

ನೀವು ಯಾವುದೇ ಜಗತ್ತಿಗೆ ಹೋಗಿ- ಒಂದೇ ರೀತಿ. ಯಾವುದೇ ನಗರದ 'ಜಾಗತಿಕರಣದ ಹೆಡ್ಕ್ವಾರ್ಟರ್ಸ್'ನಂತೆ ಗೋಚರಿಸುವ ಮಾಲ್ಗಳಿಗೆ ಹೋಗಿ, ಒಂದೇ ರೀತಿ. ಮಾಲ್ಗಳ ಆಕಾರ, ಗಾತ್ರ, ಬೇರೆ ಬೇರೆ ಇರಬಹುದು. ಆದರೆ ಅಲ್ಲಿ ಸಿಗುವ ವಸ್ತು ಬೆಲೆ ಎಲ್ಲ ಒಂದೇ.
ಇದು ನಿಮ್ಮ ಅನುಭವ ಕೂಡ ಆಗಿರಬಹುದು.
ವಿದೇಶಗಳಿಗೆ ಹೋದಾಗ ಸವಾಲು ಅಂತ ಅನಿಸುವುದು ಶಾಪಿಂಗ್ ಮಾಡುವಾಗ. ಕಾರಣ ಅಲ್ಲಿ ಸಿಗುವುದೆಲ್ಲ ನಮ್ಮ ಊರಿನಲ್ಲಿ, ದೇಶದಲ್ಲಿ ಸಿಗುತ್ತದೆ. ಬೆಲೆಯಲ್ಲೂ ಅಂಥ ವ್ಯತ್ಯಾಸವೇನೂ ಇಲ್ಲ. ಅಮೆರಿಕ, ಬ್ರಿಟನ್, ದುಬೈ, ಸಿಂಗಾಪುರದಲ್ಲಿ ಸಿಗುವ ಬಹುತೇಕ ಎಲ್ಲ ಬ್ರ್ಯಾಂಡ್ಗಳು ಬೆಂಗಳೂರಿನಲ್ಲಿ ಸಿಗುತ್ತವೆ. ಮಂಗಳೂರು, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಶಿವಮೊಗ್ಗಗಳ ಮಾಲ್ಗಳಲ್ಲಿ ಕೆಲವು ಬ್ರ್ಯಾಂಡ್ಗಳು ಸಿಗುತ್ತವೆ. ಅಲ್ಲಿ ಮಾತ್ರ ಸಿಗುವ, ಇಲ್ಲಿ ಸಿಗದಿರುವ ಬ್ರ್ಯಾಂಡ್ಗಳು ಬಹಳ ಕಡಿಮೆ. ಈ ಕಾರಣದಿಂದ ಶಾಪಿಂಗ್ ತುಸು ತಲೆನೋವಿನ ಕೆಲಸ. 'ಇದನ್ಯಾಕೆ ಟರ್ಕಿಯಿಂದ ತಂದಿರಿ? ನಮ್ಮ ಗೋಪಾಲನ್ ಮಾಲ್ನಲ್ಲಿ ಒಂದು ತಗೊಂಡ್ರೆ ಮತ್ತೊಂದು ಫ್ರೀ ಆಫರ್ನಲ್ಲಿ ಸಿಗುತ್ತಿತ್ತಲ್ವಾ' ಎಂದು ಒಮ್ಮೆ ಮಗನಿಗೆ ರೀಬಾಕ್ ಷೂಗಳನ್ನು ತಂದಾಗ ಹೆಂಡತಿ ಹೇಳಿದ್ದಳು. ಈ ಮಾತುಗಳನ್ನು ಕೇಳಿಸಿಕೊಂಡ ಬಳಿಕ ನಾನು ಹತ್ತಾರು ದೇಶಗಳಿಗೆ ಹೋಗಿರಬಹುದು, ಬರುವಾಗ ಪುಸ್ತಕದ ಹೊರತಾಗಿ ಮತ್ತೇನನ್ನೂ ತಂದಿಲ್ಲ. ಖಾಲಿ ಕೈಲಿ ಬಂದಿದ್ದಕ್ಕೆ ಮನೆಯಲ್ಲಿ ತಕರಾರು, ಬೇಸರ ಇಲ್ಲ. ಏನನ್ನೇ ತಂದರೂ ಇಲ್ಲೂ ಸಿಗುತ್ತಿತ್ತು ಎಂಬ ಮಾತನ್ನು ಕೇಳಿಸಿಕೊಳ್ಳಬೇಕಲ್ಲ ಎಂದು ತರುವುದನ್ನು ಬಿಟ್ಟುಬಿಟ್ಟಿದ್ದೇನೆ. ಯಾವ ವಸ್ತುವನ್ನು ತಂದರೂ ಉಮೇದಿ, excitement ಎಂಬುದೇ ಇಲ್ಲ. ಹೊಸಬಟ್ಟೆ, ಚಾಕಲೇಟ್, ಎಲೆಕ್ಟ್ರಾನಿಕ್ ಸಾಮಾನು, ಪರ್ಫ್ಯೂಮ್, ಷೂ, ವಾಚ್... ಹೀಗೆ ಯಾವ ವಸ್ತುಗಳನ್ನ ತಂದರೂ ಮೊದಲಿದ್ದಂಥ ಖುಷಿಯಿಲ್ಲ.
ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಅಮೆರಿಕದಿಂದ ಬಂದವರು ಸೂಟ್ಕೇಸ್ ಬಿಚ್ಚುವ ತನಕ ಕಾಯಲು ಆಗುತ್ತಿರಲಿಲ್ಲ. ಅಮೆರಿಕದಲ್ಲಿದ್ದವರು ಬೆಂಗಳೂರಿಗೆ ಬರುವವರು ಸಿಕ್ಕಾಗ ಏನಾದರೂ ಸಾಮಾನುಗಳನ್ನು ಕಳಿಸಿಕೊಡುತ್ತಿದ್ದರು ಅಥವಾ ಏನು ಕಳಿಸಿಕೊಡಲಿ ಎಂದು ಫೋನ್ ಮಾಡಿ ಕೇಳುತ್ತಿದ್ದರು. ಈಗ ಆ ಸಂಪ್ರದಾಯವೇ ಹೊರಟುಹೋಗಿದೆ. ಅಮೆರಿಕದಲ್ಲಿರುವವರು ಬರುವಾಗ ಏನೂ ತರದಿದ್ದರೂ ತಪ್ಪು ತಿಳಿದುಕೊಳ್ಳುವುದಿಲ್ಲ. ಕಾರಣ ಅಲ್ಲಿ ಸಿಗುವುದೆಲ್ಲ, ಇಲ್ಲಿಯೂ ಸಿಗುತ್ತವೆ. ಗುಣಮಟ್ಟದಲ್ಲಿ ತುಸು ವ್ಯತ್ಯಾಸವಿರಬಹುದು. ಬೆಂಗಳೂರಿನಲ್ಲಿ ಖರೀದಿಸಿ, ಅವನ್ನು ಅಮೆರಿಕದಿಂದ ತಂದಿದ್ದು ಅಂತ ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ.
ಜಾಗತಿಕರಣದ ಪ್ರಭಾವವಿದು. ನೀವು ಯಾವುದೇ ಜಗತ್ತಿಗೆ ಹೋಗಿ- ಒಂದೇ ರೀತಿ. ಯಾವುದೇ ನಗರದ 'ಜಾಗತಿಕರಣದ ಹೆಡ್ಕ್ವಾರ್ಟರ್ಸ್'ನಂತೆ ಗೋಚರಿಸುವ ಮಾಲ್ಗಳಿಗೆ ಹೋಗಿ, ಒಂದೇ ರೀತಿ. ಮಾಲ್ಗಳ ಆಕಾರ, ಗಾತ್ರ, ಬೇರೆ ಬೇರೆ ಇರಬಹುದು. ಆದರೆ ಅಲ್ಲಿ ಸಿಗುವ ವಸ್ತು, ಬೆಲೆ ಎಲ್ಲ ಒಂದೇ. ಚನ್ನಪಟ್ಟಣದ ಬೊಂಬೆ, ಸಕಲೇಶಪುರದ ಕಾಫಿ ಬೊಡ್ಡೆ ಟೇಬಲ್ಗಳಂತೆ ಆಯಾ ಊರುಗಳಲ್ಲಿ ಸಿಗುವ ಸ್ಥಳೀಯ ವಸ್ತುಗಳನ್ನು ಹೊರತುಪಡಿಸಿದರೆ, ಎಲ್ಲ ಊರುಗಳಲ್ಲೂ ಎಲ್ಲವೂ ಸಿಗುತ್ತವೆ ಎಂಬಂತಾಗಿದೆ.
ಜಾಗತಿಕರಣದ ದೊಡ್ಡ ನಿದರ್ಶನವೆಂದರೆ ಮೆಕ್ಡೊನಾಲ್ಡ್ಸ್! ನೀವು ಯಾವುದೇ ದೇಶಕ್ಕೆ ಹೋದರೂ ಮೆಕ್ಡೊನಾಲ್ಡ್ಸ್ (ಗೋಲ್ಡನ್ ಆರ್ಕ್) ಕಾಣದೇ ಬರಲಾರಿರಿ. ಕ್ರಿಸ್ತನ 'ಕ್ರಾಸ್' ಗುರುತಿಗಿಂತ ಪ್ರಸಿದ್ಧವಾದುದು ಮೆಕ್ಡೊನಾಲ್ಡ್ಸ್ ಲೋಗೋ. ಸ್ಥಳೀಯ ರುಚಿ, ಪ್ರಸಿದ್ಧ ಖಾದ್ಯವನ್ನು ಸೇರಿಸಿ ತಕ್ಕ ಮಾರ್ಪಾಟುಗಳಿಂದ ಮೆಕ್ಡೊನಾಲ್ಡ್ಸ್ ಇಂದು ಜಗತ್ತನ್ನೇ ಆವರಿಸಿದೆ. ಪ್ರಧಾನ ಮಂತ್ರಿಯಿಲ್ಲದ ದೇಶವಿಲ್ಲದಿರಬಹುದು. ಆದರೆ ಮೆಕ್ಡೊನಾಲ್ಡ್ಸ್ ಫಾಸ್ಟ್ಫುಡ್ ಇಲ್ಲದ ದೇಶವಿಲ್ಲ.
ನಾನು ವಿದೇಶಗಳಿಗೆ ಹೋದಾಗ ಮೆಕ್ಡೊನಾಲ್ಡ್ಸ್ನ ಮೆನು ಗಮನಿಸುತ್ತೇನೆ. ಸ್ಥಳೀಯ ಐಟೆಮ್ ಇದ್ದೇ ಇರುತ್ತದೆ. ಭಾರತದಲ್ಲಿ ಮ್ಯಾಕ್ ಆಲೂ ಟಿಕ್ಕಿ ಇದ್ದಂತೆ ಚಿಲಿಯಲ್ಲಿ ಮ್ಯಾಕ್ಪೊಲ್ಲೊ, ಈಜಿಪ್ತ್ನಲ್ಲಿ ಮ್ಯಾಕ್ಅರೇಬಿಯಾ, ಮಲೇಷಿಯಾದಲ್ಲಿ ಬುಬುರ್ ಅಯಾಮ್ ಮ್ಯಾಕ್ಡಿ, ಮೆಕ್ಸಿಕೋದಲ್ಲಿ ಮ್ಯಾಕ್ ಮೊಲ್ಲೆಟ್, ನೆದರ್ಲ್ಯಾಂಡ್ನಲ್ಲಿ ಮ್ಯಾಕ್ಕ್ರೆಂಕೆಟ್, ಟರ್ಕಿಯಲ್ಲಿ ಮ್ಯಾಕ್ಟರ್ಕೋ, ನಾರ್ವೆಯಲ್ಲಿ ಮ್ಯಾಕ್ಲಾಕ್ಸ್ ಬಹಳ ಜನಪ್ರಿಯ. ಸಿಂಗಾಪುರದಲ್ಲಿ ಮೆಕ್ಡೊನಾಲ್ಡ್ಸ್ನಲ್ಲಿ ಜಾಸ್ಮಿನ್ಟೀ, ಸ್ಪೇನ್ನ ಬಾರ್ಸಿಲೋನಾದಲ್ಲಿ ಚಿಲ್ಡ್ ಸೂಪ್- ಗಝಪಾಚೋ, ಬ್ರೆಜಿಲ್ನಲ್ಲಿ ಆಪಲ್ ಪೈ ಸಹ ಲಭ್ಯ. ಜಪಾನ್ನ ಮೆಕ್ಡೊನಾಲ್ಡ್ಸ್ನಲ್ಲಿ ಕೊರೊಕೆ ಬರ್ಗರ್ ಬಹಳ ಪ್ರಸಿದ್ಧ. ಹಾಂಗ್ಕಾಂಗ್ನಲ್ಲಿ ಬರ್ಗರ್ ಬ್ರೆಡ್ನಲ್ಲಿ ಸಾಸಿವೆ ಕಾಳಿನ ಬದಲು ರೈಸ್ ಕೇಕ್ ಕೊಡುತ್ತಾರೆ. ಮಲೇಷಿಯಾದಲ್ಲಿ ಡಬಲ್ ಪ್ರಾಸ್ಪೆರಿಟಿ ಬರ್ಗರ್ನಲ್ಲಿ ಕಾಳು ಮೆಣಸಿನ ಸಾಸ್ ಬಳಸಲಾಗುತ್ತದೆ. ಭಾರತವನ್ನು ಬಿಟ್ಟರೆ ಬೇರೆಲ್ಲ ಮ್ಯಾಕ್ಡೊನಾಲ್ಡ್ಸ್ನಲ್ಲಿ ಬೀಫ್ ಬರ್ಗರ್ ಸಿಗುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಮೆಕ್ಡೊನಾಲ್ಡ್ಸ್ ಅತಿ ವೇಗವಾಗಿ ಬೆಳೆದ ಬ್ರ್ಯಾಂಡ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. 120 ದೇಶಗಳಲ್ಲಿ ಮೂವತ್ನಾಲ್ಕು ಸಾವಿರ ರೆಸ್ಟೋರೆಂಟ್ಗಳನ್ನು ಹೊಂದಿರುವ ಮೆಕ್ಡೊನಾಲ್ಡ್ಸ್ನಲ್ಲಿ ಹದಿನೇಳು ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿದ್ದಾಗ ಸ್ಥಳೀಯ ಬರ್ಗರ್ ತಿನ್ನಬೇಕೆಂದೆನಿಸಿತು. ಹತ್ತಾರು ಐಟೆಂಗಳ ಮಧ್ಯೆ ಲೋಕಲ್ ಐಟೆಂ ಯಾವುದೆಂದು ತಿಳಿಯಲಿಲ್ಲ. ಅಂಗಡಿಯವ Le McWrap Chevre ಬರ್ಗರ್ ತಂದಿಟ್ಟ. ಜತೆಗೆ ಗೋಟ್ಚೀಸ್! ರಿಯೋ ಡಿ ಜನೈರೋದಲ್ಲಿ ಮೆಕ್ಬರ್ಗರ್ ಜತೆ ಒಳ್ಳೆಯ ಕಾಂಬಿನೇಶನ್ ಅಂದ್ರೆ ವೈನ್. ಬರ್ಗರ್, ಫ್ರೆಂಚ್ ಫ್ರೈಸ್ ಜಗತ್ತಿನ ಮೂಲೆಮೂಲೆ ತಲುಪಿದ ಪರಿಯಿದು.
ಪಿಜ್ಜಾಹಟ್, ಡೋಮಿನೋಸ್ ಪಿಜ್ಜಾ, ಮೆಕ್ಡೊನಾಲ್ಡ್ಸ್ ಬರ್ಗರ್ ಥರಾನೇ ಜಾಗತಿಕರಣದ ಮತ್ತೊಂದು ಕುರುಹು ಅಂದ್ರೆ ಜೀನ್ಸ್ ಪ್ಯಾಂಟ್. ಕಳೆದ ವರ್ಷ ನಾನು ನನ್ನ ಅಜ್ಜನ ಮನೆಯಿಂದ ಶಿರಸಿಗೆ ಬರುತ್ತಿದ್ದೆ. ಶಿರಸಿಯಿಂದ ಇಪ್ಪತ್ತು ಕಿಮಿ ದೂರದಲ್ಲಿರುವ ಭತ್ತಗುತ್ತಿಗೆ ಎಂಬ ಒಂಟಿಮನೆಯೇ ನನ್ನ ಅಜ್ಜನ ಮನೆ. ಅಲ್ಲಿಂದ ಶಿರಸಿಗೆ ಹೋಗುವಾಗ ಕರೂರು ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಅಲ್ಲಿನ ಗದ್ದೆ ಸಮೀಪ ಸುಮಾರು 30-35 ವರ್ಷದ ಹಳ್ಳಿಗ, ಮಳೆಯಲ್ಲಿ ಕಂಬಳಿ ಹೊದ್ದು ದನ ಮೇಯಿಸುತ್ತಿದ್ದ. ಹತ್ತಿರ ಹೋದಾಗ ಆತ ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದು ಕಂಡಿತು. ಕರೂರಿನ ದನ ಕಾಯುವ ಹುಡುಗನಿಂದ ಹಿಡಿದು ಹಾಲಿವುಡ್ ನಟ-ನಟಿಯರ ತನಕ, ಅಮೆರಿಕ ಅಧ್ಯಕ್ಷನ ತನಕ ಎಲ್ಲರೂ ಧರಿಸುವುದು ಜೀನ್ಸ್ ಪ್ಯಾಂಟ್. ಬ್ರ್ಯಾಂಡ್ ಬೇರೆ ಬೇರೆಯದ್ದಿರಬಹುದು, ಆದರೆ ಪ್ರಕಾರ ಮಾತ್ರ ಒಂದೇ -ಜೀನ್ಸ್! ಗಂಡಸರು, ಹೆಂಗಸರು ಎಂಬ ಭೇದ -ಭಾವವಿಲ್ಲದೇ, ಎಲ್ಲ ಸಂದರ್ಭ, ಸನ್ನಿವೇಶಗಳಿಗೆ ಒಗ್ಗುವುದು ಜೀನ್ಸ್. ಮುಂದೊಂದು ದಿನ ಜೀನ್ಸ್ ಮಡಿ ಧರಿಸಿ ಕುಕ್ಕೆ, ಹೊರನಾಡು, ಗೋಕರ್ಣದ ಪುರೋಹಿತರು ಮಂತ್ರ ಹೇಳುತ್ತಾ ಪೂಜೆ ಮಾಡಿದರೆ ಅಚ್ಚರಿಪಡಬೇಕಿಲ್ಲ. ನಾನು ಕೇಪ್ಟೌನ್ನಿಂದ ಡರ್ಬನ್ಗೆ ಹೋಗಲು ವಿಮಾನ ನಿಲ್ದಾಣದಲ್ಲಿ ಕ್ಯೂನಲ್ಲಿ ನಿಂತಿದ್ದೆ. ಸಾಲಿನಲ್ಲಿ ನಿಂತಿದ್ದ ಇಪ್ಪತ್ತೆಂಟು ಜನರ ಪೈಕಿ ಇಪ್ಪತ್ತೆರಡು ಮಂದಿ (ಗಂಡಸರು ಹಾಗೂ ಹೆಂಗಸರು) ಜೀನ್ಸ್ ತೊಟ್ಟಿದ್ದರು!
ನಾನು ಇದನ್ನು 'ಗಂಗನಂ ಇಫೆಕ್ಟ್' ಅಂತ ಕರೆಯುತ್ತೇನೆ. 'ಗಂಗನಂ ಸ್ಟೈಲ್' ಹಾಡು ರಾತ್ರಿ ಬೆಳಗಾಗುವುದರೊಳಗೆ ಜಗತ್ತಿನಾದ್ಯಂತ ಪಸರಿಸಿದ ರೀತಿ ಕಲ್ಪನೆಗೂ ನಿಲುಕದ್ದು. ಬೈಬಲ್, ಕುರಾನ್ ಹೆಸರನ್ನು ಕೇಳದವರೂ ಗಂಗನಂ ಹಾಡನ್ನು ಕೇಳಿದರು. ಗಂಗನಂ ಹಾಡನ್ನು ಕೇಳದಿದ್ದರೆ ಊಟ, ತಿಂಡಿ ಮಾಡುವುದಿಲ್ಲ ಎಂದು ಹಠ ಹಿಡಿದ ನಾಯಿಯ ಒಂದೂವರೆ ನಿಮಿಷದ ವಿಡಿಯೋ ತುಣುಕು ಯುಟ್ಯೂಬ್ನಲ್ಲೆಲ್ಲ ಹರಿದಾಡಿ ಸಂಚಲನವನ್ನುಂಟು ಮಾಡಿತು. ಗಂಗನಂ ಹಾಡಿಗೆ ಹೋಲಿಸಿದರೆ, ಜೀನ್ಸ್ ಬಹಳ ನಿಧಾನವಾಗಿಯೇ ಸರ್ವವ್ಯಾಪಿಯಾಯಿತು. ವ್ಯತ್ಯಾಸವಿಷ್ಟೇ, ಜೀನ್ಸ್ ಉಳಿಯಿತು, ಗಂಗನಂ ಹೊರಟು ಹೋಯಿತು.
ಇದು ನಗರದ ಕತೆ ಎಂದು ಉಪೇಕ್ಷೆ ಬೇಡ. ಭಾರತದ ಯಾವುದೇ ಜಿಲ್ಲೆ, ತಾಲೂಕಿಗೆ ಹೋಗಿ. ಹಳ್ಳಿಗಳಿಗೆ ಹೋಗಿ. ಹೆಚ್ಚು ಕಮ್ಮಿ ಒಂದೇ ರೀತಿ ಕಾಣುತ್ತವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದರೆ ಎಲ್ಲ ಹಳ್ಳಿಗಳೂ ಒಂದೇ ರೀತಿ ಕಾಣುತ್ತವೆ. ಕೆಲವು ಪ್ರಾಕೃತಿಕ ಅಂಶಗಳನ್ನು ಬಿಟ್ಟರೆ, ಎಲ್ಲ ದೇಶಗಳ ನಗರಗಳೂ ಸಹ ಒಂದೇ ರೀತಿಯಾಗಿವೆ, ಎಲ್ಲ ಏರ್ಲೈನ್ಸ್ಗಳ ಊಟ, ತಿಂಡಿ ಒಂದೇ ರೀತಿಯಾಗಿರುವಂತೆ!
ಇದು ಒಂಥರಾ 'ಪೈಲಟ್ ಸಿಂಡ್ರೋಮ್'. ಪೈಲಟ್ಗೆ ಎಲ್ಲ ದೇಶಗಳೂ ವಿಮಾನದ ಮೇಲಿಂದ ಒಂದೇ ರೀತಿಯಾಗಿ ಕಾಣುತ್ತವಲ್ಲ ಹಾಗೆಯೇ.
ವಿದೇಶಗಳಿಗೆ ಹೋದಾಗ, ಹತ್ತು ಕಡೆ ತಿರುಗಾಡಿದಾಗ, ನಮ್ಮೂರಲ್ಲಿ ಸಿಗದಿರುವ ಯಾವ ಹೊಸ ವಸ್ತು ಅಲ್ಲಿದೆ ಎಂದು ಹುಡುಕಿ ನೋಡಿ. ಇಲ್ಲಿರುವುದೇ ಅಲ್ಲಿರುವುದು. ಗುಣಮಟ್ಟದಲ್ಲಿ ಸ್ವಲ್ಪ ಹೆಚ್ಚು -ಕಮ್ಮಿ ಇರಬಹುದಷ್ಟೆ.
ಅವರು ಪ್ರಧಾನಿ ಆಗ್ತಾರಾ?
ಇಂಗ್ಲಿಷ್ ವರ್ಣಮಾಲೆಯಲ್ಲಿ ತಮ್ಮ ಹೆಸರನ್ನು ಸಂಕ್ಷಿಪ್ತವಾಗಿ ಸತತ ಎರಡು ಅಕ್ಷರಗಳಲ್ಲಿ ಹೊಂದಿರುವವರು ಯಶಸ್ವಿಯಾಗುತ್ತಾರಂತೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಕೆಲವರ ಹೆಸರುಗಳನ್ನು, ಅವರ ಜನಪ್ರಿಯತೆ, ಯಶಸ್ಸನ್ನು ಗಮನಿಸಿದರೆ ಇದು ನಿಜವಿದ್ದಿರಬಹುದೇನೋ ಎಂದೆನಿಸುತ್ತದೆ. ಉದಾಹರಣೆಗೆ, ನಿನ್ನೆ ನಿಧನರಾದ ನೆಲ್ಸನ್ ಮಂಡೇಲಾ (NM), ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ (BC), ನಾರಾಯಣಮೂರ್ತಿ (NM), ಅಮಿತಾಭ್ ಬಚ್ಚನ್ (AB), ಆಶಾ ಭೋಂಸ್ಲೆ (AB), ಆದಿತ್ಯ ಬಿರ್ಲಾ(AB), ಅಟಲ್ ಬಿಹಾರಿ (AB), ಲತಾ ಮಂಗೇಶ್ಕರ್(LM), ಲಕ್ಷ್ಮೀ ಮಿಟ್ಟಲ್(LM), ಸಚಿನ್ ತೆಂಡುಲ್ಕರ್(ST), ವೀನಸ್ ವಿಲಿಯಮ್ಸ್ (VW).ಇದೇ ಲಾಜಿಕ್ ಪ್ರಕಾರ ಹೋದರೆ ನರೇಂದ್ರ ಮೋದಿ (NM)ಪ್ರಧಾನಿ ಆಗಬಹುದಾ?
ಏನು ಹೆಸರು?
ಬಹಳ ಬೇಗ ಕ್ಲೋಸ್ಫ್ರೆಂಡ್ (ಪಾಲ್) ಆಗಬೇಕೆನ್ನುವವನಿಗೆ ಏನಂತ ಕರೆಯಬಹುದು?
-ತೇಜ್-ಪಾಲ್!
- ವಿಶ್ವೇಶ್ವರ ಭಟ್