ಸುಳ್ಳಿನ ಕೋಟೆ ಬಿದ್ದಾಗ...

ಭಾರತದ ಆಂಗ್ಲ ಪತ್ರಿಕೆಗಳಲ್ಲಿ ಚೆನ್ನೈನ 'ದಿ ಹಿಂದು' ಪತ್ರಿಕಾ ಸಮೂಹದ ವರದಿಗಾರಿಕೆ, ಸಂಪಾದಕೀಯ ಲೇಖನಗಳು ಮತ್ತು ಅವುಗಳ ಆಯ್ಕೆ ಸಮಂಜಸ ಮತ್ತು ಸಮತೋಲಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅದಾಗ್ಯೂ ಈ ಸಮೂಹದ ದೃಷ್ಟಿಕೋನ ನಮ್ಮ ಪಕ್ಷಕ್ಕಿಂತ ಅಥವಾ ನನ್ನ ದೃಷ್ಟಿಕೋನಕ್ಕಿಂತ ಭಿನ್ನವಾಗಿರಬಹುದು. ಹಾಗಂತ ಆ ಗುಂಪಿನ ಮೇಲೆ ನನಗಿರುವ ಗೌರವವಂತೂ ಕಡಿಮೆಯಾಗಿಲ್ಲ.
ಇದೇ ಕಾರಣಕ್ಕಾಗಿಯೇ ಈ ತಿಂಗಳ 'ಫ್ರಂಟ್ಲೈನ್'(ಹಿಂದು ಪತ್ರಿಕಾ ಸಮೂಹದ ನಿಯತಕಾಲಿಕ) ಸಂಚಿಕೆಯನ್ನು ನೋಡಿ ನನಗೆ ಆಶ್ಚರ್ಯವಾದದ್ದು. ಪಂಡಿತ್ ನೆಹರು ಮತ್ತು ಸರ್ದಾರ್ ಪಟೇಲರ ಚಿತ್ರವನ್ನು ಹೊತ್ತಿರುವ ಅದರ ಮುಖಪುಟದಲ್ಲಿ ಹೀಗೆ ಬರೆಯಲಾಗಿದೆ: "ಪಟೇಲರು ತೀವ್ರ ಕೋಮುವಾದಿ ದೃಷ್ಟಿಕೋನವನ್ನು ಹೊಂದಿದ್ದರು ಮತ್ತು ನೆಹರು ಜಾತ್ಯತೀತ ರಾಷ್ಟ್ರೀಯತೆಯ ಪ್ರತೀಕವಾಗಿದ್ದರು ಎನ್ನುವುದನ್ನು ಇತಿಹಾಸದ ದಾಖಲೆಗಳು ಹೊರಗೆಡವುತ್ತವೆ. ಸಂಘ ಪರಿವಾರ ಪಟೇಲರನ್ನು ಪೂಜಿಸುವುದು ಮತ್ತು ನೆಹರು ಅವರನ್ನು ದ್ವೇಷಿಸುವುದು ಏಕೆ ಎನ್ನುವುದು ಇದರಿಂದ ತಿಳಿಯುತ್ತದೆ."
ಹಿಂದು ಸಮೂಹದ ನಿಯತಕಾಲಿಕವೊಂದು ಸರ್ದಾರ್ ಪಟೇಲರನ್ನು 'ಕೋಮುವಾದಿ ದೃಷ್ಟಿಕೋನ ಹೊಂದಿದ್ದ ವ್ಯಕ್ತಿ' ಎಂದು ಕರೆಯುತ್ತದೆ ಎನ್ನುವುದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಯಾವಾಗ ಪುಟಗಳನ್ನು ತಿರಿವಿ ನೋಡಿದೇನೋ, ಆಗ ತಿಳಿಯಿತು. ಅದನ್ನು ಬರೆದದ್ದು ಎ.ಜಿ. ನೂರಾನಿ ಎಂದು! ಈ ಮೂರ್ಖ ಲೇಖನ ಅದ್ಹೇಗೆ ಮುಖಪುಟದಲ್ಲಿ ಸ್ಥಾನಪಡೆಯಿತು ಎನ್ನುವುದಕ್ಕಾಗಿ. ಸರ್ದಾರ್ ಪಟೇಲ್ರು ಅಸುನೀಗುವುದಕ್ಕೂ ಮುನ್ನ ಮಾಹಿತಿ, ಪ್ರಸಾರ ಖಾತೆಯ ಪ್ರಭಾರಿಯೂ ಆಗಿದ್ದರು. ಆ ಸಮಯದಲ್ಲಿ ದೂರದರ್ಶನವಿನ್ನೂ ಹುಟ್ಟಿರಲಿಲ್ಲ. ಆಲ್ ಇಂಡಿಯಾ ರೇಡಿಯೋವೊಂದೇ ಅಂದಿನ ಸಮೂಹ ಮಾಧ್ಯಮವಾಗಿತ್ತು. ಪಟೇಲರ ಮರಣಾನಂತರ, ಅವರ ಕುರಿತು ಉಪನ್ಯಾಸಗಳನ್ನು ಬಿತ್ತರಿಸಲು ಅದು ನಿರ್ಧರಿಸಿತು.
1956ರಲ್ಲಿ, ಇಸ್ಲಾಮಿಕ್ ಧಾರ್ಮಿಕ ಮುಖಂಡ ಮತ್ತು ರಾಜಕಾರಣಿ ರಫೀಕ್ ಜಕಾರಿಯಾ "ಸರ್ದಾರ್ ಪಟೇಲ್ ಮತ್ತು ಭಾರತೀಯ ಮುಸಲ್ಮಾನರು" ಎನ್ನುವ ವಿಷಯವಾಗಿ ಉಪನ್ಯಾಸ ನೀಡಲು ನಿರ್ಧರಿಸಿದರು. ಈ ಉಪನ್ಯಾಸಗಳನ್ನು ಆಧರಿಸಿದ ತಮ್ಮ ಪುಸ್ತಕದಲ್ಲಿ ಅವರು ಹೇಳುತ್ತಾರೆ: "ನಾನು ಆಯ್ದುಕೊಂಡ ವಿಷಯ ವಿವಾದಾತ್ಮಕವಾಗಿತ್ತು. ಮೊದಮೊದಲು ನನಗೆ ಹಿಂಜರಿಕೆಯಾಯಿತು. ಏಕೆಂದರೆ ಸರ್ದಾರ್ ಪಟೇಲರ ಜೀವನ ಮತ್ತು ಅವರ ಅಗಾಧ ಸಾಧನೆಗಳ ಬಗ್ಗೆ ಒಬ್ಬ ರಾಜಕಾರಣಿಯಾಗಿ ನನಗೂ ತುಸು ತಿಳಿದಿತ್ತು. ಆದರೆ ಎಲ್ಲ ಸಹಧರ್ಮೀಯರಂತೆ ನಾನೂ ಕೂಡ, ಸರ್ದಾರ್ ಪಟೇಲ್ ನಿಸ್ಸಂಶಯವಾಗಿಯೂ ಮುಸ್ಲಿಂ ವಿರೋಧಿ ಎನ್ನುವ ಭಾವನೆಯನ್ನು ಹೊಂದಿದ್ದೆ. ಪಟೇಲರ ಸ್ಮರಣಾರ್ಥ ರೂಪುಗೊಂಡ ಕಾರ್ಯಕ್ರಮವೊಂದರಲ್ಲಿ ಅವರ ಬಗ್ಗೆ ಹರಿಹಾಯುವ ಕೆಲಸಕ್ಕೆ ಮುಂದಾಗಬೇಕೇ ಎನ್ನುವ ಚಿಂತೆ ನನ್ನಲ್ಲಿ ಶುರುವಾಯಿತು. ಏನು ಮಾಡಬೇಕೋ ತೋಚದೆ ಕೊನೆಗೆ ಸರ್ದಾರ್ ಪಟೇಲರಿಗೆ ಕೆಲಕಾಲ ಆಪ್ತಕಾರ್ಯದರ್ಶಿಯಾಗಿದ್ದ ಮತ್ತು ಆಪ್ತರೂ ಆಗಿದ್ದ ಎಸ್.ರಾಮಕೃಷ್ಣ ಅವರನ್ನು ಸಂಪರ್ಕಿಸಿದೆ. ರಾಮಕೃಷ್ಣ, ಕೆ.ಎಮ್.ಮುನ್ಶಿಯವರ ಸಹೋದ್ಯೋಗಿಯಾಗಿದ್ದರು. ಈ ಸಾಹಸಕ್ಕೆ ಮುನ್ನುಗ್ಗಲು ಅವರು ನನಗೆ ಹುರಿದುಂಬಿಸಿದರು. ಏನೇ ಆಗಲಿ ಸತ್ಯವಂತೂ ಹೊರಬರಲೇ ಬೇಕು ಎಂದು ನನಗೆ ಹೇಳಿದರು. ಹೇಗಿದ್ದರೂ ಪಟೇಲರು ನಿಷ್ಕಳಂಕರಾಗಿಯೇ ಹೊರಬರಲಿದ್ದಾರೆ ಎನ್ನುವುದು ಅವರಿಗೆ ಗೊತ್ತಿತ್ತು! ಈ ವಿಷಯದ ಆಳಕ್ಕಿಳಿದಂತೆಲ್ಲ ಉಕ್ಕಿನ ಮನುಷ್ಯನ ಬಗ್ಗೆ ಎಲ್ಲರಲ್ಲೂ ತಪ್ಪುಭಾವನೆಯಿದೆ ಎನ್ನುವುದು ನನಗೆ ಅರ್ಥವಾಯಿತು. ಪಟೇಲರ ವ್ಯಕ್ತಿತ್ವದ ಬಗ್ಗೆ ಇದ್ದ ಈ ಭ್ರಮೆಯನ್ನು ದೂರಮಾಡುವ ಕೆಲಸ ಆಗಬೇಕಿತ್ತು. ಆ ಕೆಲಸವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿದೆನೆಂಬ ಸಮಾಧಾನ ನನಗಿದೆ.
ರಫೀಕ್ ಜಕಾರಿಯಾ ಅವರ ಉಪನ್ಯಾಸಗಳ ಸಂಗ್ರಹ ಪುಸ್ತಕ ರೂಪದಲ್ಲಿ ಬಂದಿದ್ದು 1996ರಲ್ಲಿ. 'ಸರ್ದಾರ್ ಪಟೇಲ್ ಆ್ಯಂಡ್ ಇಂಡಿಯನ್ ಮುಸ್ಲಿಂ" ಶೀರ್ಷಿಕೆಯ ಆ ಪುಸ್ತಕಕ್ಕೆ ನಾನಿ ಪಾಲ್ಖಿವಾಲ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಅವರನ್ನುತ್ತಾರೆ- "ಸರ್ದಾರ್ ಪಟೇಲರನ್ನು ಮುಸ್ಲಿಂ ವಿರೋಧಿಯೆಂದು ಬಿಂಬಿಸಿದ್ದ ಪಟ್ಟಭದ್ರ ಹಿತಾಸಕ್ತಿಗಳ ಸುಳ್ಳಿನ ಕೋಟೆಯನ್ನು ಡಾ. ರಫೀಕ್ ಜಕಾರಿಯಾ ಕೆಡವಿಹಾಕಿದ್ದಾರೆ".
ಈ ಪುಸ್ತಕದಲ್ಲಿ ಜಕಾರಿಯಾ, ಹೇಗೆ ಕಾಶೀಂ ರಜ್ವಿ ನಿಜಾಮನ ಮಹಾತ್ವಾಕಾಂಕ್ಷೆಯನ್ನು ಇನ್ನಷ್ಟು ತೀಕ್ಷ್ಣ ಗೊಳಿಸಿದ ಮತ್ತು ಹೈದ್ರಾಬಾದ್ ಅನ್ನು ಭಾರತದಲ್ಲಿ ಒಂದಾಗಿಸುವುದಕ್ಕೆ ಸೇನೆಯನ್ನು ಬಳಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ ಎನ್ನುವುದನ್ನು ಹೇಳಿದ್ದಾರೆ: "ನಿಜಾಮನ ಆಳ್ವಿಕೆಯ ಹೈದ್ರಾಬಾದ್ನಲ್ಲಿ ಸುಮಾರು 80 ಪ್ರತಿಶತ ಪ್ರಜೆಗಳು ಹಿಂದುಗಳೇ ಆಗಿದ್ದರು. ಹಾಗಾಗೇ ಈ ಸಂಗತಿ ಪಟೇಲರಿಗೆ ಕಠಿಣ ಸವಾಲನ್ನು ಒಡ್ಡಿತ್ತು. ಅಲ್ಲದೆ ನಿಜಾಮನ ಕಾಲಹರಣ ಪ್ರವೃತ್ತಿಯಿಂದಾಗಿ ಹಿಂದು ಮತ್ತು ಮುಸಲ್ಮಾನರ ನಡುವಿನ ಸಂಬಂಧವೂ ಹದಗೆಡುತ್ತಾ ಹೋಯಿತು. ಅದರಲ್ಲೂ ಮುಖ್ಯವಾಗಿ ಕಾಸಿಂ ರಜ್ವಿ ಎನ್ನುವ ಮತಾಂಧನಿಂದಾಗಿ ಈ ಸಮಸ್ಯೆ ತೀವ್ರ ಸ್ವರೂಪಕ್ಕೆ ತಲುಪಿತು. ಅದ್ಭುತ ವಾಗ್ಮಿಯಾಗಿದ್ದ ರಜ್ವಿ, ಮುಸಲ್ಮಾನರ ಮೇಲೆ ಎಷ್ಟು ಹಿಡಿತ ಹೊಂದಿದ್ದನೆಂದರೆ ಆತನನ್ನು 'ದೇವರ ದೂತ'ನೆಂದೇ ನೋಡಲಾಗುತ್ತಿತ್ತು. ನಿಜಾಮನೂ ಕೂಡ ರಜ್ವಿಯೆಂದರೆ ಹೆದರುತ್ತಿದ್ದ.
ರಾಜ್ಯವನ್ನು ಮತ್ತು ನಿಜಾಮನನ್ನು ರಕ್ಷಿಸುವುದಕ್ಕಾಗಿಯೇ ಅಲ್ಲಾಹು ತನ್ನನ್ನು ಕಳುಹಿಸಿದ್ದಾನೆ ಎಂದಾತ ಹೇಳುತ್ತಿದ್ದ. 'ಬಂಗಾಳ ಕೊಲ್ಲಿಯ ಅಲೆಗಳು ನಮ್ಮ ಸ್ವತಂತ್ರ ರಾಜ್ಯದ ಪಾದಗಳನ್ನು ತೊಳೆಯುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ದೆಹಲಿಯ ಕೆಂಪು ಕೋಟೆಯ ಮೇಲೆ ನಮ್ಮ ಹಸಿರು ಧ್ವಜ ಹಾರಾಡಲಿದೆ" ಎಂದು ಅಬ್ಬರಿಸುತ್ತಿದ್ದ. ನಿಜಾಮ ಒಂದು ನಿಶ್ಚಿತ ಗುರಿಯಿಲ್ಲದ ಗೊಂದಲದ ಗೂಡಾಗಿದ್ದ. ಒಂದು ದಿನ ಸಂಧಾನದ ಬಗ್ಗೆ ಮಾತನಾಡಿದರೆ, ಮರುದಿನ ರಣಕಹಳೆ ಊದಲು ಸಿದ್ಧನಾಗುತ್ತಿದ್ದ! ಆ ರಾಜ್ಯದ ಪ್ರಧಾನಿಯಾಗಿದ್ದ ಅಹಮದ್ ಸಯೀದ್ ಖಾನ್ ಛಾತರಿ, "ಪಾಕಿಸ್ತಾನ ಅಥವಾ ಬ್ರಿಟನ್ ಹೈದ್ರಾಬಾದ್ನ ಸಹಾಯಕ್ಕೆ ಬರುವುದಿಲ್ಲ" ಎಂದು ನಿಜಾಮನಿಗೆ ಒಮ್ಮೆ ಎಚ್ಚರಿಸಿದ್ದ. ಇದನ್ನು ಕೇಳುತ್ತಿದ್ದಂತೆಯೇ ನಿಜಾಮ ಭಾರತದತ್ತ ವಾಲಿದ. ಯಾವಾಗ ಈ ನಡೆಯನ್ನು ರಜ್ವಿ ವಿರೋಧಿಸಿದನೋ ಆಗ ಆತ ಮತ್ತೆ ಭಾರತದ ವಿರುದ್ಧ ಮಾತನಾಡತೊಡಗಿದ. ಒಂದು ಬಾರಿ ನಿಜಾಮ "ರಜ್ವಿ ಚಿಲ್ಲರೆ ಮನುಷ್ಯ. ಆ ತಲೆಕೆಟ್ಟವನನ್ನು ಕೂಡಲೇ ತಡೆಯಿರಿ" ಎಂದು ತನ್ನ ಅಧಿಕಾರಿಗಳಿಗೆ ಆಜ್ಞೆಯಿತ್ತ. ಆದರೆ ರಜ್ವಿ ಕೆಂಗಣ್ಣು ಬಿಟ್ಟಾಗ, ತನ್ನ ಆಜ್ಞೆಯನ್ನು ಹಿಂಪಡೆದ! ರಜ್ವಿ ಎಂಬ ಮತಾಂಧನ ಭಾಷಣಗಳಲ್ಲಿ ಬರೀ ಭಾರತ ಮತ್ತು ಹಿಂದುಗಳ ಮೇಲಿನ ದ್ವೇಷವೇ ಕಾಣಿಸುತ್ತಿತ್ತು. ಭಾರತದ ಮುಸಲ್ಮಾನರೆಲ್ಲರೂ ನಿಜಾಮನ ಪರವಾಗಿ ನಿಂತೇ ನಿಲ್ಲುತ್ತಾರೆ ಎಂದಾತ ನಂಬಿದ್ದ. ರಜ್ವಿಯ ಹಿಂಬಾಲಕರಾದ ರಜಾಕರರು ಅಮಾಯಕ ಹಿಂದುಗಳನ್ನು ಹಿಂಸಿಸಿದರು. ಇನ್ನು ಆತನ ಇತ್ತೆಹಾದುಲ್ ಮುಸಲ್ಮೀನ್ ಎಂಬ ಸಂಘಟನೆಯ ಕ್ರೌರ್ಯವನ್ನು ಹೇಳುವಂತೆಯೇ ಇಲ್ಲ. 1948, ಮಾರ್ಚ್ 31 ರಂದು ರಜ್ವಿ "ವೆಪನ್ಸ್ ವೀಕ್" ಆಚರಿಸಿದ. ಅಂದರೆ ಆ ಒಂದು ವಾರ, ಭಾರತದ ವಿರುದ್ಧ ಹೋರಾಡಲು ಯುದ್ಧೋಪಕರಣಗಳನ್ನು ಸಂಗ್ರಹಿಸುವುದಕ್ಕೆ ಮೀಸಲಾಗಿತ್ತು. ರಜಾಕರರನ್ನು ಮಾದರಿಯಾಗಿಸಿಕೊಳ್ಳಿ ಎಂದು ಭಾರತೀಯ ಮುಸಲ್ಮಾನರಿಗೆ ರಜ್ವಿ ಕರೆಕೊಟ್ಟ. ಆತ ಅವರಿಗೆ ಹೇಳುತ್ತಿದ್ದ-'ಸಹೋದರರೆ, ನಾನು ಇವತ್ತು ಇಲ್ಲಿರಬಹುದು. ಆದರೆ ನಾಳೆಯಲ್ಲ! ಆದರೆ ಒಂದು ವಿಷಯವನ್ನು ಮಾತ್ರ ಖಾತ್ರಿಯಿಂದ ಹೇಳುತ್ತೇನೆ. ಕಾಸಿಂ ರಜ್ವಿಯನ್ನು ನೀವು ಮುಂದೆ ನೋಡಬೇಕೆಂದರೆ, ಆತ ಯುದ್ಧರಂಗದಲ್ಲೇ ಸಿಗುತ್ತಾನೆ"!
ಇಷ್ಟೆಲ್ಲ ಆರ್ಭಟಿಸುತ್ತಿದ್ದ ರಜ್ವಿ, ಭಾರತದ ಸೇನೆ ಹೈದ್ರಾಬಾದ್ಗೆ ನುಗ್ಗಿದಾಗ ಮೆತ್ತಗಾಗಿಬಿಟ್ಟ. ಆತನ ರೋಷವೆಲ್ಲ ಬರೀ ಬಾಯಿಮಾತಿಗಷ್ಟೇ ಸೀಮಿತ ಎನ್ನುವುದು ಗೊತ್ತಾಯಿತು. ರಜ್ವಿ ರಾತ್ರೋರಾತ್ರಿ ಪಾಕಿಸ್ತಾನಕ್ಕೆ ಓಡಿಹೋದ! ಆತನಿಗೆ ಏನಾಯಿತೋ ತಿಳಿಯಲಿಲ್ಲ, ಆತನ ಸಾವಿಗೆ ಯಾರೂ ಮರುಗಲಿಲ್ಲ. ಆದರೆ ಆತನ ಮೂರ್ಖತನವನ್ನೇ ಧರ್ಮವೆಂದು ಭಾವಿಸಿದ, ಆತನನ್ನು 'ದೇವರ ದೂತನೆಂದು' ಕೊಂಡಾಡುತ್ತಿದ್ದ ಬೆಂಬಲಿಗರು ಮಾತ್ರ ತೀವ್ರ ಶಿಕ್ಷೆ ಅನುಭವಿಸಿದರು.
ಕೊನೆಯದಾಗಿ: ಕಾಸಿಂ ರಜ್ವಿಯೊಂದಿಗಿನ ಸರ್ದಾರ್ ಪಟೇಲರ ಮಾತುಕತೆ:
ರಜ್ವಿ: ಹೈದ್ರಾಬಾದ್ ಅನ್ನು ಸ್ವತಂತ್ರವಾಗಿರಲು ನೀವೇಕೆ ಬಿಡುತ್ತಿಲ್ಲ?
ಪಟೇಲ್: ಹೈದ್ರಾಬಾದ್ಗಾಗಿ ಕೊಟ್ಟ ಸಮಯವನ್ನು ಬೇರೆ ಯಾವ ರಾಜ್ಯಗಳಿಗೆ ಕೊಟ್ಟಿದ್ದೇನೆ ಹೇಳಿ?
ರಜ್ವಿ: ಆದರೆ ನೀವು ಹೈದ್ರಾಬಾದ್ನ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು...
ಪಟೇಲ್: ನನಗ್ಯಾವ ಕಷ್ಟಗಳೂ ಕಾಣಿಸುತ್ತಿಲ್ಲ. ನೀವು ಪಾಕಿಸ್ತಾನದೊಂದಿಗೆ ಯಾವುದಾದರೂ ಒಪ್ಪಂದಕ್ಕೆ ಬಂದಿದ್ದೀರೆಂದರೆ ಬೇರೇ ಮಾತಾಗಿತ್ತು.
ರಜ್ವಿ: ನಾವು ನಮ್ಮ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ. ಹೈದ್ರಾಬಾದ್ಗಾಗಿ ತಮ್ಮ ರಕ್ತದ ಕೊನೆಯ ಹನಿ ಚೆಲ್ಲುವವರೆಗೂ ನಮ್ಮವರು ಹೋರಾಡುತ್ತಾರೆ"
ಪಟೇಲ್: ಆತ್ಮಹತ್ಯೆ ಮಾಡಿಕೊಳ್ಳಲು ನೀವು ಸಿದ್ಧರಾದಮೇಲೆ, ನಾನು ಹೇಗೆ ತಡೆಯಲಿ!
- ಎಲ್.ಕೆ.ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


