

ಬೆಂಗಳೂರು: ಸ್ಯಾಂಡಲ್ ವುಡ್ ಬೆಡಗಿ ನಟಿ ರಾಗಿಣಿಗೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದು, ಯಲಹಂಕದಲ್ಲಿರುವ ಅವರ ನಿವಾಸಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸರ್ಚ್ ವಾರೆಂಟ್ ನೊಂದಿಗೆ ತೆರಳಿರುವ ಸಿಸಿಬಿ ಪೊಲೀಸರು ಯಲಹಂಕದ ಜ್ಯುಡಿಷಿನಲ್ ಲೇಓಟ್ ನಲ್ಲಿರುವ ರಾಗಿಣಿಯವರ ಅಪಾರ್ಟ್'ಮೆಂಟ್ ನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಶೋಧಕಾರ್ಯದ ವೇಳೆ ರಾಣಿಯವರು ಮನೆಯಲ್ಲಿಯೇ ಇದ್ದಾರೆಂದು ಹೇಳಲಾಗುತ್ತಿದ್ದು, ಶೋಧಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ಖ್ಯಾತ ನಟಿ ರಾಗಿಣಿ ಗೆಳೆಯ ಹಾಗೂ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿ ಶಂಕರ್ ನನ್ನು ಸಿಸಿಬಿ ಪೊಲೀಸರು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಿದ್ದರು. ಅಪ್ರ ಗೆಳೆಯನ ಬಂಧನ ಬೆನ್ನಲ್ಲೇ ಇದೀಗ ರಾಗಿಣಿ ದ್ವಿವೇದಿಯವರಿಗೂ ಬಂಧನ ಭೀತಿ ಶುರುವಾಗಿದೆ.
ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಿದ್ದರು ಗುರುವಾರ ರಾಗಿಣಿಯವರು ವಿಚಾರಣೆಗೆ ಗೈರಾಗಿದ್ದರು. ವೈಯಕ್ತಿಕ ಕಾರಣ ನೀಡಿ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಒಪ್ಪದ ಸಿಸಿಬಿ ಪೊಲೀಸರು, 2ನೇ ಬಾರಿ ನೋಟಿಸ್ ನೀಡಿದ್ದು, ಮತ್ತೆ ಗೈರಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ.