ವೈನು ಬಿಟ್ಟು ನೀರು ಕುಡಿದರೆ ಏನರ್ಥ?

ಐವತ್ತು ವರ್ಷಗಳ ಹಿಂದೆಯೇ ಈಗಿನ ನ್ಯೂಸ್ ಚಾನೆಲ್‌ಗಳಂತೆ ವರದಿ ಮಾಡುತ್ತಿದ್ದವು.
Updated on: 

'ದಿ ಸನ್‌', 'ದಿ ಡೇಲಿ ಮಿರರ್‌', 'ಡೇಲಿ ಸ್ಟಾರ್‌', 'ಡೇಲಿ ಮೇಲ್‌', 'ಡೇಲಿ ಎಕ್ಸ್‌ಪ್ರೆಸ್‌' ಮುಂತಾದ ಟ್ಯಾಬ್ಲಾಯಿಡ್‌ಗಳು ಐವತ್ತು ವರ್ಷಗಳ ಹಿಂದೆಯೇ, ಈಗಿನ ನ್ಯೂಸ್ ಚಾನೆಲ್‌ಗಳಂತೆ ವರದಿ ಮಾಡುತ್ತಿದ್ದವು.

ಹಾಗೆ ನೋಡಿದರೆ, ನಿಟ್ಟುಸಿರು ಬಿಟ್ಟಿದ್ದು ಬ್ರಿಟಿಷ್ ಟ್ಯಾಬ್ಲಾಯಿಡ್‌ಗಳು.
 ಕೇಂಬ್ರಿಡ್ಜ್‌ನ ಡಚಸ್ ರಾಜಕುಮಾರಿ ಕೇಟ್ ಮಿಡ್ಲಟನ್ ಗಂಡು ಮಗುವಿಗೆ ಜನ್ಮ ನೀಡಿದ ನಾಲ್ಕೈದು ದಿನ ವರದಿ ಮಾಡಿ, ಎಲ್ಲ ಸುದ್ದಿ, ವಿಶ್ಲೇಷಣೆ ಬರೆದು ನಿಟ್ಟುಸಿರು ಬಿಟ್ಟ ಬ್ರಿಟನ್‌ನ ಟ್ಯಾಬ್ಲಾಯಿಡ್ ಪತ್ರಿಕೆಗಳು ಈಗ ಸಂಪೂರ್ಣ ಖಾಲಿಖಾಲಿಯಾದಂತೆ ಭಣಗುಡುತ್ತಿವೆ. ಪ್ರವಾಹ ಬಂದು ನದಿ ದಡವನ್ನೆಲ್ಲ ಗುಡಿಸಿ, ಆನಂತರ ಏನೂ ಆಗಿಯೇ ಇಲ್ಲವೇನೋ ಎಂದು ಶಾಂತವಾಗಿ ಹರಿಯುವಂತೆ ಅಲ್ಲಿನ ಪತ್ರಿಕೆಗಳು ವಿಶ್ರಾಂತವಾಗಿವೆ.
'ಏನ್ಸಾರ್, ಏನಾದರೂ ಘಟನೆಯಾದರೆ ಸಾಕು, ನೀವು ಟಿವಿ ಮಂದಿ ಶುರು ಹಚ್ಕೊಂಡು ಬಿಡ್ತೀರಾ. ಇಡೀ ದಿನ ಹೇಳಿದ್ದನ್ನೇ ಹೇಳ್ತೀರಾ.. ತೋರಿಸಿದ್ದನ್ನೇ ತೋರಿಸ್ತೀರಾ' ಎಂದು ಜನ ನಮ್ಮನ್ನು ಛೇಡಿಸುವುದುಂಟು. ಅವರು ಬ್ರಿಟನ್‌ನ ಮಾಧ್ಯಮಗಳನ್ನು ನೋಡಿಲ್ಲ ಎಂದು ತಟ್ಟನೆ ನಿರ್ಧಾರಕ್ಕೆ ಬರಬಹುದು. ಬ್ರಿಟನ್‌ನ ಟ್ಯಾಬ್ಲಾಯಿಡ್ ಪತ್ರಿಕೆಗಳನ್ನು ನೋಡಿದವರು 'ನೀವೇ ವಾಸಿ ಕಣ್ರೋ' ಎಂಬ ಸರ್ಟಿಫಿಕೇಟ್ ಕೊಡದಿದ್ದರೆ ಆಗ ಕೇಳಿ.
ನಿಜಕ್ಕೂ ಅವರು ತಲೆಚಿಟ್ಟು ಹಿಡಿಸಿ ಬಿಡುತ್ತಾರೆ.
ಕೇಟ್ ಮಿಡ್ಲಟನ್ ಯಾವಾಗ ರಾಜಕುವರ ವಿಲಿಯಮ್ಸ್‌ನನ್ನು ಮದುವೆಯಾದಳೋ ಶುರುವಾಯ್ತು ಈ ವದಂತಿಗಳ ಭರಾಟೆ. ಮದುವೆಯಾದ ಒಂದೂವರೆ ತಿಂಗಳ ಬಳಿಕ ಕೇಟ್ ಶಿಶುವಿಹಾರವೊಂದಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಪತ್ರಕರ್ತೆಯೊಬ್ಬಳು, 'ನಿಮಗೆ ಚಿಕ್ಕ ಮಕ್ಕಳೆಂದರೆ ಇಷ್ಟವಾ?' ಎಂದು ಕೇಳಿದ್ದಕ್ಕೆ, 'ಬಹಳ ಇಷ್ಟ' ಎಂದು ಹೇಳಿ ಪಕ್ಕದಲ್ಲಿದ್ದ ಮಗುವನ್ನೆತ್ತಿಕೊಂಡು ಕೇಟ್ ಮುದ್ದಾಡಿದಳು. ಟ್ಯಾಬ್ಲಾಯಿಡ್ ಪತ್ರಿಕೆಗಳಿಗೆ ಅಷ್ಟೇ ಸಾಕಾಯಿತು. 'ಕೇಟ್‌ಗೆ ಗರ್ಭವತಿಯಾಗುವ ಆಸೆ', 'ಬೇಗನೆ ಮಗು ಪಡೆಯುವ ಆಸೆ', 'ಶೀಘ್ರದಲ್ಲಿ ಗರ್ಭವತಿಯಾಗುತ್ತಾಳೆ.' 'ರಾಜಮನೆತನಕ್ಕೆ ಹೊಸ ಕಂದಮ್ಮನ ಆಗಮನ ಶೀಘ್ರ', 'ಕೇಟ್‌ಗೆ ತಾಯಿಯಾಗುವ ಆಸೆ'... ಹೀಗೆಲ್ಲ ಪತ್ರಿಕೆಗಳು ಬರೆದವು. ಅದಾದ ಬಳಿಕ ಸಣ್ಣ-ಪುಟ್ಟ ಸುಳಿವು ಸಿಕ್ಕರೂ, ಅದನ್ನು ಇದೇ ದಿಕ್ಕಿಗೆ ತಿರುಗಿಸಿ ವರದಿ ಮಾಡುತ್ತಿದ್ದವು.
ಅದಾಗಿ ಕೆಲವು ತಿಂಗಳ ಬಳಿಕ ಔತಣಕೂಟವೊಂದರಲ್ಲಿ ಭಾಗವಹಿಸಿದ ಕೇಟ್ ಗ್ಲಾಸಿನಲ್ಲಿ ನೀರಿತ್ತು. ಸುಮಾರು ಒಂದೂವರೆ ಗಂಟೆ ಅವಧಿಯಲ್ಲಿ ಆಕೆ ಮೂರು ಗ್ಲಾಸ್ ನೀರನ್ನು ಸಿಪ್ ಮಾಡಿದಳು. ಸಾಮಾನ್ಯವಾಗಿ ಇಂಥ ಔತಣಕೂಟಗಳಲ್ಲಿ ಆಕೆ ವೈನ್ ಕುಡಿಯುತ್ತಿದ್ದಳು. ವೈನ್ ಬದಲು ನೀರು ಕುಡಿಯುತ್ತಿದ್ದಾಳೆ ಅಂದ್ರೆ, ಕೇಟ್ ಗರ್ಭಿಣಿಯಾಗಿರಬೇಕು, ವೈದ್ಯರ ಸಲಹೆ ಮೇರೆಗೆ ವೈನ್ ಸೇವನೆ ಬಿಟ್ಟಿರಬೇಕು ಎಂದು ಟ್ಯಾಬ್ಲಾಯಿಡ್‌ಗಳು ವರದಿ ಮಾಡಿದವು.
    ಸೋಜಿಗವೆಂದರೆ ಆ ಊಹೆ ನಿಜವಾಗಿತ್ತು.
ಹಿಂದಿನ ವರ್ಷದ ಡಿಸೆಂಬರ್ 3ರಂದು ಕೇಟ್ ಗರ್ಭವತಿಯಾದ ಸುದ್ದಿ ನಿಕ್ಕಿಯಾಯಿತು. ಮರುದಿನ ಪತ್ರಿಕೆಗಳಲ್ಲಿ ಅದೇ ಮುಖಪುಟ ಸುದ್ದಿ. Baby Joy for Kate & Wills, Kate Expectations (Great expectation ಅನುಕರಣೆ), Royal Baby coming, Pregnant kate brings smiles to UK, Its nation's joy ಎಂದೆಲ್ಲ ಪತ್ರಿಕೆಗಳು ಬರೆದವು.
ಆ ದೇಶದ ಪ್ರಧಾನಿ ಡೇವಿಡ್ ಕೆಮರನ್, 'Iam delighted by the news. They will make wonderful parent's ಎಂದು ಟ್ವೀಟ್ ಮಾಡಿ, ಕೇಟ್ ಗರ್ಭವತಿಯಾಗಿರುವುದು ನಿಜ ಎಂಬುದನ್ನು ಅಧಿಕೃತವಾಗಿ ಸಾರಿದ.
ಬ್ರಿಟಿಷ್ ಪತ್ರಿಕೆಗಳ್ಯಾಕೆ ಈ ರೀತಿ ಚೇಳು ಕಡಿದವರಂತೆ ವರ್ತಿಸುತ್ತವೆ? ಈ ಪ್ರಶ್ನೆಗೆ ಬ್ರಿಟನ್‌ನ ಅಂಕಣಕಾರ ಸೈಮನ್ ಜೆಂಕಿನ್ಸ್ ಹೇಳುವುದೇನಂದ್ರೆ-'ಯಾಕೆ ಚೇಳು ಕಡಿದವರಂತೆ ವರ್ತಿಸುವೆ ಅಂದ್ರೆ ಜನ ಇಂಥ ಸುದ್ದಿಯನ್ನು ಕೋತಿಗಳ ಥರ ಓದುತ್ತಾರೆ.' ಜನ ಇಷ್ಟಪಟ್ಟು ಓದುವುದರಿಂದ ಪತ್ರಿಕೆಗಳು ಆ ರೀತಿ ವರದಿ ಮಾಡುತ್ತವೆ ಎಂಬುದು ಅವನ ಅಭಿಮತ.
ಇದು ಕೇಟ್ ಗರ್ಭವತಿಯಾಗಿ ಹಡೆದ ಸುದ್ದಿಗೆ ಮಾತ್ರ ಸೀಮಿತವಾದುದಲ್ಲ. ಅಲ್ಲಿನ ಟ್ಯಾಬ್ಲಾಯಿಡ್‌ಗಳು ಇರುವುದೇ ಹಾಗೆ. 'ದಿ ಸನ್‌', 'ದಿ ಡೇಲಿ ಮಿರರ್‌', 'ಡೇಲಿ ಸ್ಟಾರ್‌', 'ಡೇಲಿ ಮೇಲ್‌', 'ಡೇಲಿ ಎಕ್ಸ್‌ಪ್ರೆಸ್‌' ಮುಂತಾದ ಟ್ಯಾಬ್ಲಾಯಿಡ್‌ಗಳು ಐವತ್ತು ವರ್ಷಗಳ ಹಿಂದೆಯೇ, ಈಗಿನ ನ್ಯೂಸ್ ಚಾನೆಲ್‌ಗಳಂತೆ ವರದಿ ಮಾಡುತ್ತಿದ್ದವು. ಸನ್ ಪತ್ರಿಕೆಯನ್ನು ಮಾಧ್ಯಮ ದಿಗ್ಗಜ ರುಪರ್ಟ್ ಮರ್ಡೋಕ್ ಖರೀದಿಸಿದಾಗ, ಕೆಲ್ವಿನ್ ಮೆಕೆಂಜಿ ಎಂಬ ಪತ್ರಕರ್ತನನ್ನು ಸಂಪಾದಕನಾಗಿ ನೇಮಿಸಿದ. ಮೆಕೆಂಜಿ ಟ್ಯಾಬ್ಲಾಯಿಡ್‌ಗೆ ಹೇಳಿ ಮಾಡಿಸಿದ ವ್ಯಕ್ತಿ. ಫಾಕ್ಲಂಡ್ ಯುದ್ಧದ ಸಮಯದಲ್ಲಿ ತಾನೇ ಬ್ರಿಟಿಷ್ ಸೇನೆಯ ಮುಖ್ಯಸ್ಥ ಎಂಬಂತೆ ಭಾವಿಸಿಕೊಂಡು ಬರೆಯುತ್ತಿದ್ದ. ಪತ್ರಿಕೆ ಪ್ರಸಾರ ಹೆಚ್ಚಿಸಲು ಗಿಮಿಕ್ ಮಾಡುತ್ತಿದ್ದ. ಫಾಕ್ಲಂಡ್ ಯುದ್ಧದಲ್ಲಿ ಮಡಿದ ಸೈನಿಕನ ಪತ್ನಿಯ ಸಂದರ್ಶನ ಮಾಡಿ ಕೋಲಾಹಲವನ್ನೆಬ್ಬಿಸಿದ. ಏಳು ವರ್ಷಗಳ ನಂತರ, ಪತ್ರಿಕೆ ಸೈನಿಕನ ಪತ್ನಿಯ  ಸಂದರ್ಶನವನ್ನೇ ಮಾಡಿಲ್ಲವೆಂಬುದು ಬಹಿರಂಗವಾದಾಗ, ಖಿಏಊ ಖಿಖ್ಖಖಿಏ ಎಂಬ ಶೀರ್ಷಿಕೆಯಡಿಯಲ್ಲಿ ಹಕೀಕತ್ತು ಏನು ಎಂಬುದನ್ನು ವಿವರಿಸಿ ಕ್ಷಮೆಯಾಚಿಸಿದ.
ಒಮ್ಮೆ 'ಸನ್‌' ಪ್ರಕಟಿಸಿದ ವಿಚಿತ್ರ ಸುದ್ದಿ ಹಾಗೂ ಶೀರ್ಷಿಕೆಯನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಾರೆ. ಖ್ಯಾತ ಕಾಮಿಡಿಯನ್ ಫ್ರೆಡ್ಡಿ ಸ್ಟಾರ್ ತನ್ನ ಕಾಮಿಡಿ ಷೋದಲ್ಲಿ ಪುಟ್ಟ ಇಲಿಯೊಂದನ್ನು ಇಟ್ಟು ಅದನ್ನು ಜಗಿಯುವ ಪ್ರದರ್ಶನ ಬಹಳ ಪ್ರಸಿದ್ಧ. ಆದರೆ ಒಂದು ದಿನ ಬೆಳಗ್ಗೆ ಫ್ರೆಡ್ಡಿಸ್ಟಾರ್ ತನ್ನ ಗರ್ಲ್‌ಫ್ರೆಂಡ್ ಜತೆ ಉಪಾಹಾರ ಸೇವಿಸುವಾಗ ಸ್ಯಾಂಡ್‌ವಿಚ್‌ನೊಳಗೆ ಇಲಿ ಇಟ್ಟಿರುವುದನ್ನು ಗಮನಿಸದೇ ಅದನ್ನು ನಿಜವಾಗಿಯೂ ತಿಂದು ಬಿಟ್ಟ ಎಂದು 'ಸನ್‌' ವರದಿ ಮಾಡಿತು. ಈ ವರದಿಗೆ Freddie Starr Ate My Hamster ಎಂಬ ಶೀರ್ಷಿಕೆ ನೀಡಿತು. ಈ ಸುದ್ದಿ ವರ್ಷಗಟ್ಟಲೆ ಚಲಾವಣೆಯಲ್ಲಿತ್ತು. ಅನೇಕ ಮಂದಿ ಈ ಸುದ್ದಿ ನಿಜ ಎಂದೇ ಭಾವಿಸಿದ್ದರು. ಸುಳ್ಳನ್ನೇ ನಿಜ ಎಂದು ಭಾವಿಸುವ ಸುದ್ದಿಗೆ 'Freddie Starr Ate My Hamster' ಎಂದು ಪರ್ಯಾಯವಾಗಿ ಹೇಳುವಷ್ಟು ಅದು ಜನಪ್ರಿಯವಾಯಿತು.
ಕೆಲ್ವಿನ್ ಮೆಕೆಂಜಿ ನೆನಪಾದಾಗಲೆಲ್ಲ ನೆನಪಾಗುವ ಮತ್ತೊಬ್ಬ ಸಂಪಾದಕ ಅಮೆರಿಕದ 'ನ್ಯಾಷನಲ್ ಎನ್‌ಕ್ವೈರರ್‌' ಪತ್ರಿಕೆಯ ಜೆನೆರೊಸೊ ಪೋಪ್ ಜೂನಿಯರ್. ಪತ್ರಿಕೆಯ ಪ್ರಸಾರ ಹೆಚ್ಚಿಸಲು ಆತನಿಗೆ ಯಾರಿಗೂ ಹೊಳೆಯದ ಐಡಿಯಾಗಳು ಹೊಳೆಯುತ್ತಿದ್ದವು. ಅವನ್ನೆಲ್ಲ ಧೈರ್ಯದಿಂದ ಜಾರಿಗೊಳಿಸಿ ಗಲಿಬಿಲಿ ಹುಟ್ಟಿಸುತ್ತಿದ್ದ. ಓದುಗರಲ್ಲಿ ಆಗಾಗ ತಲ್ಲಣ ಹುಟ್ಟಿಸದಿದ್ದರೆ ಆತನಿಗೆ ಸಮಾಧಾನವಾಗುತ್ತಿರಲಿಲ್ಲ.
1988ರಲ್ಲಿ ಪೋಪ್ ಪ್ರಕಟಿಸಿದ ಒಂದು ಫೋಟೋ ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಗ್ಯಾರಿ ಹಾರ್ಟ್ ಎಂಬಾತ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ. ಆತ 'ಮಂಕಿ ಬಿಜಿನೆಸ್‌'ಎಂಬ ಹಡಗಿನಲ್ಲಿ ಡೊನ್ನಾರೈಸ್ ಎಂಬ ಯುವತಿ ಜತೆ ಇರುವ ಫೋಟೋವನ್ನು ಪೋಪ್ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ. ಇದು ಎಂಥ ಕೋಲಾಹಲವನ್ನೆಬ್ಬಿಸಿತೆಂದರೆ ಗ್ಯಾರಿ ಹಾರ್ಟ್‌ನ ರಾಜಕೀಯ ಜೀವನವೇ ಬರ್ಬಾದ್ ಆಗಿ ಹೋಯಿತು.
ಆದರೆ 'ಎನ್‌ಕ್ವೈರರ್‌'ನ ಹಲವು ವರದಿಗಳು ಜಗತ್ತಿನಾದ್ಯಂತ ಚರ್ಚೆಗೆ ಒಳಗಾದವು. ಈ ವರದಿಗಳಲ್ಲಿ ಸತ್ಯಾಸತ್ಯತೆ ಎಷ್ಟಿತ್ತು ಎಂಬುದು ಬೇರೆ ಮಾತು. ಪತ್ರಿಕೆ ಕೆಲವು ದಿನ ತೀರಾ ಸಪ್ಪೆಯೆನಿಸಿದಾಗ, ಪೋಪ್ ಒಂದು ಸುದ್ದಿ ಪ್ರಕಟಿಸಿದ- Hitler seen alive in US.ಈ ಸುದ್ದಿ ಹಲವು ವರ್ಷಗಳವರೆಗೆ ಚರ್ಚೆಯಲ್ಲಿತ್ತು.
ಯಾವ ಪ್ರಮುಖ ಸುದ್ದಿಯೇ ಇಲ್ಲದ ನೀರಸ ದಿನದಂದು ಎನ್‌ಕ್ವೈರರ್ ಪ್ರಕಟಿಸಿದ ಎರಡು ವರದಿಗಳ ಶೀರ್ಷಿಕೆ ಗಮನಿಸಿ-1. Girl, 16, becomes a grandmother. 2. Mom cleans kids by putting them in washing machine.
ಅದಿರಲಿ, ಸದ್ಯಕ್ಕೆ ಬ್ರಿಟಿಷ್ ಟ್ಯಾಬ್ಲಾಯಿಡ್‌ಗಳಿಗೆ ಹೆಚ್ಚು ಕೆಲಸವಿಲ್ಲ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಬಂದ ನಂತರದ ಕನ್ನಡದ ನ್ಯೂಸ್ ಚಾನೆಲ್‌ಗಳಂತಾಗಿವೆ. ಹಾಗಂತ ಯಾವ ಸುದ್ದಿಯೇ ಇಲ್ಲ ಎಂದು ಸುಮ್ಮನಾಗುವ ಜಾಯಮಾನ ಅವುಗಳದ್ದಲ್ಲ.
ಕ್ಷಮಾಪಣೆ ಕೇಳುವ ವಿಧಾನ
ಯಾವ ದೇಶದಲ್ಲಿ ಹೇಗೆ ಕ್ಷಮಾಪಣೆ ಕೇಳಲಾಗುತ್ತದೆ ಎನ್ನುವ ಬಗ್ಗೆ ಫೇಸ್‌ಬುಕ್‌ನಲ್ಲಿ ಕಂಡ ಜೋಕೊಂದು ಹೀಗಿದೆ...
ಅಮೆರಿಕ: ವ್ಯಕ್ತಿಯೊಬ್ಬ ಅರಿವಿಲ್ಲದೆ ಹುಡುಗಿಯೊಬ್ಬಳ ಬಟ್ಟೆ ಹರಿದುಬಿಟ್ಟ. ಅವನು ಕ್ಷಮಾಪಣೆ ಕೇಳುವುದಕ್ಕಿಂತ ಮುನ್ನವೇ ಆ ಹುಡುಗಿ ತನ್ನ ಪರ್ಸ್‌ನಿಂದ ಕಾರ್ಡೊಂದನ್ನು ತೆಗೆದು ಹೇಳಿದಳು: 'ಇದು ನನ್ನ ಲಾಯರ್‌ನ ಕಾರ್ಡ್. ನಿನ್ನ ಮೇಲೆ ಕೇಸ್ ದಾಖಲಾಗುತ್ತೆ. ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧನಾಗು'
ಕೋರಿಯಾ: ವ್ಯಕ್ತಿಯೊಬ್ಬ ಅರಿವಿಲ್ಲದೆ ಹುಡುಗಿಯೊಬ್ಬಳ ಬಟ್ಟೆ ಹರಿದುಬಿಟ್ಟ. ಅವನು ಕ್ಷಮಾಪಣೆ ಕೇಳುವುದಕ್ಕಿಂತ ಮುನ್ನವೇ ಹುಡುಗಿ, ಕೂಗುತ್ತಾ ಜಿಗಿದು ಅವನ ಹೊಟ್ಟೆಗೆ ಒದ್ದಳು. ನರಳುತ್ತಾ ಕೆಳಕ್ಕೆ ಬಿದ್ದ ಅವನ ಮೇಲೆ ಕಾಲಿಟ್ಟು ಆಕೆ ಹೇಳಿದಳು: 'ನಾನು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗೊತ್ತಾ?'
ಜಪಾನ್: ವ್ಯಕ್ತಿಯೊಬ್ಬ ಅರಿವಿಲ್ಲದೆ ಹುಡುಗಿಯೊಬ್ಬಳ ಬಟ್ಟೆ ಹರಿದುಬಿಟ್ಟ. ಅವನು ಕ್ಷಮಾಪಣೆ ಕೇಳುವುದಕ್ಕಿಂತ ಮುನ್ನವೇ ಹುಡುಗಿ ಹೇಳಿದಳು: 'ದಯವಿಟ್ಟು ಕ್ಷಮಿಸಿ ನನ್ನ ಬಟ್ಟೆಯ ಕ್ವಾಲಿಟಿ ಚೆನ್ನಾಗಿಲ್ಲ. ಇನ್ನೊಮ್ಮೆ ಹೊರಗೆ ಬರುವಾಗ ಸ್ಟ್ಯಾಂಡರ್ಡ್ ಬಟ್ಟೆ ಧರಿಸಿ ಬರುತ್ತೇನೆ'
ಭಾರತ: ವ್ಯಕ್ತಿಯೊಬ್ಬ ಅರಿವಿಲ್ಲದೆ ಹುಡುಗಿಯೊಬ್ಬಳ ಬಟ್ಟೆ ಹರಿದುಬಿಟ್ಟ. ಅವನು ಕ್ಷಮಾಪಣೆ ಕೇಳುವುದಕ್ಕಿಂತ ಮುನ್ನವೇ, ಆ ಹುಡುಗಿ ಪ್ರತಿಕ್ರಿಯೆ ನೀಡುವ ಮುನ್ನವೇ ಅಲ್ಲಿ ರಾಜದೀಪ್ ಸರ್‌ದೇಸಾಯಿ, ಬರ್ಖಾದತ್ ಮತ್ತು ಅರ್ನಬ್ ಗೋಸ್ವಾಮಿ ಪ್ರತ್ಯಕ್ಷರಾದರು. 'ಅತ್ಯಾಚಾರಕ್ಕೆ ಪ್ರಯತ್ನಿಸಿದ ಕಾಮುಕ' ಎಂದು ಅವನನ್ನು ದೂಷಿಸಿ, ಅವನಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಬಗ್ಗೆ ಪ್ಯಾನಲ್ ಡಿಸ್ಕಷನ್ ಕರೆದರು!

-ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com