ಅಂಕಣಗಳು

ಆರ್ಥಿಕ ಕುಸಿತಕ್ಕೆ ಯುಪಿಎದ ತಪು ್ಪ ಹೆಜ್ಜೆಗಳೇ ಕಾರಣ

Published On :

ಎರಡು ಬಾರಿ ಭಾರತದ ವಿತ್ತ ಸಚಿವರಾಗಿದ್ದ ಯಶವಂತ ಸಿನ್ಹಾ, ಭಾರತದ ಆರ್ಥಿಕತೆಯ ನಿರ್ಣಾಯಕ ಘಟ್ಟವಾದ 1990ರಲ್ಲಿ ಅಧಿಕಾರ ವಹಿಸಿಕೊಂಡವರು. ಭಾರತದ ಪ್ರಸಕ್ತ ತೆರಿಗೆ ರಚನಾಕ್ರಮದಲ್ಲೂ ಅವರ ಪಾತ್ರವನ್ನು ಮೆಚ್ಚಲಾಗುತ್ತದೆ. 1990-91ರಲ್ಲಿ ಚಂದ್ರಶೇಖರ್ ಸರ್ಕಾರದಡಿ ಮತ್ತು 1998-2002ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ವಿತ್ತ ಸಚಿವರಾಗಿದ್ದವರು ಸಿನ್ಹಾ. ಆರ್ಥಿಕ ಕುಸಿತವನ್ನು ತಡೆಯಲು ವಿಫಲವಾಗುತ್ತಿರುವ ಯುಪಿಎ-2 ಸರ್ಕಾರ ಅವಧಿಗಿಂತ ಮುನ್ನವೇ ಚುನಾವಣೆ ನಡೆಸಲು ಮುಂದಾಗಬೇಕು ಎಂದವರು ಹೇಳುತ್ತಾರೆ. ಈ ಕುರಿತು 'ಔಟ್‌ಲುಕ್‌' ಪತ್ರಿಕೆಯ ಪ್ರಗ್ಯಾ ಸಿಂಗ್‌ರೊಂದಿಗೆ ಮಾತನಾಡುತ್ತಾ, 'ಯುಪಿಎ ಸರ್ಕಾರ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ' ಎನ್ನುತ್ತಾರೆ...

-ಒಂದು ವೇಳೆ ನೀವೇ ಅಧಿಕಾರದಲ್ಲಿದ್ದರೆ, ರುಪಾಯಿ ಮೌಲ್ಯದ ಕುಸಿತವನ್ನು ತಡೆಯಲು ನಿಮಗೆ ಸಾಧ್ಯವಿತ್ತೆ?
ನಾವು ನೋಡುತ್ತಿರುವುದು ಆತ್ಮವಿಶ್ವಾಸದ ಕುಸಿತವನ್ನು. ಕುಸಿದ ಆತ್ಮವಿಶ್ವಾಸ ಅತ್ಯಲ್ಪಕಾಲದಲ್ಲಿ ತಿರುಗಿ ಬರುವುದಿಲ್ಲ. ಈ ಸರ್ಕಾರ ಪ್ರತಿಯೊಂದು ಹೆಜ್ಜೆಯನ್ನು ತಪ್ಪಾಗಿ ಇಡುತ್ತಿದೆ. ಅವರು ಮಾಡುತ್ತಿರುವ ಕೆಲಸವೆಲ್ಲವೂ ತಿರುಗಿ ಬೀಳುತ್ತಿವೆ. ಮಾರುಕಟ್ಟೆ, ಸಮಸ್ಯೆಗಳ ಶಮನವನ್ನು ಎದುರು ನೋಡುತ್ತಿದೆ. ಆದರೆ ರೋಗವನ್ನು ಶಮನಗೊಳಿಸುವ ಬದಲು, ಅದರ ಲಕ್ಷಣಗಳನ್ನು ಕಡಿಮೆ ಮಾಡಲು  ಸರ್ಕಾರ ಪ್ರಯತ್ನಿಸುತ್ತಿದೆ. 2004ರಲ್ಲಿ ನಾನು ರಾಜ್ಯಸಭೆಗೆ ಎಚ್ಚರಿಕೆ ಕೊಟ್ಟಿದ್ದೆ- 'ಬಡ್ಡಿದರಗಳ ಮೇಲೆ ನಿಗಾ ಇಡಬೇಕು, ಏರುತ್ತಿರುವ ಹಣದುಬ್ಬರ ಮುಂದೆ ನಮಗೆ ಸಮಸ್ಯೆ ತಂದೊಡ್ಡುತ್ತದೆ' ಎಂದು. ಆದರೆ ಆಗ ಹೆಚ್ಚು ಸಮಸ್ಯೆಗಳು ಇರಲಿಲ್ಲವಾದ್ದರಿಂದ ಅವರು ನಿಶ್ಚಿಂತೆಯಿಂದ ಸ್ವರ್ಗದಲ್ಲಿ ತೂರಾಡಿದರು. ಭಾರತದ ಆರ್ಥಿಕತೆಯನ್ನು ಅಧೋಗತಿಗೆ ತಂದರು.

-ಅಂದರೆ ಪ್ರಸ್ತುತ ಚಾಲ್ತಿ ಖಾತೆಯ ಕೊರತೆಯನ್ನು(ಸಿಎಡಿ) ನಿರ್ವಹಿಸಬಹುದು ಆದರೆ ನಾಯಕತ್ವದಲ್ಲಿನ ಸಮಸ್ಯೆಯನ್ನಲ್ಲ ಎನ್ನುತ್ತೀರಾ?
ಚಾಲ್ತಿ ಖಾತೆಯ ಕೊರತೆ ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿದೆ. ಆದರೆ ನಾವು(ಎನ್‌ಡಿಎ) ಅದೃಷ್ಟಶಾಲಿಗಳಾಗಿದ್ದೆವು. ಆದರೂ ಸಿಎಡಿ 2 ಪ್ರತಿಶತದಷ್ಟಿತ್ತು. ಆಗ ಅದರಿಂದ ಹೆಚ್ಚು ತೊಂದರೆಗಳಿರಲಿಲ್ಲ. ಆದರೆ ಯುಪಿಎ ಸರ್ಕಾರ ಸಿಎಡಿಯನ್ನು ಹೆಚ್ಚಿಸುತ್ತಲೇಹೋಯಿತು. ಅದನ್ನು ಆರ್ಥಿಕ ಪ್ರಗತಿ ಎಂದು ಜನರಿಗೆ ನಂಬಿಸಿತು. 1991ರಲ್ಲಿ ಕೇವಲ 2 ಪ್ರತಿಶತದಷ್ಟಿದ್ದ ಸಿಎಡಿ ಈಗ 5 ಪ್ರತಿಶತಕ್ಕೆ ಬಂದು ತಲುಪಿದೆ. ಈಗ ವಿದೇಶಿ ವಿನಿಮಯ ಹೆಚ್ಚಾಗಿದೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಅಲ್ಪಾವಧಿಯ ಸಾಲ ಮತ್ತು ಅಮೆರಿಕದ ಹಿಂದೆ ಸರಿದದ್ದು ಎಲ್ಲಾ ಸೇರಿ ಈ ಸಮಸ್ಯೆ ಉಂಟಾಗಿದೆ. ಇದೆಲ್ಲಾ ಮೊದಲಿನಿಂದಲೂ ಸರ್ಕಾರಕ್ಕೆ ಗೊತ್ತಿತ್ತು ಎಂದು ಮಾರುಕಟ್ಟೆ ಪರಿಣತರು ಹೇಳುತ್ತಿದ್ದಾರೆ.

-ಇದಕ್ಕೆ ಯಾವ ಪರ್ಯಾಯವನ್ನು ಸೂಚಿಸುವಿರಿ?
ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕಿದೆ. ಹಾಗಾಗೆ ನಾನೂ ಸೇರಿದಂತೆ ಬಹುತೇಕರು ಅವಧಿಗೆ ಮುನ್ನ ಚುನಾವಣೆ ನಡೆಸಲು ಆಗ್ರಹಿಸುತ್ತಿರುವುದು. ಎಷ್ಟೇ ಉತ್ತೇಜಕ ಮಾತುಗಳನ್ನಾಡಿದರೂ ಇಂದು ನಾವು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲ. ವ್ಯಾಪಾರಿಗಳಿಗೆ ಮಾರುಕಟ್ಟೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪೂರ್ಣ ಅರಿವಿದೆ. ನನ್ನ ಹಾಗೂ ನಿಮ್ಮ ಹಾಗೆ ದೂರದಿಂದ ಮಾರುಕಟ್ಟೆಯನ್ನು ಅವರು ನೋಡುತ್ತಿಲ್ಲ. ಹಾಗಾಗೆ ಮನಮೋಹನ್ ಸಿಂಗ್, ಪಿ. ಚಿದಂಬರಂ ಅಥವಾ ಯಶವಂತ್ ಸಿನ್ಹಾರ ಉತ್ತೇಜಕ ಮಾತು ಅವರುಗಳಿಗೆ ಬೇಕಿಲ್ಲ.

-ಹಾಗಿದ್ದರೆ ಆತ್ಮವಿಶ್ವಾಸವನ್ನು ಗಳಿಸಲು ಬೇರೆ ಯಾವ ಮಾರ್ಗಗಳೂ ಇಲ್ಲವೇ?
1998ರಲ್ಲಿ ನಾವು ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದೆವು. ನ್ಯೂಕ್ಲಿಯರ್ ಪರೀಕ್ಷೆ ನಡೆಸುವ ಮೂಲಕ ನಾವು
ಬಹಳ ದೇಶಗಳನ್ನು ಎದುರುಹಾಕಿಕೊಂಡೆವು. ನಮ್ಮ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಯಿತು. ಆದರೆ ನಾವು ಪುನಃ ಚೇತರಿಸಿಕೊಂಡು ಭಾರತದ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆವು. ಇದರಿಂದಾಗಿ ವಿದೇಶಿ ವಿನಿಮಯದ ರೂಪದಲ್ಲಿ ಕೋಟ್ಯಂತರ ರುಪಾಯಿ ಭಾರತಕ್ಕೆ ಬಂದಿತು. ಆ ಒಂದು ನಡೆಯಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಯಿತು.

-ವಿತ್ತ ಸಚಿವರಾಗಿ, ಪ್ರತಿಕೂಲ ಸನ್ನಿವೇಶದಲ್ಲಿ ನೀವು ತೆಗೆದುಕೊಂಡ ಕೆಲವು ನಿರ್ಧಾರಗಳೂ ಈಗಿನ ಕುಸಿತದಲ್ಲಿ ಪಾತ್ರವಹಿಸಿವೆಯೇ?
ಖಂಡಿತವಾಗಿಯೂ ಇಲ್ಲ. ಈಗ ನಡೆಯುತ್ತಿರುವುದೆಲ್ಲ 2008ರಲ್ಲಿ ಪ್ರಾರಂಭವಾದ ಪ್ರಕ್ರಿಯೆಯ ಫಲವಷ್ಟೆ. ಆ ಸಮಯದಲ್ಲಿ ಸಿಎಡಿ ಕೇವಲ 1.2 ಪ್ರತಿಶತದಷ್ಟಿತ್ತು. ತೊಂದರೆಗಳಿದ್ದರೂ, ಸನ್ನಿವೇಶ ತೃಪ್ತಿದಾಯಕವಾಗಿತ್ತು. ಅತಿ ಸಂತೋಷದಲ್ಲೋ ಅಥವಾ ಅಹಂಕಾರದಿಂದಲೋ, ಸರ್ಕಾರ ಬೊಕ್ಕಸವನ್ನು ಬೇಕಾಬಿಟ್ಟಿ ಖರ್ಚುಮಾಡಿತು. 3 ಲಕ್ಷ ಕೋಟಿ ರುಪಾಯಿಗಳನ್ನು ಕೇವಲ ಬಳಕೆಗಾಗಿ ಖರ್ಚು ಮಾಡಲಾಯಿತು. ಆಗ ಆದಾಯ ಅಂಶದ ಕೊರತೆ 40 ರಿಂದ 80 ಪ್ರತಿಶತಕ್ಕೇರಿತು.
ತಾವು ಅಷ್ಟೊಂದು ಹಣ ಖರ್ಚು ಮಾಡಿದ್ದು ಜಾಗತಿಕ ಆರ್ಥಿಕ ಕುಸಿತಕ್ಕೆ ಪ್ರತಿಯಾಗಿ, ಇದರಿಂದಾಗಿಯೇ ಕಡಿಮೆ ಬೆಳವಣಿಗೆ, ಅಧಿಕ ಹಣದುಬ್ಬರ ಮತ್ತು ಅಲ್ಪ ಹೂಡಿಕೆಯ ಸಮಸ್ಯೆ ಎದುರಾಗಿದೆ ಎಂಬ ಸುಳ್ಳನ್ನು ಮನಮೋಹನ್‌ಸಿಂಗ್‌ರ ಸರ್ಕಾರ ಹೇಳುತ್ತಿದೆಯಾದರೂ, ಯುಪಿಎ ಆಗ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಹೀಗೆ ಮಾಡಿತು ಎಂದು ನಾವು ಹೇಳುತ್ತೇವೆ. ಈಗ ಇದೇ ಸರ್ಕಾರ, ಆ ಸಮಯದಲ್ಲಿ ಆದ ವಿದ್ಯಮಾನಗಳಿಂದಾಗಿ ಹಣದುಬ್ಬರ ಹೆಚ್ಚಾಯಿತು ಎಂದು ಒಪ್ಪಿಕೊಳ್ಳುತ್ತಿದೆ. ಈ ಹೆಚ್ಚಳದಿಂದಾಗಿ ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ಈಗ ಬಡ್ಡಿ ದರಗಳೂ ಹೆಚ್ಚುತ್ತಾ ನಾವು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದೇವೆ. ಯಾವುದೇ ಆರ್ಥಿಕ ತಜ್ಞನಿಗೂ ಕೂಡ ಈ ಸಮಸ್ಯೆಯ ಮೂಲ ಸುಲಭವಾಗಿ ಅರ್ಥವಾಗುತ್ತದೆ.

-ಆದರೆ ಆ ಸಮಯದಲ್ಲಿ ಬೇರೆ ಯಾವ ನಡೆಯನ್ನು ಅನುಸರಿಸುವುದಕ್ಕೆ ಸಾಧ್ಯವಿತ್ತು?
2008ರಲ್ಲಿ ಜಾಗತಿಕ ಆರ್ಥಿಕ ಕುಸಿತ ಎದುರಾಯಿತೆಂದು ಹೇಳಿ ಅವರು ಹಣಕಾಸಿನ ವಿಸ್ತರಣೆ ಮಾಡಿದರು. ಈಗ ಇನ್ನೊಂದು ಕುಸಿತ ಎದುರಾದಾಕ್ಷಣ, ಆರ್ಥಿಕತೆಯನ್ನು ಸಂಕುಚಿಸಲು ಹೊರಟಿದ್ದಾರೆ. ಯೋಜನಾ ಖರ್ಚನ್ನು 1 ಲಕ್ಷ ಕೋಟಿಗೆ ಇಳಿಸಿದ್ದಾರೆ. ಒಂದೋ 2008ರಲ್ಲಿ ಅವರು ತುಳಿದ ಹಾದಿ ಸರಿಯಿರಬಹುದು ಅಥವಾ ಈಗಿನದ್ದು. ಎರಡೂ ಸರಿಯಾಗಿರಲು ಸಾಧ್ಯವಿಲ್ಲವಲ್ಲ? ಅವರು ಯಾವ ಸಮಯದಲ್ಲಿ ಸರಿಯಾದ ಹೆಜ್ಜೆಯಿಟ್ಟಿದ್ದಾರೆ ಹೇಳಿ? ನೋಡುತ್ತಿರಿ, ಈ ಆಹಾರ ಭದ್ರತಾ ಕಾಯಿದೆ ಕೂಡ ಹೊರೆಯಾಗಲಿದೆ.

-ಒಂದು ವೇಳೆ ಆಹಾರ ಭದ್ರತಾ ಕಾಯ್ದೆಯನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮನ್ನು ಸಾಮಾನ್ಯ ಜನರ ಶತ್ರು ಎಂದು ಭಾವಿಸಲಾಗುತ್ತದೆ.
ಅದು ನಿಜ. ಒಂದು ವೇಳೆ ನಾವು ಅದನ್ನು ವಿರೋಧಿಸಿದರೆ, ಯುಪಿಎ ನಮ್ಮನ್ನು ಬಿಂಬಿಸುವುದು ಹಾಗೆಯೇ. ಹಾಗಾಗೆ ಉಳಿದ ರಾಜಕೀಯ ಪಕ್ಷಗಳು ಹೆದರಿ ಸುಮ್ಮನಾಗುತ್ತಿವೆ. ಜನರಿಗೆ ಎಲ್ಲವನ್ನೂ ಉಚಿತವಾಗಿ ಕೊಟ್ಟು ನೋಡಿ- ಉಚಿತ ವಿದ್ಯುತ್, ಉಚಿತ ನೀರು, ಉಚಿತ ಆಹಾರ.. ಎಲ್ಲವನ್ನೂ ಅವರು ಸಂತೋಷವಾಗಿ ಸ್ವೀಕರಿಸುತ್ತಾರೆ. ಆದರೆ ಇದರೊಳಗೆ ಅಡಗಿರುವ ಸತ್ಯವನ್ನು ಅವರು ಅರಿಯಲಾರರು.

-ಹಾಗಿದ್ದರೆ ಸಾಮಾನ್ಯ ಜನತೆ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗವನ್ನು ಹೊರತುಪಡಿಸಿ, ಇನ್ನೇನು ಬಯಸುತ್ತಾರೆ ಅನ್ನುವಿರಿ?
ಎಲ್ಲರಿಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಬೇಕಿಲ್ಲ. ಅದು ಶಿಕ್ಷಣ, ಅನುಭವ ಇರುವ ಜನರಿಗಷ್ಟೇ ಬೇಕು. ನಮ್ಮಲ್ಲಿ ಬಹುತೇಕರು ಈಗ ಯಾವ ಜಾಗದಲ್ಲಿದ್ದಾರೋ, ಮುಂದೆಯೂ ಅದೇ ಜಾಗದಲ್ಲಿರುತ್ತಾರೆ. ಸರ್ಕಾರ ಒಂದು ಕೈಯಿಂದ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ ಎನ್ನುವುದು ಅವರಿಗೆ ಅರಿವಾಗುತ್ತಿಲ್ಲ.

ಭಾರತದ ಆರ್ಥಿಕತೆ ಈ ಮಟ್ಟ ಮುಟ್ಟಿರುವುದನ್ನು ನೋಡಿ ನಿಮಗೇನನ್ನಿಸುತ್ತದೆ?
ನಾವು ಕಂಡ ಕನಸು ಎಲ್ಲಿಗೆ ಬಂದು ಮುಟ್ಟಿತಲ್ಲ ಎನ್ನುವುದನ್ನು ನೋಡುವುದಕ್ಕಾಗುತ್ತಿಲ್ಲ. ನಿಜಕ್ಕೂ ಬೇಜಾರಾಗುತ್ತಿದೆ.

-ಪ್ರಗ್ಯಾಸಿಂಗ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.