ಭಾರತದ ಆರ್ಥಿಕತೆ ಕದಡುತ್ತಿದೆ ಕೊಳಕು ಹಣದ ಹರಿವು

ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನನ್ನ ಪಕ್ಕ ಕುಳಿತಿದ್ದವರು ಅಡ್ಮಿರಲ್ ಆರ್. ಎಚ್. ತಹಿಲಾನಿ. ಅವರು ಭಾರತದ ನೌಕಾ ಮುಖ್ಯಸ್ಥರ ಪೈಕಿ 13ರನೆಯವರಾಗಿದ್ದು 1987ರ ನವೆಂಬರ್ನಲ್ಲಿ ನಿವೃತ್ತರಾದವರು. ಕಳೆದ ವರ್ಷವೂ ನಾವು ಇದೇ ಸಮಾರಂಭದಲ್ಲಿ ಒಟ್ಟಿಗೆ ಕುಳಿತಿದ್ದೆವು. ನನ್ನ ಮಗಳು ಪ್ರತಿಭಾ ಅವರಿಗೆ ತಾನು ರಾಷ್ಟ್ರಧ್ವಜದ ಕುರಿತು ನಿರ್ಮಿಸಿದ 'ತಿರಂಗಾ' ಎಂಬ ಸಾಕ್ಷ್ಯಚಿತ್ರವನ್ನು ಕಳುಹಿಸುವುದಾಗಿ ಹೇಳಿದ್ದಳು. ಆ ಡಿವಿಡಿ ತಲುಪಿಸಿದ್ದಕ್ಕಾಗಿ ಧನ್ಯವಾದ ಹೇಳಿದ ತಹಿಲಾನಿ ಅವರು ಆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಲೋಕಾಭಿರಾಮವಾಗಿ ಅವರು ನನ್ನನ್ನು ಕೇಳಿದರು: 'ಆಡ್ವಾಣಿಯವರೇ ನೀವೀಗ ಯಾವ ಪುಸ್ತಕ ಓದುತ್ತಿದ್ದೀರಿ.' ಅದಕ್ಕೆ ಪ್ರತಿಯಾಗಿ, 'ನಿನ್ನೆಯಷ್ಟೆ ನಾನು 'ಡರ್ಟಿ ಮನಿ' ಎಂಬ ಪುಸ್ತಕ ಕೈಗೆತ್ತಿಕೊಂಡು ಓದಲಾರಂಭಿಸಿದ್ದೇನೆ' ಎಂದೆ. ರೇಮಂಡ್ ಬೇಕರ್ ಎಂಬಾತ ಆ ಪುಸ್ತಕದ ಕೃತಿಕಾರ. ಬೇಕರ್ ಅಮೆರಿಕದ ಉದ್ಯಮಿ. 'ಗ್ಲೋಬಲ್ ಫೈನಾನ್ಶಿಯಲ್ ಇಂಟಿಗ್ರಿಟಿ' ಎಂಬ ಸಂಸ್ಥೆಯ ನಿರ್ದೇಶಕನೂ ಹೌದು. ಭ್ರಷ್ಟಾಚಾರ, ಕಪ್ಪುಹಣದ ಧಂದೆ, ವಿದೇಶಿ ನೀತಿಗಳ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನ ನಡೆಸಿರುವ ಬೇಕರ್, ಆ ವಿಷಯಗಳಲ್ಲಿ ಪರಿಣತ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಸಂಕ್ರಮಣ ಸ್ಥಿತಿಯಲ್ಲಿರುವ ಅರ್ಥ ವ್ಯವಸ್ಥೆಗಳ ಬಗ್ಗೆ ಆತ ಆಳಜ್ಞಾನ ಹೊಂದಿದ್ದಾನೆ.
ಕಮ್ಯುನಿಸಮ್ಗೆ ವಿರುದ್ಧವಾದ ಕ್ಯಾಪಿಟಲಿಸಂ ವ್ಯವಸ್ಥೆಯನ್ನು ಬೆಂಬಲಿಸುವ, ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಪ್ರತಿಪಾದಿಸುವ ವ್ಯಕ್ತಿ ಬೇಕರ್. ಪುಸ್ತಕದ ಶೀರ್ಷಿಕೆ- 'ಕ್ಯಾಪಿಟಲಿಸಮ್ಸ್ ಅಚಿಲಿಸ್ ಹೀಲ್: ಡರ್ಟಿ ಮನಿ ್ಯಂಡ್ ಹೌ ಟು ರಿನ್ಯೂ ದ ಫ್ರೀ ಮಾರ್ಕೆಟ್ ಸಿಸ್ಟಮ್.' ಈ ಶೀರ್ಷಿಕೆಯೇ ಪುಸ್ತಕದ ಒಡಲಾಳ ಏನು ಎಂಬುದನ್ನು ತಿಳಿಸುತ್ತದೆ. ಹೋಮರ್ ಕವಿಯ ಮಹಾಕಾವ್ಯ 'ಇಲಿಯಡ್'ನ ನಾಯಕ ಅಚಿಲಿಸ್ ಹೀಲ್. ಆತ ಧೀರ ಹಾಗೂ ದಣಿವರಿಯದ ಯೋಧ. ಆತನ ತಾಯಿ ಸಮುದ್ರ ದೇವತೆಯಾಗಿದ್ದು ಹುಟ್ಟುತ್ತಲೇ ಆತನನ್ನು ನದಿಯಲ್ಲಿ ತೇಲಿಬಿಟ್ಟಿದ್ದಾಗಿ ದಂತಕತೆ ಸಾರುತ್ತದೆ. ನೀರಿಗೆ ಬಿಟ್ಟಾಗ ಆತನ ಹಿಮ್ಮಡಿಯನ್ನೇ ಆಕೆ ಹಿಡಿದುಕೊಂಡಿದ್ದಳು ಎನ್ನುತ್ತದೆ ಕತೆ.
ಕೊನೆಗೂ ಅಚಿಲಿಸ್ ಸಾಯುವುದು ವೈರಿಯು ಕಾಲಿಗೆ ಹೊಡೆದ ಬಾಣದಿಂದಲೇ. ಈ ಪುಸ್ತಕ ಪ್ರತಿಪಾದಿಸುವುದೇನೆಂದರೆ- ಮುಕ್ತ ಮಾರುಕಟ್ಟೆ ಎಂಬುದು ಅತ್ಯಂತ ಅಪೇಕ್ಷಣೀಯವಾದದ್ದು. ಆದರೆ ಕೊಳಕು ಹಣದ ಹರಿವಿನಿಂದ ಅದನ್ನು ರಕ್ಷಿಸಬೇಕಷ್ಟೆ. ಭ್ರಷ್ಟಾಚಾರ ಮತ್ತು ಕಪ್ಪುಹಣದ ದಂಧೆಗಳೇ ಈ ಕೊಳಕು ಹಣದ ಪರಿವನ್ನು ಸೃಷ್ಟಿಸುತ್ತವೆ.
2013 ಮುಕ್ತಾಯವಾಗುವುದರ ಒಳಗೆ ಅರ್ಧ ಡಜನ್ನಷ್ಟು ರಾಜ್ಯಗಳು ಚುನಾವಣೆಯನ್ನು ಎದುರಿಸಲಿವೆ. ಮುಂದಿನ ವರ್ಷದ ಪ್ರಾರಂಭದಲ್ಲಿ ಮನಮೋಹನ್ ಸಿಂಗ್ ಅವರು ತಮ್ಮ ಎರಡನೆಯ ಅಧಿಕಾರವಧಿಯನ್ನು ಪೂರೈಸಲಿದ್ದಾರೆ. ಕಳೆದ ವಾರ ಮುಂಚೂಣಿಯಲ್ಲಿರುವ ಆಂಗ್ಲ ವಾರಪತ್ರಿಕೆ 'ಇಂಡಿಯಾ ಟುಡೆ', ದೇಶದ ಮೂಡ್ ಬಿಂಬಿಸುವ ವಿವರವಾದ ಸಮೀಕ್ಷೆಯನ್ನು ಪ್ರಕಟಿಸಿದೆ. ಇಡೀ ಪುಟ ಪ್ರಧಾನಿ ಚಿತ್ರವನ್ನು ಹೊದ್ದಿರುವ ಆ ಸಂಚಿಕೆಯ ಶೀರ್ಷಿಕೆ: 'ಪ್ರಾಮಾಣಿಕ ಆದರೆ ಅಸಮರ್ಥ: ಪ್ರಧಾನಿ ಕೆಳಗಿಳಿಯುವುದಕ್ಕೆ ಇದು ಸಕಾಲ ಎನ್ನುತ್ತಿದ್ದಾರೆ ಮತದಾರರು'. ಅದರಲ್ಲೇ ಒಂದು ಪ್ರಶ್ನೆ ಇದೆ. ಮನಮೋಹನ ಸಿಂಗ್ ಅವರ ವೈಫಲ್ಯಗಳೇನು?
ಅವರು ನಿರ್ಣಾಯಕ ಹಂತಗಳಲ್ಲಿ ಸಂವಾದ ತೋರುವುದಿಲ್ಲ- ಶೇ. 27
ಪ್ರಾಮಾಣಿಕರಾಗಿದ್ದರೂ ಅತಿಭ್ರಷ್ಟ ಸರ್ಕಾರದ ನೇತೃತ್ವ ವಹಿಸಿದ್ದಾರೆ- ಶೇ. 21
ಅವರು ಅಧಿಕಾರ ಉಪಯೋಗಿಸಿಕೊಳ್ಳುವುದಿಲ್ಲ- ಶೇ. 20
ಈ ಮೇಲಿನ ಎಲ್ಲವೂ- ಶೇ. 20
***
ಹಾರ್ವರ್ಡ್ ವಿಶ್ವವಿದ್ಯಾಲಯವು ಕೆಲ ಸಮಯಗಳ ಹಿಂದೆ ಭಾರತವನ್ನು ಕುರಿತಂತೆ ಸಂಶೋಧನಾ ವರದಿ ಒಂದನ್ನು ಪ್ರಕಟಿಸಿತ್ತು. ಆ ವರದಿಯು ಆಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಶ್ರೀಲಂಕಾಗಳನ್ನು 'ವೈಫಲ್ಯ ಹೊಂದಿರುವ ಇಲ್ಲವೇ ಹೊಂದುತ್ತಿರುವ ರಾಷ್ಟ್ರಗಳು' ಎಂದು ಗುರುತು ಮಾಡಿತ್ತು. ಆ ವರದಿ ಭಾರತದ ಬಗ್ಗೆ ಹೇಳಿದ್ದಿಷ್ಟು: ಭಾರತದ ಪ್ರಜಾಪ್ರಭುತ್ವವನ್ನು ಯಾವುದೇ ಆಯಾಮದಿಂದ ನೋಡಿದರೂ ನಳನಳಿಸುತ್ತಿದೆ. ಎಲ್ಲ ಒತ್ತಡಗಳ ನಡುವೆಯೂ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯುತ್ತಿವೆ. ಸರ್ಕಾರವು ಬದಲಾಗುತ್ತಿರುತ್ತದೆ. ಅದರ ನೆರೆದೇಶಗಳಂತೆ ಭಾರತವನ್ನು ವೈಫಲ್ಯ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗದು.
ಕೆನಡಿ ಸ್ಕೂಲ್ನಲ್ಲಿ ಪ್ರೊಫೆಸರ್ ಆಗಿರುವ ಲ್ಯಾಂಟ್ ಪ್ರಿಚೆಟ್ ಅವರು ಈ ವರದಿಯನ್ನು ತಯಾರಿಸಿದವರು. ಅವರು ವಿಶ್ವಬ್ಯಾಂಕ್ನಲ್ಲಿಯೂ ಸೇವೆ ಸಲ್ಲಿಸಿದ್ದರು. ಕೆಲಕಾಲ ಹೊಸದೆಹಲಿಯಿಂದಲೂ ಕಾರ್ಯನಿರ್ವಹಿಸಿದ್ದರು. ಅವರು ಬರೆಯುತ್ತಾರೆ: 'ಭಾರತ ಸರ್ಕಾರ ಮತ್ತು ಅದರ ಉನ್ನತ ಹಂತದಲ್ಲಿರುವ ಸಿಬ್ಬಂದಿ ಉತ್ತಮರೇ ಆಗಿದ್ದಾರೆ. ಸುಪ್ರೀಂಕೋರ್ಟ್, ಐಐಟಿ, ಏಮ್ಸ್ ಇವೆಲ್ಲ ಜಾಗತಿಕ ಮಟ್ಟದ ಸಂಸ್ಥೆಗಳಾಗಿವೆ. ಐಎಎಸ್ ಅಧಿಕಾರಿಗಳನ್ನಂತೂ ಕಠಿಣತಮ ಪರೀಕ್ಷೆಯ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಆದಾಗ್ಯೂ ನಾನು ವಿವರಿಸಿದಂತೆ ಕಾರ್ಯಕ್ರಮ ಮತ್ತು ನೀತಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಭಾರತ ದುರ್ಬಲವಾಗಿದೆ. ಪೊಲೀಸ್, ತೆರಿಗೆ ಸಂಗ್ರಹ, ಶಿಕ್ಷಣ, ಆರೋಗ್ಯ, ಅಧಿಕಾರ, ನೀರು ಪೂರೈಕೆ ಇವುಗಳಲ್ಲೆಲ್ಲ ಭಾರಿ ಅವ್ಯವಸ್ಥೆ ಇದೆ. ಅದಕ್ಷತೆ ಮತ್ತು ಭ್ರಷ್ಟಾಚಾರಗಳು ಹಾಸುಹೊಕ್ಕಾಗಿವೆ. ನೀರಾವರಿ ಮತ್ತು ಅಂತರ್ಜಲ ನಿರ್ವಹಣೆ ವಿಭಾಗದಂಥ ಸೂಕ್ಷ್ಮ ವಲಯಗಳಿಗೂ ಈ ಮಾತು ಅನ್ವಯಿಸುತ್ತದೆ.'
ಹೀಗೆಲ್ಲ ವಿವರಿಸುತ್ತ ಲ್ಯಾಂಟ್ ಅವರು ಭಾರತವು ಫೇಲಿಂಗ್ ಸ್ಟೇಟ್ ಅಲ್ಲ, 'ಫ್ಲೇಲಿಂಗ್ ಸ್ಟೇಟ್' ಎನ್ನುತ್ತ ಹೊಸ ವಿಭಾಗದಲ್ಲಿ ವ್ಯಾಖ್ಯಾನಿಸುತ್ತಾರೆ. ಇದಕ್ಕೆ ಶಬ್ದಕೋಶದ ಅರ್ಥ ಎಂದರೆ, 'ತೋಳನ್ನು ಇಲ್ಲವೇ ಕಾಲನ್ನು ಅನಿಯಂತ್ರಿತವಾಗಿ ಅಲ್ಲಾಡಿಸುವುದು ಎಂಬುದಾಗಿದೆ'. ಇದನ್ನು ನಮ್ಮ ದೇಶಕ್ಕೆ ಅನ್ವಯಿಸಿ ಲ್ಯಾಂಟ್ ಹೇಳುವುದು ಹೀಗೆ: ಇಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಗ್ರಶ್ರೇಣಿಯ ಸಂಸ್ಥೆಗಳು ಉತ್ತಮವಾಗಿದ್ದರೂ ಅವನ್ನು ಬೇರೆ ಅಂಗಗಳೊಂದಿಗೆ ಬೆಸೆಯುವ ನರಮಂಡಲವಿಲ್ಲ...
ಕೊನೆತುತ್ತು: ಈ ಅಧ್ಯಯನ ವರದಿ ಭಾರತೀಯ ಕಾದಂಬರಿ 'ಕ್ಯು ಆ್ಯಂಡ್ ಎ'ಯ ಕಥಾಸಾರದೊಂದಿಗೆ ತೆರೆದುಕೊಳ್ಳುತ್ತದೆ. ಕಾರ್ಮಿಕನೊಬ್ಬ ಕೋಟ್ಯಂತರ ರುಪಾಯಿ ಗೆಲ್ಲುವ ತಿರುಳಿನ ಈ ಕಾದಂಬರಿಯನ್ನು 'ಸ್ಲಮ್ಡಾಗ್ ಮಿಲಿಯನೇರ್' ಎಂಬ ಹೆಸರಲ್ಲಿ ಯಶಸ್ವಿ ಚಿತ್ರವನ್ನಾಗಿಯೂ ಮಾಡಲಾಗಿದೆ. ಸರ್ಕಾರದ ಪ್ರತಿನಿಧಿಗಳೊಂದಿಗೆ ನಾಯಕನ ಜೀವನ ಮುಖಾಮುಖಿಯಾದಾಗ ಆತ ಎದುರಿಸುವ ಕ್ರೌರ್ಯವನ್ನು ಇಲ್ಲಿ ತೆರೆದಿಡಲಾಗಿದೆ. ಭಾರತದ ನಿಜಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಕಾಲ್ಪನಿಕ ಕತೆಯೇ ಉತ್ತಮ ಮಾರ್ಗ. ವಿದೇಶಿ ಸೇವೆಯಲ್ಲಿರುವವರೇ ಈ ಪುಸ್ತಕ ಬರೆದಿರುವುದು ಗಮನಾರ್ಹ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ಎಲ್. ಕೆ. ಆಡ್ವಾಣಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


