ಹಳೆಯ ತಲೆ ಮತ್ತು ಹೊಸ ಅಲೆ

'ದೀವಾರ್' ಚಿತ್ರದಲ್ಲಿ ತನ್ನ ಸೋದರನನ್ನೇ ಅರೆಸ್ಟ್ ಮಾಡಬೇಕಾದ ಅನಿವಾರ್ಯತೆಯಲ್ಲಿ ದ್ವಂದ್ವದಲ್ಲಿರುವ ಪೊಲೀಸ್ ಆಫೀಸರ್ ಒಬ್ಬ ಮಾರ್ಕೆಟ್ನಲ್ಲಿ 'ಕಳ್ಳ, ಕಳ್ಳ' ಎಂದು ಜನ ಕೂಗಿದ್ದನ್ನು ನೋಡಿ ಒಬ್ಬ ಹುಡುಗನನ್ನು ಹಿಂಬಾಲಿಸುತ್ತಾನೆ. ಪ್ರಯಾಸ ಪಟ್ಟು ಅವನ ಮನೆಯವರೆಗೂ ಅವನನ್ನು ಚೇಸ್ ಮಾಡಿಕೊಂಡು ಹೋದಮೇಲೆ ಅಲ್ಲಿ ಅವನು ಕದ್ದಿದ್ದು ಒಂದು ಪೀಸ್ ಬ್ರೆಡ್ ಎಂಬುದು ಗೊತ್ತಾಗುತ್ತದೆ. ಅದರ ಜೊತೆಯಲ್ಲಿ ಹಾಸಿಗೆ ಹಿಡಿದ ಆ ಹುಡುಗನ ತಾಯಿ. ಅಪ್ಪ ವಯಸ್ಸಾಗಿ ನಿತ್ರಾಣವಾಗಿರುವ ನಿವೃತ್ತ ಶಿಕ್ಷಕ. ಅಂಥ ಹುಡುಗನನ್ನು ಹಿಡಿದು ತಾನು ತಪ್ಪು ಮಾಡಿದೆ ಎಂದು ಆ ಪೊಲೀಸ್ ಆಫೀಸರ್ ಅಂದುಕೊಳ್ಳುತ್ತಿರುವಾಗ ಆ ಹುಡುಗನ ತಂದೆ 'ಬ್ರೆಡ್ ಕದ್ದರೂ ಅದು ಕಳ್ಳತನನೇ, ದುಡ್ ಕದ್ದರೂ ಕಳ್ಳತನಾನೇ. ಕರ್ಕೊಂಡ್ ಹೋಗಿ ನನ್ ಮಗನ್ನ' ಎನ್ನುತ್ತಾನೆ. ಅದನ್ನು ಕೇಳಿ 'ಜೀವನದ ಇಂಥ ಪಾಠ ಒಬ್ಬ ಮಾಸ್ತರರಿಂದ ಅಲ್ಲದೆ ಇನ್ಯಾರಿಂದ ಕಲಿಯೋಕೆ ಸಾಧ್ಯವಿತು'್ತ ಎನ್ನುವ ಡೈಲಾಗ್ ಪೊಲೀಸ್ ಆಫೀಸರ್ ಪಾತ್ರಧಾರಿ ಶಶಿಕಪೂರ್ ಬಾಯಿಂದ ಬರುತ್ತದೆ.
'ನಾಗರಹಾವು' ಚಿತ್ರದಲ್ಲಿ, ಅಲ್ಲಿಯವರೆಗೂ ರಾಮಾಚಾರಿಯ ಜೊತೆ ಎಕ್ಕಾ ಮಕ್ಕಾ ಜಗಳ ಆಡುತ್ತಿದ್ದ ಮಾರ್ಗರೆಟ್ ಅವನು ಕುಡಿದಿಟ್ಟ ಹಾಲಿನ ಗ್ಲಾಸಿನ ಕೊನೆಯ ಹನಿ ಕುಡಿದು ತನ್ನಲ್ಲಿ ಪ್ರೀತಿ ಮೊದಲ ಹನಿ ಜಿನುಗುವುದನ್ನು ಸೂಚ್ಯವಾಗಿ ಹೇಳುತ್ತಾಳೆ.
'ಕೃಷ್ಣನ್ ಲವ್ಸ್ಟೋರಿ'ಯಲ್ಲಿ ನಾಳೆ ಬೆಳಗ್ಗೆ ಬೇರೆ ಹುಡುಗನ ಜೊತೆ ಓಡಿ ಹೋಗುವ ಯೋಜನೆ ಹಾಕಿಕೊಂಡಿರುವ ನಾಯಕಿ, ನಾಯಕನ ಬಳಿ ಬಂದು ಯಾವ ಸುಳಿವೂ ನೀಡದೇ, ರಸ್ತೆ ಬದಿಯಲ್ಲಿ ನಿಂತು 'ಹೋಗ್ಬರ್ತೀನಿ ಕೃಷ್ಣ' ಎನ್ನುತ್ತಾಳೆ. ಆ ಹೊತ್ತಿನಲ್ಲಿ ಏನೂ ಅನ್ನಿಸದಿದ್ದರೂ ಆ ದೃಶ್ಯ ಪ್ರೇಕ್ಷಕರಿಗೆ ಚಿತ್ರದುದ್ದಕ್ಕೂ ಮತ್ತೆ ಮತ್ತೆ ನೆನಪಾಗಿ ಕಾಡುತ್ತದೆ.
'ಕಡ್ಡಿಪುಡಿ' ಚಿತ್ರದಲ್ಲಿ ರೌಡಿಸಂ ಬಿಟ್ಟ ಹುಡುಗನನ್ನು ಅವನಿನ್ನೂ ರೌಡಿ ಎಂದೇ ಬಿಂಬಿಸಲು ಅವನ ಕೈಗೆ ಲಾಂಗ್ ಕೊಟ್ಟು ಜನಸಂದಣಿ ಇರುವ ಪ್ರದೇಶದಲ್ಲಿ ಜೀಪಿನಿಂದ ಇಳಿಸಿಹೋಗುತ್ತಾರೆ ಪೊಲೀಸರು. ಜನ ಅವನ ಕೈಯಲ್ಲಿ ಲಾಂಗ್ ನೋಡಿ ಅವನು ರೌಡಿಸಂ ಬಿಟ್ಟಿಲ್ಲ ಎಂದುಕೊಳ್ಳುತ್ತಾರೆ. ಅದೇಷ್ಟೋ ಸೀನುಗಳು ಅಥವಾ ಕೆಜಿಗಟ್ಟಲೆ ಡೈಲಾಗ್ಗಳಲ್ಲಿ ಹೇಳಬೇಕಿದ್ದುದನ್ನು ಒಂದೇ ದೃಶ್ಯದಲ್ಲಿ ಮಾತು ಕಥೆಯಿಲ್ಲದೆ ಮುಗಿಸಲಾಗುತ್ತದೆ.
'ಕಿಸೀಕೆ ದರ್ದ್ ಮಿಲ್ ಸಕೇ ತೊ ಲೇ ಉಧಾರ್' ಎನ್ನುತ್ತಾ ತನಗೆ ಸಿಕ್ಕ ಪರ್ಸ್ ಒಂದನ್ನು ಅದರ ಮಾಲೀಕನಿಗೆ ವಾಪಸ್ಸು ಕೊಡಲು ಅವನ ಮನೆಗೆ ಹೋಗುತ್ತಾನೆ 'ಅನಾರಿ' ಚಿತ್ರದ ರಾಜ್ಕಪೂರ್. ಆ ಶ್ರೀಮಂತನ ಮನೆಯಲ್ಲಿ ಅಂದು ದೊಡ್ಡ ಪಾರ್ಟಿ. ಸಿಕ್ಕ ಪರ್ಸನ್ನು ವಾಪಸ್ ಕೊಟ್ಟಿದ್ದಕ್ಕೆ 'ದಡ್ಡ' ಎಂಬ ಬಿರುದು ಸಿಕ್ಕರೂ ಅನಾರಿಗೆ ಪಾರ್ಟಿಗೆ ಎಂಟ್ರಿ ಸಿಗುತ ್ತದೆ. ಆದರೆ ಕುಡಿದು, ಮೋಜು ಮಾಡುತ್ತಿದ್ದ ಅಷ್ಟೊಂದು ಶ್ರೀಮಂತರನ್ನು ನೋಡಿ 'ಇವರೆಲ್ಲ ಹೇಗೆ ಇಷ್ಟು ದೊಡ್ಡ ಜನ ಆದರು?' ಎಂಬ ಅನಾರಿಯ ಅಮಾಯಕ ಪ್ರಶ್ನೆಗೆ ಶ್ರೀಮಂತ ಉತ್ತರ ಕೊಡುತ್ತಾನೆ 'ಎಂದೋ ಒಂದು ದಿನ ಇಂತದ್ದೇ ಪರ್ಸ್ ಅವರಿಗೂ ಸಿಕ್ಕಿತ್ತು. ಆದ್ರೆ ಅವರ್ಯಾರೂ ಅದನ್ನ ನಿನ್ನ ಥರಾ ವಾಪಸ್ ಕೊಡಲಿಲ್ಲ'.
ನಮ್ಮ ಇಂದಿನ ಎಷ್ಟು ಸಿನಿಮಾಗಳಲ್ಲಿ ಇಂಥ ಚಿತ್ರಕಥೆಯನ್ನು ನಿರೀಕ್ಷಿಸಲು ಸಾಧ್ಯ? ಹಾಗೆ ನೋಡಿದರೆ, ಇತ್ತೀಚಿನ ಹ್ಯಾವೆಲ್ಸ್ ಫ್ಯಾನ್ಗಳ ಎಲೆಕ್ಷನ್ ಸ್ಪೆಷಲ್ ಜಾಹೀರಾತುಗಳಲ್ಲೇ ಕೇವಲ ಫ್ಯಾನ್ಗಳನ್ನು ಮೆಚ್ಚಿಸಲು ಯತ್ನಿಸುವ ನಮ್ಮ ಸಿನಿಮಾಗಳಿಗಿಂತ ಹೆಚ್ಚಿನ ಲೈಫ್ ಕಾಣಿಸುತ್ತದೆ ಎಂದರೆ ತಪ್ಪಿಲ್ಲ.
ಸಿನಿಮಾ ನೋಡುತ್ತಾ 'ಕಾಶ್ ಮೇ ಉಸ್ಕೀ ಜಗಹ್ ಹೋತಾ' ಎಂದು ನಿಟ್ಟುಸಿರು ಬಿಡುವ ಪ್ರೇಕ್ಷಕರನ್ನು ಅರಿತುಕೊಂಡು, 'ತುಮೇ ಚಾಹಿಯೇ ಯೇ ವಾಲಾ ಸ್ಕ್ರೀನ್ ಪ್ಲೇ' ಎನ್ನುತ್ತಿದ್ದ ಜಾವೆದ್ ಅಖ್ತರ್, ಸಲೀಂರ ಚಿತ್ರಕಥೆ ಈಗ ವಿರಳ. ನಾಯಕನನ್ನೇ ನೋಡುತ್ತಾ ಪ್ರೇಕ್ಷಕನಿಗೆ 'ನಾನು ಆ ಜಾಗದಲ್ಲಿ ಇರಬೇಕಿತ್ತು' ಅಥವಾ 'ಸದ್ಯ, ನಾನು ಅವನ ಜಾಗದಲ್ಲಿ ಇಲ್ಲವಲ್ಲ' ಎನಿಸುವಂಥ ಕ್ಯಾರೆಕ್ಟರ್ಗಳು ಮಾಯವಾಗುತ್ತಿವೆ. ಹಾಗಾಗಿ ಕಾಮನ್ ಮ್ಯಾನ್ ಎಂಬ ಕಾನ್ಸೆಪ್ಟೇ ತಮ್ಮ ಸಿನಿಮಾಗಳಿಂದ ದೂರ. ನಮ್ಮಲ್ಲಿ ಭ್ರಷ್ಟಾಚಾರದ ವಿರುದ್ಧದ ಕಥೆಗಳು ಬಂದರೂ ಅವುಗಳಲ್ಲಿ ಕಾಮನ್ ಮ್ಯಾನ್, ಆ್ಯಂಗ್ರಿ ಯಂಗ್ಮ್ಯಾನ್ಗಳು ಬೇಗನೆ ಕಾಣೆಯಾಗಿ ತೆರೆಯ ಮೇಲೆ ಕೇವಲ ಸೂಪರ್ಮ್ಯಾನ್ಗಳಷ್ಟೇ ಕಾಣುತ್ತಾರೆ. ಹೀರೋ ಜೊತೆ ಪ್ರೇಕ್ಷಕ ತನ್ನನ್ನು ರಿಲೇಟ್ ಮಾಡ್ಕೊಂಡ್ರೆ ಅದು ನಿರ್ದೇಶಕನ ಯಶಸ್ಸು ಅಂತಾರೆ. ಆದರೆ, ಇಂಥಹ ಸೂಪರ್ಹೀರೋಗಳಿದ್ರೆ ಅವರ ಜೊತೆ ಪ್ರೇಕ್ಷಕ ತನ್ನನ್ನು ರಿಲೇಟ್ ಮಾಡಿಕೊಳ್ಳೋದಾದರೂ ಹೇಗೆ? ನಮ್ಮ ಸಿನಿಮಾಗಳಲ್ಲಿ ಕೇವಲ ಜೆಂಟಲ್ಮನ್, ಅನ್ನಿಯನ್, ನಾಯಕ್ಗಳು, ಇಲ್ಲಾಂದ್ರೆ ಕೈಯಲ್ಲಿ ಕೆಲಸ ಇಲ್ದೇ ಬರೀ ಲವ್ ಮಾಡ್ಕೊಂಡ್ ಓಡಾಡೋ ನಾಲಾಯಕ್ಗಳೇ ಹೆಚ್ಚು. ಅವರ ಜೊತೆಗೆ ಅಣ್ಣಾಬಾಂಡ್ಗಳು, ಚಿಂಗಾರಿ ಉಗುಳುವ ಸಾರಥಿಗಳು, ಬಚ್ಚನ್, ಭಜರಂಗಿಗಳು, ಇಲ್ಲಾಂದ್ರೆ ಕಮರ್ಷಿಯಲ್ಲೂ ಅಲ್ಲದೆ, ಆರ್ಟೂ ಅಲ್ಲದ ಸಿನಿಮಾ ಮಾಡೋ ಎಡಬಿಡಂಗಿಗಳು ಇವರಷ್ಟೇ ಕಾಣುತ್ತಾರೆ.
ಕಾಸು ಕೊಟ್ರೆ ಕಾಚಾ ಹಾಕ್ಕೊಂಡು ಸೆಕ್ಸ್ ಸಿನಿಮಾ ಬೇಕಾದ್ರೂ ಮಾಡ್ತೀನಿ, ರಿಮೇಕ್ ನನ್ನ ತಾಯಿ ಇದ್ದಂತೆ ಎನ್ನುವ ಸ್ಟಾರ್ ನಟರೇ ಇಲ್ಲಿರುವುದು. ರಿಮೇಕ್ ಮಾಡೋದ್ರಲ್ಲಿ ಏನ್ ತಪ್ಪು ಎನ್ನುವವರಿಗೆ, ಬ್ರೆಡ್ ಕದ್ದರೂ ಕಳ್ಳತನನೇ, ದುಡ್ ಕದ್ದರೂ ಕಳ್ಳತನಾನೇ ಎಂಬ ಮಾತುಗಳು ಅರ್ಥವಾಗುವುದು ಕಷ್ಟ.
ಇಂಥವರ ಜೊತೆಗೆ ಈಗೀಗ ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ನಿಲ್ಲುವ ಚಿತ್ರಕಥೆ ಬರೆದು ಅದೇ ಸಾಧನೆ ಎಂದುಕೊಳ್ಳುವ ಪ್ರಯೋಗ ಪ್ರವೀಣರೂ ಹೆಚ್ಚಾಗಿದ್ದಾರೆ. ನಾವು ಮಾಡುವ ಸಿನಿಮಾ ನಿಮ್ಮಂಥವರಿಗಲ್ಲ ಎಂದೇ ಇವರ ಮಾತುಗಳು ಶುರುವಾಗುತ್ತವೆ. ಅಲ್ಲಾ ಸ್ವಾಮಿ, ದೇವರ ಮನೆಯಲ್ಲಿ ಬಂಗಾರ ಇಟ್ಟಿದ್ದೇನೆ ಎನ್ನುವ ನೀವು, ಪ್ರೇಕ್ಷಕರಿಗೆ ಮನೆಯ ಮೈನ್ಡೋರ್ ಕೀಲಿಯನ್ನೇ ಕೊಡದಿದ್ದರೆ ಹೇಗೆ? ಎಂಬ ಪ್ರಶ್ನೆಯ ಲಾಜಿಕ್ ಇಂಥವರಿಗೆ ಅರ್ಥವಾಗುವುದಿಲ್ಲ. ಸಾಮಾನ್ಯನಿಗೂ ಅರ್ಥವಾಗುವಂಥ ಬೇಸಿಕ್ ಚಿತ್ರಕಥೆಯ ಬಗ್ಗೆ ಒಂದು ಗೌರವ, ಭಕ್ತಿ ಇಟ್ಟುಕೊಂಡು, ಅದನ್ನು ಮಾಡಿದ ನಂತರ ತಮ್ಮ ಕೆಪಾಸಿಟಿ ತೋರಿಸುವ ಪ್ರಯತ್ನ ಮಾಡಬೇಕು ಎಂಬ ಮಾತುಗಳು ಇವರಿಗೆ ರುಚಿಸುವುದಿಲ್ಲ. ನಮ್ ಸಿನಿಮಾ ಎರಡನೇ ಸಲ ನೋಡಿದ್ರೆ ಅರ್ಥ ಆಗುತ್ತೆ ಅನ್ನೋ ಹಾಸ್ಯಾಸ್ಪದ ವಾದ ಮುಂದಿಡುತ್ತಾರೆ ಇವರು. ಜನ ಒಂದ್ ಸಲ ಬಂದು ಕನ್ನಡ ಸಿನಿಮಾ ನೋಡೋದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಎರಡನೇ ಸಲ ಬಂದು ನೋಡಿ ಅರ್ಥ ಆಗುತ್ತೆ ಅನ್ನೋದು ಎಷ್ಟು ಸರಿ?. ಯಾರಿಗೆ ಪುರುಸೊತ್ತಿರುತ್ತೆ ಎರಡನೇ ಸಲ ನೋಡೋಕೆ? ಅಲ್ಲದೆ ಯಾಕೆ ನೋಡಬೇಕು ಹೇಳಿ? ಅರ್ಥ ಮಾಡಿಕೊಳ್ಳೋದಕ್ಕಾಗಿ ಒಂದು ಚಿತ್ರವನ್ನು ಎರಡನೇ ಸಲ ನೋಡುವ ದರ್ದು ಯಾರಿಗೂ ಇರೋದಿಲ್ಲ. ಇರಬೇಕು ಅಂತ ಬಯಸೋದೂ ತಪ್ಪು. ಒಂದು ಚಿತ್ರವನ್ನು ಎರಡನೇ ಸಲ ನೋಡೋದು ಖುಷಿಗೆ. ಮೊದಲನೆ ನೋಟಕೆ ನಿನ್ನ ಮೇಲೆ ನನಗೆ ಮನಸಾಯ್ತು ಎನ್ನುವ ಪ್ರೇಕ್ಷಕ ಎರಡನೇ ಸಲಕ್ಕೆ ಮನಸಾಗಿ ಲವ್ವಾಯ್ತು ಎನ್ನಬೇಕೆ ಹೊರತು ಮೊದಲನೇ ಬಾರಿಗೆ ಸುಸ್ತಾಯ್ತು ಎನ್ನಬಾರದು. ಎ, ಉಪೇಂದ್ರರ ಚಿತ್ರಗಳ ಥರ ಮೊದಲ ಸಲ ಎಂಜಾಯ್ ಮಾಡಿ, ಸ್ವಲ್ಪ ಕನ್ಫ್ಯೂಸ್ ಆಗಿ ಕುತೂಹಲದಿಂದ ಎರಡನೇ ಸಲ ನೋಡಬೇಕು ಅಂತ ಪ್ರೇಕ್ಷಕರಿಗೆ ಅನ್ನಿಸಿದರೆ ಅದು ನಿರ್ದೇಶಕರ ಗೆಲುವು. ಅದನ್ನು ಬಿಟ್ಟು, ಸಿನಿಮಾವನ್ನು ಎರಡನೇ ಸಲ ನೋಡಿದಾಗ ಮಾತ್ರ ಎಂಜಾಯ್ ಮಾಡ್ತೀರ ಅಂದ್ರೆ ಮೊದಲನೇ ಸಲ ಯಾವ ಪುರುಷಾರ್ಥಕ್ಕೆ ನೋಡಬೇಕೋ ಗೊತ್ತಿಲ್ಲ. ಇಂಥ ಮನೋಭಾವನೆಯಿಂದ ಸಿನಿಮಾ ಮಾಡಿದರೆ ಇನ್ನು ಮುಂದೆ 'ಒಂದ್ ಸಲ ನಮ್ ಸಿನಿಮಾ ನೋಡಿ', ಎನ್ನುವುದರ ಬದಲು 'ಎರಡ್ಸಲ ನಮ್ ಸಿನಿಮಾ ನೋಡಿ' ಎಂದು ಹೇಳಬೇಕಾದ ಪರಿಸ್ಥಿತಿ ಬರಬಹುದು ಅಷ್ಟೆ.
ಹೀರೋಯಿಸಂನ ಬೆನ್ನು ಬಿದ್ದು 'ನಮ್ ಸಿನಿಮಾ ಸೂಪರ್ ಹಿಟ್' ಎಂದು ಎದೆತಟ್ಟಿಕೊಳ್ಳುವುದು, 'ನಮ್ಮ ಸಿನಿಮಾ ನಿಮ್ಮಂಥವರಿಗಲ್ಲ, ನಾನು 10 ವರ್ಷದ ನಂತರ ಬರಬೇಕಾಗಿದ್ದ ಸಿನಿಮಾ ಮಾಡಿದ್ದೇನೆ, ಐ ಆ್ಯಮ್ 10 ಇಯರ್ಸ್ ಅಹೆಡ್ ಆಫ್ ಆಲ್' ಎಂದು ವೃಥಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದನ್ನು ಬಿಟ್ಟು, ಪ್ರೇಕ್ಷಕರ ಮನಸ್ಸು ಮುಟ್ಟುವಂಥ ಚಿತ್ರಕಥೆಗಳನ್ನು ಬರೆಯುವತ್ತ ನಮ್ಮ ಬರಹಗಾರರು ಯೋಚಿಸಿದರೆ ಹೊಸ ಅಲೆ ಮತ್ತು ಹಳೆಯ ತಲೆಗಳ ವಿಚಾರಸಂಗಮವಾಗುವಂಥ ಉತ್ಕೃಷ್ಠ ಸಿನಿಮಾಗಳನ್ನು ಪ್ರೇಕ್ಷಕ ನಿರೀಕ್ಷಿಸಬಹುದು.
-ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


