

ನಾನು ಕುಣಿಗಲ್ಲನ್ನು ದಾಟಿದ್ದೆ. ಸ್ನೇಹಿತರಾದ ಟಿ.ಎನ್. ಸೀತಾರಾಮ್ಗೆ ಫೋನ್ ಮಾಡಿದೆ. ತಾವು ಮೂಡಿಗೆರೆ ಸಮೀಪ ಇರುವುದಾಗಿ ತಿಳಿಸಿದರು. 'ಮಂಗಳೂರಿಗೆ ಹೋಗಬೇಕಾದ ನೀವು, ಅಲ್ಲಿ ಯಾಕೆ ಇದ್ದೀರಿ?' ಎಂದು ಕೇಳಿದೆ. 'ಅಯ್ಯೋ, ಸಕಲೇಶಪುರದ ಮಾರ್ಗ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ನೀವು ಆ ಮಾರ್ಗದಲ್ಲಿ ಬರಲೇಬೇಡಿ. ಸ್ವಲ್ಪ ಸುತ್ತಾದರೂ ಪರವಾಗಿಲ್ಲವೆಂದು ಈ ಮಾರ್ಗದಲ್ಲಿ ಹೋಗುತ್ತಿದ್ದೇನೆ' ಎಂದರು. ನಾವಿಬ್ಬರೂ ಮಂಗಳೂರಿಗೆ ಹೋಗಿ, ಮರುದಿನ ಮೂಡಬಿದ್ರಿಯಲ್ಲಿ ನಡೆಯುತ್ತಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ 'ಮಾಧ್ಯಮ' ಗೋಷ್ಠಿಯಲ್ಲಿ ಪಾಲ್ಗೊಳ್ಳುವವರಿದ್ದೆವು. ಆಗಲೇ ಸಾಯಂಕಾಲ ಐದು ಗಂಟೆಯಾಗಿತ್ತು. ಏನು ಮಾಡುವುದು ಎಂದು ಯೋಚನೆಗೆ ಬಿದ್ದೆ. ಒಂದು ವಾರದ ಹಿಂದೆ ಸಕಲೇಶಪುರ ಮಾರ್ಗದಲ್ಲಿಯೇ ಬಂದಿದ್ದ ಸ್ನೇಹಿತ ಷಡಕ್ಷರಿಯವರು ಹೇಳಿದ ಮಾತುಗಳು ನೆನಪಾದವು. ನನ್ನ ಜತೆಗೆ ಪತ್ನಿ ಹಾಗೂ ಮಗ ಬೇರೆ ಇದ್ದರು. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳುವುದೆಂದು ಸೀತಾರಾಮ್ ಸಲಹೆಯಂತೆ ಮೂಲ ಪ್ರಯಾಣ ಮಾರ್ಗವನ್ನು ಬದಲಿಸಲು ನಿರ್ಧರಿಸಿದೆ. ಹಾಸನ-ಬೇಲೂರು-ಮೂಡಿಗೆರೆ-ಕೊಟ್ಟಿಗೆಹಾರ-ಚಾರ್ಮಾಡಿಘಾಟ್ -ಉಜಿರೆ-ಬಿ.ಸಿ. ರೋಡ್ ಮಾರ್ಗವಾಗಿ ಮಂಗಳೂರು ತಲುಪಿದೆ. 30-35 ಕಿಮಿ ದೂರವಾದರೂ ಪರವಾಗಿಲ್ಲ, ರಸ್ತೆ ಚೆನ್ನಾಗಿತ್ತು. ಚಾರ್ಮಾಡಿ ಘಾಟ್ನ ರಸ್ತೆ ಹೊಸ ಡಾಂಬರು ತಿಂದು ಗಡದ್ದಾಗಿ ಮಲಗಿಕೊಂಡಿತ್ತು. ಮಂಗಳೂರು ಬಂದಿದ್ದೇ ತಿಳಿಯಲಿಲ್ಲ. ಜೀವನದಲ್ಲಿ ಇನ್ನು ಮುಂದೆ ಸೀತಾರಾಮ್ ಮಾತನ್ನು ಕೇಳಬಹುದು ಎಂದು ತೀರ್ಮಾನಿಸಿದೆ.
ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ ಬರುವಾಗ ಉಪ್ಪಿನಅಂಗಡಿ ಸಮೀಪವಿರುವ ಪೆರಾಜೆಯ ಮಾಣಿಮಠದಲ್ಲಿ ಶ್ರೀರಾಮಚಂದ್ರಾಪುರದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ, ವಾಪಸ್ ಬಿ.ಸಿ. ರೋಡ್ಗೆ ಬಂದು ಕೊಟ್ಟಿಗೆಹಾರ-ಮೂಡಿಗೆರೆ ಮೂಲಕ ಬರುವಾಗ ಬಂದ ಮಾರ್ಗದಲ್ಲಿಯೇ ಹೋಗೋಣ ಎಂದು ನಿರ್ಧರಿಸಿದೆ. ಅಷ್ಟರಲ್ಲಿ ಆತ್ಮೀಯರೊಬ್ಬರು 'ಪುನಃ ಬಿ.ಸಿ. ರೋಡ್ಗೆ ಹೋಗಿ ಉಜಿರೆ ಮೂಲಕ ಮೂಡಿಗೆರೆ ಮಾರ್ಗದಲ್ಲಿ ಹೋಗೋದು ಬಹಳ ಸುತ್ತು. ಶಿರಾಡಿಘಾಟ್ನಲ್ಲಿ ಇಪ್ಪತ್ತು ಕಿ.ಮಿ. ರಸ್ತೆ ಹಾಳಾಗಿರೋದು ನಿಜ. ಆದರೆ ನಿಧಾನ ಡ್ರೈವ್ ಮಾಡಬೇಕು. ಅಲ್ಲದೇ ಅಲ್ಲಲ್ಲಿ ಟಚ್ಅಪ್ ಮಾಡಿದ್ದಾರೆ. ಅಂಥ ಸಮಸ್ಯೆಯೇನೂ ಇಲ್ಲ. ಆ ಇಪ್ಪತ್ತು ಕಿ.ಮೀ. ದಾಟಿದರೆ ಸಕಲೇಶಪುರ ಸಿಗುತ್ತದೆ. ಅಲ್ಲಿಂದ ಮೂರು ತಾಸಿನಲ್ಲಿ ನೀವು ಬೆಂಗಳೂರಿನಲ್ಲಿರುತ್ತೀರಿ. ಸಕಲೇಶಪುರದ ಮಾರ್ಗವಾಗಿಯೇ ಹೋಗಿ, ಏನೂ ಆಗೊಲ್ಲ' ಅಂದರು.
ಅಷ್ಟೊತ್ತಿಗೆ ಸಾಯಂಕಾಲ ಐದುಮುಕ್ಕಾಲು ಆಗಿತ್ತು. ಚಳಿಗಾಲದ ಸಂಜೆ ಆಗಲೇ ಕತ್ತಲನ್ನು ಹೊದ್ದುಕೊಂಡಿತ್ತು. ಸರಿ, ಶಿರಾಡಿಘಾಟ್ ಮೂಲಕ ಸಕಲೇಶಪುರ ಮಾರ್ಗದಲ್ಲಿ ಪ್ರಯಾಣ ಬೆಳೆಸಲು ನಿರ್ಧರಿಸಿದೆ. 'ಈ ಮಾರ್ಗ ಬಹಳ ಕೆಟ್ಟದಾಗಿದೆಯೆಂದು ಸೀತಾರಾಮ್ ಹೇಳಿದ್ದಾರೆಂದು ನೀವೇ ಹೇಳಿದಿರಿ' ಎಂದಳು ಪತ್ನಿ. 'ಸ್ವಲ್ಪ ಮ್ಯಾನೇಜ್ ಮಾಡಿಕೊಂಡು ಹೋಗಬಹುದು ಎಂದು ಷಡಕ್ಷರಿ ಅವರೂ ಹೇಳಿದ್ದಾರೆ. ನೋಡೋಣ ಇದೂ ಒಂದು ಅನುಭವ. ಅಷ್ಟಕ್ಕೂ ಈ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆಯಲ್ಲ ನೋಡು' ಎಂದು ಸಮಾಧಾನ ಹೇಳಿದೆ.
ಕುಕ್ಕೆ ಕ್ರಾಸ್ ದಾಟಿ ಹತ್ತು ನಿಮಿಷವಾಗಿರಬಹುದು. ಶಿರಾಡಿಘಾಟ್ ಏರಲಾರಂಭಿಸಿದೆವು. ಎರಡು ಕಿಮಿ ದೂರ ಕ್ರಮಿಸುವಷ್ಟರಲ್ಲಿ ಹೈರಾಣಾಗಿ ಹೋದೆವು. ಒಂದು, ಎರಡು ಅಡಿ ಆಳದ ಗುಂಡಿಗಳು, ಉಬ್ಬುತಗ್ಗುಗಳು, ಒಂದು ಹಳ್ಳ ತಪ್ಪಿಸಿದರೆ ಮತ್ತೊಂದು ಹಳ್ಳ. ಒಂದು ಗುಂಡಿಯಿಂದ ಎದ್ದರೆ ಮತ್ತೊಂದು ಗುಂಡಿ. ರಸ್ತೆಗೆ ರಸ್ತೆಯೇ ಇಲ್ಲ. ರಸ್ತೆಯಿಡಿ ಹಾವಿನ ಹಾಗೆ ಅತ್ತಿಂದಿತ್ತ ಇತ್ತಿಂದಿತ್ತ ಹೊರಳಬೇಕು, ಸಮುದ್ರದಲ್ಲಿ ಹಾಯಿದೋಣಿಗಳು ಜೋಲಿ ಹೊಡೆದಂತೆ. ವಾಹನದಲ್ಲಿ ಕುಳಿತವರೆಲ್ಲರ ಎಲುಬು, ಪಕ್ಕೆಲುಬು, ಸಂದಿ, ಕಿಬ್ಬೊಟ್ಟೆಯಲ್ಲೆಲ್ಲ ಜಂಪು . ಒಂದು ಗುಂಡಿಯಿಂದ ಮತ್ತೊಂದಕ್ಕೆ ಗೊತ್ತಿದ್ದು ಗೊತ್ತಿದ್ದರೂ ಗುದುಕಬೇಕು. ಪ್ರತಿ ಗುಂಡಿಗೆ ಬಿದ್ದಾಗಲೂ ವಾಹನ ನರಳುವ ಸದ್ದಿಗೆ ಕಿವಿಯಾಗುವುದೇ ಕರ್ಕಶ.
ಎದುರಿನಿಂದ ಬರುವ ವಾಹನಗಳನ್ನು ನೋಡಿದರೆ ಥೇಟು ಯಮರಾಜನ ರಾಯಭಾರಿಗಳಿರಬಹುದಾ ಎಂಬ ಅನುಮಾನ. ಆ ವಾಹನಗಳೂ ಹಾವಿನಂತೆ ತೆವಳಿಕೊಂಡು ಬರುತ್ತಿದ್ದರೆ ಅವುಗಳನ್ನು ತಪ್ಪಿಸಿಕೊಳ್ಳೋಣ ಅಂದ್ರೆ ಹೊಂಡವೇ ಗತಿ. ದೊಡ್ಡ ದೊಡ್ಡ ಟ್ಯಾಂಕರ್ಗಳು ಜೋಲಿ ಹೊಡೆಯುತ್ತಿದ್ದರೆ ಅದು ನಮ್ಮ ವಾಹನದ ಮೇಲೆಯೇ ಬೀಳಬಹುದೆಂಬ ಭೀತಿ. ಡ್ರೈವರ್ಗೆ ವಾಹನದ ಬುಡಕ್ಕೆ ಬಡಿಯಬಹುದೆಂಬ ಆತಂಕ. ಪ್ರತಿಸಲ ನೆಲಕ್ಕೆ ಬಡಿದಾಗಲೂ ತಲೆಯ ಮೇಲೆ ಹೊಡೆದ ಅನುಭವ.
ನಮ್ಮ ಮುಂದಿದ್ದ ಬೆಂಜ್ ಕಾರಿನ ಡ್ರೈವರ್ ಜಗತ್ತಿನ ತುತ್ತತುದಿಗೆ ಬಂದು ನಿಂತವನಂತೆ, ಮುಂದೆ ದಾರಿಯೇ ಇಲ್ಲ ಎಂಬಂತೆ ದಿಕ್ಕು ತೋಚದೇ ನಿಂತಿದ್ದ. ಕಾರಣ ಹೆಜ್ಜೆ ಹೆಜ್ಜೆಗೂ ಅವನ ಬೆಂಜ್ ಕಾರು ನೆಲಕ್ಕೆ 'ಡಬ್ ಡಬ್' ಎಂದು ಹೊಡೆದುಕೊಳ್ಳುತ್ತಿತ್ತು. ಕಾರಿನ ಮುಂಭಾಗದ ಕೆಳಗಿನ ಬಂಪರ್ ಕಿತ್ತು ಬಂದಿತ್ತು. ಎರಡೂ ಕಡೆಯ ಬಾಗಿಲ ಕೆಳಭಾಗ ತರಚಿ ಹೋಗಿತ್ತು. ಎರಡು-ಮೂರು ಕಿಮಿ ಕ್ರಮಿಸುವ ಹೊತ್ತಿಗೆ ಅರ್ಧ ಕೋಟಿ ರೂಪಾಯಿ ಬೆಲೆಯ ಬೆಂಜ್ ಕಾರು ಬೊಕಣ ಎದ್ದು ಹೋಗಿತ್ತು. ಆ ಕಾರಿನ ಮಾಲೀಕ ತನ್ನ ಮೈ ಕೈ ತರಚಿ ಹೋದವರಂತೆ ಚಡಪಡಿಸುತ್ತಿದ್ದ. ರಾಷ್ಟ್ರಪತಿಯಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯನವರೆಗೆ ಎಲ್ಲರಿಗೂ ಶಾಪ ಹಾಕುತ್ತಿದ್ದ. 'ಈ ದೇಶದಲ್ಲಿ ಹುಟ್ಟಿದ ನಾವು ಅದೆಂಥ ಪಾಪ ಮಾಡಿದ್ದೇವೋ? ನಮ್ಮದಲ್ಲದ ತಪ್ಪಿಗೆ ಇದೆಂಥ ಶಿಕ್ಷೆ? ಇದೊಂದು ದರಿದ್ರದೇಶ, ಬ್ಲಡಿ ಕಂಟ್ರಿ! ಅಮೆರಿಕ ಭಾರತಕ್ಕಿಂತ ಆರು ಪಟ್ಟು ದೊಡ್ಡ ದೇಶ. ಇಡೀ ದೇಶದಲ್ಲಿ ಒಂದೇ ಒಂದು ಗುಂಡಿ ಇಲ್ಲ. ದೇಶ ಅಂದ್ರೆ ಅದು. ನಾವಿನ್ನೂ ಅವರಿಗಿಂತ ನೂರು ವರ್ಷ ಹಿಂದೆ ಇದ್ದೇವೆ. ನನ್ನ ಕಾರನ್ನು ಗುಜರಿಗೆ ಹಾಕೋಣ ಅಂದ್ರೆ ಅಲ್ಲಿವರೆಗೆ ತೆಗೆದುಕೊಂಡು ಹೋಗುವುದಾದರೂ ಹೇಗೆ? ಹಾಳಾಗಿರುವುದು ರಸ್ತೆಯಲ್ಲ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಥೂ!'our bloody politicians.I will kill them. They are bloody rogues. Sucking our blood' ಎಂದು ಜೋರಾಗಿ ಕಿರುಚುತ್ತಿದ್ದ. ಅವನಿಗೆ ಸಾಂತ್ವನ ಹೇಳೋಣ ಅಂದ್ರೆ ನನ್ನ ಮನಸ್ಥಿತಿಯೂ ಅದೇ ಆಗಿತ್ತು. ನಾನು ಮಾತಾಡದೇ ಸುಮ್ಮನಿದ್ದೆ, ಆದರೆ ಆತ ಬಡಬಡಿಸುತ್ತಿದ್ದ. ಅಷ್ಟೇ ವ್ಯತ್ಯಾಸ.
'ಏನ್ಸಾರ್ ಇದು! ಇದೂ ಒಂದು ರಸ್ತೇನಾ? ಈ ಜನರಿಗೆ ಏನೂ ಅನಿಸೋದೇ ಇಲ್ವಾ? ಇಪ್ಪತ್ತು ಕಿಮಿ ರಸ್ತೇನೇ ಇಲ್ಲಾಂದ್ರೆ ಏನು ಗತಿ? ಪ್ರತಿ ದಿನ ಸಾವಿರಾರು ಜನ ಓಡಾಡುತ್ತಾರಲ್ಲ, ಅವರ್ಯಾರೂ ಪ್ರತಿಭಟನೆಯನ್ನೇ ಮಾಡೋದಿಲ್ಲ ಅಂದ್ರೆ ಏನು? ಇಂಥ ದರಿದ್ರ ವ್ಯವಸ್ಥೆಯನ್ನು ನೋಡಿ ಸುಮ್ಮನಿರೋದು ಸಾಧ್ಯಾನಾ? ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲವಾ? ಅಮೆರಿಕದಲ್ಲಾಗಿದ್ರೆ ಅದರ ಕತೆಯೇ ಬೇರೆ' ಎಂದು ಒಂದೇ ಸಮನೇ ತನ್ನ ಸಿಟ್ಟು, ಆಕ್ರೋಶವನ್ನು ಉಗುಳುತ್ತಿದ್ದ. ಆತ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಮುಂದಿನ ಹದಿನೈದು ಕಿಮಿ ದೂರವನ್ನು ಹೇಗೆ ಡ್ರೈವ್ ಮಾಡೋದು ಎಂಬ ಚಿಂತೆ ಬೇರೆ ಕಾಡುತ್ತಿತ್ತು. ಹತ್ತು ಕಿಮೀ ಕ್ರಮಿಸಿದ ಬಳಿಕ ಮುಂದೆ ಹೋಗುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿತು. ಹಾಗಂತ ಹಿಂದೆ ಬರುವಂತಿಲ್ಲ. ಮುಂದೆ ಹೋಗುವಂತೆಯೂ ಇಲ್ಲ. ಡಾಂಬರು ಕಿತ್ತು ಹೋದ, ಹೊಂಡಗಳಿಂದಲೇ ಆವೃತ್ತವಾದ ರಸ್ತೆಯಲ್ಲಿ ಪ್ರಯಾಣಿಸುವುದಾದರೂ ಹೇಗೆ? ಬೆಂಜ್ ಕಾರಿನ ಎತ್ತರ ಜಾಸ್ತಿಯಿಲ್ಲದಿರುವುದರಿಂದ ಅದರ ಕೆಳಭಾಗ ರಸ್ತೆಯ ಉಬ್ಬಿಗೆ ಬಡಿಯುವುದು ಸಾಮಾನ್ಯ. ಆದರೆ ನಮ್ಮ ಇನ್ನೋವಾ ಕಾರಿಗೂ ಬಡಿಸಿಕೊಳ್ಳುವ ದೌರ್ಭಾಗ್ಯ ತಪ್ಪಲಿಲ್ಲ. ಒಂದೆರಡು ಕಡೆ ಮುಂದಿನಿಂದ ಬಂದ ಲಾರಿ ನಮ್ಮ ವಾಹನದ ಮೇಲೆಯೇ ಬಿದ್ದ ಅನುಭವ. ಸುತ್ತಲೂ ಕಗ್ಗತ್ತಲು ಬೇರೆ. ಈ ದಾರಿಯಲ್ಲೇನಾದರೂ ವಾಹನ ಕೆಟ್ಟು ನಿಂತರೆ ಗತಿಯೇನು ಎಂಬ ಯೋಚನೆಯಲ್ಲಿಯೇ ಮತ್ತಷ್ಟು ಗಾಬರಿ ಹುಟ್ಟಿಸಿತು. ವಾಹನವೇನಾದರೂ ಕೆಟ್ಟು ರಸ್ತೆ ಮಧ್ಯೆ ನಿಂತರೆ ಇಡೀ ಸಂಚಾರವೇ ಗಾಳುಮೇಳು. ಆ ಮಧ್ಯರಾತ್ರಿ ಅಲ್ಲಿಯೇ ಕಳೆಯಬೇಕು. ಅಂಥ ಘಟನೆ ಮೇಲಿಂದ ಮೇಲೆ ಸಂಭವಿಸುತ್ತಿರುತ್ತದೆ. ನಿಜಕ್ಕೂ ನಾವು ಮೃತ್ಯುಕೂಪದಲ್ಲಿ ಪ್ರಯಾಣಿಸುತ್ತಿದ್ದೆವು. ಆ ಇಪ್ಪತ್ತು ಕಿಮೀ ದೂರ ಕ್ರಮಿಸಲು ನಾವು ತೆಗೆದುಕೊಂಡ ಸಮಯ ಏನಿಲ್ಲವೆಂದರೂ ಒಂದು ಗಂಟೆ ನಲವತ್ತು ನಿಮಿಷ. ಶರೀರದ ಅಂಗಾಂಗಗಳೆಲ್ಲ ಮೆಲ್ಲಗೆ ಚೀರಿಕೊಂಡಿದ್ದವು. ರಸ್ತೆಯೇ ಇಲ್ಲದ ಆಫ್ರಿಕಾದ ಕಾಡುಗಳಲ್ಲಿ ಪ್ರಯಾಣಿಸುವಾಗಲೂ ಇಷ್ಟೊಂದು ಭೀತಿ ಆಗಿರಲಿಲ್ಲ. ಆದರೆ ಶಿರಾಡಿಘಾಟ್ನಲ್ಲಿ ಬರುವಾಗ ಜೀವವನ್ನು ಎಡಗೈಯಲ್ಲಿ ಎದೆಗವುಚಿಕೊಂಡಿದ್ದಂತೂ ಹೌದು. ಅದೆಂಥ ನರಕಯಾತನೆ? ಅದೆಂಥ ಘನಘೋರ ಶಾಪ? ನಾಗರಿಕತೆ ಜನ್ಮತಾಳದ ಶಾಪಗ್ರಸ್ತ ನೆಲದಲ್ಲೂ ಇಂಥ ಭಯಾನಕ ಸ್ಥಿತಿ ಇರಲಿಕ್ಕಿಲ್ಲ!
ಬೆಂಜ್ ಕಾರಿನ ಮಾಲೀಕ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ದುರಂತವೆಂದರೆ ಆ ದಾರಿಯಲ್ಲಿ ಬರುವವರೆಲ್ಲರೂ ಶಾಪ ಹಾಕುತ್ತಾರೆ. ಆ ಇಪ್ಪತ್ತು ಕಿಮೀ ಕಳೆದ ಬಳಿಕ ಸುಮ್ಮನಾಗುತ್ತಾರೆ. ಹೆಚ್ಚೆಂದರೆ ಮುಂದೊಮ್ಮೆ ಆ ಮಾರ್ಗದಲ್ಲಿ ಹೋಗಬೇಕಾದ ಪ್ರಸಂಗ ಬಂದಾಗ ಅದರ ಬದಲು ಮೂಡಿಗೆರೆ ದಾರಿ ಹಿಡಿಯುತ್ತಾರೆ.
ಹೀಗಾಗಿ ಶಿರಾಡಿಘಾಟ್ ರಸ್ತೆ ಹತ್ತಾರು ವರ್ಷಗಳಿಂದ ಇದೇ ದರಿದ್ರ ಸ್ಥಿತಿಯಲ್ಲಿದೆ. ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಕೆಲವು ಪ್ರತಿಭಟನೆಗಳಾದವು. ರಸ್ತೆಗೆ ಡಾಂಬರು ಬಿತ್ತು. ಪುನಃ ಮಳೆಗಾಲ ಬಂದು ಹೋದ ನಂತರ ಯಥಾಸ್ಥಿತಿ. ಆ ದಾರಿಯಲ್ಲಿ ಹೋಗುವ ತೈಲ ತುಂಬಿದ ಭಾರದ ಟ್ಯಾಂಕರ್ಗಳಿಂದ ಆ ರಸ್ತೆ ಬಹುಬೇಗ ಹಾಳಾಗುತ್ತದೆಂದು ಅಧಿಕಾರಿಗಳು ಜನರನ್ನು ನಂಬಿಸುತ್ತಾರೆ. ಆದರೆ ಈ ಟ್ಯಾಂಕರ್ಗಳ ಮೇಲೆ ಹತ್ತು ಆನೆ ಕುಳಿತರೂ ತಡೆದುಕೊಳ್ಳುವಂಥ ಶಾಶ್ವತ ರಸ್ತೆ ನಿರ್ಮಿಸಿದ ನಿದರ್ಶನ ಹಾಗೂ ತಂತ್ರಜ್ಞಾನ ನಮ್ಮಲ್ಲಿವೆ. ಒಂದು ವೇಳೆ ರಸ್ತೆ ಮಳೆಗಾಲದಲ್ಲಿ ಹಾಳಾದರೂ, ಒಂದು ತಿಂಗಳೊಳಗೆ ಅದನ್ನು ದುರಸ್ತಿಗೊಳಿಸಬಹುದು. ವರ್ಷವಿಡೀ ಹಾಗೇ ಬಿಡುವುದು, ಅನಾಗರೀಕತೆಯ, ಶುದ್ಧ ಬೇಜವಾಬ್ದಾರಿಯ ಲಕ್ಷಣ. ಅಷ್ಟೇ ಅಲ್ಲ, ಅದು ಅರಾಜಕತೆ, ಭ್ರಷ್ಟಾಚಾರ, ನೈತಿಕ ದಿವಾಳಿತನ, ಅವ್ಯವಸ್ಥೆಯ ಲಕ್ಷಣವೂ ಹೌದು. ಲಜ್ಜೆಗೆಟ್ಟ ಸರ್ಕಾರ, ಮಂತ್ರಿಗಳು, ಅಧಿಕಾರಿಗಳು ಮಾತ್ರ ಇಂಥದ್ದನ್ನು ಸಹಿಸಿಕೊಳ್ಳಬಹುದಷ್ಟೆ.
ಬೆಂಗಳೂರು ಹಾಗೂ ಮಂಗಳೂರು ನಮ್ಮ ರಾಜ್ಯದ ಪ್ರಮುಖ ಎರಡು ನಗರಗಳು. ಅವುಗಳನ್ನು ಕೂಡಿಸುವುದು ಈ ರಸ್ತೆ. ಅದೂ ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಬೇರೆ. ಕೆಲವು ತಿಂಗಳ ಮಟ್ಟಿಗೆ ಈ ರಸ್ತೆ ದುರಸ್ತಿಯಿಲ್ಲದೇ ಬಂದ್ ಆಗಿತ್ತು. ನಾಗರಿಕ ಸಮಾಜದಲ್ಲಿ ಇಂಥ ಘಟನೆಯನ್ನು ಎಲ್ಲಾದರೂ ಕಾಣಲು ಸಾಧ್ಯವಾ? ನೈಸರ್ಗಿಕ ವಿಕೋಪ, ದುರಂತಗಳಿಂದ ರಸ್ತೆ ಬಂದ್ ಆಗಿದ್ದರೆ ಪರವಾಗಿಲ್ಲ ಎಂದು ಸಹಿಸಿಕೊಳ್ಳಬಹುದು. ಅಂಥದ್ದೇನೂ ಸಂಭವಿಸದಿದದ್ದರೂ ಸಹಿಸಿಕೊಳ್ಳಬೇಕು ಅಂದ್ರೆ ಏನರ್ಥ? ರಾಜ್ಯ ಸರ್ಕಾರದ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕೇಳಿದರೆ, 'ಇದು ನಮ್ಮ ವ್ಯಾಪ್ತಿಗೆ ಬರೊಲ್ಲ, ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನ್ವಯಿಸುವಂಥದ್ದು' ಅಂತಾರೆ. ಇನ್ನು ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ, 'ದುರಸ್ತಿಗೆ ಹಣ ಮಂಜೂರು ಆಗಿಲ್ಲ. ಪ್ರಸ್ತಾವನೆ ಕಳಿಸಿದ್ದೇವೆ. ನೋಡೋಣ, ಮಾಡೋಣ' ಅಂತಾರೆ. ಜನ ರೋಸಿ ಹೋಗಿ, ಪ್ರತಿನಿತ್ಯ ಇನ್ನಿಲ್ಲದ ಗೋಳು ಹುಯ್ದುಕೊಂಡರೂ ಏನೇನೂ ಪ್ರಯೋಜನವಾಗಿಲ್ಲ.
ದುರಂತ ಅಂದ್ರೆ ಈ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಬಹುದು. ಅದೇ ಜಿಲ್ಲೆಯವರಾದ ಆಸ್ಕರ್ ಫರ್ನಾಂಡೀಸ್ ಹಾಗೂ ವೀರಪ್ಪ ಮೊಯ್ಲಿಯವರು ಕೇಂದ್ರದಲ್ಲಿ ಸಚಿವರು. ಆಸ್ಕರ್ ಅವರು ಈ ದೇಶದ ಭೂಸಾರಿಗೆ ಸಚಿವರು ಬೇರೆ. ಇಂಥ ಕುಲಗೆಟ್ಟ ರಸ್ತೆಯಿರುವುದು, ಅದೂ ಕರಾವಳಿ ಜಿಲ್ಲೆಯಲ್ಲಿರುವುದು ಅವರಿಗೆ ಭೂಷಣ ಅಲ್ಲ. ಮನಸು ಮಾಡಿದರೆ ಒಂದು ಫೋನ್ ಕರೆಯಿಂದ ಅವರು ಈ ದುರಸ್ತಿ ಕಾರ್ಯವನ್ನು ಮಾಡಿ ನಿತ್ಯ ಓಡಾಡುವ ಸಾವಿರಾರು ಜನರ ಜೀವಕ್ಕೆ ಸಂಚಕಾರವಾಗಿರುವ ಈ ರಸ್ತೆಯನ್ನು ದುರಸ್ತಿ ಮಾಡಿಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವುದು ಕಷ್ಟವೇನಲ್ಲ. ಆದರೆ ನೋ ಆಸ್ಕರ್, ನೋ ಟೆಲ್ಲರ್... ಹೇಳುವವರೂ ಇಲ್ಲ ಕೇಳುವವರೂ ಇಲ್ಲ. ಅಸಲಿಗೆ, ಈ ರಸ್ತೆ ಇಷ್ಟೊಂದು ಕೆಟ್ಟು ಹೋಗಿದೆಯೆಂಬ ಸಂಗತಿ ಆಸ್ಕರ್ ಫರ್ನಾಂಡೀಸ್ ಸಾಹೇಬ್ರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದಿದ್ದರೆ ಅವರು ಸುಮ್ಮನೆ ಕುಳಿತಿರಲು ಮನಸ್ಸಾದರೂ ಹೇಗೆ ಬರುತ್ತದೆ? ಪ್ರತಿದಿನ ಓಡಾಡುವ ಸಾವಿರಾರು ಜನ ತಮಗೆ ಶಾಪ ಹಾಕಿ ಹೋಗುತ್ತಿದ್ದಾರೆ ಎಂಬ ಸಂಗತಿ ಆಸ್ಕರ್ ಸಾಹೇಬರಿಗೆ ಯಾರೂ ಹೇಳಿಯೇ ಇಲ್ಲವಾ?
ಆಸ್ಕರ್ ಆಗಲಿ, ಮೊಯ್ಲಿಯವರಾಗಲಿ ಮತ್ತೇನೂ ಮಾಡಬೇಕಿಲ್ಲ. ಆ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಒಮ್ಮೆ ಪ್ರಯಾಣ ಮಾಡಲಿ ಸಾಕು, ಆನಂತರ ಅವರು ತಮ್ಮ ಅಂತರಾತ್ಮವನ್ನು ಕೇಳಿಕೊಳ್ಳಲಿ. ಆ ರಸ್ತೆಯಲ್ಲಿ ಸಂಚರಿಸಿದ ನಂತರ, 'ಪರವಾಗಿಲ್ಲ, ಇದು ಅಂಥ ದೊಡ್ಡ ಸಮಸ್ಯೆಯೇನಲ್ಲ. ನಿಧಾನವಾಗಿ ಮಾಡಿದರಾಯ್ತು ಬಿಡಿ. ಯಾಕೆ ಅರ್ಜೆಂಟು?' ಎಂದು ಅವರಿಗೆ ಅನಿಸಿದರೆ ನಮ್ಮ ತಕರಾರೇನೂ ಇಲ್ಲ. ಆ ದರಿದ್ರ ರಸ್ತೆಯನ್ನು ಸಹಿಸಿಕೊಳ್ಳೋಣ. ನಮ್ಮ ಹಣೆಬರಹವೇ ಇಷ್ಟು ಎಂದು ಸುಮ್ಮನಾಗೋಣ.
ದುರ್ದೈವ ಅಂದರೆ ಈ ಇಬ್ಬರೂ ಕೇಂದ್ರ ಮಂತ್ರಿಗಳು ಕರ್ನಾಟಕಕ್ಕೆ ಬಂದಾಗ ಆಗಾಗ ದಕ್ಷಿಣ ಕನ್ನಡಕ್ಕೆ ಹೋಗುತ್ತಾರೆ. ಆದರೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಹೋಗುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವ ಅವಕಾಶವೇ ಸಿಗುವುದಿಲ್ಲ. ಒಂದು ವೇಳೆ ಸಿಕ್ಕಿತು ಎನ್ನಿ. ಅವರ ಅಧಿಕಾರಿಗಳೇ, 'ಸಾರ್,ಆ ರೂಟಿನಲ್ಲಿ ಹೋಗೋದು ಬೇಡ, ಈ ರೂಟಿನಲ್ಲಿ ಹೋಗೋಣ' ಅಂದು ಬಿಡುತ್ತಾರೆ. 'ರಸ್ತೆ ಸರಿ ಇಲ್ಲ' ಎಂದು ಇಲಾಖೆ ಸಚಿವರಿಗೆ ಅಪ್ಪಿತಪ್ಪಿಯೂ ಹೇಳುವುದಿಲ್ಲ. ಅಷ್ಟಕ್ಕೂ ರಸ್ತೆ ಮಾರ್ಗವಾಗಿ ಹೋಗುವ ಪ್ರಸಂಗ ಬಂದರೆ ಚಾರ್ಮಾಡಿ ಘಾಟ್-ಮೂಡಿಗೆರೆ ಮೂಲಕ ಹೋಗುತ್ತಾರೆ. ಹೀಗಾಗಿ ಶಿ'ರಾಡಿ'ಯ ದರ್ಶನವಾಗುವುದೇ ಇಲ್ಲ!
ಹಾಗಂತ ಇದೇನು ಮಹಾಸಮಸ್ಯೆ ಅಲ್ಲ. ಇಪ್ಪತ್ತು ಕಿಮಿ ರಸ್ತೆ ದುರಸ್ತಿ ಮಾಡುವುದು ರಾಜ್ಯ ಸರ್ಕಾರಕ್ಕಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ಸಮಸ್ಯೆಯಾ? ಖಂಡಿತ ಅಲ್ಲವೇ ಅಲ್ಲ. ಆದರೂ ಈ ಸಮಸ್ಯೆ ಬಗೆಹರಿದಿಲ್ಲ ಅಂದ್ರೆ ಅದಕ್ಕೆ ಏನನ್ನೋಣ? ಯಾರನ್ನು ದೂಷಿಸೋಣ? ಜನಪ್ರತಿನಿಧಿಗಳಾಗಲಿ, ಮಂತ್ರಿಗಳಾಗಲಿ, ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಬಿಸಿ ಮುಟ್ಟಿಸಿ ಈ ಕೆಲಸ ಮಾಡಿಸುವುದು ದೊಡ್ಡದೇನಲ್ಲ. ಆದರೆ ಜನಪ್ರತಿನಿಧಿಗಳಾಗಲಿ, ಮಂತ್ರಿಗಳಾಗಲಿ ಈ ದಾರಿಯಲ್ಲಿ ಸಂಚರಿಸುವುದೇ ಇಲ್ಲವಲ್ಲ.
ಹಾಗೆ ನೋಡಿದರೆ 'ಶಿರಾಡಿಘಾಟ್ ರಸ್ತೆ ಸರಿಯಿಲ್ಲ' ಎಂಬುದು ಜಗತ್ತಿಗೆ ಗೊತ್ತಿದೆ. ಹೀಗಾಗಿ ಎಲ್ಲರೂ ಆ ಮಾರ್ಗದ ಪ್ರಯಾಣವನ್ನು avoid ಮಾಡುತ್ತಾರೆ. ಆದರೆ ಅದನ್ನು ದುರಸ್ತಿ ಮಾಡಲು ಯಾರೂ ಮುಂದಾಗುತ್ತಿಲ್ಲ. ಒಂದು ಸಮಸ್ಯೆ ತಲೆಯೆತ್ತಿದಾಗ ಅದನ್ನು ಪರಿಹರಿಸುವ ಬದಲು, ಸಮಸ್ಯೆಯತ್ತ ಗಮನ ಹರಿಸದಿದ್ದರೆ ಆಯಿತು, ಅದನ್ನು ಅಲಕ್ಷಿಸಿದರೆ ಆಯಿತು, ಅಷ್ಟರಮಟ್ಟಿಗೆ ಸಮಸ್ಯೆಯಿಂದ ದೂರವಿರಬಹುದಲ್ಲ ಎಂಬ ಮೆಂಟಾಲಿಟಿ!
ಇಪ್ಪತ್ತು ಕಿಮಿ. ರಸ್ತೆ ನೋಡಿದ ಯಾರಿಗೇ ಆಗಲಿ, ಟ್ಯಾಂಕರ್ನಿಂದ ಹಾಳಾಗಿದೆ ಎಂದು ಅನಿಸುವುದಿಲ್ಲ. ಆ ರಸ್ತೆ ನಮ್ಮ ದರಿದ್ರ ವ್ಯವಸ್ಥೆಯ ಪ್ರತೀಕದಂತೆ, ಜನರ ಜಡತ್ವ, ಸಹನೆಯ ಸಂಕೇತದಂತೆ, ಅವ್ಯವಸ್ಥೆ, ಭ್ರಷ್ಟಾಚಾರ, ಹೊಣೆಗೇಡಿತನದ ಕ್ರೂರ ಅಣಕದಂತೆ ತೋರುತ್ತದೆ. ಆಕಾಶದಲ್ಲಿ ಹಾರಾಡುವವರು ಒಂದು ಸುತ್ತು ರಸ್ತೆಯಲ್ಲಿ ಸಂಚರಿಸಲಿ, ನಮ್ಮ ರಾಜ್ಯದ ರಸ್ತೆಗಳಾದರೂ ಸಹ್ಯವಾದೀತು. ಜನರ ಸಂಕಟ, ಬವಣೆಗಳೇನು ಎಂಬುದು ಗೊತ್ತಾದೀತು.
ಅಷ್ಟಕ್ಕೂ ಟಯರ್ ಸವೆದರೆ ಹೊಸ ಟಯರ್ ಹಾಕಬಹುದು. ಈ ರಸ್ತೆಯಲ್ಲಿ ತಿರುಗಿ ಜೀವವೇ ಸವೆದರೆ ಏನು ಮಾಡೋದು?
ಹೇಳಿ ಆಸ್ಕರ್, ಹೇಳಿ ಮೊಯ್ಲಿ!
- ವಿಶ್ವೇಶ್ವರ ಭಟ್
vbhat@me.com