ಸಿನಿಮಾ ಲೇಖನ

ಸ್ವಾಮಿದೇವನೆ ಲೋಕಪಾಲನೆ

ಸ್ವಾಮಿದೇವನೆ ಲೋಕಪಾಲನೆ
Published On :

ಚಿತ್ರರಂಗದಲ್ಲಿ ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಹಿರಿಯ ನಟ, ನಟಿ ಎನಿಸಿಕೊಂಡವರೂ ಕೂಡ ನಾನಿನ್ನೂ ವಿದ್ಯಾರ್ಥಿಯೇ ಕಲಿಯಬೇಕಾದ್ದು ಸಾಕಷ್ಟಿದೆ ಎನ್ನುವ ಮಾತುಗಳನ್ನು ಹೇಳುತ್ತಾರೆ. ಆ ಲೆಕ್ಕದಲ್ಲಿ ಇಂದು ಕಲಿಯುವವರ ಸಂಖ್ಯೆ ಸಾಕಷ್ಟಿದೆ. ಆದರೆ ಕಲಿಸುವವರೇ ಕಡಿಮೆ. ತೆರೆಯ ಹೊರಗೂ ಮತ್ತು ತೆರೆಯ ಮೇಲೂ.
 ಸ್ವಾಮಿ ದೇವನೆ ಲೋಕಪಾಲನೆ ಎಂದ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಎಂಬ ಸ್ಕೂಲ್ ಮಾಸ್ಟರ್ ಇಂದು ಕಾಣಿಸುತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಮೇಷ್ಟ್ರು ಎಂದೇ ಪರಿಚಿತರಾದ ಚಾಮಯ್ಯ ಈಗ ನೆನಪು ಮಾತ್ರ. ಆದರೂ, ಮೇಷ್ಟ್ರು ಇನ್ನೂ ನಮ್ಮೊಳಗೆ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಇತ್ತೀಚಿನ ದೇವರಾಜ್ ಅಭಿನಯದ ಮೇಷ್ಟ್ರು, ಸದಾಶಿವ ಶೆಣೈ ಅವರ ಪ್ರಾರ್ಥನೆ, ರವಿಶಂಕರ್ ಗೌಡ ಅವರ ಗಾಂಧಿ ಜಯಂತಿ, ಅಲ್ಲೊಂದು ಇಲ್ಲೊಂದು ಎಂಬಂತಿರುವ ಉದಾಹರಣೆಗಳಿವೆ. ಹೀಗಾಗಿ, ತೆರೆಯ ಮೇಲಿನ ಟೀಚರ್‌ಗಳು

ಇನ್ನೂ ನಿವೃತ್ತಿ ತೆಗೆದುಕೊಂಡಿಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲಾದರೂ ನಮ್ಮ ಮೇಷ್ಟ್ರುಗಳು ಕಂಡಾಗ 'ನಮಸ್ಕಾರ ಸರ್‌' ಎನ್ನುತ್ತಾರೆ ಪ್ರೇಕ್ಷಕರು.
  ಡಾ.ರಾಜ್‌ಕುಮಾರ್ ಎರಡು ಕನಸು ಚಿತ್ರದಲ್ಲಿ 'ಇವತ್ಯಾಕೋ ನಂಗೆ ಮೂಡಿಲ್ಲ' ಎನ್ನುತ್ತಲೇ ಪಾಠ ಮಾಡಿದ್ದು ಕನ್ನಡಿಗರಿಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಅವರದ್ದು ಮರೆಗುಳಿ ಪ್ರೊಫೆಸರ್ ಪಾತ್ರವಾದರೂ ಜನ ಮಾತ್ರ ಅದನ್ನು ಮರೆತಿಲ್ಲ. ಪ್ರೇಮಲೋಕದಲ್ಲಿ, ವಿಷ್ಣುವರ್ಧನ್, 'ಪೋಲಿ ಆಟವೆಲ್ಲ ಬಿಡಬೇಕು, ಬರೀ ಪಾಠವನೆ ಕಲಿಬೇಕು' ಎಂದರೆ, ನೀವು ಓದಿದ ಸ್ಕೂಲಲ್ಲಿ ನಾನು ಪ್ರಿನ್ಸಿಪಾಲ್ ಆಗಿದ್ದೆ ಎನ್ನುವ ಪ್ರಭಾಕರ್ 'ನೆಲ ನೋಡ್ಕೋತ, ಹೋಗ್‌ಬೇಕು, ನೆಲ ನೋಡ್ಕೋತಾ ಬರ್‌ಬೇಕು' ಎನ್ನುವ ಬುದ್ಧಿ ಕಲಿಸಿದವರು. ಮೇಷ್ಟರ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಅನಂತ್‌ನಾಗ್ ಕೂಡ ಶಾಲೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕಲಿಸಿದವರೇ.
ಗಣಿತದ ಸೂತ್ರ ಹೇಳಿಕೊಡುವ ಮೇಷ್ಟರುಗಳ ನಡುವೆ, ಈ ಕಲಿಯಿರಿ, ಕಲಿಸಿರಿ ಆಂದೋಲನಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್-ಹಂಸಲೇಖ ಜೋಡಿ ತಮ್ಮದೇ ಶೈಲಿಯಲ್ಲಿ ಕೊಡುಗೆ ಕೊಟ್ಟಿದ್ದು 'ಹಳ್ಳಿಮೇಷ್ಟ್ರೇ, ಹಳ್ಳಿ ಮೇಷ್ಟ್ರೇ' ಎನ್ನುವ ಸಿಲ್ಕ್ ಸೂತ್ರದ ಮೂಲಕ. ಇತ್ತೀಚೆಗೆ, ರವಿಚಂದ್ರನ್ ತಮ್ಮ ಐವತ್ತನೇ ವಯಸ್ಸಲ್ಲಿ, ಹೋಗೋಣ ಕಾಲೇಜಿಗೆ ಎಂದರೂ ಅವರದ್ದು ಅಲ್ಲಿ ವಿದ್ಯಾರ್ಥಿಯ ಪಾತ್ರ. ಯಾಕಂದ್ರೆ ಅದು ಕ್ರೇಜಿಲೋಕ. 'ವಿಷ್ಣು ಸೇನೆ'ಯಲ್ಲಿ ವಿಷ್ಣವರ್ಧನ್ ಪ್ರೊಫೆಸರ್ ಆಗಿದ್ದರೂ 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಎಂದು  ಅವರು ಹೇಳಿಕೊಟ್ಟ ಪಾಠ ಯಾವ ಮೇಷ್ಟ್ರ ಕ್ಲಾಸ್‌ಗೂ ಕಡಿಮೆ ಇಲ್ಲ. ಆದರೆ, ರೆಬೆಲ್‌ಸ್ಟಾರ್ ಅಂಬರೀಶ್ 'ಪ್ರೊಫೆಸರ್‌' ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಬಿಟ್ಟರೆ ಟೀಚರ್ ಆಗಿದ್ದು ಕಡಿಮೆಯೇ. ಅದಕ್ಕಿಂತ, ಜೀವನ ಪಾಠ ಹೇಳಿಕೊಡುವ ಇತ್ತೀಚಿನ 'ಡ್ರಾಮಾ' ಚಿತ್ರದಲ್ಲಿ ಅವರದ್ದು ಒಂಥರಾ ಮೇಷ್ಟ್ರ ಪಾತ್ರವೇ ಎನ್ನಬಹುದು.
   ಇದು ನಮ್ಮ ನಟರ ವಿಷಯವಾದರೆ, ಚಿತ್ರರಂಗದಲ್ಲಿ ಕಲಿಸುವ ಚೆಲುವೆಯರ ಸಂಖ್ಯೆ ನಿಜಕ್ಕೂ ಕಡಿಮೆಯೇ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿಗೆ ಅಪವಾದದಂತೆ ಕನ್ನಡ ಚಿತ್ರರಂಗದಲ್ಲಿ ನಟಿಯರು ಟೀಚರ್ ಆಗಿದ್ದು ಅಪರೂಪ. ನಮ್ಮ ನಾಯಕಿಯರಿಗೆ ಗ್ಲಾಮರಸ್ ಕ್ವೀನ್, ಸ್ವೀಟಿ, ಮೋಹಕ ತಾರೆ, ಕನಸಿನ ರಾಣಿ, ಎಂದು ಕರೆಸಿಕೊಳ್ಳುವುದರಲ್ಲೇ ಸುಖ. 'ನವಭಾರತ' ಚಿತ್ರದಲ್ಲಿ  ಮಹಾಲಕ್ಷ್ಮಿ ಅವರು ಲೇಡಿ ಟೀಚರ್ ಆಗಿ ತೆಗೆದುಕೊಂಡಂಥ 'ಸ್ಪೆಷಲ್ ಕ್ಲಾಸ್‌'ಗೆ ಅಂಥ ಮಾಸ್ ಅಪೀಲ್ ಸಿಗಲಿಲ್ಲ. ಇಂಥ ಕೆಲವು ಉದಾಹರಣೆಗಳನ್ನು ಬಿಟ್ಟರೆ ನಮ್ಮ ನಾಯಕಿಯರು ಟೀಚರ್ ಆಗಿದ್ದು ಅಪರೂಪ. ನಮ್ಮ ಸ್ಯಾಂಡಲ್‌ವುಡ್ ಕ್ವೀನ್‌ಗಳೇನಿದ್ದರೂ ಸೆಟ್‌ಗಳಲ್ಲಿ 'ಮೇಡಂ' ಎಂದು ಕರೆಸಿಕೊಳ್ಳುವುದನ್ನಷ್ಟೇ ಇಷ್ಟಪಡುತ್ತಾರೆ.
 ಆದರೆ ವಿಷಾದದ ಸಂಗತಿ ಎಂದರೆ, ಇಂದು ಚಿತ್ರರಂಗದಲ್ಲಿ ಎಷ್ಟೇ ಜನ ಶಾರದಾಸುತರೂ, ಸರಸ್ವತೀ ಪುತ್ರರಿದ್ದರೂ, ನಿನ್ನೆಯ ಶಿಕ್ಷಕರ ದಿನಾಚರಣೆಯ ನೆಪದಲ್ಲಿ ಇಂದಿನ ತೆರೆಯ ಮೇಲಿನ ಮೇಷ್ಟರುಗಳನ್ನು ನೆನಪಿಸಿಕೊಂಡರೆ, ನಿರಾಸೆಯಾಗುತ್ತದೆ. ಈಗೆಲ್ಲ ಕಾಲೇಜ್ ಕ್ಯಾಂಪಸ್ ಲವ್‌ಸ್ಟೋರಿಗಳೇ ಆದ್ದರಿಂದ ಮೇಷ್ಟರ ಪಾತ್ರಗಳಿಗೇನೂ ಬರವಿಲ್ಲ. ಆದರೆ, ಅವರೀಗ ಘನತೆವೆತ್ತ ಪ್ರಿನ್ಸಿಪಾಲರಾಗಿ ಉಳಿದಿಲ್ಲ. ಮೇಷ್ಟ್ರ ಪಾತ್ರಗಳು ಈಗ ಬರೀ ಜೋಕಿಗೆ ಸೀಮಿತ. ಹಿಂದೆ ಇರುವ ಗುರು, ಮುಂದೆ ಗುರಿ ತೋರಿಸುತ್ತಾನೆ ಎಂಬ ಮಾತಿಗೆ ಅವಪಾದವೆಂಬಂತೆ ಗುರುಗಳೀಗ ಕ್ಲಾಸ್ ರೂಂನಲ್ಲಿ ತರಲೆ ಹುಡುಗರು ಹಿಂದಿನಿಂದ ಎಸೆಯುವ ರಾಕೆಟ್‌ಗೆ ಗುರಿಯಾಗುತ್ತಿದ್ದಾರೆ ಅಷ್ಟೆ. ಕಾಲೇಜಿನ ಲೇಡಿ ಟೀಚರ್‌ಗೆ ಡವ್ ಹೊಡೆಯುವುದು, ಹುಡುಗರ ಜೊತೆ ಕೂತು ಗುಂಡು ಹಾಕುವ 'ಟೀಚರ್ಸ್‌', ಏನೇನೋ ಪ್ರಶ್ನೆ ಕೇಳಿ ವಿದ್ಯಾರ್ಥಿಗಳಿಂದ ಪೋಲಿ ಉತ್ತರ ಪಡೆದುಕೊಳ್ಳುವುದು, ಇದಷ್ಟಕ್ಕೇ ಸೀಮಿತವಾದ ಕಾಶಿ, ಎಂ.ಎಸ್.ಉಮೇಶ್, ಬ್ಯಾಂಕ್ ಜನಾರ್ಧನ್‌ರಂಥ ಅನೇಕ ನಟರು ಇಂಥ ಪಾತ್ರಗಳಿಂದ ತಮ್ಮ ನಿವೃತ್ತಿಯ ದಿನಗಳಿಗಾಗಿ ಕಾಯುತ್ತಿದ್ದಾರೆ. ಅದನ್ನು ಬಿಟ್ಟರೆ ಆದರ್ಶಕ್ಕೆ ಹೆಸರಾದ ಮೇಷ್ಟ್ರುಗಳ ವಿಷಯದಲ್ಲಿ ತೆರೆಯ ಮೇಲೆ ಸಂಪೂರ್ಣ 'ಸೈಲೆನ್ಸ್‌'.
ಈ ಶಿಕ್ಷಕರ ದಿನಾಚರಣೆಯ ದಿನ ಇದೊಂದು ಎಚ್ಚರಿಕೆಯ ಗಂಟೆಯಾಗಲಿ. ಚಿತ್ರರಂಗದಲ್ಲಿ ಅನಕ್ಷರಸ್ಥರು ಹೆಚ್ಚಾಗಿದ್ದಾರೆ ಎಂಬ ಕಾರಣಕ್ಕಾದರೂ ನಮ್ಮ ಚಿತ್ರಗಳಲ್ಲಿ ಘನತೆ ಇರುವ ಮೇಷ್ಟ್ರುಗಳ ಸಂಖ್ಯೆ ಹೆಚ್ಚಾಗಲಿ. 

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.