

ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.
ಕಿಚ್ಚಾ ಸುದೀಪ್ ಅಭಿಮಾನಿಗಳ ಟ್ವಿಟರ್ ಖಾತೆಯೊಂದರಿಂದ ಇಂತಹುದೊಂದು ಸುದ್ದಿ ಕೇಳಿಬಂದಿದ್ದು, ಟೀಂ ಕಿಚ್ಚಾ ಸುದೀಪ್ ಎಂಬ ಖಾತೆದಾರರು ನಟ ಸುದೀಪ್ ಅವರು ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಜುಲೈ 7 ರಂದು ಲಂಡನ್ ನಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಶೀಘ್ರದಲ್ಲೇ ಸುದೀಪ್ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲಿದ್ದಾರೆ ಎಂದು ಟ್ವೀಟ್ ಮಾಡಿದೆ.
ಅಂತೆಯೇ ಸುದೀಪ್ ಅಭಿನಯಿಸುತ್ತಿರುವ ನೂತನ ಚಿತ್ರದ ಹೆಸರು ರೈಸನ್ ಎಂದು ಖಾತೆಯಲ್ಲಿ ಬರೆಯಲಾಗಿದ್ದು, ಚಿತ್ರವನ್ನು ಹಾಲಿವುಡ್ ನ ಖ್ಯಾತ ನಿರ್ದೇಶಕ ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದು, ಹೆಬ್ಬುಲಿ ಚಿತ್ರದಂತೆಯೇ ಸುದೀಪ್ ಈ ಚಿತ್ರದಲ್ಲೂ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಟ್ವೀಟ್ ಮಾಡಿದೆ. ಇನ್ನು ಈ ಸುದ್ದಿಗೆ ಸಂಬಂಧಿಸಿದಂತೆ ನಟ ಸುದೀಪ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಸುದ್ದಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ಬಾಲಿವುಡ್ ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಸುದೀಪ್ ಬಳಿಕ ತೆಲುಗಿನ ಈಗ ಚಿತ್ರದಲ್ಲಿ ಅಭಿನಯಿಸಿದ್ದರು. ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಬಾಹುಬಲಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿ ಸುದೀಪ್ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೂ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
#Xclusive & Proud News : ಹಾಲಿವುಡ್ ಮೂವಿಗೆ ಕಿಚ್ಚ ಸುದೀಪ್ ಸಹಿ. Shooting Starts From July 7 @ London