ಸಿನಿಮಾ ಲೇಖನ

ಅಶೋಕ ವನದಲ್ಲಿ ಕೋಲಾಹಲ

ಅಶೋಕ ವನದಲ್ಲಿ  ಕೋಲಾಹಲ
Published On :

'ದುಡ್ಡು ಹಾಕಿ ಸಿನಿಮಾ ಮಾಡೋದು ನಾವು. ನಮ್ಮ ಅನುಕೂಲಕ್ಕೆ ತಕ್ಕಂತೆ ಅವರು ಕೆಲಸ ಮಾಡಬೇಕು. ಆದರೆ ಅವರು ಹೇಳಿದಂತೆ ನಾವು ಕೇಳಬೇಕಾದ ಪರಿಸ್ಥಿತಿ ಬಂದಿದೆ'. ಇದು ಕನ್ನಡ ಚಿತ್ರರಂಗದ ನಿರ್ಮಾಪಕರ ಅಳಲು ಮತ್ತು ದೂರು. ಈ ದೂರು ನಟ ಅಶೋಕ್ ನೇತೃತ್ವದ ಕರ್ನಾಟಕ ಚಲನಚಿತ್ರ ಒಕ್ಕೂಟದ ಸದಸ್ಯರ ಮೇಲೆ.
ಕನ್ನಡ ಚಿತ್ರರಂಗದಲ್ಲಿ ಒಕ್ಕೂಟದ್ದೇ ನಿಯಮಗಳು ನಡೆಯುವುದು. ಯಾರೇ ನಿರ್ಮಾಪಕರಾಗಲಿ ಇದೇ ಸಂಘದ ಸದಸ್ಯರನ್ನು ಮಾತ್ರ ತಮ್ಮ ಚಿತ್ರಗಳಿಗೆ ಬಳಸಿಕೊಳ್ಳುವುದು ಕಡ್ಡಾಯ. ಪ್ರೊಡಕ್ಷನ್ ಮ್ಯಾನೇಜರ್‌ನಿಂದ ಹಿಡಿದು ಲೈಟ್ ಬಾಯ್, ಜ್ಯೂನಿಯರ್ ಆರ್ಟಿಸ್ಟ್, ಹೀಗೆ ಎಲ್ಲರೂ ಒಕ್ಕೂಟದಿಂದಲೇ ಬರಬೇಕು. ಅದನ್ನೇ ನಾವು ಪಾಲಿಸುತ್ತಿದ್ದೇವೆ. ಆದರೆ ಇದರಿಂದ ನಮಗೆ ಆರ್ಥಿಕ ಮತ್ತು ಮಾನಸಿಕ ಕಿರಿಕಿರಿಗಳಾಗುತ್ತಿವೆ ಎಂಬುದು ನಿರ್ಮಾಪಕರ ಮಾತು. ಅದಕ್ಕೆ ಅವರು ಕೊಡುವ ಕಾರಣಗಳನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಯಾವುದೇ ವ್ಯವಹಾರವಿರಲಿ ತಾನು ಹಾಕಿದ  ದುಡ್ಡನ್ನು ಮ್ಯಾನೇಜ್ ಮಾಡಲು ತನಗೆ ಬೇಕಾದವರನ್ನು ನೇಮಿಸಿಕೊಳ್ಳುವ ಸ್ವಾತಂತ್ರ್ಯ ಹಣ ಹಾಕಿದವನಿಗೆ ಇರಬೇಕು. ಆದರೆ ಇಲ್ಲಿ ಹಾಗಿಲ್ಲ. ಇಲ್ಲಿ ಆಗುತ್ತಿರುವ ತೊಂದರೆ ಅಂದರೆ ಒಕ್ಕೂಟದ ಸಾರ್ವಭೌಮತ್ವದ್ದು. ಅಲ್ಲಿಂದ ಬಂದ ಪ್ರೊಡಕ್ಷನ್ ಮ್ಯಾನೇಜರ್ ಒಬ್ಬ ತನ್ನ ಇಡೀ ಗುಂಪನ್ನು ಕಂಟ್ರೋಲ್ ಮಾಡುತ್ತಾನೆ. ಒಕ್ಕೂಟದಿಂದ ಬಂದ ಯಾರೊಬ್ಬರೂ ಅವನ ಮಾತು ಮೀರುವುದಿಲ್ಲ. ಇವರ ಕಾಟದಿಂದ ರೋಸಿಹೋದ ನಿರ್ಮಾಪಕ ಅಥವಾ ನಿರ್ದೇಶಕರ್ಯಾರಾದರೂ ಕೋಪದಲ್ಲಿ ಒಂದು ಮಾತು ಹೇಳಿದರೆ ಮುಗೀತು. ಇಡೀ ತಂಡ ಚಿತ್ರೀಕರಣ ಸ್ಥಳದಲ್ಲೇ ಮುಷ್ಕರ ಹೂಡುತ್ತದೆ. ಹಣ ಹಾಕಿ ಇವರಿಗೆ ಕೆಲಸ ಕೊಟ್ಟ ಮಾಲೀಕ ಇವರ ಮುಂದೆ ತಲೆತಗ್ಗಿಸಿ ಕ್ಷಮೆ ಕೇಳುವವರೆಗೆ. ಇಲ್ಲವಾದರೆ ಒಂದು ಸಣ್ಣ ವಸ್ತುವೂ ಅತ್ತಿಂದಿತ್ತ ಮಿಸುಕಾಡುವುದಿಲ್ಲ.
  ಅಷ್ಟಕ್ಕೂ ನಿರ್ಮಾಪಕರು ಒಕ್ಕೂಟದ ಈ ಸದಸ್ಯರಿಗೆ ಸರಿಯಾದ ಹಣ ಕೊಡುತ್ತಿಲ್ಲವೇ? ಅವರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುತ್ತಿಲ್ಲವೇ? ಎಂಬ ಪ್ರಶ್ನೆ ಮೂಡಿದರೆ ಅದಕ್ಕೂ ಆಘಾತಕಾರಿ ಉತ್ತರಗಳೇ ಸಿಗುತ್ತವೆ. ಒಕ್ಕೂಟದ ಸದಸ್ಯರಿಗೆ ಇಂತಿಷ್ಟು ಹಣ ಅಂತ ಫಿಕ್ಸ್ ಆಗಿರುತ್ತದೆ. ಆದರೆ ಆ ಹಣಕ್ಕೆ ಅಲ್ಲಿ ಯಾವ ಸದಸ್ಯನೂ ಕೆಲಸ ಮಾಡುವುದಿಲ್ಲ. ಅರ್ಧಗಂಟೆ ಹೆಚ್ಚು ಕೆಲಸ ಮಾಡಿದರೆ ಡಬಲ್ ಬಾಟಾ ಕೊಡಬೇಕು. ಚಿತ್ರೀಕರಣ ಬೇರೆ ಊರಲ್ಲಿದ್ದರೆ ಜರ್ನಿ ಬಾಟಾ ಕೊಡಬೇಕು. ದೂರ ಹೆಚ್ಚಾದಂತೆ ಅವರ ಬಾಟಾ ಕೂಡ ಬೆಳೆಯುತ್ತಿರುತ್ತದೆ. ಚಿತ್ರೀಕರಣದ ಸ್ಥಳದಲ್ಲಿ ಸಾಮಾನುಗಳ ಸಾಗಾಟ ಇದ್ದರೆ ಅದಕ್ಕೊಂದಿಷ್ಟು ಹೆಚ್ಚು ಚಪ್ಪಲಿ ಸವೆಸಿದರೆ ಮತ್ತೆ ಎಕ್ಟ್ರ್ಸಾ ಬಾಟಾ. ಹೀಗೆ ಬರೀ ಎಕ್ಟ್ರ್ಸಾ ಬಾಟಾಗಳಲ್ಲೇ ನಿರ್ಮಾಪಕನ ಅರ್ಧ ಜೇಬು ಖಾಲಿ ಆಗಿರುತ್ತೆ. ಹಾಗಾಗಿಯೇ ಈ ಸಿನಿಮಾಗೆ ಅಷ್ಟೊಂದು ಖರ್ಚು ಮಾಡಿದ್ದೇವೆ ಅಂತಾರೆ. ಸಿನಿಮಾದಲ್ಲಿ ನೋಡಿದರೆ ಏನೂ ಕಾಣಲ್ಲ. ಆ ಹಣ ಎಲ್ಲಿ ಹೋಯಿತು ಎಂದು ಯಾವುದಾದರೂ ಸಿನಿಮಾ ನೋಡಿದಾಗ ಅನುಮಾನ ಬಂದರೆ ಈ ಹಣ ಒಕ್ಕೂಟದ ಕಡೆಗೆ ಹರಿದು ಹೋಗಿದೆ ಎಂದರ್ಥ ಎನಿಸುವ ಮಟ್ಟಕ್ಕೆ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಲದೆ ಈ ಒಕ್ಕೂಟದಿಂದ ಬಂದ ಸೋ ಕಾಲ್ಡ್ ಪ್ರೊಡಕ್ಷನ್ ಮ್ಯಾನೇಜರ್ ಏನು ಪ್ರಾಮಾಣಿಕವಾಗಿರುತ್ತಾನೆಯೇ ಎಂದರೆ ಅದೂ ಇಲ್ಲ ಎನ್ನುತ್ತಾರೆ ಹಲವು ನಿರ್ಮಾಪಕರು. ನಾವು ಎಲ್ಲ ಸಮಯದಲ್ಲೂ ಲೆಕ್ಕ ಕೇಳೋಕಾಗುತ್ಯೇ? ಹೊರಗೆ ಮಾರುಕಟ್ಟೆಯಲ್ಲಿ 50 ರುಪಾಯಿಗೆ ತಂದು ಇಲ್ಲಿ 5000ರುಪಾಯಿ ಲೆಕ್ಕ ತೋರಿಸುತ್ತಾರೆ. ಪ್ರಶ್ನೆ ಕೇಳಿದರೆ ಅಲ್ಲಿಂದಲೇ ಅವರ ಅಸಹಕಾರ ಶುರುವಾಗುತ್ತದೆ. ಊಟ, ತಿಂಡಿಯ ಸಮಯ ಒಂದೆರಡು ನಿಮಿಷ ಹೆಚ್ಚುಕಮ್ಮಿ ಆದರೂ ಸ್ಟ್ರೈಕು. ಅಲ್ಲದೆ ಬಾಟಾ ವಿಷಯ ಸೇರಿದಂತೆ ಯಾವುದೇ ಸಮಯದಲ್ಲೂ ಸಣ್ಣಪುಟ್ಟ ಅಡ್ಜೆಸ್ಟ್‌ಮೆಂಟ್‌ಗಳಿಗೂ ಅವರು ತಯಾರಿರುವುದಿಲ್ಲ. ಚಿತ್ರೀಕರಣಕ್ಕೆ ಒಂದು ಸಣ್ಣ ವಸ್ತು ಬೇಕು ಎಂದರೂ ಅದು ಒಕ್ಕೂಟದ ಕಾಂಟ್ರಾಕ್ಟ್ ಮೂಲಕವೇ ಆಗಬೇಕು. ಅದರಲ್ಲಿ ಅವರಿಗೆ ಕಮಿಷನ್ ಹೋಗಬೇಕು. ಚಿತ್ರೀಕರಣಕ್ಕೆ ವೆಹಿಕಲ್ ಬೇಕು ಎಂದರೆ ಅದೂ ಕೂಡ ಒಕ್ಕೂಟದ್ದೇ ಆಗಬೇಕು. ನಿರ್ಮಾಪಕರ ಬಳಿ ಸ್ವಂತದ್ದೇ ವೆಹಿಕಲ್‌ಗಳಿದ್ದರೂ ಉಪಯೋಗಿಸುವಂತಿಲ್ಲ. ಉಪಯೋಗಿಸಿದರೆ ಅದಕ್ಕೆ ಒಕ್ಕೂಟದ ಕಡೆಯಿಂದ ದಂಡ ತೆತ್ತು ಸರ್ಟಿಫಿಕೇಟ್ ತರಬೇಕು. ಆ ಸರ್ಟಿಫಿಕೇಟ್‌ಗೆ ಕೊಡಬೇಕಾದ ಹಣ, ಹೆಚ್ಚು ಕಡಿಮೆ ಈ ವೆಹಿಕಲ್‌ಗಳಿಗೆ ಖರ್ಚಾಗುವಷ್ಟೇ ಇರುತ್ತದೆ.


ಹಾಗಾಗಿ ನಿರ್ಮಾಪಕರಿಗೆ ಜೇಬಿಗೆ ಕತ್ತರಿ. ಹೀಗೇ ಯಾವ ವಿಷಯದಲ್ಲಿ ಏನೇ ಕೇಳಿದರೂ ಕೂಡ ಅವರಿಂದ ಬರೋದು ಒಂದೇ ಉತ್ತರ 'ಒಕ್ಕೂಟದ ರೂಲ್ಸು ಸಾರ್‌'.
ಒಕ್ಕೂಟದ ಇಂಥ ಭ್ರಷ್ಟತೆಯಿಂದ ಬೇಸತ್ತ ನಿರ್ಮಾಪಕರೊಬ್ಬರು ಹೇಳುವ ಮಾತಿದು 'ಎಲ್ಲ ವಿಷಯದಲ್ಲೂ ಅವರಿಗೆ ದುಡ್ಡು ಉಳಿಸಿಕೊಳ್ಳಲು ಅವಕಾಶ ಸಿಗಬೇಕು. ಇಲ್ಲದಿದ್ದರೆ ಅವರ ಅಸಹಕಾರ ಶುರು. ಊಟ ತೆಗೆದುಕೊಂಡು ಬರುವ ಕಾಂಟ್ರಾಕ್ಟ್‌ನಲ್ಲೂ ಅವರು ಹೇಳಿದ ಹೊಟೆಲ್ಲೇ ಆಗಬೇಕು. ಅವರಿಗೆ ಕಮಿಷನ್ ಇದೆ ಅಂತ ಗೊತ್ತಾಗಿ ಒಮ್ಮೆ ನಾನು ಬೇರೆ ಹೊಟೇಲ್‌ನಿಂದ ಊಟ ತರಲು ಹೇಳಿದೆ. ಆ ಹೊಟೇಲ್ ತುಂಬಾ ಫೇಮಸ್ ಆಗಿರುವಂಥದ್ದು. ಅಂಥ ಹೊಟೇಲ್‌ನಿಂದ ತಮ್ಮ ಹುಡುಗರನ್ನು ಕರೆದುಕೊಂಡು ಹೋಗಿ ಊಟ ತರುವಾಗ ಅರ್ಧದಾರಿಯಲ್ಲಿ ಅದಕ್ಕೆ ಕೇಜಿಗಟ್ಟಲೆ ಉಪ್ಪು ಸುರಿದಿದ್ದಾರೆ. ಅಲ್ಲದೆ ಅನ್ನದಲ್ಲಿ ಕಲ್ಲು ಬೆರೆಸಿದ್ದಾರೆ. ಅಂದು ಊಟ ಮಾಡಿದ ನಮ್ಮ ಕಲಾವಿದ, ತಂತ್ರಜ್ಞರು 'ಏನ್ ನಿರ್ಮಾಪಕರೇ ಇಂಥ ಊಟಾನಾ ತರಿಸೋದು' ಅಂತ ಬೇಸರ ಪಟ್ಟುಕೊಂಡರು. ಹಾಗಾಗಿ ಅನಿವಾರ್ಯವಾಗಿ ಪ್ರೊಡಜ್ಞನ್ ಮ್ಯಾನೇಜರ್ ಹೇಳಿದ ಹೊಟೇಲ್‌ನಿಂದಲೇ ಊಟ ತರಿಸಲು ಹೇಳಬೇಕಾಯ್ತು. ಇದಷ್ಟೇ ಅಲ್ಲ, ಕೆಲವು ಪ್ರೊಡಕ್ಷನ್ ಮ್ಯಾನೇಜರ್‌ಗಳು  ನಾವು ಕೊಟ್ಟ ದುಡ್ಡಿನಲ್ಲಿ ಅದೆಷ್ಟು ಗೋಲ್‌ಮಾಲ್ ಮಾಡಿರುತ್ತಾರೆ ಎಂದರೆ ನಾವು ಚಿತ್ರೀಕರಣ ಮಾಡಲು ದುಡ್ಡಿಲ್ಲದೆ ಒದ್ದಾಡುವಾಗ ನಮಗೆ ಟೋಪಿ ಹಾಕಿ ಮಾಡಿಕೊಂಡ ದುಡ್ಡನ್ನು ನಮಗೇ ಬಡ್ಡಿಗೆ ಕೊಡುತ್ತಾರೆ'.
  ಇದೇ ಕಾರಣಕ್ಕೆ ಭಾಮಾ ಹರೀಶ್, ರೂಪಾ ಅಯ್ಯರ್ ಸೇರಿದಂತೆ ಹಲವು ನಿರ್ಮಾಪಕರು ಈಗ ನಮಗೆ ಈ ಒಕ್ಕೂಟ ಬೇಡ ಎಂಬ ಬೇಡಿಕೆ ಮುಂದಿಟ್ಟಿದ್ದು. ಈ ಒಕ್ಕೂಟದ ಇನ್ನೊಂದು ಸಮಸ್ಯೆ ಎಂದರೆ ಅದರ ದುಬಾರಿ ಸದಸ್ಯತ್ವದ ಶುಲ್ಕ. 'ನಮ್ಮ ಚಿತ್ರಕ್ಕೆ ಚಿತ್ರಕಲಾ ಪರಿಷತ್‌ನಲ್ಲಿ ಕಲಿತಿರುವ ಯಾವುದಾದರೂ ಹೊಸ ಪ್ರತಿಭೆಯನ್ನು ಕಲೆಯ ವಿಭಾಗದಲ್ಲಿ ಬಳಸಿಕೊಳ್ಳಬೇಕು ಎಂದರೆ ಅದು ಆಗುವುದೇ ಇಲ್ಲ. ಆ ಹೊಸ ಹುಡುಗ ಒಕ್ಕೂಟದಲ್ಲಿ ಒಂದು ಲಕ್ಷ ರುಪಾಯಿ ಕೊಟ್ಟು ಸದಸ್ಯತ್ವ ಪಡೆದಿರಬೇಕಂತೆ. ಅವನ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಅವರ ಪ್ರತಿಭೆ ಪೋಲಾಗುತ್ತಿದೆ. ಅದನ್ನು ನಾವು ಬಳಸಿಕೊಳ್ಳಲು ಆಗುತ್ತಿಲ್ಲ' ಎನ್ನುತ್ತಾರೆ ನಿರ್ಮಾಪಕಿ ರೂಪಾ ಅಯ್ಯರ್.
ಈ ಎಲ್ಲ ವಿಷಯಗಳನ್ನು ನೋಡಿದ ಮೇಲೆ ಅನಿಸುವುದು, ಅದು ಯಾರ ನೇತೃತ್ವದ ಒಕ್ಕೂಟವೇ ಇರಲಿ, ಅಲ್ಲಿ  ನಿರ್ಮಾಪಕ ಬಾಸ್ ಆಗಿರಬೇಕೇ ಹೊರತು ಅಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲ. ಹಾಗಂತ ಪರ್ಯಾಯ ಒಕ್ಕೂಟ ಬೇಕು ಎಂಬ ಮಾತಿಗೂ ಅರ್ಥವಿಲ್ಲ. ಇಲ್ಲಿ ನಿರ್ಮಾಪಕನಿಗೆ ಸ್ವಾತಂತ್ರ್ಯ ಬೇಕಿದೆ ಅಷ್ಟೆ. ತಾನು ಮಾಡುತ್ತಿರುವ ಸಿನಿಮಾಗೆ ತಮ್ಮೂರಿನಿಂದ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಅವನಿಗೆ ಕೆಲಸ ವಹಿಸುವ ಸ್ವಾತಂತ್ರ್ಯ ಅವನಿಗೆ ಇರಬೇಕು. ಅವನ ಹಣಕ್ಕೆ ಅವನೇ ಮಾಲೀಕನೇ ಹೊರತು ಯಾವುದೋ ಒಕ್ಕೂಟದ ಸದಸ್ಯರಲ್ಲ. ಈ ಒಕ್ಕೂಟದ ಸದಸ್ಯರು 'ನಮ್ಮದೊಂದು ಸಂಘ ಇದೆ. ಇಲ್ಲಿ ನೀವು ಸಿನಿಮಾ ಮಾಡಲು ಬೇಕಾದ ಎಲ್ಲ ಸಹಾಯಕರೂ ಸಿಗುತ್ತಾರೆ. ನೀವು ನಮ್ಮನ್ನು ಬಳಸಿಕೊಳ್ಳಿ' ಎಂದು ವಿನಂತಿಸಬೇಕೇ ಹೊರತು, 'ನೀವು ನಮ್ಮನ್ನೇ ಬಳಸಿಕೊಳ್ಳಬೇಕು' ಎಂದು ತಾಕೀತು ಮಾಡುವ ಅರ್ಹತೆ ಒಕ್ಕೂಟಕ್ಕೇನಿದೆ? ನಿರ್ಮಾಪಕರಿಂದ ಇಷ್ಟೆಲ್ಲ ಸವಲತ್ತು ಪಡೆದು ಅವರಿಂದಲೇ ಬದುಕು ಕಟ್ಟಿಕೊಂಡು ಕೊನೆಗೆ ಅವರಿಗೇ ಅಸಹಕಾರ ತೋರಿಸುವ ಒಕ್ಕೂಟದ ಸದಸ್ಯರ ವರ್ತನೆಯ ಬಗ್ಗೆ ಅಧ್ಯಕ್ಷ ಅಶೋಕ್ ಅವರಿಗೆ ಗೊತ್ತಿದೆಯೋ ಇಲ್ಲವೋ. ಆದರೆ ಯಾವುದೇ ನಿರ್ಮಾಪಕರು ಸಂಘಕ್ಕೆ ದೂರು ಹೇಳಿ ಸಹಾಯ ಬಯಸಿದರೆ ಅವರಿಗೆ ಸಿಗುವುದು ಒಂದೇ ಉತ್ತರ 'ಏನೂ  ಮಾಡೋಕಾಗಲ್ಲ ಸರ್. ಒಕ್ಕೂಟದ ನಿಯಮ ಇರೋದೇ ಹಾಗೆ'
    ಹಾಗಾಗಿ ಈಗ ನಿಮ್ಮ ಒಕ್ಕೂಟವೇ ನಮಗೆ ಬೇಡ  ಎಂದು ಹೇಳಿ ಒಕ್ಕೂಟದ ಸಾರ್ವಭೌಮತ್ವ ಕೊನೆಗೊಳಿಸುವುದು ನಿರ್ಮಾಪಕರ ಅನಿವಾರ್ಯತೆ. ಅದಕ್ಕಾಗಿಯೇ ಅವರು ರಾಜೇಶ್ ಬ್ರಹ್ಮಾವರ್ ನೇತೃತ್ವದ ಒಕ್ಕೂಟಕ್ಕೂ ಮಾನ್ಯತೆ ದೊರಕಲಿ ಎನ್ನುತ್ತಿದ್ದಾರೆ. ಆದರೆ ಅದರಿಂದ ಎಷ್ಟು ಸಹಾಯವಾಗುತ್ತದೋ ಗೊತ್ತಿಲ್ಲ. ಇವತ್ತು ಒಳ್ಳೆಯ ನಡವಳಿಕೆ ತೋರಿಸುತ್ತಿರುವ ಈ ಒಕ್ಕೂಟದ ಸದಸ್ಯರೂ ನಾಳೆ ಬದಲಾಗಬಹುದು. ಮತ್ತೆ ಸಮಸ್ಯೆ ಮರುಕಳಿಸಬಹುದು. ಹಾಗಾಗಿ ಒಕ್ಕೂಟದ ಕಾನ್ಸೆಪ್ಟ್ ಅನ್ನೇ ಬದಿಗಿಟ್ಟು ನಿರ್ಮಾಪಕ ತನಗೆ ಬೇಕಾದವರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕಿದೆ. ಸದ್ಯಕ್ಕೆ ವಾಣಿಜ್ಯ ಮಂಡಳಿಯೇನೋ ಇಂಥದ್ದೇ ಹೇಳಿಕೆ  ಕೊಟ್ಟಿದೆ. ಈ ಮಾತುಗಳ ವ್ಯಾಪ್ತಿ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಯಾವ ಒಕ್ಕೂಟಕ್ಕೂ ಸೇರದ ವ್ಯಕ್ತಿಗಳನ್ನು ನಿರ್ಮಾಪಕ ಬಳಸಿಕೊಳ್ಳಬಹುದಾ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ನಿರ್ಮಾಪಕರ ಹಣ ಪೋಲಾಗದೆ ಅದು ಕೇವಲ ಸೃಜನಶೀಲ ವಿಷಯಗಳಿಗಾಗಿ ಖರ್ಚಾಗಬೇಕಿದೆ.


-ಹರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.