

ಸಿಡ್ನಿ: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಟ್ಯಾಕ್ಸಿ ಚಾಲಕನಿಗೆ ೧೩ ಬಾರಿ ಚಾಕುವಿನಿಂದ ಇರಿದ ಆರೋಪ ಎದುರಿಸುತ್ತಿರುವನೊಬ್ಬ, ವಿಚಾರಣೆ ವೇಳೆಯಲ್ಲಿ ತನ್ನ ಈ ಕೃತ್ಯಕ್ಕೆ 'ರಕ್ತ ಸಿಕ್ತ ಸಿನೆಮಾ'ಗಳೇ ಕಾರಣ ಎಂದಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
೧೨ ಬಾಟಲ್ ಬಿಯರ್ ಕುಡಿದು, ೭೧ ವಷದ ಟ್ಯಾಕ್ಸಿ ಚಾಲಕ ನೀಲ್ ಕೆಂಟ್ ಎಂಬುವವನಿಗೆ ಡಿಸೆಂಬರ್ ೩೦ ೨೧೦೩ ರಂದು ಚಾಕುವಿನಲ್ಲಿ ಇರಿದ ಆರೋಪ ಎದುರಿಸುತ್ತಿರುವ ೩೫ ವರ್ಷದ ಲುಕ್ ವಿಲಿಯಂ ವುಡ್ಸ್ ನ್ಯಾಯಾಲಯದಲ್ಲಿ ಹೀಗೆ ಹೇಳಿಕೊಂಡಿದ್ದಾನೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ತಾನು ಅಪರಾಧ ಎಸಗಿದ ಶುಕ್ರವಾರದಂದು ಎರಡು ಹಿಂಸಾತ್ಮಕ ಸಿನೆಮಾಗಳು 'ಟೆಕ್ಸಾಸ್ ಚೈನ್ ಸಾ ಮಸ್ಸಾಕರ್' ಮತ್ತು 'ರಾಂಗ್ ಟರ್ನ್ ' ನೋಡಿದ್ದೆ ಎಂದು ವುಡ್ಸ್ ಕೋರ್ಟ್ ನಲ್ಲಿ ತಿಳಿಸಿದ್ದಾನೆ.
'ಈ ಸಿನೆಮಾಗಳು ನನಗೆ ರಕ್ತದ ರುಚಿ ತೋರಿಸಿದವು" ಎಂದಿರುವ ಅವನು "ನನಗೆ ಕೊಲ್ಲಬೇಕು, ಹೆಚ್ಚು ಜನರನ್ನು ಕೊಲ್ಲಬೇಕು ಎಂಬ ರುಚಿ ಹತ್ತಿಸಿತು" ಎಂದು ಕೂಡ ಅವನು ಹೇಳಿದ್ದಾನೆ.
ತಾನು ಅಪರಾಧಿ ಎಂದು ಒಪ್ಪಿಕೊಂಡಿರುವ ವುಡ್ಸ್ "ನಾನು ಕುಡಿದಿದ್ದೆ ಮತ್ತು ವಿಶ್ವದ ಬಗ್ಗೆ ಕುಪಿತನಾಗಿದ್ದೆ. ಈ ಸಿನೆಮಾಗಳನ್ನು ನೋಡಿ ಹಿಂಸೆಯನ್ನು ಅನುಕರಿಸಬೇಕೆಂದೆನಿಸಿತು" ಎಂದಿದ್ದಾನೆ.
೩೦ ಸೆಂಟಿ ಮೀಟರ್ ಚಾಕುವೊಂದನ್ನು ಹಿಡಿದು ಕೊಳ್ಳೆ ಹೊಡೆಯಲು ನಗರಕ್ಕೆ ವುಡ್ಸ್ ಬಂದಿದ್ದ. ಕೊಳ್ಳೆ ಹೊಡೆಯಲು ಯಾವುದೇ ಸೂಕ್ತ ವ್ಯಕ್ತಿ ಸಿಗದಿದ್ದಾಗ ಟ್ಯಾಕ್ಸಿಯೊಳಗೆ ಹೊಕ್ಕು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.