

ಇತ್ತೀಚೆಗೆ ಓದುಗ ಮಿತ್ರರೊಬ್ಬರು, 'ನೀವು ಈ ದಿನಗಳಲ್ಲಿ ಯಾಕೋ ದುಬೈ ರೂಲರ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಹಿಂದೆ ಬಿದ್ದಿದ್ದೀರಿ ಅಂತ ಅನಿಸುತ್ತಿದೆ. ಆಗಾಗ ಅವರ ಬಗ್ಗೆ ಬರೆಯುತ್ತೀರಿ. ಅವರನ್ನು quote ಮಾಡುತ್ತೀರಿ. ಏನಿದರ ವಿಶೇಷ?' ಎಂದು ಕೇಳಿ ಪತ್ರ ಬರೆದಿದ್ದರು. ನಾನು ಅವರಿಗೆ ಒಂದು ಸಾಲಿನ ಉತ್ತರ ಬರೆದೆ-'ಹೌದು. ನನ್ನ ಪಾಲಿಗೆ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೊಸ ರಿಚರ್ಡ್ ಬ್ರಾನ್ಸನ್!'
ಅಷ್ಟಕ್ಕೂ ಪತ್ರಕರ್ತರಾದವರು ಸಾಧಕರು ಹಾಗೂ ಸಮಯ ಸಾಧಕರ ಹಿಂದೆ ಬೀಳಲೇಬೇಕು ತಾನೆ. ಅದಿರಲಿ, ಖಂಡಿತವಾಗಿಯೂ ಮಕ್ತೌಮ್ ನನಗೆ ಹೊಸ ಬ್ರಾನ್ಸನ್. ಅಂದರೆ ಮಕ್ತೌಮ್ ಅವರಲ್ಲಿ ನಾನು ಬ್ರಾನ್ಸನ್ನ್ನು ಕಾಣುತ್ತಿದ್ದೇನೆ. ಮೂರು ತಿಂಗಳ ಹಿಂದೆ ಮೊದಲ ಬಾರಿಗೆ ನಾನು ಮಕ್ತೌಮ್ ಅವರ ಬಗ್ಗೆ ಬರೆದಾಗ ಸಾವಿರಾರು ಓದುಗರು ಅವರ ವ್ಯಕ್ತಿತ್ವದ ಬಗ್ಗೆ ಅಚ್ಚರಿ, ಖುಷಿ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದರು. ಮಕ್ತೌಮ್ ಬರೆದ 'My Vision' ಎಂಬ ಪುಸ್ತಕವನ್ನು ಸವುಡು ಮಾಡಿಕೊಂಡು ಓದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿ, ಆ ಪುಸ್ತಕದ ಒಂದು ಪ್ರತಿಯನ್ನು ಕಳಿಸಿಕೊಟ್ಟಿದ್ದೆ. ಅವರು ಅದನ್ನು ಓದಿದಂತಿಲ್ಲ. ಓದಿದ್ದರೆ ಅವರಲ್ಲಿ ಒಂದಷ್ಟು ಗುಣಾತ್ಮಕ ಬದಲಾವಣೆ, ಚಬುಕು ಕಾಣಿಸುತ್ತಿತ್ತು.
ಇರಲಿ ಬಿಡಿ. ರಿಚರ್ಡ್ ಬ್ರಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ ತೋರಿಸಿದವನು. ಅಂದುಕೊಂಡಿದ್ದೆಲ್ಲವನ್ನೂ ಮಾಡಿದ ಬಳಿಕ ಇನ್ನು ಸುಮ್ಮನಿರಬೇಕಲ್ಲ ಎಂದು ಚಡಪಡಿಸಿ ತನಗೆ ತಾನೇ ಹೊಸ ಸವಾಲುಗಳನ್ನು ಎಳೆದುಕೊಂಡು ಅವುಗಳನ್ನು ಈಡೇರಿಸಲು ಎದೆಯೊಡ್ಡುತ್ತಿರುವ ಪರಮ ಹುಂಬ, ಮಹಾಸಾಹಸಿ. ಹಣ ಮಾಡುವುದನ್ನೇ ಕಾಯಕ ಮಾಡಿಕೊಳ್ಳದೇ, ಜೀವನವನ್ನು ಇಡಿಯಾಗಿ ಅನುಭವಿಸುವ ಅದಮ್ಯ ಉತ್ಸಾಹಿ. ಇಂಥ ಅಪರೂಪದ ಸಾಹಸಿಯನ್ನು ಕಳೆದ ಏಳೆಂಟು ವರ್ಷಗಳಿಂದ ಹಿಂಬಾಲಿಸಿಕೊಂಡು ಬರುತ್ತಿದ್ದೇನೆ. ನನಗೆ ಹಿಡಿದ 'ಬ್ರಾನ್ಸನ್ ಮೇನಿಯಾ'ವನ್ನು ನನ್ನ ಓದುಗರಿಗೆ ಹತ್ತಿಸಿದ್ದೇನೆ. ಕೆಲವರು 'ನಿಮ್ಮದು ತುಸು ಅತಿಯಾಯಿತು' ಎಂದೂ ಹೇಳಿದ್ದಾರೆ. 'ತುಸು ಅತಿ'ಯಾಗದಿದ್ದರೆ ಬ್ರಾನ್ಸನ್ನಿಂದ ಪ್ರೇರಣೆ ಪಡೆದಿಲ್ಲ ಎಂದೇ ಅರ್ಥ. ಹುಚ್ಚು ಹತ್ತಿಸಿಕೊಳ್ಳದಿದ್ದರೆ, ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂಬುದೇ ಅವನ ಜೀವನ ಸಿದ್ಧಾಂತ.
ನನಗೆ ಅವನೊಬ್ಬ ಉದ್ಯಮಿ, ಶ್ರೀಮಂತನಷ್ಟೇ ಆಗಿದ್ದರೆ ಖಂಡಿತವಾಗಿಯೂ ಇಷ್ಟವಾಗುತ್ತಿರಲಿಲ್ಲ. ಶ್ರೀಮಂತ ಎಂಬ ಕಾರಣಕ್ಕೆ ನೀವು ಅಶೋಕ ಖೇಣಿ, ಮಿತ್ತಲ್, ಅಂಬಾನಿಯನ್ನು ಇಷ್ಟಪಡಲು ಸಾಧ್ಯವೇ ಇಲ್ಲ. ಇದೇ ಕಾರಣವಾಗಿದ್ದರೆ ನಮ್ಮೂರಿನ ಗಿರವಿ ಅಂಗಡಿ ಮಾಲೀಕರು, ಸೇಠುಗಳು, ರಿಯಲ್ ಎಸ್ಟೇಟು ದಂಧೆಕೋರರನ್ನೆಲ್ಲ ಇಷ್ಟಪಡಬೇಕಾಗುತ್ತಿತ್ತು. ಇನ್ನೂ ಒಂದು ಲಕ್ಷ ಕೋಟಿ ರೂಪಾಯಿ ಅವರ ಅಕೌಂಟ್ಗೆ ಜಮಾ ಆದರೂ ಮುಖೇಶ್ ಅಂಬಾನಿ ಶಾರ್ಕ್ಗಳ ಜತೆ ಈಜಲು ಸಮುದ್ರಕ್ಕಿಳಿಯುವುದಿಲ್ಲ. ಹಾಟ್ ಏರ್ ಬಲೂನ್ನಲ್ಲಿ ಕುಳಿತು ವಿಶ್ವಪ್ರದಕ್ಷಿಣೆಗೆ ಅಣಿಯಾಗುವುದಿಲ್ಲ. ಐವತ್ತು ಸಾವಿರ ಅಡಿ ಎತ್ತರಕ್ಕೆ ಹೋಗಿ ಅಲ್ಲಿಂದ ಜಿಗಿಯುವುದಿಲ್ಲ. ಮಂಗಳ ಯಾತ್ರೆಗೆ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸುವುದಿಲ್ಲ. ಕೋಟಿಗೆ ಕೋಟಿ ಸೇರುತ್ತಾ ಹೋದಂತೆಲ್ಲ ಅಂಬಾನಿಯಂಥವರು ಮನೆಯಲ್ಲಿದ್ದು ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾ ದೇಹವನ್ನು ಗುಡಾಣ ಮಾಡಿಕೊಳ್ಳುತ್ತಾರೆಯೇ ಶಿವಾಯ್, ಬ್ರಾನ್ಸನ್ನಂಥ ಸಾಹಸಕ್ಕೆ ಅಣಿಯಾಗುವುದಿಲ್ಲ. ಬ್ರಾನ್ಸನ್ ಇಷ್ಟವಾಗುವುದು ಆ ಕಾರಣಕ್ಕೆ. ಓದುಗರೇನಾದರೂ ಅವನನ್ನು ಮೆಚ್ಚಿದರೂ ಅದೇ ಕಾರಣಕ್ಕೆ. ಜತೆಗೆ ಅವನ ವಿಚಾರಗಳು.
ನನಗೆ ರಿಚರ್ಡ್ ಬ್ರಾನ್ಸನ್ನಂತೆ ಅಥವಾ ಅವನಿಗಿಂತ ಒಂದು ಹಿಡಿ ಜಾಸ್ತಿಯಾಗಿ ಕಂಡವನು ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್. ಬ್ರಾನ್ಸನ್ನಂತೆ ಮಕ್ತೌಮ್ ಮುಂದೆ ಸಹ ಸಾಧನೆಯ ಸಾಗರವಿದೆ. ಮಾಯಾನಗರಿ ದುಬೈಗಿಂತ ದೊಡ್ಡ ಸಾಧನೆ ಬೇಕಾ? ಮರುಭೂಮಿಯನ್ನು ಮರುಳು ಮಾಡುವ ಭೂಮಿಯನ್ನಾಗಿ ಪರಿವರ್ತಿಸುವ ಹಿಂದಿನ ಶ್ರಮ, ಶ್ರದ್ಧೆ, ಯೋಚನೆ, ಚಿಂತನೆ, ಕರ್ತೃತ್ವ ಶಕ್ತಿಯಿದೆಯೆಲ್ಲ. ಅದಕ್ಕೆ ಎಂಥವರಾದರೂ ಬೆರಗಾಗಲೇಬೇಕು, ತಲೆದೂಗಲೇಬೇಕು. ದುಬೈ ನಗರವನ್ನು ನೋಡಿದಾಗೆಲ್ಲ ಅದನ್ನು ರೂಪಿಸಿದ ವ್ಯಕ್ತಿಯ ಆಲೋಚನೆಗಳು, ಕನಸುಗಳು ಹೇಗಿದ್ದಿರಬಹುದು, ಯಾವ ಮಹಾನ್ ಶಕ್ತಿ ಈ ನಗರದ ಬೀಜ ಬಿತ್ತಿರಬಹುದು ಎಂಬ ವಿಸ್ಮಯವುಂಟಾಗುತ್ತಿತ್ತು. ಮಕ್ತೌಮ್ ಎಂಬ ಕನಸುಗಾರನ ವಿಚಾರ, ಧ್ಯೇಯ, ಸಿದ್ಧಾಂತಗಳನ್ನು ಓದುತ್ತಾ ಹೋದಂತೆಲ್ಲ ನಾನುಅವರಲ್ಲಿ ಮತ್ತೊಬ್ಬ ಬ್ರಾನ್ಸನ್ನನ್ನು ಕಾಣಲಾರಂಭಿಸಿದೆ.
ರೋಮ್ ನಗರವನ್ನು ರಾತ್ರಿ-ಬೆಳಗಾಗುವುದರೊಳಗೆ ಕಟ್ಟಿಲ್ಲವಂತೆ. ಆದರೆ ರೋಮ್ ನಗರ ಈ ಸ್ಥಿತಿಗೆ ಬರಲು ತೆಗೆದುಕೊಂಡಿರುವ ಅವಧಿಯನ್ನು ಹೋಲಿಸಿದರೆ, ದುಬೈ ನಗರವನ್ನು ರಾತ್ರಿ-ಬೆಳಗಾಗುವುದರೊಳಗೆ ಕಟ್ಟಿದ್ದಾರೆಂದು ಹೇಳಬಹುದು. ಇಡೀ ಜಗತ್ತೇ ತಲೆದೂಗುವ ರೀತಿಯಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದ ಈ ನಗರದ ಕನಸಿನ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ, ಅದನ್ನು ಈ ಸ್ಥಿತಿಗೆ ತರುವ ತನಕ ಹೆಣಗಿದ ಮನಸ್ಸು ಹೇಗೆ ಕೆಲಸ ಮಾಡಿರಬಹುದು ಎಂಬುದು ಎಂಥವರಿಗಾದರೂ ಅಚ್ಚರಿಯೇ. ಮಕ್ತೌಮ್ ಇಷ್ಟವಾಗುವುದು ಈ ಕಾರಣಕ್ಕೆ.
ಈ ವರ್ಷದ ಆರಂಭದಲ್ಲಿ ಮಕ್ತೌಮ್ ಅವರು ಸರ್ಕಾರಿ ಅಧಿಕಾರಿಗಳ ಶೃಂಗ ಸಭೆಯನ್ನು ಏರ್ಪಡಿಸಿದ್ದರು. ಅಲ್ಲಿ ಅವರು ಮಾಡಿದ ಭಾಷಣದ ಸಿಡಿಯನ್ನು ಮಕ್ತೌಮ್ ಅವರ ಆಪ್ತರೊಬ್ಬರು ನನಗೆ ಕಳಿಸಿಕೊಟ್ಟಿದ್ದರು. ಸುಮಾರು ಮುಕ್ಕಾಲು ಗಂಟೆ ಅವಧಿಯ ಅವರ ಭಾಷಣವನ್ನು ಇತ್ತೀಚೆಗೆ ಕೇಳುತ್ತಿದ್ದೆ, ನೋಡುತ್ತಿದ್ದೆ. ಪ್ರಪ್ರಥಮವಾಗಿ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ಕರೆದು ಅವರಿಗಾಗಿ ಶೃಂಗಸಭೆ ಏರ್ಪಡಿಸುವುದು, ಅವರಿಂದ ಅಪೇಕ್ಷೆಗಳೇನು, ನಿರೀಕ್ಷೆಗಳೇನು ಎಂದು ಬಯಸುವುದು, ಅವರ ಸಮಸ್ಯೆಗಳಿಗೆ ಕಿವಿಯಾಗುವುದು, ಅವರನ್ನು ಹುರಿದುಂಬಿಸುವುದಿದೆಯಲ್ಲ, ಅದೇ ಒಂದು ಅದ್ಭುತ! ನಮ್ಮ ಯಾವ ಮುಖ್ಯಮಂತ್ರಿ ಸರ್ಕಾರಿ ನೌಕರರನ್ನು ಭೇಟಿ ಮಾಡಿ, ಅವರಿಂದ ಏನು ನಿರೀಕ್ಷಿಸುತ್ತೇನೆ ಎಂದು ಕೇಳಿದ್ದಾರೆ? ಅವರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಹುರಿದುಂಬಿಸಿದ್ದಾರೆ?
ಆ ಸರ್ಕಾರಿ ಶೃಂಗಸಭೆಯಲ್ಲಿ ಸಾಮಾನ್ಯ ಸಿಬ್ಬಂದಿಯೊಬ್ಬ ಎದ್ದುನಿಂತು, 'ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತೀರಿ? ನಿಮ್ಮ ಹಕೀಕತ್ತೇನು?' ಎಂದು ಪ್ರಶ್ನಿಸಿದ. ಅದಕ್ಕೆ ಮಕ್ತೌಮ್ ಹೇಳಿದರು-'ನೀವು ದುಬೈ ರಾಯಭಾರಿಗಳು. ನಿಮ್ಮ ಯೋಗದಾನವಿಲ್ಲದೇ ಈ ಸುಂದರ, ವೈಭವದ ನಗರವನ್ನು ಈ ಮಟ್ಟಕ್ಕೆ ಬೆಳೆಸಲು ಸಾಧ್ಯವಾಗುತ್ತಿರಲಿಲ್ಲ. ನೀವು ಅಭಿವೃದ್ಧಿಯ ಚಾಲಕರು. ನೀವು ನಮ್ಮ ಬಂಡವಾಳ. ನಾವು ಜನರಿಗೆ ನೀಡುವ ಸೇವೆಯನ್ನು ಅವರಿಗೆ ತಲುಪಿಸುವುವರೇ ನೀವು. ದುಬೈ ನಗರ world class ಆಗಿದೆ. ನಮ್ಮ ಸರ್ಕಾರಿ ನೌಕರರ ಕೆಲಸದ ಮೌಲ್ಯವೂ world class ಆಗಿದೆ ಎಂದರ್ಥ. ನಮಗೆ ಬೇಕಾಗಿರುವವರು ಉತ್ಕೃಷ್ಟ, ಪರಿಪೂರ್ಣ ಕೆಲಸಗಾರರು, ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರೇಷ್ಠತೆ ಮೆರೆಯುವವರು. A great vision can only be achieved by a great team. ಹಿಂದಿನ ವರ್ಷವೊಂದೇ ನಮ್ಮ 55 ಸಾವಿರ ಸರ್ಕಾರಿ ಸಿಬ್ಬಂದಿ ತರಬೇತಿಗಾಗಿ ಹದಿಮೂರು ಲಕ್ಷ ಗಂಟೆಗಳ ಬಂಡವಾಳ ಹೂಡಿದ್ದೇವೆ. ನೀವೇ ನಮಗೆ capital (ಬಂಡವಾಳ). ನೀವು ಜೀವನದಲ್ಲಿ ಮುಂದೆ ಬನ್ನಿ. ದುಬೈ ತನ್ನಿಂದ ತಾನೆ ಮುಂದೆ ಬರುತ್ತದೆ. ನೀವು ಕೊಡುವ ಸಾಮರ್ಥ್ಯ ಹೊಂದಿದರೆ ಮಾತ್ರ ದೇಶ ಉದ್ಧಾರವಾಗುತ್ತದೆ.'
ಅಂದು ಮಕ್ತೌಮ್ ಹೇಳಿದ ಕೆಲವು ವಿಚಾರಗಳನ್ನು ನಿಮಗೆ ಕೇಳಿಸಬೇಕು. ಒಂದು ದೇಶವನ್ನು ಮುನ್ನಡೆಸುವವರು ಹೇಗೆ ಯೋಚಿಸುತ್ತಿದ್ದಾರೆಂಬುದು ಗೊತ್ತಾದೀತು.