ಸಲಿಂಗ ಕಾಮಿಗಳು ಮಾಡುವ ದೌರ್ಜನ್ಯಕ್ಕೆ ಏನನ್ನುತ್ತೀರಿ?

ಮಹಿಳಾಪರ, ಸಲಿಂಗಿಗಳ ಪರ ಎಂದು ಕೂಗುವವರಿಗೆ ಯುವಕರ ಗೋಳೇಕೆ ಅರ್ಥವಾಗುತ್ತಿಲ್ಲ? ಒಬ್ಬ ವ್ಯಕ್ತಿ ಹುಡುಗಿಯ ಮೈಮೇಲೆ ಕೈ ಇರಿಸಿದರೆ ಸೆಕ್ಷುವಲ್ ಹರಾಸ್ಮೆಂಟ್ ಎನ್ನಲಾಗುತ್ತದೆ. ಪೋಲಿಸರಿಗೆ ದೂರು ನೀಡಿದರೆ ಅತ್ಯಾಚಾರ ಪ್ರಯತ್ನ ಎಂದೂ ಕ್ರಿಮಿನಲ್ ಕೇಸು ದಾಖಲಾಗುತ್ತದೆ. ಮಾಧ್ಯಮಗಳಿಗೆ ಗೊತ್ತಾದರೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಮುಂದೆ ಹಿಂದೆ ಸೇರಿಸಿ ಕವರ್ ಸ್ಟೋರಿಯು ಆಗುತ್ತದೆ. ಹುಡುಗಿ ಮೇಲೆ ಕೈ ಹಾಕಿದ ತಪ್ಪಿಗೆ ಶಿಕ್ಷೆಯೂ ಆಗುತ್ತದೆ. ಇದು ಮೆಚ್ಚಬೇಕಾದ ವಿಚಾರವೇ. ಆದರೆ ಯುವಕರ ವಿಚಾರಕ್ಕೆ ಬಂದರೆ ತಾರತಮ್ಯವನ್ನೇಕೆ ಮಾಡುತ್ತೀರಿ? ಯುವಕರ ಮೇಲೆಯೂ ಲೈಂಗಿಕ ಕಿರುಕುಳ ನಿರಂತರವಾಗಿ ಆಗುತ್ತಿದ್ದರೂ ಅದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲವೇಕೆ? ಇಂದು ಪುರುಷರಿಂದಲೇ ಹಲವಾರು ಯುವಕರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಯಾರೋ ಒಬ್ಬ ಯುವಕ ಪೊಲೀಸರಿಗೆ 'ಪುರುಷರೊಬ್ಬರು ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದರು' ಎಂದು ದೂರು ನೀಡಿದರೆ ಕೇಸು ದಾಖಲಿಸುತ್ತಾರೆಯೇ?
ಇಂತಹ ಪುರುಷರ(ಸಲಿಂಗಿಗಳ) ಕಾಮ ತೃಷೆಗೆ ಯುವಕರು ದಿನನಿತ್ಯ ಬಲಿಯಾಗುತ್ತಿದ್ದರೂ ಬಾಯಿಮುಚ್ಚಿ ಕೂತಿದ್ದಾರೆ. ಯಾಕೆಂದರೆ ಸಮಾಜವೇ ಸೃಷ್ಟಿ ಮಾಡಿರುವ ಗಂಡು-ಹೆಣ್ಣು ಎಂಬ ತಾರತಮ್ಯ. 'ಥೂ ನೀನು ಗಂಡಸಾ, ನಾಚಿಕೆ ಆಗಲ್ವ?' ಎಂದು ಸಮಾಜ ಹಂಗಿಸುತ್ತದೆ. ಹಾಗಾಗಿ ಯಾವೊಬ್ಬ ಯುವಕನೂ 'ನನ್ನ ಮೇಲೆ ಅತ್ಯಾಚಾರ ಪ್ರಯತ್ನವಾಗಿದೆ' ಎಂದು ಕೇಸು ಕೊಡುವುದಿಲ್ಲ. ಕೊಟ್ಟರೂ ಪೊಲೀಸರು ಮಾನ್ಯತೆ ನೀಡುವುದು ಅಷ್ಟರಲ್ಲೇ ಇದೆ.
ತನ್ನ ಮೇಲಿನ ಅಸಭ್ಯ ವರ್ತನೆಗೆ ಪ್ರತಿಯಾಗಿ ತಿರುಗಿ ನಾಲ್ಕೇಟು ಬಿಗಿದರೆ ಸುಮ್ಮನಿರುತ್ತಾರಾ? ವಯಸ್ಸಾದವರ ಮೇಲೆ ಕೈ ಮಾಡುವ ದುರಹಂಕಾರಿ ಎನ್ನುತ್ತಾರೆ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ಸುತ್ತಲಿದ್ದವರೆಲ್ಲರೂ ಒಟ್ಟುಗೂಡಿ ಜಾಡಿಸಿ ಬಿಡುತ್ತಾರೆ. ಅಲ್ಲಿ ಏನು ತಪ್ಪಾಗಿದೆ ಎಂದು ವಿಚಾರವನ್ನೇ ಮಾಡುವುದಿಲ್ಲ. 'ಬಿಸಿ ರಕ್ತದ ಹುಡುಗರು' ಎಂದು ಮುಗಿಬೀಳುತ್ತಾರೆ. ಅಕಸ್ಮಾತ್ ಎದುರಿನ ವ್ಯಕ್ತಿ ಏನಾದರು ತಾನು 'ಸಲಿಂಗಿ' ಎಂದು ಹೇಳಿಕೊಂಡರೆ ಅಲ್ಪಸಂಖ್ಯಾತರಿಗೆ ಗೌರವ ಕೊಡಲಿಲ್ಲ, ಅವರ ಮೇಲೆ ಹಲ್ಲೆಗೆ ಮುಂದಾದ, ಅವರನ್ನು ಅವ್ಯಾಚ ಪದಗಳಿಂದ ತೆಗಳಿದ - ಹೀಗೆ ಸಾಗುತ್ತದೆ ಆರೋಪಗಳು. ಹೇಳುವುದೇನಿದೆ? ಯುವಕ ಅಪರಾಧಿ!
ವಾಸ್ತವ ಎಂದರೆ ಕೆಲವು ಮಧ್ಯ ವಯಸ್ಕ ಪುರುಷರಿಗೆ ಯುವಕರ ಮೇಲೆ ಕೈಯಾಡಿಸುವ ತೆವಲು ಇರುತ್ತದೆ. ಹಾಗೆ ನೋಡಿದರೆ ಅವರಿಗೆ ಮದುವೆಯಾಗಿ ಮಕ್ಕಳೂ ಇರುತ್ತವೆ. ಆದರೂ ಹರೆಯದ ಯುವಕರನ್ನು ಕಂಡರೆ ಕೈ ಆಡಿಸುವ ಹೇಯತೆಗೆ ಮುಂದಾಗುತ್ತಾರೆ. ಆತ್ಮೀಯ ಗೆಳೆಯನೊಬ್ಬ ಆತನ ಅನುಭವ ಹೇಳಿದ್ದ. 'ಪಿಯುಸಿಗೆ ಹೋಗುತ್ತಿದ್ದ ಸಂದರ್ಭ. ನಿತ್ಯ ಬಸ್ನಲ್ಲಿ ಪ್ರಯಾಣಿಸುವಾಗ ಇಂಜಿನಿಯರ್ ಎಂದು ಒಬ್ಬ ಪರಿಚಯವಾದ. ಮೊದಲೆರಡು ದಿನ ಎಲ್ಲರಂತೆ ಮಾತನಾಡಿದ. ನಂತರದ ದಿನಗಳಲ್ಲಿ ಸೀಟು ಇಡಲು ಪ್ರಾರಂಭಿಸಿದ.ಆಗಾಗ ಮೈ ಮುಟ್ಟಿ ಮಾತನಾಡುವುದು ಮಾಡುತ್ತಿದ್ದ. "ಬಹುಶಃ ಆತ್ಮೀಯತೆಯ ಭಾವ ಎಂದುಕೊಳ್ಳುತ್ತಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ತೊಡೆ ಸವರುತ್ತ ಗುಪ್ತಾಂಗದ ಮೇಲೆ ಕೈ ಹಾಕಿದ! ಮಾನಸಿಕವಾಗಿ ಸತ್ತುಹೋದಂಥ ಅನುಭವವಾಗಿತ್ತು. ಹೆದರಿ ಅಲ್ಲಿಂದ ಎದ್ದು ಬೇರೆಡೆ ಹೋದೆ. ಈ ವಿಚಾರವಾಗಿ ಕೆಲವರಲ್ಲಿ ಆತನ ವರ್ತನೆ ಬಗ್ಗೆ ಹೇಳಿದೆ. ಆದರೆ ಯಾರೂ ನಂಬಲಿಲ್ಲ. ನನ್ನನ್ನೇ ಅನುಮಾನದ ದೃಷ್ಟಿಯಿಂದ ನೋಡಿದರು. ಆತನಿಗೆ ಮದುವೆಯಾಗಿದೆ. ಎರಡು ಮಕ್ಕಳಿದ್ದಾರೆ. ನಿನ್ನ ಮೇಲೇಕೆ ಕೈ ಹಾಕುತ್ತಾನೆ ಎಂದು ನಿರ್ದಾಕ್ಷಿಣ್ಯವಾಗಿ ಆರೋಪ ತಳ್ಳಿಹಾಕಿದರು. ಕೆಲವರು ನನ್ನನ್ನೇ ಗೇಲಿ ಮಾಡಿ ನಕ್ಕರು. ಈ ಘಟನೆ ನನ್ನನ್ನು ಸಾಕಷ್ಟು ಮಾನಸಿಕ ಖಿನ್ನತೆಯನ್ನುಂಟು ಮಾಡಿತು. ಈಗಲೂ ಮನಸ್ಸಿಗೆ ನೋವಾಗುತ್ತದೆ" ಎಂದ. ಅಂದು ರಾತ್ರಿ ಆತನಿಗೆ ಫೋನ್ ಮಾಡಿ ಬಸ್ಸಿನಲ್ಲಾದ ವಿಚಾರವನ್ನು ಯಾರಿಗಾದರು ತಿಳಿಸಿದರೆ ಕೊಂದುಬಿಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದನಂತೆ. ಹುಡುಗನ ತಪ್ಪಾದರು ಏನಿತ್ತು? ಅರಿವಿಲ್ಲದೆ ಸಜ್ಜನ ಎಂದು ನಂಬಿದ್ದು ತಪ್ಪೆ? ಆತ್ಮೀಯವಾಗಿ ವರ್ತಿಸಿದ್ದು ತಪ್ಪೆ? ಆತನ ಅಸಭ್ಯವರ್ತನೆ ಸಹಿಸಿಕೊಳ್ಳಬೇಕಿತ್ತೆ? ಅಷ್ಟಕ್ಕೂ ಆ ಹುಡುಗನ ಮಾತಿಗೇಕೆ ಬೆಲೆ ನೀಡಲಿಲ್ಲ? ಬಹುಷಃ ಆತನ ಸ್ಥಾನದಲ್ಲಿ ಹುಡುಗಿ ಇರುತ್ತಿದ್ದಿದ್ದರೆ ಸುಮ್ಮನಿರುತ್ತಿದ್ದರೆ?
ಎನ್ಸಿಸಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ ಕೇಳಿ ಹೌಹಾರಿಹೋಗಿದ್ದೆ. ಅನಾವಶ್ಯಕವಾಗಿ ಬಟ್ಟೆ ಬಿಚ್ಚಿಸುವುದು, ವಕ್ಷಸ್ಥಳ ಸವರುವುದು ಇತ್ಯಾದಿ ಹೇಯ ಕೃತ್ಯ ಕೇಳಿದರೇನೆ ಮೈನಡುಗುತ್ತದೆ. ಇಂತಹ ದೌರ್ಜನ್ಯಗಳು ನಡೆಯುತ್ತಿದ್ದರೂ ಗಂಡು ಎಂಬ ಏಕಮಾತ್ರ ಕಾರಣಕ್ಕೆ ಅವಡುಗಚ್ಚಿ ಕೂರಬೇಕೆ? ತಿರುಗಿ ಪ್ರಹಾರ ಮಾಡುವ ತಾಕತ್ತು ಯುವಕರಿಗಿದೆ. ಹಾಗೆ ಮಾಡಿದರೆ ಕಾನೂನು ಕೈಗೆತ್ತಿಕೊಂಡಿದ್ದೇಕೆ ಎಂದು ಯುವಕರ ಮೇಲೆ ಕೇಸು ಜಡಿಯುವ ಸಂಭವವೇ ಹೆಚ್ಚು!
ನನಗಾದ ಅನುಭವವಿದು. ಆಫೀಸಿನಿಂದ ಜಯನಗರ 4ನೇ ಹಂತದಲ್ಲಿದ್ದ ಮನೆಗೆ ತೆರಳುತ್ತಿದ್ದೆ. ಬಹುಷಃ ಆತ ಶಾಂತಿನಗರದಲ್ಲಿ ಬಸ್ ಹತ್ತಿದ್ದ. ಪಕ್ಕದಲ್ಲೇ ಆಸೀನನಾದ. ಆತನ ಎಡ ಕೈ ಮತ್ತು ದೇಹ ಸಂಪೂರ್ಣ ನನ್ನ ಮೇಲೆ ವಾಲಿತ್ತು. ಟಿಕೆಟ್ ಮಾಡಿದ ನಂತರ ಸರಿಯಾಗಿ ಕೂರಬಹುದು ಎಂದು ಸುಮ್ಮನಾದೆ. ಟಿಕೆಟ್ ಆಯಿತು, ಒಂದು ಸ್ಟಾಪ್ ಕಳೆಯಿತು. ಆದರೂ ಆಸಾಮಿ ಸರಿ ಕೂರುವ ಚಿಂತನೆಯಲ್ಲೇ ಇಲ್ಲ. 'ರೀ ಸರಿಯಾಗಿ ಕೂತ್ಕೊಳ್ರೀ' ಎಂದು ಸಾಧ್ಯವಾದಷ್ಟು ಜೋರುಧ್ವನಿಯಲ್ಲೇ ಹೇಳಿದೆ. ಆದರೂ ಆಸಾಮಿ ಕಿಂಚಿತ್ತೂ ದೂರ ಸರಿಯಲಿಲ್ಲ. ಕೈ ಸವರುವುದು, ಭುಜ ಉಜ್ಜುವುದು ಮಾಡತೊಡಗಿದ. ಇನ್ನು ಸುಮ್ಮನಿದ್ದರೆ ಅಪಾಯ ಎಂದು ಐಡಿ ತೆಗೆದು ಆತನಿಗೆ ಕಾಣುವ ಹಾಗೆ ಹಿಡಿದೆ. 'ಪ್ರೆಸ್' ಎಂದು ಗೊತ್ತಾದೊಡನೆ ತಕ್ಷಣ ಕೈ ಹಿಂದೆಳೆದುಕೊಂಡ. ಹೆದರಿದ ಭಾವದಿಂದ ಅಶೋಕ ಪಿಲ್ಲರ್ಸ್ ಬಳಿಯಲ್ಲೇ ಇಳಿದು ಬಿಟ್ಟ. ಆತ ಬನಶಂಕರಿ ಎಂದು ಟಿಕೆಟ್ ಮಾಡಿದ ನೆನಪು. 'ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ' ಎಂದು ಕೂಗಿಕೊಂಡಿದ್ದರೆ ಬಸ್ನಲ್ಲಿದ್ದವರು ನಂಬುತ್ತಿದ್ದರೆ? ಇಂತಹ ದುರುಳರಿಗೆ 'ಅವರು ಇಷ್ಟಪಟ್ಟ ಹಾಗೆ ಮಾಡಲಿ, ಉಳಿದವರು ತಕರಾರು ತೆಗೆಯಬಾರದು' ಎಂದು ಹೇಳುವುದು ಎಷ್ಟು ಸರಿ. ಇಬ್ಬರು ಸಲಿಂಗಿಗಳ ನಡುವೆ ಏನು ಬೇಕಿದ್ದರೂ ಮಾಡಿಕೊಳ್ಳಲಿ. ತಕರಾರು ತೆಗೆಯುವುದಿಲ್ಲ. ಯುವಕರನ್ನೇಕೆ ಮೋಹಿಸಲು ಬರುತ್ತಾರೆ? ಇದು ಅಸ್ವಭಾವಿಕ ಅಲ್ಲವೆ? ಪ್ರಕೃತಿಗೆ ವಿರುದ್ಧವಾದ ನಡೆ ಅಲ್ಲವೆ?
ಸಲಿಂಗ ಕಾಮಕ್ಕೆ ಮಾನ್ಯತೆ ನೀಡಿ, ಬಿಡಿ. ಅದು ವಿಚಾರವಲ್ಲ. ಅಲ್ಪಸಂಖ್ಯಾತರ ಮೇಲಿನ ಭಾವಕ್ಕೆ, ಭಕುತಿಗೆ ಸಲಾಮ್. ಆದರೆ ಬಹುಸಂಖ್ಯಾತರಿಗೆ ಅಂಥವರಿಂದ ಯಾವುದೇ ತೊಂದರೆ ಆಗಬಾರದು. ಬಸ್ಗಳಲ್ಲಿ 'ಮಹಿಳೆಯರಿಗೆ' ಎಂದು ಪ್ರತ್ಯೇಕ ಆಸನವಿರಿಸಿದಂತೆ 'ಗೇ'ಗಳಿಗೂ ಇದು ಅನ್ವಯಿಸಲಿ. ಅವರನ್ನು ಸುಲಭವಾಗಿ ಗುರುತಿಸಲು ಅವರಿಗೊಂದು ಐಡೆಂಟಿಟಿ ಅಥವಾ ಕೋಡ್ ಕೊಡಿ. ಅಂಥವರಿಂದ ದೂರ ಉಳಿಯಲು ಬಹುಷಃ ಸಹಕಾರಿ ಆಗುತ್ತದೆ.
ಸಲಿಂಗಿಗಳೂ('ಗೇ'ಗಳು) ಮಾನವರು. ಅವರಿಗೂ ವ್ಯಕ್ತಿ ಸ್ವಾತಂತ್ರ್ಯವಿದೆ. ಬಹುಸಂಖ್ಯಾತರು ಅವರನ್ನು ಪ್ರತ್ಯೇಕಿಸಬಾರದು. ಅವರನ್ನೂ ನಿಮ್ಮೊಳಗೊಬ್ಬನೆಂದು ಕಾಣಬೇಕು. ತಾತ್ಸಾರ ಮನೋಭಾವ ಮಾಡಬಾರದು ಎಂಬೆಲ್ಲಾ ವಿಚಾರವಾದಿಗಳ ತರ್ಕ, ಉಪದೇಶ, ಫಿಟಿಜಸಫಿ ಒಪ್ಪಿಕೊಳ್ಳೋಣ. ಯಾವಾಗ ಎಂದರೆ, ಬಹು ಸಂಖ್ಯಾತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಾನೂನು ಒಂದೇ ಆದಾಗ ಮಾತ್ರ. ಸಲಿಂಗ ಕಾಮ ಅನೈಸರ್ಗಿಕವಲ್ಲ ಎಂದು ಅರ್ಥಹೀನ ಪುರಾವೆ ಒದಗಿಸುತ್ತ ಚರ್ಚೆ ಮಾಡುತ್ತಾರೆ. ಪರವಾಗಿ ನಿಂತು ಹೋರಾಟ ಮಾಡುತ್ತಾರೆ. ಒಟ್ಟಿನಲ್ಲಿ ಅವರನ್ನವರು ಪ್ರಚಾರದಲ್ಲಿಟ್ಟುಕೊಳ್ಳಬೇಕು. ವಿಚಾರವಂತರು ಎಂಬ ಮಾನ್ಯತೆ ಗಿಟ್ಟಿಸಿಕೊಳ್ಳಬೇಕು. ಆದೆ ಅವರ ತರ್ಕ, ವಿತರ್ಕಗಳು ನಡೆಯುವುದು ಪ್ರೆಸ್ಮೀಟ್ಗಳಲ್ಲಿ. ಪ್ರತ್ಯೇಕ ಕಾರುಗಳಲ್ಲಿ ಓಡಾಡುತ್ತಾರೆ. ಹಾಗಾಗಿ ಯಾವೊಬ್ಬ ಅಪರಿಚಿತನು ಅವರ ಮೈಮೇಲೆ ಕೈ ಹಾಕುವುದಿಲ್ಲ. ಕಣ್ಸನ್ನೆ ಮಾಡುವುದಿಲ್ಲ. ಚಪ್ಪಾಳೆ ತಟ್ಟುವುದಿಲ್ಲ. ಸಾರ್ವಜನಿಕ ಸ್ಥಳಗಳ ಬಗ್ಗೆ ಅವರಿಗೆ ಅರಿವಿದ್ದರೆ ತಾನೆ? ಇಂತಹವರಿಗೆ ಸಾಮಾನ್ಯ ಯುವಕರ ಮುಜುಗರ ಎಲ್ಲಿ ಅರ್ಥವಾಗಬೇಕು?
ಯುವತಿಯರು ಸರಿಯಾಗಿ ಡ್ರೆಸ್ ಮಾಡಿಕೊಳ್ಳಬೇಕು. ಸಾರ್ವಾಜನಿಕ ಸ್ಥಳಗಳಲ್ಲಿ ಓಡಾಡುವಾಗ ಉಬ್ಬುತಗ್ಗುಗಳು ಕಾಣುವಂತೆ ಬಟ್ಟೆ ಧರಿಸುವುದೇ ಅತ್ಯಾಚಾರಕ್ಕೆ ಕಾರಣ ಎಂಬೆಲ್ಲಾ ಸ್ವಕಲ್ಪಿತ ವರದಿಗಳನ್ನು ಸಿದ್ಧ ಮಾಡುತ್ತಾರೆ. ಇಂತಹ ಮೊಂಡು ವಾದ ಮುಂದಿಡುವ ಸಾಹಿತಿಗಳು, ವಿಚಾರವಾದಿಗಳು ಯುವಕರ ಮೇಲಾಗುವ ಲೈಂಗಿಕ ದೌರ್ಜನ್ಯಕ್ಕೆ ಎಂತಹ ವ್ಯಾಖ್ಯಾನ ನೀಡುತ್ತೀರಿ?
- ಮಂಜುನಾಥ್ ಎಲ್. ಕೆ.
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


