ಅಂಕಣಗಳು

ಸಲಿಂಗಕಾಮಿಗಳ ಭವಿಷ್ಯ ಏನು?

ಸಲಿಂಗಕಾಮಿಗಳ ಭವಿಷ್ಯ ಏನು?
Published On :

ಸಲಿಂಗಕಾಮಿಗಳು ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಸಲಿಂಗಕಾಮಿಗಳಲ್ಲದ, ಆದರೂ ಇವರ ಪರ ವಾದಿಸುವವರು ಒಂದಷ್ಟು ಜನ, ಇವರ ವಿರೋಧವಾಗಿ ಒಂದಷ್ಟು ಜನ.
ಇದು ಸ್ವಾಭಾವಿಕ, ಅಭಿವ್ಯಕ್ತಿ ಸ್ವಾತಂತ್ರ್ಯ, ನಮ್ಮ ಪುರಾಣ, ದೇವಾಲಯಗಳ ಶಿಲ್ಪಗಳಲ್ಲಿ, ಕತೆಗಳಲ್ಲೂ ಇಂತಹ ನಿದರ್ಶನಗಳಿವೆ ಅಂತೆಲ್ಲ ವಾದಿಸುತ್ತಾ ಇದನ್ನು ಸಮರ್ಥಿಸುವವರು ಒಂದು ಕಡೆ, ಇದು ಮಾನಸಿಕ ಸಮಸ್ಯೆ ಅನ್ನುವವರು ಇನ್ನೊಂದು ಕಡೆ. ಹಾಗಂತ ಯಾವುದು ಸರಿ ಅನ್ನೋ ನಿಲವಿಗೆ ಬರುವುದು ಸ್ವಲ್ಪ ಕಷ್ಟ. ಇಂತಹ ಸಂಬಂಧಗಳ ಭವಿಷ್ಯ ಏನು, ಧ್ಯೇಯ ಏನು? ಇಲ್ಲಿ ಪ್ರೀತಿ, ವಿಶ್ವಾಸ ಎಲ್ಲಿದೆ? ಕುಟುಂಬ ವ್ಯವಸ್ಥೆ ಕೊಡುವ ಪ್ರೀತಿ, ಮಾನಸಿಕ ಭದ್ರತೆಯನ್ನು ಇದು ಕೊಡಬಲ್ಲದೇ? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. ಬರೀ ತನ್ನ ಸುಖವೇ ಮುಖ್ಯ ಅನ್ನುವ ಸ್ವಾರ್ಥ ಬಿಟ್ಟರೆ ಪ್ರೀತಿಯನ್ನು ಇಲ್ಲಿ ಕಾಣುವುದು ಕಷ್ಟವಾಗುತ್ತದೆ.
ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಇದನ್ನು ಕಾನೂನುಬದ್ಧಗೊಳಿಸಿದ್ದಾರೆ. ಅಂತಹ ದೇಶಗಳಲ್ಲಿ ಕುಟುಂಬ ಪದ್ಧತಿ ಅಷ್ಟು ಮುಖ್ಯವಲ್ಲ. ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿದಲ್ಲಿಗೆ ಸಮಸ್ಯೆ ಮುಗಿಯುವುದಿಲ್ಲ. ಅಲ್ಲಿಂದ ಹೊಸ ಸಮಸ್ಯೆಯೊಂದು ಆರಂಭವಾಗುತ್ತದೆ. ನಮ್ಮ ದೇಶದಲ್ಲಿ ಕುಟುಂಬವೇ ಸಮಾಜದ ಆಧಾರ. ಅಲ್ಲದೆ ನಮ್ಮ ದೇಶದಲ್ಲಿ ಲೈಂಗಿಕ ಸ್ವಚ್ಛಂಧತೆ ಇನ್ನೂ ಅಷ್ಟಾಗಿ ಬೆಳೆದಿಲ್ಲ. ತಂದೆ-ತಾಯಿ, ಅಣ್ಣ-ತಂಗಿ-ಅಕ್ಕ ಹೀಗೆ ಸಂಬಂಧಗಳ ಬೆಸುಗೆಯಲ್ಲಿ ವ್ಯಕ್ತಿಯ ಮಾನಸಿಕ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗುತ್ತದೆ. ಸಲಿಂಗಿಗಳ ಸಂಸಾರವನ್ನು ಕುಟುಂಬವೆನ್ನಲಾಗದು.
ದಂಪತಿಗಳಂತೆ ಈ ವ್ಯಕ್ತಿಗಳು ಬದುಕಿದರೂ ಅದು ಎಲ್ಲಿಯವರೆಗೆ. ಇವರಿಬ್ಬರೂ ಲೈಂಗಿಕವಾಗಿ ಅಶಕ್ತರಾದಾಗ ಬೇರೆಯಾಗಬಹುದು. ಅನಾರೋಗ್ಯ ಕಾಡಿದಾಗ ಕುಟುಂಬದ ಸಾಂತ್ವನ ಬೇಕೆನ್ನಿಸಬಹುದು. ಆಗ ಇವರಿಗೆ ಸ್ಥೈರ್ಯ ಯಾರು ಕೊಡುತ್ತಾರೆ? ಇವರಿಗೂ ಡಿವೋರ್ಸ್, ಮಾಸಾಶನ ಇಂತಹ ಕಾನೂನುಗಳ ಅವಶ್ಯಕತೆ ಬೀಳಬಹುದು. ಇವರದೇ ಹೊಸ ಗುಂಪು, ಇವರಿಗಾಗಿಯೇ ಹೊಸ ಕಾನೂನು ಇವೆಲ್ಲವುಗಳ ಜವಾಬ್ದಾರಿ ನಮ್ಮ ಮೇಲೆ ಬೀಳುತ್ತದೆ. ಅದೂ ಅಲ್ಲದೆ, ಇವರನ್ನು ಸ್ವೀಕರಿಸಲು ನಮ್ಮ ಸಮಾಜವಿನ್ನೂ ಸಿದ್ಧವಾಗಿಲ್ಲ. ಇವರು ಸಮಾಜದಿಂದ ದೂರವೇ ಉಳಿಯುತ್ತಾರೆ. ಇದೆಲ್ಲವನ್ನು ಎದುರಿಸುವ ಮಾನಸಿಕ ಸ್ಥೈರ್ಯ ಸಲಿಂಗಕಾಮಿಗಳಿಗಿದೆಯೇ?
ಈಗಾಗಲೇ ನಮ್ಮ ದೇಶದಲ್ಲಿ ವೇಶ್ಯಾವಟಿಕೆ, ಮಕ್ಕಳ ಮೇಲಿನ ದೌರ್ಜನ್ಯ, ರೋಗಗಳ ಹರಡುವಿಕೆಯನ್ನು ತಡೆಗಟ್ಟುವುದು ದೊಡ್ದ ಸವಾಲಿನ ಕೆಲಸವಾಗಿದೆ. ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿದಾಗ ಈ ಸಮಸ್ಯೆಗಳು ಇನ್ನೂ ಹೆಚ್ಚಾಗಬಹುದು. ಅಲ್ಲದೆ ಇವರಿಗೆ ಸಂಗಾತಿಗಳು ಸಿಗದಿದ್ದಾಗ ಖಿನ್ನತೆಗೆ ಒಳಗಾಗಬಹುದು. ಯಾವ ತಂದೆ-ತಾಯಿಯೂ ತಮ್ಮ ಮಕ್ಕಳನ್ನು ಈ ರೀತಿ ನೋಡಲಾರರು. ಇವರೆಲ್ಲಾ ಕುಟುಂಬದಿಂದ ದೂರವಾಗಿ ಬದುಕಬೇಕಾಗಬಹುದು. ಭಾರತದ ಮೊದಲ ಸಲಿಂಗ ದಂಪತಿಗಳನ್ನು ಆ ಊರಿನಿಂದಲೇ ಬಹಿಷ್ಕರಿಸಲಾಗಿತ್ತು!
ಇಷ್ಟಕ್ಕೂ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಮುಖ್ಯ ಅನ್ನೋ ವಾದಕ್ಕೇ ಮನ್ನಣೆ ಕೊಡುವುದಾದರೆ, ಅದರಿಂದಾಗುವ ಎಲ್ಲಾ ನಕಾರಾತ್ಮಕ ಪರಿಣಾಮಗಳಿಗೆ ಅವರ ಜೊತೆ ನಾವೂ ಮಾನಸಿಕವಾಗಿ ಸಿದ್ಧರಾಗುವುದು ಅನಿವಾರ್ಯವಾಗಿದೆ.

-  ವೀಣಾ ಅನಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.