ್ಶನ್ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗಲು ಇನ್ನೂ ಸಮಯವಿದೆ. ಈ ಗ್ಯಾಪ್ ಅನ್ನು ಸರಿಯಾಗಿ ಬಳಸಿಕೊಂಡು ಹೊಸಬರು ಮಿಂಚುತ್ತಿರುವುದು ಮಾತ್ರ ನಿಜಕ್ಕೂ
ಗಾಂಧಿನಗರಕ್ಕೆ ಒಂದು ಟಾನಿಕ್ ಇದ್ದಂತೆ. ಅಲ್ಲದೆ ಹೊಸಬರ ಈ ಪ್ರಯತ್ನಕ್ಕೆ ಎಲ್ಲಡೆಯಿಂದ ಹೊಗಳಿಕೆ ಸಂದಾಯವಾಗುತ್ತಿರುವುದು ಇನ್ನೂ ದೊಡ್ಡ ವಿಷಯ. ರವಿಚಂದ್ರನ್‌ರಂಥ ಸೀನಿಯರ್ ನಟರು ಕೂಡ ಸಿನಿಮಾ ಮಾಡುವುದಕ್ಕಿಂತ ಹೊಸಬರ ಸಿನಿಮಾಗಳನ್ನು ನೋಡುವುದರಲ್ಲೇ ಹೆಚ್ಚು ಬ್ಯುಸಿಯಾಗಿರುವುದು ನಿಜಕ್ಕೂ ಈ ಹೊಸ ಪ್ರತಿಭೆಗಳಿಗೂ ಮತ್ತು ಚಿತ್ರರಂಗಕ್ಕೂ ಉತ್ಸಾಹ ತುಂಬುವ ಸಂಗತಿ.

ಕಳೆದ ಆರು ತಿಂಗಳಲ್ಲಿ ಶಿವರಾಜ್‌ಕುಮಾರ್, ಪುನೀತ್, ಸುದೀಪ್, ಉಪೇಂದ್ರರ ಕೆಲವು ಚಿತ್ರಗಳು ಬಿಡುಗಡೆಯಾಗಿದವು. ಚಿತ್ರದ ಬಿಡುಗಡೆಯ ದಿನ ಚಿತ್ರಮಂದಿರದ ಹೊರಗೆ ಪಟಾಕಿ ಸದ್ದು ಕೇಳಿತೇ ಹೊರತು, ಯಾವ ಚಿತ್ರಗಳೂ ಆಟಂಬಾಂಬ್‌ನಂತೆ ಸಿಡಿದಿರಲಿಲ್ಲ. 'ಅಪ್ಪು' ಅಭಿನಯದ 'ಯಾರೇ ಕೂಗಾಡಲಿ' ತುಸು 'ಡೌನ್‌'ನಲ್ಲೇ ಇತ್ತು. 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ'ನ ಕುದುರೆ ಇತ್ತೀಚೆಗೆ ನೂರು ದಿನ ಓಡಿತ್ತು. ಅದನ್ನು ಬಿಟ್ಟರೆ ಯಾವ ಸ್ಟಾರ್ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ರಾಂತಿ ಮಾಡಿಲ್ಲ. ಬಿಡುಗಡೆಯ ಆರಂಭದ ಮೂರು ದಿನಗಳಲ್ಲಿ ಮಾತ್ರ ಆರಂಭಶೂರರಾಗುತ್ತಿರುವ ಸ್ಟಾರ್‌ಗಳ ನಡುವೆ ರೇಸ್‌ನಲ್ಲಿ ಕೆಲವು ಯಂಗ್ ಹಾರ್ಸ್‌ಗಳು ಓಡಲಾರಂಭಿಸಿವೆ ಎಂಬುದು ಗಾಂಧಿನಗರದ ಹೊಸ ಮತ್ತು ಉತ್ತಮ ಬೆಳವಣಿಗೆ.

ಇತ್ತೀಚಿನ ಹೊಸಬರ ಪ್ರಯತ್ನವಾಗಿದ್ದ 'ಗೊಂಬೆಗಳ ಲವ್‌' ಚಿತ್ರಕ್ಕೆ ಎಲ್ಲ ವರ್ಗದ ಪ್ರೇಕ್ಷಕರಲ್ಲದಿದ್ದರೂ ಕೆಲವರಾದರೂ ಪ್ರೀತಿಯಿಂದ ಆಸಕ್ತಿ ತೋರಿಸಿದ್ದರು. ಈ ವರ್ಷದ ದೊಡ್ಡ ಯಶಸ್ಸು ಕಾಣುತ್ತಿರುವ 'ಚಾರ್‌ಮಿನಾರ್‌' ಕೂಡ ದೊಡ್ಡ ಸ್ಟಾರ್ ಚಿತ್ರವಲ್ಲ. ಈ ನವ ನಕ್ಷತ್ರಗಣಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಚಿತ್ರ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ'. ಸಾಮಾನ್ಯವಾಗಿ ಸ್ಟಾರ್‌ಗಳ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುವುದು ಸಾಮಾನ್ಯ. ಆದರೆ ಹೊಸಬರೇ ತುಂಬಿರುವ ಈ ಚಿತ್ರದ ಬಗೆಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ನಿರೀಕ್ಷೆ ಇತ್ತು ಎಂಬುದು ಅಚ್ಚರಿಯ ಸಂಗತಿ. ಇಂಟರ್‌ನೆಟ್‌ನಲ್ಲಿ ಚಿತ್ರದ ಟ್ರೈಲರ್ ನೋಡಿ ಫಿದಾ ಆಗಿದ್ದವರು 'ಯಾವಾಗ್ ಬರುತ್ತೆ ಸಿನಿಮಾ' ಎಂದು ಕಾಯುತ್ತಿದ್ದುದು ಸಾರ್ಥಕವೇ ಆಗಿದೆ. ಚಿತ್ರ ಯಾವ ಸ್ಟಾರ್ ಚಿತ್ರಕ್ಕೂ ಕಡಿಮೆ ಇಲ್ಲ ಎನ್ನುವಂಥ ಭರ್ಜರಿ ಓಪನಿಂಗ್ ತೆಗೆದುಕೊಂಡಿದೆ. ಸಿನಿಮಾಗಳೆಂದರೆ ಕೇವಲ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಮೂರು ದಿನದಾ ಬಾಳು ಎಂಬ ನಂಬಿಕೆಗೆ ಅಪವಾದವೆಂಬಂತೆ ಈ ಚಿತ್ರ ನೂರು ದಿನ ಓಡುವ ಭರವಸೆ ಮೂಡಿಸಿದೆ. ಈ ಸಮಯದಲ್ಲಿ 'ಸಿಂಪಲ್ಲಾಗೊಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಚಿತ್ರದ ಯಶಸ್ಸಿನ ಬಗ್ಗೆ ಮಾತಾಡಿದ್ದಾರೆ.

ಸಿನಿಮಾ ಮಾಡೋದು ಕಷ್ಟ ಎಂಬಂಥ ಪರಿಸ್ಥಿತಿಯಲ್ಲಿ ಟ್ರೈಲರ್ ಮಾಡಿದ್ರಿ, ಹಿಟ್ ಆಯ್ತು, ಈಗ ಸಿನಿಮಾ ಕೂಡ ಹಿಟ್ ಆಗಿದೆ. ಸಿನಿಮಾ ಮಾಡಿ ಗೆಲ್ಲೋದು ತುಂಬಾ ಸಿಂಪಲ್ ಅನ್ನಿಸ್ತಿದೆಯಾ?
ಸಿಂಪಲ್ ಅಂತೇನೋ ಅಲ್ಲ. ಬಿಡುಗಡೆಯ ಕೊನೆಯ ದಿನದವರೆಗೂ ಆತಂಕ ಇತ್ತು. ಮಾರ್ನಿಂಗ್ ಶೋನ ನಂತರ ಅದು ನಿವಾರಣೆ ಆಯ್ತು. ನನ್ನ ಜೊತೆ ಅದೃಷ್ಟ ಇದೆ ಅನ್ನಿಸ್ತಿದೆ. ನನ್ನದು ಅದ್ಭುತ ಚಿತ್ರವೇನೂ ಅಲ್ಲ. ಚಿತ್ರದಲ್ಲಿ ಒಂದಷ್ಟು ಕೊರತೆಗಳೂ ಇವೆ. ಅದರ ನಡುವೆಯೂ ಚಿತ್ರ ಗೆದ್ದಿರುವುದು ಖುಷಿ ತಂದಿದೆ. ನಮ್ಮಂಥ ಹೊಸಬರ ಚಿತ್ರವಾದ 'ಗೊಂಬೆಗಳ ಲವ್‌' ಕೂಡ ಒಳ್ಳೆಯ ಸಿನಿಮಾ ಆಗಿತ್ತು. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆದರೆ ನಮ್ಮ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಗೆದ್ದಿರುವುದು ಸಮಾಧಾನ.

ಚಿತ್ರದಲ್ಲಿ ಸಂಭಾಷಣೆ ಬಿಟ್ಟರೆ ಪ್ರೇಕ್ಷಕರಿಗೆ ಇಷ್ಟವಾಗಿರುವ ಇತರ ಅಂಶಗಳ್ಯಾವು?
ನಾಯಕನ ಫ್ಲ್ಯಾಷ್‌ಬ್ಯಾಕ್‌ನಲ್ಲಿ ನಾಯಕಿ ಬರುವ, ನಾಯಕಿಯ ಫ್ಲ್ಯಾಷ್‌ಬ್ಯಾಕ್‌ನಲ್ಲಿ ನಾಯಕ ಬರುವ ಕಾನ್ಸೆಪ್ಟ್ ಜನಕ್ಕೆ ಇಷ್ಟವಾಗಿದೆ. ಮತ್ತು ಕ್ಲೈಮ್ಯಾಕ್ಸ್‌ನ ವಿಶೇಷತೆ ಕೂಡ. ಈ ಎರಡು ವಿಷಯಗಳ ಬಗ್ಗೆ ಜನ ಹೆಚ್ಚು ಮಾತನಾಡುತ್ತಿದ್ದಾರೆ. ಹಾಗಾಗಿ ರಿಪೀಟ್ ಆಡಿಯೆನ್ಸ್ ಬರುತ್ತಿದ್ದಾರೆ. ನನಗೆ ವೈಯಕ್ತಿಕವಾಗಿ ಚಿತ್ರದ ಹಿನ್ನೆಲೆ ಸಂಗೀತ ಇಷ್ಟ. ಚಿತ್ರದ ಛಾಯಾಗ್ರಹಣ ಕೂಡ. ಮೂರು ಸೀಸನ್‌ಗಳನ್ನೂ ಬ್ಯೂಟಿಫುಲ್ ಆಗಿ ತೋರಿಸಿದ್ದಾರೆ ಮನೋಹರ್ ಜೋಶಿ. ಅದರ ಜೊತೆಗೆ ಚಿತ್ರಕ್ಕೆ ಡಿಐ ಮತ್ತು ವಿಫ್‌ಎಕ್ಸ್ ಕೆಲಸ ಮಾಡಿದ ಸಚಿನ್ ಅವರಿಂದಲೂ ನಮ್ಮ ಸಿನಿಮಾದ ಕ್ವಾಲಿಟಿ ಹೆಚ್ಚಾಗಿದೆ.

ಸ್ಟಾರ್‌ಗಳ ಸಿನಿಮಾಕ್ಕೂ ಸಿಗದಂಥ ಓಪನಿಂಗ್ ನಿಮ್ಮ ಚಿತ್ರಕ್ಕೆ ಸಿಕ್ಕಿದ್ದರ ಬಗ್ಗೆ ಏನು ಹೇಳ್ತೀರಿ?
ನಾನು, ನನ್ನ ಚಿತ್ರ ನಾಯಕ, ನಾಯಕಿ ಯಾರೂ ಸ್ಟಾರ್‌ಗಳಲ್ಲ. ಆದರೆ ನಮ್ಮ ಚಿತ್ರಕ್ಕೆ ನಮ್ಮ ಟ್ರೈಲರ್ರೇ ದೊಡ್ಡ ಸ್ಟಾರ್ ಆಗಿಬಿಡ್ತು. ಈಗಲೂ ಜನ ಟ್ರೈಲರ್ ಮತ್ತು ಸಿನಿಮಾನ ಕಂಪೇರ್ ಮಾಡ್ಕೊಂಡು ಮಾತಾಡ್ತಿದಾರೆ.  ಸಿನಿಮಾ ಜನಕ್ಕೆ ಇಷ್ಟ ಆಗಿದೆ. ಹಾಗಾಗಿಯೇ ಒಂದಷ್ಟು ಆರ್‌ಜೆಗಳ ದೃಶ್ಯಗಳನ್ನು ಸೇರಿಸಿ ಸ್ವಲ್ಪ ಟ್ರಿಮ್ ಮಾಡೋಣ ಅನ್ನಿಸಿದರೂ ಬೇಡ ಅಂತ ಸುಮ್ಮನಾಗಿದ್ದೇನೆ.

ನಿಮ್ಮ ಚಿತ್ರದ ನಾಯಕ, ನಾಯಕಿಯರ ಅಭಿನಯದ ಬಗ್ಗೆ ನಿಮ್ಮ ಅಭಿಪ್ರಾಯ?
ರಕ್ಷಿತ್, ಶ್ವೇತಾ ಇಬ್ಬರಿಗೂ ಮೊದಲೇ ಪೂರ್ತಿ ಸ್ಕ್ರಿಪ್ಟ್ ಕೊಟ್ಟಿದ್ದೆ. ಅವರವರ ಪಾತ್ರಗಳ ಪೂರ್ತಿ ರೆಫರೆನ್ಸ್ ಹೇಳಿದ್ದೆ. ಅದಕ್ಕೆ ತಕ್ಕಂತೆ ಬದ್ಧತೆ ತೋರಿಸಿ ಇಬ್ಬರೂ ತಮ್ಮ ಹಾವಭಾವ, ಬಾಡಿ ಲ್ಯಾಂಗ್ವೇಜ್, ಮಾತುಗಾರಿಕೆ ಎಲ್ಲದಕ್ಕೂ ಸಿದ್ಧತೆ ಮಾಡಿಕೊಂಡಿದ್ದರು. ಇಬ್ಬರ ಅಭಿನಯವನ್ನೂ ನಾನು ಮೊದಲೇ ನೋಡಿದ್ದೆ. ಈ ಇಬ್ಬರ ಮೇಲೂ ನನಗೆ ಸಂಪೂರ್ಣ ನಂಬಿಕೆ ಇತ್ತು.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.