ಬೆಂಗಳೂರು ನಗರ ಪೊಲೀಸ್ಗೆ ಈಗ ಚಿನ್ನದ ಹಬ್ಬದ ಹೊತ್ತು

ಬೆಂಗಳೂರು 1537ರಲ್ಲಿಯೇ ಕಟ್ಟಲ್ಪಟ್ಟರೂ, ಬೆಂಗಳೂರಿನ ವಿದ್ಯುಕ್ತ ಪೊಲೀಸ್ ವ್ಯವಸ್ಥೆಯು 1800ರ ಆರಂಭದಲ್ಲಿ ಪ್ರಾರಂಭವಾಯಿತು ಎನ್ನಬಹುದು. ಅಂದಿನ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಮ್ಮ ಸೈನ್ಯದ ಒಂದು ಸಣ್ಣ ತುಕಡಿಯನ್ನು ಬೆಂಗಳೂರಿನಲ್ಲಿ ಇರಿಸಿದ್ದರು. ಇದಲ್ಲದೆ ನಾಗರಿಕ ಆಡಳಿತಕ್ಕೆಂದು ಕಂದಾಚಾರ ಎಂದು ಕರೆಯಲ್ಪಡುವ ವ್ಯವಸ್ಥೆಯನ್ನು ರೂಪುಗೊಳಿಸಲಾಗಿತ್ತು. ಕಂದಾಚಾರ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರು ನಿವೃತ್ತ ಅಥವಾ ಪೂರ್ವ ಸೈನಿಕರೇ ಅಗಿರುತ್ತಿದ್ದರು. ಇವರ ಮುಖ್ಯ ಕಾರ್ಯ ಜೈಲುಗಳಲ್ಲಿ ಕೂಡಿಹಾಕಿದ್ದ ಬಂಧಿಗಳನ್ನು ನೋಡಿಕೊಳ್ಳುವುದು, ಕೋಟೆಗಳನ್ನು ಕಾಯುವುದು, ಪಲ್ಲಕ್ಕಿಗಳನ್ನು ಕಾಪಾಡುವುದು ಹಾಗೂ ಟಪ್ಪಾಲು ಪೆಟ್ಟಿಗೆಗಳ ಒಯ್ಯುವಿಕೆ ಹಾಗೂ ರಕ್ಷಣೆ ಆಗಿತ್ತು. 1834ರಲ್ಲಿ ಕಂದಾಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದ ಪೊಲೀಸ್ ಕಾರ್ಯಕ್ಕೆಂದೇ ನಿಯುಕ್ತಿಗೊಳಿಸಲಾಯಿತು. ಆಗಿನ ಕಾಲದಲ್ಲಿ ಬೆಂಗಳೂರಿನ ಜೊತೆಗೆ ಮೈಸೂರು ರಾಜ್ಯದ ಇತರ ಎರಡು ಪ್ರಾಂತಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ನೋಡಿಕೊಳ್ಳಲು ಮೂರು ಜನ ಸೂಪರಿಂಟೆಂಡೆಂಟ್ ದರ್ಜೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ವಿಶೇಷವೆಂದರೆ ಬೆಂಗಳೂರು ಕಂಟೋನ್ಮೆಂಟ್ ಪ್ರದೇಶವು ಮೈಸೂರು ರಾಜರ ಅಧೀನಕ್ಕೆ ಬರುತ್ತಿರಲಿಲ್ಲ. ಇದಕ್ಕೆ ಕಾರಣ ಬ್ರಿಟಿಷರು ಬೆಂಗಳೂರಿಗೆ ನೀಡಿದ್ದ ಮಿಲಿಟರಿ ಸ್ಥಾನಮಾನ. ಬೆಂಗಳೂರು ಕಂಟೋನ್ಮೆಂಟ್ ಪ್ರದೇಶ ದಕ್ಷಿಣ ಭಾರತದ ಅತಿ ದೊಡ್ಡ ಕಂಟೋನ್ಮೆಂಟ್ ಆದದ್ದರಿಂದ ಬ್ರಿಟಿಷರು 1806ರಿಂದ ಕಂಟೋನ್ಮೆಂಟ್ ಅನ್ನು ತಮ್ಮ ಅಧೀನದಲ್ಲಿಯೇ ಇಟ್ಟುಕೊಂಡಿದ್ದರು.
1861ರಲ್ಲಿ ಬ್ರಿಟಿಷರು ದೇಶದಾದ್ಯಂತ ಪೊಲೀಸ್ ಕಾನೂನನ್ನು ಜಾರಿಗೆ ತಂದರು. ತನ್ನಿಮಿತ್ತವಾಗಿ 1865ರಲ್ಲಿ ಬೆಂಗಳೂರು ಕಂಟೋನ್ಮೆಂಟ್ನ ನ್ಯಾಯಿಕ ಕಮಿಷನರ್ ಹುದ್ದೆಯ ಪ್ರಭಾರ ಹೊತ್ತವರನ್ನು ಪದನಿಮಿತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಂದು ಸರ್ಕಾರ ನೇಮಿಸಿತು. 1866ರಲ್ಲಿ ಬೆಂಗಳೂರು ನಗರ (ಕಂಟೋನ್ಮೆಂಟ್ ಸಹಿತವಾಗಿ) ಹಾಗೂ ಬೆಂಗಳೂರು ಜಿಲ್ಲೆ ಪೊಲೀಸ್ ಅಧಿನಿಯಮ 1861ರ ಅಡಿಯಲ್ಲಿ ಬಂದಿತು. ಆಗ ಸರ್ಕಾರ ಮದ್ರಾಸ್ ಗ್ರಾಮೀಣ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಪ್ಟನ್ ಈ.ಡಿ.ಗೋಂಪಟ್ಸರ್ ಇವರನ್ನು ಕಂಟೋನ್ಮೆಂಟ್ ಪ್ರದೇಶಕ್ಕೆ ಮೊದಲನೆಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎಂದು ನಿಯುಕ್ತಿಗೊಳಿಸಿತು. ಅಂದಿನಿಂದಲೇ ಬೆಂಗಳೂರು ನಗರಕ್ಕೆ ಸೂಕ್ತ ಪೊಲೀಸ್ ವ್ಯವಸ್ಥೆ ಪ್ರಾರಂಭವಾಯಿತು ಎನ್ನಬಹುದು.
ಬೆಂಗಳೂರು ನಗರ ಹಾಗೂ ಜಿಲ್ಲೆಗೆ ವರ್ಗಾವಣೆಯಾಗಿ ಬಂದ ಮದ್ರಾಸ್ ಪ್ರಾಂತದ ಪೊಲೀಸ್ ಅಧಿಕಾರಿಗಳು, ಕಂದಾಚಾರ ಪೊಲೀಸರು ಹಾಗೂ ಗ್ರಾಮಗಳಲ್ಲಿ ಇರುವ ಇತರ ಪೊಲೀಸ್ ವ್ಯವಸ್ಥೆಗಳ ಪುನರ್ ಸಂಘಟನೆ ಮಾಡಲು ಪ್ರಾರಂಭಿಸಿದರು. ಅಂದು ನ್ಯಾಯಿಕ ಕಮಿಷನರ್ ಅಗಿದ್ದಂತಹ ಮ್ಯಾಂಗ್ಲರ್ಸ್ ಎನ್ನುವವರು ಇಲಾಖೆಯ ಪುನರ್ರಚನೆ ಹೇಗೆ ಮಾಡಬೇಕು ಎನ್ನುವ ರೂಪು ರೇಷೆಗಳನ್ನು ವರದಿಯೊಂದರಲ್ಲಿ ಸರ್ಕಾರಕ್ಕೆ ನೀಡಿದರು. 1867ನೇ ಡಿಸೆಂಬರ್ 20ರಂದು ಕ್ಯಾಪ್ಟನ್ ಈ.ಡಿ.ಗೋಂಪಟ್ಸರ್ ಅವರೂ ತಮ್ಮ ಅಧೀನದಲ್ಲಿದ್ದ ಬೆಂಗಳೂರು ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಹೇಗೆ ಪುನರ್ರೂಪಿಸಬೇಕು ಎನ್ನುವ ಇನ್ನೊಂದು ವರದಿಯನ್ನು ಸರ್ಕಾರಕ್ಕೆ ನೀಡಿದರು. ಈ ವರದಿಯ ಮುಖ್ಯಾಂಶವೇನೆಂದರೆ, ಕಂದಾಯ ಹಾಗೂ ಪೊಲೀಸ್ ಇಲಾಖೆಯು ಪ್ರತ್ಯೇಕವಾಗಬೇಕು ಹಾಗೂ ಕಂದಾಯ ಇಲಾಖೆಗೇ ಬೇರೆ ಸಿಬ್ಬಂದಿಯ ನೇಮಕಾತಿ ಅಗತ್ಯ ಎನ್ನುವುದು. ಈ ಎರಡೂ ಪ್ರಸ್ತಾವನೆಗಳನ್ನು ಸಂಪೂರ್ಣವಾಗಿ ಒಪ್ಪಿದ ಅಂದಿನ ಸರ್ಕಾರ ಈ ಕಾರ್ಯಕ್ಕಾಗಿ ರು.13368 ಗಳಷ್ಟು ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿ ಸ್ವತಂತ್ರ ಪೊಲೀಸ್ ವ್ಯವಸ್ಥೆಗೆ ವಿಶೇಷ ರೂಪ ನೀಡಿತು.
1885ರಲ್ಲಿ ಮೈಸೂರು ಪ್ರಾಂತ್ಯದ ಪೊಲೀಸ್ ವಿಭಾಗದ ಪುನಾರಚನೆ ಮಾಡಲಾಯಿತು. 1-11-1885ರಂದು ಮೊಟ್ಟಮೊದಲ ಬಾರಿಗೆ ಇಡೀ ಮೈಸೂರು ಪ್ರಾಂತಕ್ಕೆ ಎಲ್.ರಿಕೆಟ್ಸ್ ಎನ್ನುವವರನ್ನು ಪೊಲೀಸ್ ಮುಖ್ಯಸ್ಥ (ಐ.ಜಿ.ಪಿ) ರನ್ನಾಗಿ ನೇಮಕ ಮಾಡಲಾಯಿತು. ಈ ಸಮಯದಲ್ಲಿಯೂ ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ವಿಶೇಷ ರೀತಿಯ ಪೊಲೀಸ್ ವ್ಯವಸ್ಥೆ ಮುಂದುವರೆದಿತ್ತು. ಬೆಂಗಳೂರು ನಗರದ ಪೊಲೀಸರ ಖರ್ಚು ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸಿದರೆ, ಮೈಸೂರು ನಗರದ ಪೊಲೀಸರ ಖರ್ಚನ್ನು ಅಲ್ಲಿನ ನಗರ ಪಾಲಿಕೆ ಭರಿಸುತ್ತಿತ್ತು. 1948ರಲ್ಲಿ ಬೆಂಗಳೂರು ಕಂಟೋನ್ಮೆಂಟ್ ಸಿವಿಲ್ ಪ್ರದೇಶದಲ್ಲಿದ್ದ ವಿಶೇಷ ಪೊಲೀಸ್ ವ್ಯವಸ್ಥೆ ಮೈಸೂರು ಪ್ರಾಂತೀಯ ಪೊಲೀಸ್ ಇಲಾಖೆಯ ಜೊತೆ ವಿಲೀನವಾಯಿತು. ಆದರೆ ಈ ವಿಲೀನ ಶಾಂತಿಯುತವಾಗಿರಲಿಲ್ಲ. ಬೆಂಗಳೂರು ಸಿವಿಲ್ ಪ್ರದೇಶದ ಪೊಲೀಸರು ಪ್ರಾಂತೀಯ ಪೊಲೀಸರೊಡನೆ ವಿಲೀನಗೊಳ್ಳಲು ಅಸಮಾಧಾನ ವ್ಯಕ್ತಪಡಿಸಿ 10ನೇ ಸೆಪ್ಟೆಂಬರ್ 1948ರಂದು ಹಠಾತ್ ಮುಷ್ಕರ ನಡೆಸಿದರು. ಆದರೆ ಅಂದಿನ ಪೊಲೀಸ್ ಮುಖ್ಯಸ್ಥ ಎನ್.ವಿ.ಬಾಬುರೆಡ್ಡಿಯವರ ಚಾಣಕ್ಷತನದಿಂದ ಈ ಮುಷ್ಕರವನ್ನು ಕೂಡಲೇ ಹತ್ತಿಕ್ಕಿ ವಿಲೀನ ಕಾರ್ಯ ಸುಸೂತ್ರವಾಗಿ ನೆರವೇರುವಂತೆ ನೋಡಿಕೊಳ್ಳಲಾಯಿತು.
1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದ ನಂತರ ಮೈಸೂರು ಪ್ರಾಂತವಲ್ಲದೆ, ಮುಂಬೈ ಪ್ರಾಂತ್ಯದಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು, ಹೈದ್ರಾಬಾದ್ ಪ್ರಾಂತ್ಯದಿಂದ ಈಶಾನ್ಯ ಕರ್ನಾಟಕದ ಹಲವು ಜಿಲ್ಲೆಗಳು, ಮದ್ರಾಸ್ ಪ್ರಾಂತದಿಂದ ಹಲವು ಜಿಲ್ಲೆಗಳು ರಾಜ್ಯದಲ್ಲಿ ವಿಲೀನವಾದವು. ಬೇರೆ ಬೇರೆ ರೀತಿಯ ಪೊಲೀಸ್ ವ್ಯವಸ್ಥೆ ಹೊಂದಿದ್ದ ಜಿಲ್ಲೆಗಳು ಒಂದೇ ಪೊಲೀಸ್ ಇಲಾಖೆಯಲ್ಲಿ ವಿಲೀನಗೊಂಡಾಗ ಹಲವಾರು ಸಮಸ್ಯೆಗಳು ಎದುರಾದವು ಹಾಗೂ ರಾಜ್ಯಕ್ಕೆ ಏಕೀಕೃತ ಪೊಲೀಸ್ ವ್ಯವಸ್ಥೆಯ ಅಗತ್ಯ ಉಂಟಾಯಿತು. ತತ್ಪರಿಣಾಮವಾಗಿ 1965ರಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ ಎನ್ನುವ ಹೊಸ ಕಾನೂನು ರೂಪಿತಗೊಂಡು 2ನೇ ಏಪ್ರಿಲ್ 1965ರಿಂದ ಜಾರಿಗೆ ಬಂದಿತು. ಇಡೀ ಕರ್ನಾಟಕಕ್ಕೆ ಏಕರೂಪದ ಪೊಲೀಸ್ ವ್ಯವಸ್ಥೆ ಅಂದಿನಿಂದ ಪ್ರಾರಂಭವಾಯಿತು ಎನ್ನಬಹುದಾಗಿದೆ.
ಆದರೆ ಬೆಂಗಳೂರು ನಗರಕ್ಕೆ ವಿಶೇಷವಾದ ಪೊಲೀಸ್ ಕಮಿಷನರ್ ವ್ಯವಸ್ಥೆ ಜಾರಿ ಆಗಿದ್ದು 4ನೇ ಜುಲೈ 1963ರಂದು. ನಗರದ ಪ್ರಥಮ ಪೊಲೀಸ್ ಕಮಿಷನರ್ ಆಗಿ ಡಿ.ಐ.ಜಿ ಹುದ್ದೆಯ ಸಿ.ಚಾಂಡಿ ಅಧಿಕಾರ ವಹಿಸಿಕೊಂಡರು. ಈಗಿರುವ ಪೊಲೀಸ್ ಕಮಿಷನರ್ 29ನೆಯವರಾಗಿದ್ದು ಅವರ ಅಧೀನದಲ್ಲಿ ಸದ್ಯಕ್ಕೆ 146 ಪೊಲೀಸ್ ಠಾಣೆಗಳು ಹಾಗೂ ಸುಮಾರು 16000 ವಿವಿಧ ವರ್ಗಗಳ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 50 ವರ್ಷಗಳಲ್ಲಿ ಬೆಂಗಳೂರು ಪೊಲೀಸರು ಸಾಕಷ್ಟು ಸಾಧನೆ ಮಾಡಿದ್ದು ನಗರ ಪೊಲೀಸರಿಗೆ ಉತ್ತಮ ಭವಿಷ್ಯವಿದೆ.
- ಡಾ. ಡಿ.ವಿ.ಗುರುಪ್ರಸಾದ್
ಕರ್ನಾಟಕದ ನಿವೃತ್ತ ಡಿ.ಜಿ.ಪಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


