ರಜನಿಕಾಂತ್ ಜೋಕುಗಳಿಗೆ ಬರವಿಲ್ಲವೇನೋ? ಈ ತನಕ ಸಾವಿರಕ್ಕೂ ಹೆಚ್ಚು ಜೋಕುಗಳು ಬಂದಿರಲಿಕ್ಕೆ ಸಾಕು. ಇನ್ನು ಬರಲಿಕ್ಕಿಲ್ಲ, ಸರಕೆಲ್ಲ ಖಾಲಿಯಾಯ್ತು ಎಂದುಕೊಳ್ಳುತ್ತಿರುವಾಗ ಮತ್ತಷ್ಟು ಬರುತ್ತವೆ. ಅಮೆರಿಕದ ಚಕ್ನೋರಿಸ್ ರಜನಿಕಾಂತ್ ಮುಂದೆ ಏನೇನೂ ಅಲ್ಲ. ಅಷ್ಟೊಂದು ಪ್ರಮಾಣದಲ್ಲಿ ರಜನಿ ಜೋಕುಗಳು ಹರಿದಾಡುತ್ತಿವೆ. ರಜನಿ ಕುರಿತಾದ ಲೆಟೆಸ್ಟ್ ಜೋಕುಗಳು.
*ರಜನಿಕಾಂತ್ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳನ್ನು ಕೊಂದು ಹಾಕಿದ, ಬ್ಲೂ ಟೂಥ್ನಿಂದ.
* ರಜನಿಕಾಂತ್ ಕಂಪಾಸ್ ನೆರವಿನಿಂದ ನೇರ ಗೆರೆಯನ್ನು ಎಳೆಯಬಲ್ಲ.
* ರಜನಿಕಾಂತ್ ಎದೆ ಹಾಗೂ ನಾಡಿ ಬಡಿತವನ್ನು ಅಳೆಯುವುದು ರಿಕ್ಟರ್ (ಭೂಕಂಪದ ತೀವ್ರತೆಯನ್ನು ಅಳೆಯುತ್ತಾರಲ್ಲ)ಮಾಪಕದಿಂದ.
* ರುಪಾಯಿಯ ಹೊಸ ಚಿಹ್ನೆ ಇದೆಯಲ್ಲ ಅದು ಮೂಲತಃ ರಜನಿಕಾಂತ್ ಸಹಿ.
* ದೇವರು ರೋಬೋ ಸಿನಿಮಾ ನೋಡಿದ ಬಳಿಕ ಉದ್ಗರಿಸಿದ್ದು- ಓ ಮೈ ರಜನಿಕಾಂತ್!
* ರಜನಿಕಾಂತ್ ಮನೆಯಲ್ಲಿ ಮೇಡಂ ಟುಸಾಡ್ಸ್ ವಿಗ್ರಹವಿದೆಯಂತೆ.
* ಇಂಟೆಲ್ ಕಂಪನಿಯ ಹೊಸ ಸ್ಲೋಗನ್ - ರಜನಿಕಾಂತ್ ಇನ್ಸೈಡ್.
* ಅಲೆಗ್ಸಾಂಡರ್ ಗ್ರಾಹಂ ಬೆಲ್ ಟೆಲಿಫೋನ್ ಕಂಡು ಹಿಡಿದಾಗ ರಜನಿಕಾಂತ್ನಿಂದ ಆಗಲೇ ಎರಡು ಮಿಸ್ಡ್ ಕಾಲ್ ಬಂದಿತ್ತಂತೆ.
***
ಮೊನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡದ ಕ್ರಿಸ್ಗೇಲ್ ದಾಖಲೆ ಮಿಂಚಿನ ಶತಕ ಬಾರಿಸಿದ್ದೇ ಬಾರಿಸಿದ್ದು ರಜನಿ ಮಾದರಿಯಲ್ಲಗೇಲ್ ಜೋಕುಗಳೂ ಹರಿದಾಡುತ್ತಿವೆ. ಹಲವರ ಟ್ವೀಟ್ಗಳನ್ನು ಗಮನಿಸಿ.
ಗೇಲ್ ಆಡುವಾಗ ಎಚ್ಎಎಲ್ನವರು, ಬೆಂಗಳೂರಿನ ಮೇಲೆ ವಿಮಾನ ಹಾರಾಟದ ಶೆಡ್ಯೂಲನ್ನೇ ಬದಲಾಯಿಸುತ್ತಾರೆ.
-ಎಂ.ಎಸ್. ಧೋನಿ
ಜಸ್ಟ್ ಚಿಪಾಕ್ಗೆ ಈಗೊಂದು ಬಾಲ್ ಬಂದು ಬಿತ್ತು. ಮೋಸ್ಟ್ಲೀ, ಚಿನ್ನಸ್ವಾಮಿಯಿಂದಾನೇ ಬಂದಿರಬೇಕು.
-ಸುರೇಶ್ ರೈನಾ
ನೆಕ್ಸ್ಟ್ ಮ್ಯಾಚ್ನಲ್ಲಿ ಗೇಲ್ ಆಡೋದಿಲ್ಲ. ತಾವು ಹೊಡೆದ ಬಾಲ್ನಿಂದ ಗಾಯಗೊಂಡವರನ್ನು ಭೇಟಿ ಮಾಡಲು ಹೋಗುತ್ತಿದ್ದಾರೆ.
-ಅನ್ರಿಯಲ್ ಟೈಮ್ಸ್.
ಗೇಲ್ ಆಡುವಾಗ ಫೀಲ್ಡರ್ಗಳು ಪ್ರೇಕ್ಷಕರಾಗುತ್ತಾರೆ. ಪ್ರೇಕ್ಷಕರು ಫೀಲ್ಡರ್ಗಳಾಗುತ್ತಾರೆ.
-ಬ್ರಿಯಾನ್ ಲಾರಾ
ಗೇಲ್ ಅಂದ್ರೆ ಸೀರಿಯಸ್ 'ಸಿಕ್ಸ್-ಕಿಲ್ಲರ್'
-ನಿಧಿ ಸುಬ್ಬಯ್ಯ
ಮುಂದಿನ ಐಪಿಎಲ್ಗೆ ಹೊಸ ಟೀಂ- ಗೇಲ್ ಸೂಪರ್ ಸಿಕ್ಸರ್ಸ್. ಆಟಗಾರ ಒಬ್ಬನೇ ಗೇಲ್.
-ಫಸ್ಟ್ ಪೋಸ್ಟ್
ಬಹುಶಃ ಗೇಲ್ ಇವತ್ತು ಬ್ರೇಕ್ಫಾಸ್ಟ್ಗೆ ಡೈನೋಸಾರನ್ನೇ ತಿಂದು ಬಂದಿರಬೇಕು.
-ಜೀವಾ ಚಿತ್ರನಟ.
ಅವನು ಮನುಷ್ಯನಲ್ಲ. ಸುನಾಮಿ ಮಿಕ್ಸ್ ಆಗಿರೊ ನ್ಯೂಕ್ಲಿಯಾರ್ ಬಾಂಬ್.
-ಡರೇನ್ ಸ್ವಾಮಿ
ಗೇಲ್ ಸ್ಕೋರ್ ಕ್ರಾಸ್ ಮಾಡಿದ್ರೆ ಸಾಕು, ಪುಣೆ ಗೆದ್ದಂತೆ.
-ಫ್ಯಾನ್ಸ್
ಬ್ಯಾಟ್ಸ್ಮನ್ಗಳೆಲ್ಲ ಆರಾಮ್ ಆಗಿ ಟ್ವೀಟ್ ಮಾಡ್ತಿದ್ದಾರೆ. ಬೌಲರುಗಳ ಪಾಡು ಯಾರು ಕೇಳ್ಬೇಕು? ಬೌಲಿಂಗ್ ಮೆಷಿನ್ ಒಂದೇ ಪರಿಹಾರ.
-ಆರ್. ಅಶ್ವಿನ್
ದೇವರು ದೊಡ್ಡವನು. ಗೇಲ್ ಈ ಆಟ ಆಡಿದ್ದು ನಮ್ಮ ಟೀಂ ವಿರುದ್ಧ ಅಲ್ಲ.
-ಶಿಲ್ಪಾಶೆಟ್ಟಿ, ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ
ಅಬ್ಬಾ... ಒಳ್ಳೆ ಡಿಸಿಷನ್ ತಗೊಂಡೆ. ಕೀಪರ್ ಆಗೋ ಬದ್ಲು, ಬೌಲರ್ ಆಗಿದ್ದಿದ್ರೆ, ಗೇಲ್ಗೆ ಬೌಲ್ ಮಾಡೋಕಾಗ್ತಿತ್ತಾ?
-ಎಂ.ಎಸ್. ಧೋನಿ
ತುಂಬಾ ಹಸಿವಾಗುತ್ತಿದೆ. ಈಗ ಹೋಗಿ ಹೊಟ್ಟೆಗೇನಾದರೂ ತಿನ್ನಬೇಕು. ಕ್ರಿಸ್ಗೇಲ್ (ಬ್ಯಾಟಿಂಗ್ ಮುಗಿಸಿಕೊಂಡು ಪೆವಿಲಿಯನ್ಗೆ ಹೋಗುವಾಗ ಹೇಳಿದ ಮಾತು)
ಯಾರಿಗೂ ಸಿಗದ ಚಿಟ್ಟೆ...
ಚಿರಂಜೀವಿ ಅನ್ನಿಸಿಕೊಳ್ಳಬೇಕು. ಅಂಥದೊಂದು 'ಸ್ಟೇಜ್' ತಲುಪಲು ಏನೇನು ಮಾಡಬೇಕೆಂದು ಬಲ್ಲವರಿಂದ ತಿಳಿಯಬೇಕು ಎಂಬ ಆಸೆಯೊಂದು ಮೊಳಕೆಯೊಡೆಯಿತು. ನಾನು ತಡ ಮಾಡಲಿಲ್ಲ. ಕಂಡವರನ್ನೆಲ್ಲ ಪ್ರಶ್ನಿಸಿದೆ. ನನಗೆ ದಾರಿ ತೋರಿಸಿ ಎಂದು ಪ್ರಾರ್ಥಿಸಿದೆ.
'ಸದಾ ಸಂತೋಷದಿಂದಿರಲು ಸಾಧ್ಯವಾದರೆ ಆಗ ಚಿರಂಜೀವಿಯಾಗಲು ಸಾಧ್ಯ' ಎಂದು ಹಿರಿಯರು ಹೇಳಿದರು.
'ಸರಿ. ಸಂತೋಷವೆಂಬುದು ಎಲ್ಲಿದೆ' ಎಂದು ಪ್ರಶ್ನೆ ಹಾಕಿದೆ. ಅದು 'ಪ್ರೀತಿ'ಯಲ್ಲಿದೆ ಎಂದರು.
ಮರುದಿನದಿಂದಲೇ 'ಪ್ರೀತಿ'ಗೆ ಸಂಬಂಧಿಸಿದ ಒಂದೊಂದೇ ಕಥೆಗಳನ್ನು ಕೇಳುತ್ತ ಹೋದೆ. ಅಲ್ಲಿ ವಂಚನೆಯಿತ್ತು. ನಾಟಕವಿತ್ತು. ಕಣ್ಣೀರಿತ್ತು. ರಕ್ತದ ಕಲೆಯಿತ್ತು. ಪ್ರೀತಿಯ ಹೆಸರಲ್ಲಿ ಜಗಳ ಮಾತ್ರವಲ್ಲ, ಕೊಲೆಗಳೇ ನಡೆದು ಹೋಗಿದ್ದವು. ಅದರ ಮಧ್ಯೆ ಸಂತೋಷವನ್ನು ಹುಡುಕುವುದಾದರೂ ಎಲ್ಲಿ? ನಿರಾಸೆಯಿಂದ ಎದ್ದು ಬಂದೆ.
ಈ ಜಗತ್ತಿನಲ್ಲಿ ಶಾಂತಿ ನೆಲೆಸಿದರೆ, ಅವತ್ತೇ ಸಂತೋಷವೆಂಬುದು ಎಲ್ಲರ ಬದುಕಾಗುತ್ತದೆ ಎಂದು ಹಿರಿಯರು ಮತ್ತೆ ಪಿಸುಗುಟ್ಟಿದರು.
ಸುಮ್ಮನೇ ನನ್ನ ಸುತ್ತಲಿನ ಪ್ರಪಂಚವನ್ನು ಗಮನಿಸಿದೆ. ಇಲ್ಲಿ ಹುಲಿ ನಾಯಿಯನ್ನು, ನಾಯಿ-ಬೆಕ್ಕನ್ನು, ಬೆಕ್ಕು-ಇಲಿಯನ್ನು ಬೇಟೆಯಾಡಲು ಸಜ್ಜಾಗುತ್ತಿದ್ದವು. ಈ ಪ್ರಾಣಿಗಳನ್ನು ಮೀರಿಸುವಂತೆ, ಮನುಷ್ಯ-ಮನುಷ್ಯನನ್ನೇ ಬೇಟೆಯಾಡಲು ಕತ್ತಿ ಹಿರಿದು ನಿಂತಿದ್ದ. ಛೆ, ಇಲ್ಲೆಲ್ಲೂ ಸಂತೋಷವಿಲ್ಲ ಎನ್ನಿಸಿ ನಿರಾಶೆಯಾಯಿತು. ಆಗ, ನನ್ನ ಹಿಂದೆಯೇ ಬಂದ ಕೆಲವರು ಹಣದಿಂದ ಸಂತೋಷ ಸಿಗುತ್ತದೆ ಅಂದರು.
ಆದರೆ, ಎದುರಿಗೆ ಸಿಕ್ಕ ಉದಾಹರಣೆಗಳು ಬೇರೆಯದೇ ಕಥೆ ಹೇಳಿದವು: 'ಹಣದಿಂದ ಮನೆ ಸಿಗುತ್ತೆ. ಆಭರಣ ಸಿಗುತ್ತೆ. ನೌಕರಿ ಸಿಗುತ್ತೆ. ಕೆಲವೊಂದು ಸಂದರ್ಭದಲ್ಲಿ ಮರ್ಯಾದೆ ಸಿಗುತ್ತೆ. ಆದರೆ, ಹಣದಿಂದ ಯಾರಿಗೂ, ಯಾವತ್ತಿಗೂ ಸಂತೋಷ ಸಿಗುವುದಿಲ್ಲ... ಇದನ್ನೆಲ್ಲ ಕಂಡ ಮೇಲೆ, ಶ್ರೀಮಂತಿಕೆಯಲ್ಲಿ ಕಾಣಿಸದ ಸಂತೋಷ, ಬಡತನದ ಬದುಕಲ್ಲಿ ಕಾಣಬಹುದೇನೋ ಎನ್ನಿಸಿ ಅಲ್ಲಿಯೂ ಒಮ್ಮೆ ಇಣುಕಿ ನೋಡಿದೆ: ಬಡವರ ಮನೆಯಲ್ಲಿ ಸಂಕಟವೆಂಬುದು ಉದ್ದಕ್ಕೂ ಮೈ ಚಾಚಿಕೊಂಡು ಮಲಗಿ ಬಿಟ್ಟಿತ್ತು. ಇಷ್ಟೆಲ್ಲ ಅನುಭವಗಳು ಜತೆಯಾದ ಮೇಲೆ, ಸಂತೋಷವನ್ನು ಹುಡುಕಬೇಕು ಎಂಬುದರಲ್ಲಿ ಸ್ವಲ್ಪವೂ ಆಸಕ್ತಿ ಉಳಿದಿರಲಿಲ್ಲ. ತಕ್ಷಣವೇ ಮನಸ್ಸು ಬದಲಿಸಿ 'ಸುಖ' ಎಂದರೇನು ಎಂಬ ಹುಡುಕಾಟಕ್ಕೆ ನಿಂತೆ. ತಕ್ಷಣವೇ ಉತ್ತರ ಸಿಕ್ಕಿತು.
'ಸುಖ' ಎಂಬುದು ಸೆಕ್ಸ್ ಇದ್ದ ಹಾಗೆ. ಈ ಮಧುರ ಕ್ಷಣ ಹೀಗೆ ಬಂದು ಹಾಗೆ ಹೋಗಿ ಬಿಡುತ್ತೆ. ಆದರೆ ಸಂತೋಷವೆಂಬುದು ಹಾಗಲ್ಲ. ಅದು ಎಷ್ಟು ಹುಡುಕಿದರೂ ನಮಗೆ ಸಿಗುವುದೇ ಇಲ್ಲ... ಹಾಗಿದ್ದರೂ ಕೈಗೆ ಸಿಗದಿರುವ ಈ ಚಿಟ್ಟೆಯ ಹಿಂದೆಯೇ ಎಲ್ಲರೂ ಹೊರಟಿದ್ದೇವೆ ಎಂಬುದು ವಿಸ್ಮಯದ, ಮೋಜಿನ ಸಂಗತಿ...
***
ಇದು, ಪ್ರಖ್ಯಾತ ಲೇಖಕ ಪೌಲ್ ಕೊಯಿಲೋನ ಪುಟ್ಟ ಬರಹದ ಭಾವಾನುವಾದ.
ಪರಿಶ್ರಮ ಮತ್ತು ಪರಿಕಲ್ಪನೆ
ಇಬ್ಬರು ಗೆಳೆಯರು ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರೂ ಕಠಿಣ ಪರಿಶ್ರಮಿಗಳು. ಹಾಗೆಂದೇ ಬಾಸ್ಗೂ ಇವರಿಬ್ಬರು ಅಚ್ಚುಮೆಚ್ಚು. ಕಂಪನಿಯಲ್ಲಿ ಬೇರೆಲ್ಲರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದವರು ಇವರು. ಅದಕ್ಕೆ ಕಾರಣ ಅವರ ದಣಿವರಿಯದ ದುಡಿತ ಎಂಬುದು ಎಲ್ಲರಿಗೂ ತಿಳಿದಿತ್ತಾದ್ದರಿಂದ ಅವರಿಬ್ಬರ ಕುರಿತು ಕಂಪನಿಯ ಇತರರಿಗೂ ಮೆಚ್ಚುಗೆ ಇತ್ತು.
ಹೀಗಿರುವಾಗ ಅವರಲ್ಲಿ ಒಬ್ಬಾತನಾದ ಜಾನ್ಗೆ ಪ್ರಮೋಷನ್ ಸಿಕ್ಕಿತು. ಇನ್ನೊಬ್ಬಾತ ಪ್ರಾಣ್ಗೆ ಇದರಿಂದ ಇರಿಸುಮುರಿಸಾಯಿತು. ಆತ ನೇರವಾಗಿ ಬಾಸ್ ಬಳಿ ಕೇಳಿದ. ನಾವಿಬ್ಬರೂ ಸಮಬಲರಾಗಿ ನಮ್ಮ ಪರಿಶ್ರಮಗಳನ್ನು ವ್ಯಯಿಸುತ್ತಿರುವಾಗ ನನಗೆ ಮಾತ್ರ ಬಡ್ತಿ ದೊರೆತಿಲ್ಲವೇಕೆ ಎಂದು.
'ಇದಕ್ಕೆ ಉತ್ತರ ಹೇಳುತ್ತೇನೆ, ಅದಕ್ಕೆ ಮೊದಲು ಪಕ್ಕದ ಮಾರುಕಟ್ಟೆಗೆ ಹೋಗಿ ಮಾವಿನ ಹಣ್ಣು ಬಂದಿದೆಯಾ ನೋಡಿಕೊಂಡು ಬಾ' ಎಂದ ಬಾಸ್. ಬಾಸ್ ನಿರ್ದೇಶಿಸಿದ ಕೆಲಸಕ್ಕೆ ಯಾವತ್ತೂ ಒಲ್ಲೆ ಎಂದಿರದ ಪ್ರಾಣ್ ತಕ್ಷಣವೇ ಮಾರುಕಟ್ಟೆಗೆ ಹೋಗಿಬಂದ. ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿವೆ ಎಂಬ ಮಾಹಿತಿ ತಂದ. ಸರಿ, ಕೆಜಿಗೆ ಎಷ್ಟು ಎಂದು ಬಾಸ್ ವಿಚಾರಿಸಿದಾಗ, ಮತ್ತೆ ಮಾರುಕಟ್ಟೆಗೆ ಹೋಗಿ ಬೆಲೆ ಕೇಳಿಕೊಂಡು ಬಂದ.
ಅದಾದ ನಂತರ ಬಾಸ್, 'ಈಗ ಇದೇ ಕೆಲಸವನ್ನು ಜಾನ್ಗೆ ಹೇಳುತ್ತೇನೆ' ಎಂದು ಆತನನ್ನು ಇವನೆದುರಿಗೇ ಕರೆದು, 'ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿವೆಯಾ ತಿಳಿದುಕೊಂಡು ಬಾ' ಎಂದರು. ಕೆಲ ಸಮಯದ ಬಳಿಕ ಬಂದ ಜಾನ್ ಹೇಳಿದ- 'ಸರ್ ಮಾರುಕಟ್ಟೆಯಲ್ಲಿ ಒಟ್ಟೂ ಮೂರು ಮಂದಿ ಮಾವಿನಹಣ್ಣು ಮಾರುತ್ತಿದ್ದಾರೆ. ಒಬ್ಬಾತ ಕೆಜಿಗೆ 54 ರುಪಾಯಿ ಹೇಳುತ್ತಿದ್ದಾನೆ. ಇನ್ನೊಬ್ಬ 60 ರುಪಾಯಿಗೆ ಮಾರುತ್ತಿದ್ದಾನೆ. ಮತ್ತೊಬ್ಬನ ಬಳಿ ಅನೇಕ ಜಾತಿಯ ಮಾವಿನ ಹಣ್ಣುಗಳಿವೆ. ಕೆಜಿಗೆ 30 ರುಪಾಯಿಗಳಿಂದಲೂ ಶುರುವಾಗಿ ಬೇರೆ ಬೇರೆ ವಿಧದ ಮಾವುಗಳಿಗೆ ಬೆಲೆ ಬೇರೆಯಾಗಿದೆ. ವೆರೈಟಿ ಬೇಕೆಂದರೆ ಅವನೇ ಸೂಕ್ತ' ಎಂದು ಎಲ್ಲ ಮಾಹಿತಿಗಳನ್ನೂ ಹರವಿಟ್ಟ.
ಬಾಸ್ ಮುಂದಿನ ಯಾವ ಮಾತುಗಳನ್ನು ಹೇಳುವುದಕ್ಕೂ ಮೊದಲೇ ಪ್ರಾಣ್ಗೆ ವ್ಯತ್ಯಾಸದ ಅರಿವಾಯಿತು.
- ವಿಶ್ವೇಶ್ವರ ಭಟ್